ರಾಜ್ಯದ ಪೊಲೀಸರು ಕಾನೂನು ರಕ್ಷಣೆ ಮತ್ತು ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದು, ದೇಶದಲ್ಲಿಯೇ ನಮ್ಮ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ನಂ.1 ಪೊಲೀಸ್ ಇಲಾಖೆ ಎಂಬ ಹೆಸರು ಪಡೆದಿದೆ.
ಮಧುಗಿರಿ (ಜು.11): ರಾಜ್ಯದ ಪೊಲೀಸರು ಕಾನೂನು ರಕ್ಷಣೆ ಮತ್ತು ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದು, ದೇಶದಲ್ಲಿಯೇ ನಮ್ಮ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ನಂ.1 ಪೊಲೀಸ್ ಇಲಾಖೆ ಎಂಬ ಹೆಸರು ಪಡೆದಿದೆ. ನಾನು ಗೃಹ ಸಚಿವನಾದ ನಂತರ 12 ಸಾವಿರ ಪೊಲೀಸರ ಪದೋನ್ನತಿ ಮಾಡಿದ್ದೇನೆ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು. ತಾಲೂಕಿನ ಕೊಡಿಗೇನಹಳ್ಳಿಯಲ್ಲಿ ಪೊಲೀಸ್ ಠಾಣೆ ನೂತನ ಕಟ್ಟಡದ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಪೊಲೀಸ್ ಇಲಾಖೆಯು ಸಮರ್ಥವಾಗಿ ಕೆಲಸ ನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದರು.
ಮಧುಗಿರಿ ಉಪವಿಭಾಗದ ಕೊರಟಗೆರೆ ,ಪಾವಗಡ, ಮಧುಗಿರಿ ಮತ್ತು ಶಿರಾ ತಾಲೂಕುಗಳು ಅತ್ಯಂತ ಹಿಂದುಳಿದ ಪ್ರದೇಶಗಳಾಗಿದ್ದು, ನೀರಾವರಿ ಯೋಜನೆಯಡಿ ಎತ್ತಿನಹೊಳೆ, ಅಪ್ಪರ್ ಭದ್ರಾ ಮತ್ತು ಹೇಮಾವತಿ ಹೆಚ್ಚುವರಿ ನೀರನ್ನು ಹರಿಸುವ ಕೆಲಸ ಮಾಡಲಾಗುವುದು. ಈ ಹಿಂದೆ ನಮ್ಮ ಸರ್ಕಾರವಿದ್ದಾಗ ಸಿದ್ದರಾಮಯ್ಯನವರ ದೂರದೃಷ್ಟಿಯಿಂದ ಪಾವಗಡ ತಾಲೂಕಿಗೆ 2300 ಕೋಟಿ ರು.ಗಳ ವೆಚ್ಚದಲ್ಲಿ ತುಂಗಭದ್ರ ಕುಡಿಯುವ ನೀರಿನ ಯೋಜನೆ ಜಾರಿಗೆ ತಂದ ಫಲ ಇನ್ನೂ ಕೆಲವೇ ದಿನಗಳಲ್ಲಿ ಪಾವಗಡಕ್ಕೆ ನೀರು ಬರಲಿದೆ ಎಂದರು.
ಯಾರಿಂದಲೂ ಕಾಂಗ್ರೆಸ್ ನಿರ್ನಾಮ ಮಾಡಲು ಸಾಧ್ಯವಿಲ್ಲ: ಸಂಸದ ಸುನಿಲ್ ಬೋಸ್
ಬಹು ದಿನಗಳ ಬೇಡಿಕೆಯಾಗಿದ್ದ ಕೊಡಿಗೇನಹಳ್ಳಿ ಪೊಲೀಸ್ ಇಲಾಖೆ ಕಟ್ಟಡವನ್ನು 1.5 ಕೋಟಿ ರು. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, 8 ತಿಂಗಳಲ್ಲಿ ಈ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು. ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, ನಮ್ಮ ಹಿಂದಿನ ಸರ್ಕಾರದ ಅವಧಿಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಇಮ್ಮಡಗೊಂಡನಹಳ್ಳಿ ಬಳಿ ಚೆಕ್ ಡ್ಯಾಂ ನಿರ್ಮಿಸಿದ್ದರಿಂದ ಪ್ರಸ್ತುತ ಮಳೆಯಿಂದ ದೊಡ್ಡಮಾಲೂರು ಕೆರೆ ಸಂಪೂರ್ಣ ತುಂಬುತ್ತಿದೆ.
ನಮ್ಮ ಸರ್ಕಾರದ ಪ್ರಣಾಳಿಕೆಯನ್ನು ಡಾ.ಜಿ.ಪರಮೇಶ್ವರ್ ತಯಾರಿಸಿದ್ದು, ನಿಮ್ಮೆಲ್ಲರ ಆಶೀರ್ವಾದದಿಂದ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ. ಗ್ಯಾರಂಟಿಗಳ ಜಾರಿಗೆ 58 ಸಾವಿರ ಕೋಟಿ ರು. ವೆಚ್ಚ ಆಗುತ್ತಿದೆ. ನಮ್ಮ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದ ಸರ್ಕಾರವಾಗಿದೆ ಎಂದು ಜನರೇ ಹೇಳುತ್ತಿದ್ದಾರೆ. ಮಧುಗಿರಿ ತಾಲೂಕಿಗೆ 60 ಪೊಲೀಸ್ ವಸತಿ ಗೃಹಗಳ ಬೇಡಿಕೆಯಿದ್ದು, ಶೀಘ್ರ ನಿರ್ಮಿಸಿಕೊಡುವುದಾಗಿ ತಿಳಿಸಿ, ಕೊಡಿಗೇನಹಳ್ಳಿ ಬಸ್ ನಿಲ್ದಾಣ ಮತ್ತು ಹೆಣ್ಣುಮಕ್ಕಳಿಗೆ ಶೌಚಾಲಯ ಕಟ್ಟಿ ಕೊಡುವುದಾಗಿ ರಾಜಣ್ಣ ಭರವಸೆ ನೀಡಿದರು.
ಬೆಂಗಳೂರಿಗೆ ಮತ್ತೊಂದು ಏರ್‌ಪೋರ್ಟ್ ಅತ್ಯಗತ್ಯ: ಸಚಿವ ಎಂ.ಬಿ.ಪಾಟೀಲ್
ಕಾರ್ಯಕ್ರಮದಲ್ಲಿ ಕ್ಷೇತ್ರ ವಲಯ ಡಿಜಿಪಿ ಡಾ.ಕೆ.ರಾಮಚಂದ್ರರಾವ್, ಕೇಂದ್ರ ವಲಯ ಐಜಿಪಿ ಲಾಭುರಾಮ್, ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಪಂ ಸಿಇಒ ಜಿ.ಪ್ರಭು, ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ಅಡಿಷನಲ್ ಎಸ್‌ಪಿಗಳಾದ ಮರಿಯಪ್ಪ, ಅಬ್ದಲ್ .ಖಾದರ್ ,ಡಿವೈಎಸ್‌ಪಿ ರಾಮಚಂದ್ರಯ್ಯ,ಸಿಪಿಐ ಹನುಮಂತರಾಯಪ್ಪ, ಪಿಎಸ್‌ಐ ಶ್ರೀನಿವಾಸ್ ಪ್ರಸಾದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆದಿನಾರಾಯಣರೆಡ್ಡಿ, ಕೆಎಂಎಫ್ ನಿರ್ದೇಶಕ ಮೈದನಹಳ್ಳಿ ಕಾಂತರಾಜು ಸೇರಿದಂತೆ ಅನೇಕರಿದ್ದರು.