ಹುಬ್ಬಳ್ಳಿ: ಕೊರೋನಾ ವಾರಿಯರ್‌ ಉಪಾಹಾರದಲ್ಲಿ ಮತ್ತೆ ಹುಳು, ಪೌರಕಾರ್ಮಿಕರ ಆಕ್ರೋಶ

By Kannadaprabha NewsFirst Published Jun 13, 2020, 7:17 AM IST
Highlights

ಆಹಾರ ಪೂರೈಕೆ ಗುತ್ತಿಗೆದಾರರ ವಿರುದ್ಧ ಆಕ್ರೋಶ| ಕ್ರಮ ಕೈಗೊಳ್ಳಲು ಪಾಲಿಕೆಗೆ ಒತ್ತಾಯ|ಪಾಲಿಕೆ ಅಧಿಕಾರಿಗಳು ಪೌರ ಕಾರ್ಮಿಕರಿಗೆ ಆರೋಗ್ಯಕರ ಉತ್ತಮ ಗುಣಮಟ್ಟದ ಆಹಾರ ಪೂರೈಸುವಲ್ಲಿ ವಿಫಲ| ಈ ಕೂಡಲೇ ಆಯುಕ್ತರು ಗುತ್ತಿಗೆ ಸಂಸ್ಥೆ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು| 

ಹುಬ್ಬಳ್ಳಿ(ಜೂ.13): ಪೌರಕಾರ್ಮಿಕರಿಗೆ ನೀಡಲಾಗುವ ಬೆಳಗಿನ ಉಪಾಹಾರವಾದ ಅವಲಕ್ಕಿಯಲ್ಲಿ ಕಳೆದ ವಾರ ಹುಳು ಪತ್ತೆಯಾದ ಪ್ರಕರಣ ಹಸಿರಾಗಿರುವಾಗಲೆ, ಶುಕ್ರವಾರ ಅದೇ ವಾರ್ಡ್‌ನಲ್ಲಿ ಅಂತದ್ದೆ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.

ಶುಕ್ರವಾರ ಬೆಳಗ್ಗೆ 10 ಗಂಟೆಗೆ ವಾರ್ಡ್‌ ನಂ. 56ರಲ್ಲಿ ಕೆಲಸ ಮಾಡುತ್ತಿದ್ದ ಪೌರ ಕಾರ್ಮಿಕರಿಗೆ ಉಪಾಹಾರ ನೀಡಲಾಗಿದೆ. ಈ ವೇಳೆ ಇಬ್ಬರಿಗೆ ನೀಡಿದ್ದ ಇಡ್ಲಿಯಲ್ಲಿ ಹುಳುಗಳು ಕಂಡುಬಂದಿವೆ. ಹುಳು ಕಾಣುವುದಕ್ಕೂ ಮೊದಲು ಇಡ್ಲಿಯನ್ನು ಸೇವಿಸುತ್ತಿದ್ದವರು ಇದರಿಂದ ತೀವ್ರ ಬೇಸರಗೊಂಡರು. ಉಪಾಹಾರ ಪಡೆದಿದ್ದ ಐವರು ಅರ್ಧಕ್ಕೆ ಇಡ್ಲಿ ಸೇವಿಸುವುದನ್ನು ಬಿಟ್ಟಿದ್ದಾರೆ. ಬಳಿಕ ಬೇರೆಡೆ ತೆರಳಿ ಆಹಾರ ಪೊಟ್ಟಣ ಖರೀದಿಸಿ ಸೇವಿಸಿದರು.

ಪಾಕ್‌ ಪರ ಘೋಷಣೆ ಕೂಗಿದವರಿಗೆ ಸಿಕ್ತು ಬೇಲ್‌: ತನಿಖಾಧಿಕಾರಿ ವಿರುದ್ಧ ಶ್ರೀರಾಮಸೇನೆ ಪ್ರತಿಭಟನೆ

ಬಳಿಕ ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಪೌರ ಕಾರ್ಮಿಕರಾದ ಬಸವರಾಜ ದೊಡಮನಿ, ಕೊರೋನಾ ವಾರಿಯರ್ಸ್‌ ಎಂದು ಪೌರ ಕಾರ್ಮಿಕರನ್ನು ಕರೆಯಲಾಗುತ್ತಿದೆ. ಊರಿನ ಸ್ವಚ್ಛತೆ ಕಾಪಾಡುವ ನಮಗೆ ಕಳಪೆ ಗುಣಮಟ್ಟದ, ಹುಳುಗಳಿರುವ ಆಹಾರ ನೀಡಲಾಗುತ್ತಿರುವುದು ದುರ್ದೈವದ ಸಂಗತಿ ಎಂದರು.

ಬೆಳಗಿನ ಉಪಾಹಾರ ಕಳಪೆ ಮಟ್ಟದ್ದಾಗಿದ್ದು, ಅದರಲ್ಲಿ ಹುಳುಗಳು ಕಂಡುಬಂದಿವೆ. ಆಹಾರ ಪೂರೈಸುವ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಧಾರವಾಡ ಜಿಲ್ಲಾ ಪರಿಶಿಷ್ಟಜಾತಿ ಮತ್ತು ಪಂಗಡಗಳ ಪೌರಕಾರ್ಮಿಕರ ಮತ್ತು ನೌಕರರ ಸಂಘದ ಅಧ್ಯಕ್ಷ ಡಾ. ವಿಜಯ ಗುಂಟ್ರಾಳ ಆಗ್ರಹಿಸಿದ್ದಾರೆ.

ಪಾಲಿಕೆ ಅಧಿಕಾರಿಗಳು ಪೌರ ಕಾರ್ಮಿಕರಿಗೆ ಆರೋಗ್ಯಕರ ಉತ್ತಮ ಗುಣಮಟ್ಟದ ಆಹಾರ ಪೂರೈಸುವಲ್ಲಿ ವಿಫಲರಾಗಿದ್ದಾರೆ. ಕಾರಣ ಕೂಡಲೇ ಆಯುಕ್ತರು ಗುತ್ತಿಗೆ ಸಂಸ್ಥೆ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು. ಪೌರಕಾರ್ಮಿಕರಿಗೆ ಆರೋಗ್ಯದಾಯಕ, ಉತ್ತಮ ಆಹಾರ ಪೂರೈಸುವಂತೆ ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಸಂಘವು ಹೋರಾಟದ ಮೂಲಕ ಸರ್ಕಾರದ ಗಮನಕ್ಕೆ ತರುವುದಾಗಿ ಎಚ್ಚರಿಕೆ ನೀಡಿದ್ದಾರೆ.
 

click me!