ಮದ್ದೂರು ಕ್ಷೇತ್ರದಿಂದ ಎಐಸಿಸಿಗೆ ಒಂದೇ ಹೆಸರು ರವಾನೆ..!

By Kannadaprabha NewsFirst Published Apr 9, 2023, 8:10 AM IST
Highlights

ಮದ್ದೂರು ಹೊರತುಪಡಿಸಿ ಜಿಲ್ಲೆಯ ಉಳಿದೆಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಘೋಷಿಸಲಾಗಿದೆ. ಮದ್ದೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಹೆಸರನ್ನು ಸೂಚಿಸುವಾಗ ಮಾಡಿರುವ ಎಡವಟ್ಟು ಇದೀಗ ಬಹಿರಂಗಗೊಂಡಿದೆ.

 ಎಚ್‌.ಜಿ.ರವಿಕುಮಾರ್‌

  ಮದ್ದೂರು :  ಮದ್ದೂರು ಹೊರತುಪಡಿಸಿ ಜಿಲ್ಲೆಯ ಉಳಿದೆಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಘೋಷಿಸಲಾಗಿದೆ. ಮದ್ದೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಹೆಸರನ್ನು ಸೂಚಿಸುವಾಗ ಮಾಡಿರುವ ಎಡವಟ್ಟು ಇದೀಗ ಬಹಿರಂಗಗೊಂಡಿದೆ. ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರ ಸಹೋದರ ಎಸ್‌.ಎಂ.ಶಂಕರ್‌ ಪುತ್ರ ಎಸ್‌.ಗುರುಚರಣ್‌ ಅವರ ಹೆಸರನ್ನು ಕೈಬಿಟ್ಟು ಉದ್ಯಮಿ ಕದಲೂರು ಉದಯ್‌ಗೌಡ ಹೆಸರನ್ನು ಎಐಸಿಸಿಗೆ ಶಿಫಾರಸು ಮಾಡಿರುವುದು ಚುನಾವಣಾ ಆಯ್ಕೆ ಸಮಿತಿಯ ಕೆಲ ನಾಯಕರಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.

Latest Videos

ಹಿಂದೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್‌ ಸರ್ಕಾರದ ಪತನಕ್ಕೆ ಉದಯ್‌ಗೌಡ ಕಾರಣರಾಗಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಇವರಿಗೆ ಮದ್ದೂರು ಕ್ಷೇತ್ರದ ಟಿಕೆಟ್‌ ನೀಡುವುದು ಸೂಕ್ತವಲ್ಲ ಎಂದು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ವೀರಪ್ಪಮೊಯ್ಲಿ, ಮಾಜಿ ಸಚಿವ ಎಚ್‌.ಕೆ.ಪಾಟೀಲ್‌ ಅವರು ಹೈಕಮಾಂಡ್‌ಗೆ ಸಲಹೆ ನೀಡಿದ್ದಾರೆ.

ಚುನಾವಣೆಗೆ ಒಂದು ವರ್ಷವಿರುವಾಗಲೇ ಗುರುಚರಣ್‌ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮದ್ದೂರು ಕ್ಷೇತ್ರದ ಟಿಕೆಟ್‌ ಘೋಷಣೆ ಮಾಡಿದ್ದರು. ಈಗ ಚುನಾವಣೆ ಘೋಷಣೆಯಾಗಿರುವ ಸಮಯದಲ್ಲಿ ಬೇರೊಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡಿರುವುದರ ಬಗ್ಗೆ ಸ್ವತಃ ಎಸ್‌.ಎಂ.ಕೃಷ್ಣ ಅವರೇ ಡಿ.ಕೆ.ಶಿವಕುಮಾರ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಮದ್ದೂರು ಕ್ಷೇತ್ರದ ಅಭ್ಯರ್ಥಿ ಎಂದು ಗುರುಚರಣ್‌ ಅವರನ್ನು ಘೋಷಣೆ ಮಾಡಿದ್ದರಿಂದ ಮೇಕೆದಾಟು ಪಾದಯಾತ್ರೆ, ಭಾರತ್‌ ಜೋಡೋಯಾತ್ರೆ, ಸಿದ್ದರಾಮೋತ್ಸವ ಹಾಗೂ ಪ್ರಜಾಧ್ವನಿ ಸಮಾವೇಶಕ್ಕಾಗಿ ಕಾರ್ಯಕರ್ತರನ್ನು ಸಂಘಟಿಸಲು ಸಾಕಷ್ಟುಶ್ರಮಿಸಿದ್ದರು. ಕೋಟ್ಯಂತರ ರು. ಹಣ ಖರ್ಚು ಮಾಡಿದ್ದರು. ಹೀಗಿದ್ದರೂ ಸಹ ಕಾಂಗ್ರೆಸ್‌ ಎರಡನೇ ಪಟ್ಟಿಪ್ರಕಟಿಸುವ ಹಂತದಲ್ಲಿ ಎಸ್‌.ಗುರುಚರಣ್‌ ಹೆಸರನ್ನು ಕೈಬಿಟ್ಟು ಕೇವಲ ಉದಯ್‌ಗೌಡ ಹೆಸರನ್ನು ಶಿಫಾರಸು ಮಾಡಿರುವುದು ಗೊತ್ತಾಗಿದೆ. ಈ ಬಗ್ಗೆ ಗುರುಚರಣ್‌ ಆಂತರಿಕವಾಗಿ ಪರಿಶೀಲಿಸಿದಾಗ ಕಾಂಗ್ರೆಸ್‌ ನಾಯಕರೇ ಮದ್ದೂರು ಕ್ಷೇತ್ರದಿಂದ ಕೇವಲ ಉದಯ್‌ಗೌಡ ಹೆಸರು ಮಾತ್ರ ಶಿಫಾರಸು ಮಾಡಿರುವುದು ಗೊತ್ತಾಗಿದೆ.

ಈ ಸಂಬಂಧ ಗುರುಚರಣ್‌ ಅವರು ತಮ್ಮ ಕೈಬಿಟ್ಟಿರುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ನೇರವಾಗಿ ಪ್ರಶ್ನಿಸಿದ್ದು, ನಿನಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವುದಾಗಿ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ. ಆದರೆ, ಗುರುಚರಣ್‌ ಹಾಗೂ ಅವರು ಬೆಂಬಲಿಗರು ಡಿ.ಕೆ.ಶಿವಕುಮಾರ್‌ ಮತ್ತು ಜಿಲ್ಲಾ ನಾಯಕರು ಆಮಿಷಕ್ಕೆ ಒಳಗಾಗಿ ಗುರುಚರಣ್‌ ಹೆಸರನ್ನು ಕೈಬಿಟ್ಟು ಉದಯ್‌ಗೌಡ ಹೆಸರನ್ನು ಶಿಫಾರಸು ಮಾಡಿರುವುದು ಸಹಜವಾಗಿ ಎಸ್‌.ಎಂ.ಕೃಷ್ಣ, ಅವರ ಕುಟುಂಬ ಮತ್ತವರ ಬೆಂಬಲಿಗರಿಗೆ ನೋವುಂಟುಮಾಡಿದೆ. ಇದರಿಂದಾಗಿ ಎಸ್‌.ಎಂ.ಕೃಷ್ಣ ಕುಟುಂಬಕ್ಕೆ ಕಾಂಗ್ರೆಸ್‌ ನಾಯಕರು ಅವಮಾನ ಮಾಡಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ.

ಕದಲೂರು ಉದಯ್‌ಗೌಡ ಅವರಿಗೆ ಮದ್ದೂರು ಕ್ಷೇತ್ರದ ಟಿಕೆಟ್‌ ನೀಡುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇದೀಗ ಅಭ್ಯರ್ಥಿ ಆಯ್ಕೆ ಇನ್ನಷ್ಟುಕಗ್ಗಂಟಾಗುತ್ತಿದ್ದು, ಯಾರಿಗೆ ಟಿಕೆಟ್‌ ಸಿಗಲಿದೆ ಎನ್ನುವುದು ಕುತೂಹಲದ ಸಂಗತಿಯಾಗಿದೆ. 

click me!