ರಾಜಕೀಯ ಪಕ್ಷಗಳ ಪಾದಯಾತ್ರೆಗೂ ನಮ್ಮ ಧಾರ್ಮಿಕ ಪಾದಯಾತ್ರೆಗೂ ಯಾವುದೇ ರೀತಿಯ ಸಂಬಂಧ ಇಲ್ಲ. ನಮ್ಮದು ಪಕ್ಷಾತೀತ, ಜಾತ್ಯತೀತವಾಗಿದೆ: ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
ಬೆಳಗಾವಿ(ಅ.21): ಶ್ರೀಶೈಲ ಜಗದ್ಗುರುಗಳ ದ್ವಾದಶ ಪೀಠಾರೋಹಣ ಹಾಗೂ ಜನ್ಮ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ಅ.29ರಿಂದ 2023ರ ಜನವರಿ 15ರವರೆಗೆ ವಿವಿಧ ಧಾರ್ಮಿಕ, ಸಾಮಾಜಿಕ ಮತ್ತು ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಚಿಕ್ಕೋಡಿ ತಾಲೂಕಿನ ಯಡೂರ ಸುಕ್ಷೇತ್ರದಿಂದ ಶ್ರೀಶೈಲ ಮಹಾಕ್ಷೇತ್ರದವರೆಗೆ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಶ್ರೀಗಳು ಈ ಕುರಿತು ಮಾಹಿತಿ ನೀಡಿದರು. ಪಂಚಪೀಠಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸುದೀರ್ಘವಾದ ಪಾದಯಾತ್ರೆ ಇದಾಗಿದೆ. ಧಾರ್ಮಿಕವಾಗಿ, ಸಾಮಾಜಿಕವಾಗಿ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಸುಮಾರು 560 ಕಿ.ಮೀನಷ್ಟುಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಪಾದಯಾತ್ರೆ ವೇಳೆ ರಸ್ತೆ ಮಾರ್ಗದ ಎರಡೂ ಬದಿಯಲ್ಲಿ ಸಸಿಗಳನ್ನು ನೆಡುವ ಮೂಲಕ ಪರಿಸರ ಜಾಗೃತಿ ಮೂಡಿಸಲಾಗುವುದು. ಪರಿಸರ ಜಾಗೃತಿ, ಧರ್ಮ ಜಾಗೃತಿ, ಸಾವಯವ ಕೃಷಿ ಜಾಗೃತಿ ಮತ್ತು ಆರೋಗ್ಯ ಜಾಗೃತಿಗಾಗಿ ವಿವಿಧ ಕಾರ್ಯಕ್ರಮ ರೂಪಿಸಲಾಗಿದೆ. ಇಷ್ಟಲಿಂಗ ದೀಕ್ಷೆ ನೀಡುವುದು, ದುಶ್ಟಗಳ ಭಿಕ್ಷೆ ಬೇಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಬೆಳಗಾವಿ: ಕೆಎಲ್‌ಇ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಲೀವರ್ ಕಸಿ ಯಶಸ್ವಿ
ಅ. 29 ರಂದು ಯಡೂರಿನ ಸುಕ್ಷೇತ್ರದಿಂದ ಪಾದಯಾತ್ರೆ ಆರಂಭವಾಗಲಿದ್ದು, ಬಾಗಲಕೋಟೆ, ವಿಜಯಪುರ, ಯಾದಗಿರಿ, ರಾಯಚೂರು ಜಿಲ್ಲೆಯ ವಿವಿಧ ಗ್ರಾಮ, ಪಟ್ಟಣಗಳ ಮೂಲಕ ತೆಲಂಗಾಣ ಮತ್ತು ಆಂಧ್ರಪ್ರದೇಶ ಪ್ರವೇಶ ಮಾಡಿ ಅಂತಿಮವಾಗಿ ನವೆಂಬರ್ 30 ರಂದು ಶ್ರೀಶೈಲ ಕ್ಷೇತ್ರವನ್ನು ತಲುಪಲಿದೆ. ಯುಗಾದಿ ಸಂದರ್ಭದಲ್ಲಿ ಭಕ್ತಾಧಿಗಳು ಪಾದಯಾತ್ರೆ ಮೂಲಕ ಮಲ್ಲಿಕಾರ್ಜುನ ದರ್ಶನಕ್ಕೆ ಶ್ರೀಶೈಲ ಕ್ಷೇತ್ರಕ್ಕೆ ಆಗಮಿಸುತ್ತಾರೆ. ಈ ವೇಳೆ ಭಕ್ತರು ಹಲವಾರು ತೊಂದರೆ, ಅನಾನುಕೂಲತೆಗಳನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭಕ್ತರ ತೊಂದರೆ ನಿವಾರಿಸುವ ನಿಟ್ಟಿನಲ್ಲಿ ಸ್ವತಃ ತಾವೇ ಅರಿಯಲು ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ಪಾದಯಾತ್ರೆ ಮುಕ್ತಾಯದ ನಂತರ 42 ದಿನ ಶ್ರೀಶೈಲ ಜಗದ್ಗುರುಗಳ ತಪೋನುಷ್ಠಾನ ಶ್ರೀಶೈಲ ಕ್ಷೇತ್ರದಲ್ಲಿ ನೆರವೇರಲಿದೆ. ನಿತ್ಯ ಜಗದ್ಗುರು ಪಂಡಿತಾರಾಧ್ಯರ ಲಿಂಗೋದ್ಬವ ಮೂರ್ತಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ ನಡೆಯಲಿದೆ. ಇಷ್ಟಲಿಂಗ ಮಹಾಪೂಜೆ, ತುಲಾಭಾರ, ರುದ್ರಹೋಮ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ ಎಂದರು.
ಅಂತಿಮವಾಗಿ ಮುಂಬರುವ ಜನವರಿ 10ರಿಂದ 15ರವರೆಗೆ 6 ದಿನಗಳ ಕಾಲ ಶ್ರೀಶೈಲ ಕ್ಷೇತ್ರದಲ್ಲಿ ಸಮಾರೋಪದ ವಿವಿಧ ಸಮಾರಂಭ ನಡೆಯಲಿದ್ದು, ಇದೇ ಮೊದಲ ಬಾರಿಗೆ ಅಖಿಲ ಭಾರತ ವೀರಶೈವ ಮಹಾಸಭೆಯ ಅಧಿವೇಶನವನ್ನು ಹಮ್ಮಿಕೊಳ್ಳಲಾಗಿದೆ. ರಾಷ್ಟ್ರೀಯ ವೇದಾಂತ ಸಮ್ಮೇಳನ, ರಾಷ್ಟ್ರೀಯ ವಚನ ಸಮ್ಮೇಳನ, ರಾಷ್ಟ್ರೀಯ ವೀರಶೈವಾಗಮ ಸಮಾವೇಶ ಹಾಗೂ ಕನ್ನಡ, ತೆಲುಗು, ಮರಾಠಿ ವೀರಶೈವ ಸಾಹಿತ್ಯ ಗೋಷ್ಠಿ ನಡೆಯಲಿವೆ. ಈ ಎಲ್ಲ ಕಾರ್ಯಕ್ರಮಕ್ಕೆ ಆಗಮಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಲಾಗಿದ್ದು, ಕಾರ್ಯಕ್ರಮಕ್ಕೆ ಆಗಮಿಸುವುದಾಗಿ ಅವರುಭರವಸೆ ನೀಡಿದ್ದಾರೆ ಎಂದು ಹೇಳಿದರು.
ರಾಜಕೀಯ ಪಕ್ಷಗಳ ಪಾದಯಾತ್ರೆಗೂ ನಮ್ಮ ಧಾರ್ಮಿಕ ಪಾದಯಾತ್ರೆಗೂ ಯಾವುದೇ ರೀತಿಯ ಸಂಬಂಧ ಇಲ್ಲ. ನಮ್ಮದು ಪಕ್ಷಾತೀತ, ಜಾತ್ಯತೀತವಾಗಿದೆ. ಎಲ್ಲ ಪಕ್ಷದ ನಾಯಕರು, ಎಲ್ಲ ವರ್ಗದ ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ದೇಶದ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ಕ್ಷೇತ್ರ ಎರಡನೇಯದ್ದು. ಕಳೆದ 12 ವರ್ಷಗಳಿಂದ ಪೀಠದ ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡಲಾಗಿದೆ. ಆಂಧ್ರಪ್ರದೇಶ ಸರ್ಕಾರ ಮಂಜೂರು ಮಾಡಿದ 10 ಎಕರೆ ಭೂಮಿಯಲ್ಲಿ ವಿವಿಧ ಸಾಮಾಜಿಕ, ಧಾರ್ಮಿಕ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದಾರೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಸಿ.ಜಿ.ಮಠಪತಿ ಮೊದಲಾದವರು ಉಪಸ್ಥಿತರಿದ್ದರು.