ಮಿನಿ ಗೋವಾ ಖ್ಯಾತಿಯ ವಿರೂಪಾಪುರಗಡ್ಡೆಯಲ್ಲಿ ರೆಸಾರ್ಟ್‌ಗಳೆಲ್ಲ ಖಾಲಿ ಖಾಲಿ!

By Kannadaprabha NewsFirst Published Feb 20, 2020, 10:22 AM IST
Highlights

ರೆಸಾರ್ಟ್ ಖಾಲಿ ಮಾಡುತ್ತಿರುವ ಮಾಲೀಕರು| ಪ್ರವಾಸಿಗರೂ ಇಲ್ಲ, ಸಾಮಾನು ತೆರವಿಗೆ ಮುಂದಾದ ಮಾಲೀಕರು| ಹೊರ ಹೋಗುತ್ತಿರುವ ಕೆಲಸಗಾರರು, ಅಡುಗೆಯವರು| ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ವಿರೂಪಾಪುರಗಡ್ಡೆ| 

ರಾಮಮೂರ್ತಿ ನವಲಿ 

ಗಂಗಾವತಿ(ಫೆ.20): ಮಿನಿ ಗೋವಾ ಖ್ಯಾತಿಯ ವಿರೂಪಾಪುರಗಡ್ಡೆಯಲ್ಲಿರುವ ರೆಸಾರ್ಟ್‌ಗಳ ಮಾಲೀಕರು ಬೆಲೆ ಬಾಳುವ ವಸ್ತುಗಳು ಸೇರಿದಂತೆ ಕಟ್ಟಡಗಳನ್ನು ಸ್ವಯಂಪ್ರೇರಣೆಯಿಂದ ತೆರವುಗೊಳಿಸುತ್ತಿದ್ದಾರೆ. ಈ ಮಧ್ಯೆ 24 ರ ವರೆಗೂ ಯಾವುದೇ ಕ್ರಮ ಕೈಗೊಳ್ಳಬಾರದೆಂದು ತಡೆ ನೀಡಿದ್ದ ರಾಜ್ಯ ಹೈಕೋರ್ಟ್, ಜಿಲ್ಲಾಡಳಿತದ ಮನವಿ ಪುರಸ್ಕರಿಸಿ ಗುರುವಾರ ಫೆ.20 ರಂದೇ ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳಲಿದೆ. 

ತಡೆಯಾಜ್ಞೆ ಯಾವ ಸಂದರ್ಭದಲ್ಲಾದರೂ ತೆರವಾಗಬಹುದು ಎಂಬ ಭಯದಿಂದ ರೆಸಾರ್ಟ್ ಮಾಲೀಕರು, ರೆಸಾರ್ಟ್‌ನ ಬೆಲೆ ಬಾಳುವ ವಸ್ತು ಮತ್ತು ಕಟ್ಟಡಗಳನ್ನು ತರೆವುಗೊಳಿಸಿದ್ದಾರೆ. ಇದರಿಂದ ವಿರೂಪಾಪುರ ಗಡ್ಡೆ ಬಿಕೋ ಎನ್ನುತ್ತಿದೆ. ಪ್ರವಾಸಿಗರೂ ಸಹ ಅಲ್ಲಿಂದ ತೆರಳುತ್ತಿದ್ದಾರೆ. ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಬಹುತೇಕ ವಿದೇಶಿ, ಸ್ವದೇಶಿ ಪ್ರವಾಸಿಗರು ಅಲ್ಲಿಂದ ಸ್ಥಳಾಂತರಗೊಂಡಿದ್ದಾರೆ. 

ಕೊಪ್ಪಳ: ಗಂಟುಮೂಟೆ ಕಟ್ಟಿ ಹೊರಟ ವಿರೂಪಾಪುರಗಡ್ಡೆ ರೆಸಾರ್ಟ್ ಮಾಲೀಕರು

ರೆಸಾರ್ಟ್ ಪ್ರದೇಶ ಬಿಕೋ ಎನ್ನುತ್ತಿದೆ. ರೆಸಾರ್ಟ್‌ಗಳಲ್ಲಿ ಕೆಲಸ ಮಾಡುವವರು, ಅಡುಗೆಯವರು ಸಹ ಅಲ್ಲಿಂದ ತೊರೆಯಲು ಸಿದ್ಧರಾಗುತ್ತಿದ್ದಾರೆ. ನೇಪಾಳ ಸೇರಿದಂತೆ, ಉತ್ತರ ಭಾರತದಿಂದ ಬಂದಿರುವ ಅಡುಗೆಯವರು ದಿಕ್ಕು ತೋಚದೇ ರೆಸಾರ್ಟ್ ತೊರೆಯುತ್ತಿದ್ದಾರೆ. ಕೆಲವರು ಗೋವಾ, ಗುಜರಾತ್, ದಾಂಡೇಲಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿರುವ ರೆಸಾರ್ಟ್‌ಗಳಿಗೆ ತೆರಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹಲವಾರು ರೆಸಾರ್ಟ್‌ಗಳನ್ನು ಹೊಂದಿರುವ ಹಳೇ ಸೇತುವೆ ಮಾರ್ಗದಿಂದ ಹಂಪಿಗೆ ತೆರಳುವ ರಸ್ತೆ ಬೀಕೋ ಎನ್ನುತ್ತಿದೆ. 

ಫೆ. 11 ರಂದು ವಿರೂಪಾಪುರಗಡ್ಡೆಯಲ್ಲಿರುವ 28ಕ್ಕೂ ಹೆಚ್ಚು ರೆಸಾರ್ಟ್‌ಗಳನ್ನು ತೆರುವುಗೊಳಿಸುವಂತೆ ಸುಪ್ರಿಂಕೋರ್ಟ್ ಆದೇಶ ನೀಡಿತ್ತು. ಜಿಲ್ಲಾಡಳಿತ, ಹಂಪಿ ಅಭಿವೃದ್ಧಿ ಪ್ರಾಧಿಕಾರ ಅದನ್ನು ತಕ್ಷಣ ತೆರವಿಗೆ ಮುಂದಾಗಿ ಡಂಗುರ ಸಾರದ್ದಲ್ಲದೇ, ನೊಟೀಸ್ ನೀಡಿದ್ದ ಹಿನ್ನೆಲೆಯಲ್ಲಿ ರೆಸಾರ್ಟ್ ಮಾಲಿಕರು ಪುನಃ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ೧೦ ದಿನಗಳ ತಡೆಯಾಜ್ಞೆ ತಂದಿದ್ದರು. 

ಕೊಪ್ಪಳ: ವಿರೂಪಾಪುರಗಡ್ಡೆ ರೆಸಾರ್ಟ್‌ ತೆರವಿಗೆ ಹೈಕೋರ್ಟ್‌ ತಡೆ

ಫೆ. 24ರ ರಂದು ವಿಚಾರಣೆ ಕೈಗೆತ್ತಿಕೊಳ್ಳುತ್ತಿದ್ದು ಅಲ್ಲಿಯ ತನಕ ತೆರವು ಮಾಡಬಾರದೆಂದು ನ್ಯಾಯಾಲಯ ತಿಳಿಸಿತ್ತು. ಇದೀಗ ಜಲ್ಲಾಡಳಿತ ಪುನಃ ಮನವಿ ಸಲ್ಲಿಸಿ ತಡೆಯಾಜ್ಞೆ ರದ್ದಿಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಫೆ.20 ರಂದೇ ವಿಚಾರಣೆ ನಡೆಯಲಿದೆ. ಈ ಮಧ್ಯೆ ಕೆಲ ರೆಸಾರ್ಟ್ ಮಾಲೀಕರು ತೆರವಿಗೆ ಸಮಯ ನೀಡುವಂತೆ ಜಿಲ್ಲಾಡಳಿತವನ್ನು ಕೋರಿದ್ದರೂ ಸಹ ಜಿಲ್ಲಾಡಳಿತ ಅವಕಾಶ ನೀಡುವುದು ಕಡಿಮೆ ಎನ್ನಲಾಗುತ್ತಿದ್ದು, ನ್ಯಾಯಾಲಯದ ಆದೇಶದ ನಿರೀಕ್ಷೆಯಲ್ಲಿ ಎಲ್ಲರೂ ಇದ್ದಾರೆ.

ಈ ಬಗ್ಗೆ ಮಾತನಾಡಿದ ಗಂಗಾವತಿ ತಹಸೀಲ್ದಾರ್ ಎಲ್.ಡಿ. ಚಂದ್ರಕಾಂತ ಅವರು, ಈಗಾಗಲೇ ಸುಪ್ರಿಂಕೋರ್ಟ್ ಆದೇಶದಂತೆ ರೆಸಾರ್ಟ್ ಮಾಲೀಕರಿಗೆ ತೆರವುಗೊಳಿಸಿಕೊಳ್ಳಿರಿ ಎಂದು ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೆಲವರು ಖಾಲಿ ಮಾಡಿದ್ದು, ಇನ್ನು ಕೆಲವರು ತಡೆಯಾಜ್ಞೆ ತಂದಿದ್ದೇವೆ. ಅದರ ತೀರ್ಪು ಬಂದ ನಂತರ ನೋಡೋಣ ಎನ್ನುತ್ತಿದ್ದಾರೆ. ಜಿಲ್ಲಾಧಿಕಾರಿಗಳ ಸೂಚನೆಯನ್ನು ರೆಸಾರ್ಟ್ ಮಾಲೀಕರಿಗೆ ತಿಳಿಸಲಾಗಿದೆ. (ಚಿತ್ರ: ಸಾಂದರ್ಭಿಕ ಚಿತ್ರ)
 

click me!