ಸಾಮಾಜಿಕ ಜಾಲತಾಣದಲ್ಲಿ ಸಮುದಾಯದ ಶ್ರೀಗಳು-ಬೆಂಬಲಿಗರ ಆಕ್ರೋಶ| ಆರೋಗ್ಯ ಇಲಾಖೆಯನ್ನು ಶ್ರೀರಾಮುಲು ಅವರಿಂದ ಹಿಂಪಡೆದು ಸಮಾಜ ಕಲ್ಯಾಣ ಖಾತೆ ನೀಡಲಾಗಿದೆ| ಶ್ರೀರಾಮುಲುಗೆ ಆರೋಗ್ಯ ಸಚಿವ ಸ್ಥಾನ ಮರಳಿ ನೀಡಬೇಕು. ಜತೆಗೆ ಉಪಮುಖ್ಯಮಂತ್ರಿ ಸ್ಥಾನವನ್ನೂ ನೀಡಬೇಕು ಎಂಬ ಆಗ್ರಹ|
ಬಳ್ಳಾರಿ(ಅ.14): ಸಚಿವ ಶ್ರೀರಾಮುಲು ಅವರ ಬಳಿ ಇದ್ದ ಆರೋಗ್ಯ ಇಲಾಖೆಯನ್ನು ಕಸಿದು ಸುಧಾಕರ್ ಅವರಿಗೆ ನೀಡಿರುವ ಧೋರಣೆಗೆ ವಾಲ್ಮೀಕಿ ಸಮಾಜದಿಂದ ವಿರೋಧ ವ್ಯಕ್ತವಾಗಿದೆ.
ಸಮಾಜದ ಸ್ವಾಮೀಜಿಗಳು ಹಾಗೂ ಬೆಂಬಲಿಗರು ಸಾಮಾಜಿಕ ಜಾಲತಾಣಗಳ ಮೂಲಕ ಸರ್ಕಾರದ ನಡೆಗೆ ತೀವ್ರ ವಿರೋಧವನ್ನು ವ್ಯಕ್ತಪಡಿಸುತ್ತಿದ್ದು, ಶ್ರೀರಾಮುಲು ಅವರಿಗೆ ಆರೋಗ್ಯ ಸಚಿವ ಸ್ಥಾನ ಮರಳಿ ನೀಡಬೇಕು. ಜತೆಗೆ ಉಪಮುಖ್ಯಮಂತ್ರಿ ಸ್ಥಾನವನ್ನೂ ನೀಡಬೇಕು ಎಂದು ಆಗ್ರಹಿಸಿದ್ದಾರೆ.
undefined
ಚುನಾವಣೆಗೂ ಮುನ್ನ ಶ್ರೀರಾಮುಲು ಅವರನ್ನು ಡಿಸಿಎಂ ಮಾಡುವುದಾಗಿ, ಮದಕರಿ ನಾಯಕ ಥೀಮ್ ಪಾರ್ಕ್ ನಿರ್ಮಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚುನಾವಣೆ ಭರವಸೆ ನೀಡಿದ್ದರು. ಅದಾವುದೂ ಈಡೇರಿಲ್ಲ. ಸಮುದಾಯದ ನಾಲ್ವರು ಶಾಸಕರನ್ನು ಸಚಿವರನ್ನು ಮಾಡಬೇಕು ಎಂದು ಕೇಳಿದ್ದೆವು. ಆದರೆ, ಇಬ್ಬರನ್ನು ಮಾತ್ರ ಮಾಡಿದ್ದಾರೆ ಎನ್ನುವ ಅಸಮಾಧಾನವೂ ವ್ಯಕ್ತವಾಗಿದೆ.
ಬದಲಾಯ್ತು ಶ್ರೀ ರಾಮುಲು ಖಾತೆ : ಸಿಗುತ್ತಾ ಮತ್ತೊಂದು ಆಫರ್..?
ಇದೀಗ ಆರೋಗ್ಯ ಇಲಾಖೆಯನ್ನು ಶ್ರೀರಾಮುಲು ಅವರಿಂದ ಹಿಂಪಡೆದು ಸಮಾಜ ಕಲ್ಯಾಣ ಖಾತೆ ನೀಡಲಾಗಿದೆ. ಇದಕ್ಕೆ ಶ್ರೀರಾಮುಲು ಅವರಿಗೆ ಒಪ್ಪಿಗೆ ಇತ್ತೇ? ಅವರ ಬಳಿ ಜತೆ ಮುಖ್ಯಮಂತ್ರಿಗಳು ಚರ್ಚಿಸಿಯೇ ನಿರ್ಧಾರ ಕೈಗೊಂಡಿದ್ದಾರೆಯೇ ಎಂದು ವಾಲ್ಮೀಕಿ ಸಮಾಜದ ಬ್ರಹ್ಮಾನಂದ ಸ್ವಾಮೀಜಿ ಎಂಬುವರು ಮಾಡಿರುವ ವಿಡಿಯೋ ತುಣಕನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿದೆ.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಹಾಗೂ ಹೆಚ್ಚು ಸ್ಥಾನಗಳನ್ನು ಗೆಲ್ಲಲು ವಾಲ್ಮೀಕಿ ಸಮುದಾಯದ ಪ್ರಮುಖ ಕಾರಣ. ಆದರೆ, ಈಗ ಮುಖ್ಯಮಂತ್ರಿಗಳ ಅದನ್ನು ಮರೆತಿದ್ದಾರೆ ಎನ್ನುವ ಆಕ್ರೋಶ ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರುತ್ತಿದೆ.