ಚಿಕ್ಕಮಗಳೂರಲ್ಲಿ ಕಾಡಾನೆ ದಾಳಿಗೆ ಜನರ ಬಲಿ: ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

By Girish GoudarFirst Published Nov 22, 2022, 4:30 AM IST
Highlights

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹುಲ್ಲೆ ಮನೆ ಕುಂದೂರಿನಲ್ಲಿ ಘಟನೆ ನಡೆದಿತ್ತು, ಸ್ಥಳಕ್ಕೆ ತಡವಾಗಿ ಹೋಗಿದ್ದ ಶಾಸಕರ ವಿರುದ್ಧ ಜನರು ಆಕ್ರೋಶಗೊಂಡಿದ್ದರು.

ವರದಿ : ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ನ.22):  ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ 3 ನರಹಂತಕ ಕಾಡಾನೆಗಳನ್ನು ಹಿಡಿಯಲು ಸರ್ಕಾರ ಹಸಿರು ನಿಶಾನೆ ತೋರಿದೆ. ಕಳೆದ ಮೂರು ತಿಂಗಳಲ್ಲಿ ತಿಂಗಳಿಗೆ ಒಬ್ಬರಂತೆ ಮೂವರು ರೈತರು ಆನೆ ತುಳಿತಕ್ಕೆ ಒಳಗಾಗಿ ಪ್ರಾಣ ಕಳೆದುಕೊಂಡಿದ್ದರು. ರೈತರು ಈ ತಿಂಗಳು ನಾನು ಬದುಕಿದ್ದೇನೆ. ಮುಂದಿನ ತಿಂಗಳು ನನ್ನ ಸರದಿಯ ಎಂಬ ಭಯದಲ್ಲಿ ದಿನ ಎನಿಸಿಕೊಂಡು ಬದುಕುವಂತಹ ಸ್ಥಿತಿ ನಿರ್ಮಾಣವಾಗಿತ್ತು. ನಿನ್ನೆ ಕೂಡ ತಾಲೂಕಿನ ಹುಲ್ಲೇಹಳ್ಳಿ-ಕುಂದೂರು ಭಾಗದಲ್ಲಿ ತೋಟದಲ್ಲಿ ಹುಲ್ಲು ಕುಯ್ಯುತ್ತಿದ್ದ ಮಹಿಳೆಯ ಮೇಲೆ ಆನೆ ದಾಳಿ ಮಾಡಿತ್ತು. 35 ವರ್ಷದ ಮಹಿಳೆ ಶೋಭಾ ಸ್ಥಳದಲ್ಲಿ ಸಾವನ್ನಪ್ಪಿದ್ದರು. ಇದರಿಂದ ಗ್ರಾಮಸ್ಥರು ರೊಚ್ಚಿಗೆದ್ದು ಸರ್ಕಾರ, ಜನಪ್ರತಿನಿಧಿಗಳು ಹಾಗೂ ಅರಣ್ಯ ಇಲಾಖೆ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದರು. 

ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸ್ಥಳದಲ್ಲೇ ಸಿಕ್ಕಾಪಟ್ಟೆ ಕ್ಲಾಸ್ ತೆಗೆದುಕೊಂಡಿದ್ದರು. ಡಿ.ಎಫ್.ಓ.ಗೆ ಮಹಿಳೆಯರು ಮುತ್ತಿಗೆ ಹಾಕಿ ಇನ್ನು ಎಷ್ಟು ಬಲಿ ಬೇಕು ಎಂದು ಪ್ರಶ್ನಿಸಿದ್ದರು. ಸತ್ತ ಮೇಲೆ ನೀವು ಬಂದು ಪರಿಹಾರ ನೀಡುವ ಬದಲು ಸಾವೇ ಸಂಭವಿಸದಂತೆ ಸೂಕ್ತ ಕ್ರಮ ಕೈಗೊಳ್ಳಿ, ಈ ಸಾವಿಗೆ ಸೂಕ್ತ ನ್ಯಾಯ ಒದಗಿಸಿ ಎಂದು ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದರು. ಸ್ಥಳಕ್ಕೆ ತಡವಾಗಿ ಬಂದ ಶಾಸಕ ಎಂ.ಪಿ.ಕುಮಾರಸ್ವಾಮಿಗೂ ಸಿಕ್ಕಾಪಟ್ಟೆ ಕ್ಲಾಸ್ ತೆಗೆದುಕೊಂಡಿದ್ದರು. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಇಂದು ಸರ್ಕಾರ ಮೂಡಿಗೆರೆ ತಾಲೂಕಿನಲ್ಲಿರುವ ಮೂರು ನರ ಹಂತಕ ಕಾಡಾನೆಗಳನ್ನು ಹಿಡಿಯಲು ಆದೇಶ ಹೊರಡಿಸಿದೆ.

Mudigere MLA Beaten: ಚುನಾವಣೆಗೆ ನಿಲ್ಲದಂತೆ ಸಂಚು ಮಾಡಿ ನನ್ನ ಮೇಲೆ ಹಲ್ಲೆ: ಶಾಸಕ ಕುಮಾರಸ್ವಾಮಿ

ಇದರಿಂದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, ಆನೆಗಳನ್ನು ಸೆರೆಹಿಡಿದು ಸ್ಥಳಾಂತರ ಮಾಡುವ ಬದಲು ಆನೆ ಹಾವಳಿಗೆ ಅರಣ್ಯದ ಅಂಚು ಹಾಗೂ ಗ್ರಾಮದ ಹಂಚಿನಲ್ಲಿ ದೊಡ್ಡ-ದೊಡ್ಡ ಹೊಂಡಗಳನ್ನ ಅಗೆದು ಅರಣ್ಯದಿಂದ ಹೊರಬಾರದಂತೆ ಶಾಶ್ವತ ಕ್ರಮ ಕೈಗೊಳ್ಳುವಂತೆ ಸ್ಥಳಿಯರು ಆಗ್ರಹಿಸಿದ್ದಾರೆ.
 

click me!