ಗ್ಯಾರಂಟಿಗೆಲ್ಲ ಆನ್‌ಲೈನ್‌ ಬಿಪಿಎಲ್‌ ತಣ್ಣೀರು..!

Published : May 26, 2023, 09:08 PM ISTUpdated : May 26, 2023, 09:13 PM IST
ಗ್ಯಾರಂಟಿಗೆಲ್ಲ ಆನ್‌ಲೈನ್‌ ಬಿಪಿಎಲ್‌ ತಣ್ಣೀರು..!

ಸಾರಾಂಶ

ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಬಿಪಿಎಲ್‌ ಕಾರ್ಡ್‌ ಇರಬೇಕೆಂಬ ಮಾನದಂಡ ಮಾಡಲಾಗಿದೆ. ಹೀಗಾಗಿ ಹೊಸ ಗ್ಯಾರಂಟಿಗಳಿಗೂ ಇದೇ ಮಾನದಂಡ ಆಗಬಹುದು ಎಂದು ಭಾವಿಸಿ ಜನರು ಬಿಪಿಎಲ್‌ ಕಾರ್ಡ್‌ ಬಯಸುತ್ತಿದ್ದಾರೆ. 

ರವಿ ಕಾಂಬಳೆ

ಹುಕ್ಕೇರಿ(ಮೇ.26):  ಕಾಂಗ್ರೆಸ್‌ ಸರ್ಕಾರವು ಘೋಷಿಸಿರುವ ವಿವಿಧ ಗ್ಯಾರಂಟಿಗಳ ಲಾಭವನ್ನು ಪಡೆದುಕೊಳ್ಳಲು ಉತ್ಸುಕರಾಗಿರುವವರು ಹುಕ್ಕೇರಿ ತಾಲೂಕಿನಲ್ಲಿ ಬಿಪಿಎಲ್‌ (ಬಡತನ ರೇಖೆಗಿಂತ ಕೆಳಗಿರುವವರು) ಕಾರ್ಡ್‌ ಮಾಡಿಸಲು ಮುಗಿಬೀಳುತ್ತಿದ್ದಾರೆ. ಆದರೆ, ಅರ್ಜಿ ಸಲ್ಲಿಕೆಯ ಆನ್‌ಲೈನ್‌ ಪೋರ್ಟಲ್‌ ಅನ್ನು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು ಸ್ಥಗಿತಗೊಳಿಸಿರುವುದು ಜನರ ಉತ್ಸಾಹಕ್ಕೆ ತಣ್ಣೀರೆರಚಿದೆ.

ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಬಿಪಿಎಲ್‌ ಕಾರ್ಡ್‌ ಇರಬೇಕೆಂಬ ಮಾನದಂಡ ಮಾಡಲಾಗಿದೆ. ಹೀಗಾಗಿ ಹೊಸ ಗ್ಯಾರಂಟಿಗಳಿಗೂ ಇದೇ ಮಾನದಂಡ ಆಗಬಹುದು ಎಂದು ಭಾವಿಸಿ ಜನರು ಬಿಪಿಎಲ್‌ ಕಾರ್ಡ್‌ ಬಯಸುತ್ತಿದ್ದಾರೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಿರುವುದರಿಂದ ಸಂಬಂಧಿಸಿದ ಇಲಾಖೆಯ ಕಚೇರಿಗಳು, ಗ್ರಾಮ್‌ ಒನ್‌, ಸಾಮಾನ್ಯ ಸೇವಾ ಕೇಂದ್ರಗಳಿಗೆ (ಸಿಎಸ್‌ಸಿ) ಎಡತಾಕುತ್ತಿದ್ದಾರೆ. ಆದರೆ, ಸದ್ಯ ಆನ್‌ಲೈನ್‌ನಲ್ಲಿ ಅರ್ಜಿ ಸ್ವೀಕರಿಸುವ ಅಥವಾ ಸಲ್ಲಿಸುವ ಪ್ರಕ್ರಿಯೆ ನಡೆಸಲು ಸಾಧ್ಯವಾಗುತ್ತಿಲ್ಲ.

ಸರ್ಕಾರಿ ಶಾಲೆ ಬಾಗಿಲಲ್ಲೇ ಬಿತ್ತು ಹೆಣ: 18 ವರ್ಷದ ಹಿಂದೆ ತಂದೆ.. ಈಗ ಮಗ..!

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆಯೇ ಆನ್‌ಲೈನ್‌ ಪೋರ್ಟಲ್‌ ಸ್ಥಗಿತಗೊಳಿಸಲಾಗಿತ್ತು. ಈಗ ಸರ್ಕಾರದ ಆದೇಶಕ್ಕೆ ಕಾಯಲಾಗುತ್ತಿದೆ. ಹೊಸ ಸರ್ಕಾರ ನಿರ್ದೇಶನ ನೀಡಿದ ನಂತರವಷ್ಟೇ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶವಾಗಲಿದೆ. ಮಾರ್ಗಸೂಚಿಗಳ ಪ್ರಕಾರ ಅರ್ಹರಿಗೆ ಬಿಪಿಎಲ್‌ ಪಡಿತರ ಚೀಟಿ ಕೊಡಲಾಗುತ್ತದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.

ಪ್ರತಿ ಕುಟುಂಬದ ಯಜಮಾನಿಗೆ ತಿಂಗಳಿಗೆ .2 ಸಾವಿರ ದೊರೆಯಲಿದೆ. ಬಿಪಿಎಲ್‌ ಪಡಿತರ ಚೀಟಿಯಲ್ಲಿರುವ ಪ್ರತಿ ಸದಸ್ಯರಿಗೆ ತಲಾ 10 ಕೆಜಿ ಅಕ್ಕಿ ಉಚಿತವಾಗಿ ನೀಡಲಾಗುವುದು. ಮಹಿಳೆಯರು ಸಾರಿಗೆ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ. ಇದಕ್ಕೆ ಸಚಿವ ಸಂಪುಟದ ತಾತ್ವಿಕ ಅನುಮೋದನೆಯೂ ದೊರೆತಿದೆ. ಈ ಹಿನ್ನೆಲೆಯಲ್ಲಿ ಎಲ್ಲದಕ್ಕೂ ಬಿಪಿಎಲ್‌ ಕಾರ್ಡ್‌ ಮಾ ನದಂಡವಾಗಬಹುದು ಎಂಬ ನಂಬಿಕೆಯ ಕಾರಣದಿಂದ ಬಿಪಿಎಲ್‌ ಕಾರ್ಡ್‌ಗೆ ಬೇಡಿಕೆ ಬಂದಿದೆ.

ಹೊಸದಾಗಿ ಬಿಪಿಎಲ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಗ್ರಾಮ್‌ ಒನ್‌ ಹಾಗೂ ಸಾಮಾನ್ಯ ಸೇವಾ ಕೇಂದ್ರಗಳಿಗೆ ಜನರು ನಿತ್ಯವೂ ಭೇಟಿ ನೀಡಿ ವಿಚಾರಿಸುತ್ತಿರುವುದು ಕಂಡು ಬರುತ್ತಿದೆ. ಗ್ಯಾರಂಟಿ ಯೋಜನೆಗಳಿಗೆ ಬಿಪಿಎಲ್‌ ಕಾರ್ಡ್‌ ಮಾನದಂಡ ಎಂದು ಜನರು ಭಾವಿಸಿರುವುದರಿಂದ ಅರ್ಜಿ ಸಲ್ಲಿಸಲು ಬರುವವರ ಸಂಖ್ಯೆ ಹೆಚ್ಚಾಗಿದೆ. ಸದ್ಯಕ್ಕೆ ಅರ್ಜಿ ಸ್ವೀಕಾರ ಪ್ರಕ್ರಿಯೆಗೆ ಸರ್ಕಾರ ಅನುವು ಮಾಡಿಕೊಟ್ಟಿಲ್ಲ ಎಂದು ಗ್ರಾಮ್‌ ಒನ್‌ ಸಿಬ್ಬಂದಿ ಹೇಳುತ್ತಾರೆ.

ಅಥಣಿ ಮಂದಿಗೆ ರಣಬಿಸಿಲಲ್ಲೇ ವಿದ್ಯುತ್ ಕಡಿತದ ಶಾಕ್!

ತಾಲೂಕಿನಲ್ಲಿ 158 ನ್ಯಾಯಬೆಲೆ ಅಂಗಡಿಗಳಿವೆ. 99,139 ಆದ್ಯತಾ (ಬಿಪಿಎಲ್‌-91567, ಅಂತ್ಯೋದಯ ಅನ್ನ ಯೋಜನೆ-7572) ಚೀಟಿಗಳಿವೆ. 20194 ಎಪಿಎಲ್‌ ಚೀಟಿಗಳಿವೆ. ಹೊಸದಾಗಿ ಬಿಪಿಎಲ್‌ ಪಡಿತರ ಚೀಟಿ ಕೋರಿ ಸಲ್ಲಿಕೆಯಾಗಿರುವ ಒಟ್ಟು 6566 ರಲ್ಲಿ 343 ಅರ್ಜಿಗಳನ್ನು ಸ್ವಯಂವಾಗಿ ಹಿಂತೆಗೆದುಕೊಂಡಿದ್ದಾರೆ. ಉಳಿದ 6223 ಪೈಕಿ 3009 ಅರ್ಜಿಗಳು ಅನುಮೋದನೆಯಾಗಿದ್ದು ಇನ್ನುಳಿದ 3214 ಅರ್ಜಿಗಳಲ್ಲಿ 1261 ರದ್ದುಪಡಿಸಲಾಗಿದೆ. 1953 ಕುಟುಂಬಗಳಿಗೆ ಕಾರ್ಡ್‌ ವಿತರಿಸಲು ಪರಿಶೀಲನೆ ಬಾಕಿಯಿದೆ.

ಅರ್ಜಿ ಸ್ವೀಕಾರ ಪ್ರಕ್ರಿಯೆ ಸ್ಥಗಿತಗೊಂಡಿರುವುದರಿಂದ ಬಿಪಿಎಲ್‌ ಕಾರ್ಡ್‌ಗೆ ಬೇಡಿಕೆ ಹೆಚ್ಚಿದೆಯೇ ಇಲ್ಲವೇ ಎಂದು ಹೇಳುವುದು ಕಷ್ಟ. ಸರ್ಕಾರದ ಆದೇಶ ಬಂದ ನಂತರ ಅರ್ಜಿ ಸಲ್ಲಿಸಬಹುದು. ಪರಿಶೀಲಿಸಿ ಕಾರ್ಡ್‌ ಒದಗಿಸಲಾಗುವುದು ಅಂತ ಹುಕ್ಕೇರಿ ಉಪತಹಸೀಲ್ದಾರ್‌ (ಆಹಾರ) ಸಿ.ಆರ್‌.ಶೀಗಿಹೊಳಿ ತಿಳಿಸಿದ್ದಾರೆ.  

PREV
Read more Articles on
click me!

Recommended Stories

ಬೆಂಗಳೂರು : ಹೊಸ ಮಾರ್ಗಗಳಿಗೆ ಬರಲಿವೆ ಚಾಲಕ ರಹಿತ ರೈಲು
ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು