ಕಳೆದ ನಾಲ್ಕು ವರ್ಷಗಳಿಂದ ಈರುಳ್ಳಿಗೆ ಸಮರ್ಪಕ ಬೆಲೆ ಸಿಗದ ಕಾರಣ ಪ್ರಸಕ್ತ ಸಾಲಿನಲ್ಲಿ ಈರುಳ್ಳಿ ಬಿತ್ತನೆ ಕ್ಷೇತ್ರ ಗಣನೀಯವಾಗಿ ಇಳಿಕೆ ಕಂಡಿತ್ತು. ಭೀಕರ ಬರದಿಂದ ಈಗ ಆ ಈರುಳ್ಳಿ ಕೂಡ ಹಾಳಾಗಿದ್ದು, ಅಲ್ಪಸಲ್ಪ ಒಣ ಬೇಸಾಯ ಮತ್ತು ನೀರಾವರಿ ಆಶ್ರಿತ ಈರುಳ್ಳಿ ಉಳಿದಿದೆ. ಸದ್ಯ ಮಾರುಕಟ್ಟೆಯಲ್ಲಿ ನಿತ್ಯ ಈರುಳ್ಳಿ ಬೆಲೆ ಏರಿಕೆಯಾಗುತ್ತಿದೆ.
ಲಕ್ಷ್ಮಣ ಹಿರೇಕುರಬರ
ತಾಂಬಾ(ನ.05): ಈ ಬಾರಿ ಹಿಂಗಾರು-ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಒಂದರ ಮೇಲೊಂದರಂತೆ ತರಕಾರಿ ಬೆಳೆಗಳು ಏರಿಕೆ ಆಗುತ್ತಿವೆ. ಕಳೆದ ಕೆಲವು ತಿಂಗಳ ಹಿಂದೆ ₹150ರ ಗಡಿದಾಡಿದ್ದ ಟೋಮೆಟೋ ಇದೀಗ ತಹಬದಿಗೆ ಬಂದಿದೆ. ಈ ಭಾರದಿಂದ ತಪ್ಪಿಸಿಕೊಂಡಿವು ಎಂದು ಜನರು ನಿಟ್ಟುಸಿರು ಬಿಡುತ್ತಿದ್ದಂತೆ ಇದೀಗ ಈರುಳ್ಳಿ ಏರಿಕೆಯಾಗಿ ಜನರ ಕಣ್ಣಲ್ಲಿ ನೀರು ತರಿಸುತ್ತಿದೆ.
ಕಳೆದ ನಾಲ್ಕು ವರ್ಷಗಳಿಂದ ಈರುಳ್ಳಿಗೆ ಸಮರ್ಪಕ ಬೆಲೆ ಸಿಗದ ಕಾರಣ ಪ್ರಸಕ್ತ ಸಾಲಿನಲ್ಲಿ ಈರುಳ್ಳಿ ಬಿತ್ತನೆ ಕ್ಷೇತ್ರ ಗಣನೀಯವಾಗಿ ಇಳಿಕೆ ಕಂಡಿತ್ತು. ಭೀಕರ ಬರದಿಂದ ಈಗ ಆ ಈರುಳ್ಳಿ ಕೂಡ ಹಾಳಾಗಿದ್ದು, ಅಲ್ಪಸಲ್ಪ ಒಣ ಬೇಸಾಯ ಮತ್ತು ನೀರಾವರಿ ಆಶ್ರಿತ ಈರುಳ್ಳಿ ಉಳಿದಿದೆ. ಸದ್ಯ ಮಾರುಕಟ್ಟೆಯಲ್ಲಿ ನಿತ್ಯ ಈರುಳ್ಳಿ ಬೆಲೆ ಏರಿಕೆಯಾಗುತ್ತಿದೆ. ಕ್ವಿಂಟಲ್‌ಗೆ ₹೩.೫ ಸಾವಿರದಿಂದ ₹೫ ಸಾವಿರ ತನಕ ಬಂಪರ್ ಬೆಲೆ ಸಿಗುತ್ತಿದೆ. ಆದರೆ, ಇದರ ಲಾಭ ಪಡೆಯಬೇಕಾದ ರೈತರ ಜಮೀನುಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಈರುಳ್ಳಿ ದಾಸ್ತಾನು ಇಲ್ಲವಾಗಿದೆ. ಬೆಳೆ ಬಂದಾಗ ಬೆಲೆ ಇಲ್ಲ. ಬೆಲೆ ಇದ್ದಾಗ ಬೆಳೆ ಇಲ್ಲ ಎನ್ನುವ ಪರಿಸ್ಥಿತಿ ಈರುಳ್ಳಿ ಬೆಳೆಗಾರರು ಎದುರಿಸುವಂತಾಗಿದೆ. ಆದರೆ, ಹರಸಾಹಸದಿಂದ ಉಳಿಸಿಕೊಂಡ ಅಳಿದುಳಿದ ಬೆಳೆಗೆ ಬಂಪರ್ ಬೆಲೆ ಬರುವ ನಿರೀಕ್ಷೆ ರೈತರಲ್ಲಿದೆ.
ಮೊಳಕೆ ಒಡೆಯದ ಬೀಜ:
ಈ ಬಾರಿ ಮುಂಗಾರು ತಡವಾಗಿ ಪ್ರವೇಶಿಸಿದ್ದರಿಂದ ಜಿಲ್ಲೆಯಲ್ಲಿ ಈರುಳ್ಳಿ ಬೆಳೆಯಲು ರೈತರು ದೊಡ್ಡ ಪ್ರಮಾಣದ ಆಸಕ್ತಿ ತೋರಿಸಲಿಲ್ಲ. ಆದರೂ, ಈ ಬಾರಿ ಬೆಲೆ ಸಿಗಬಹುದು ಎನ್ನುವ ಕಾರಣಕ್ಕೆ ಹಳ್ಳ, ಕೆರೆದಡದ ರೈತರು ಈರುಳ್ಳಿ ಬಿತ್ತನೆ ಮಾಡಿದರು. ಸದ್ಯ ಹಳ್ಳ, ಕರೆಗಳು ಬತ್ತುತ್ತಿವೆ. ಬಾವಿ ಮತ್ತು ಕೊಳವೆ ಬಾವಿ ಸೇರಿದಂತೆ ನೀರಾವರಿ ಪ್ರದೇಶದಲ್ಲಿ ಅಲ್ಪ-ಸ್ವಲ್ಪ ಬೆಳೆ ಕಾಣಿಸುತ್ತಿದೆ. ಆದರೆ, ಈರುಳ್ಳಿದರ ಇನ್ನೂ ಹೆಚ್ಚಾಗುವ ನಿರೀಕ್ಷೆಯಲ್ಲಿದ್ದಾರೆ.
ಈರುಳ್ಳಿ ಬೇಳೆ ಇಲ್ಲದಂತಾಗಿದೆ. ಈರುಳ್ಳಿ ಬೆಳೆಯನ್ನು ನೀರಾವರಿ ಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಬೇಸಿಗೆಯಲ್ಲಿ ಟೋಮೆಟೋ ದರ ಶತಕ ದಾಟಿದ್ದರಿಂದ ಈರುಳ್ಳಿ ಬೆಲೆ ಕೂಡ ಹೆಚ್ಚಾಗುವ ನಿರೀಕ್ಷೆಯಲ್ಲಿದ್ದ ಖುಷ್ಕ ಪ್ರದೇಶದ ರೈತರು ಈರುಳ್ಳಿ ಬಿತ್ತನೆ ಮಾಡಿದ್ದರು. ಆದರೆ, ಸಕಾಲಕ್ಕೆ ಮಳೆಯಾಗದ ಕಾರಣ ಬಿತ್ತಿದ ಬೀಜ ಮೊಳಕೆಯೊಡೆಯಲಿಲ್ಲ. ಹೀಗಾಗಿ ಹಿಂಗಾರು ಬೆಳೆಯಾದರೂ ಬೆಳೆಯಬಹುದು ಎಂದು ಅನೇಕರು ಈರುಳ್ಳಿ ಬಿತ್ತಿದ ಪ್ರದೇಶವನ್ನು ಹರಗಿ ಹಿಂಗಾರಿಗೆ ಸಜ್ಜುಗೊಳಿಸಿದ್ದರು. ಈಗಲೂ ಮಳೆ ಕೊರತೆಯಿಂದ ಹಿಂಗಾರು ಬಿತ್ತನೆಗೂ ಹಿನ್ನಡೆ ಆಯಿತು.
ರೈತರ ಹಿತದ ಬದಲು ಕುರ್ಚಿ ಹಿತ ರಕ್ಷಣೆ ಮಾಡುತ್ತಿರುವ ಸಿಎಂ: ಸಿದ್ದರಾಮಯ್ಯ ವಿರುದ್ಧ ಕಟೀಲ್ ವಾಗ್ದಾಳಿ
ಕಂಗಾಲಾದ ರೈತರು:
ತಾಂಬಾ, ಗಂಗನಳ್ಳಿ, ಹಿಟ್ನಳ್ಳಿ ರೈತರು ೪ರಿಂದ ೫ ಎಕರೆಗೂ ಹೆಚ್ಚು ಜಮೀನಿನಲ್ಲಿ ಅಂದಾಜು ₹೬ ಲಕ್ಷ ಮೌಲ್ಯದ ಭೆಳೆ ಹಾನಿಯಾಗಿದೆ. ಮಳೆ ಇಲ್ಲದೇ ಈರುಳ್ಳಿ ಸೇರಿದಂತೆ ಅನೆಕ ಬೆಳೆಗಳು ಹಾನಿಯಾಗಿರುವುದರಿಂದ ರೈತರು ಬ್ಯಾಂಕಿನಲ್ಲಿ ಮಾಡಿದ ಸಾಲ ಮರುಪಾವತಿಸಲು ಸಾಧ್ಯವಾಗುತ್ತಿಲ್ಲ. ಸರಕಾರ ರೈತರು ಆತ್ಮಹತ್ಯೆ ಮಾಡಿಕೊಂಡ ನಂತರ ನೀಡುವ ಹಣದ ಬದಲಿಗೆ ಬ್ಯಾಂಕಿನಲ್ಲಿ ಸಾಲಮಾಡಿದ ರೈತರ ಮಾಹಿತಿ ಪಡೆದು ಸಂಪೂರ್ಣ ಸಾಲಮನ್ನಾ ಮಾಡಬೇಕು. ಇದರಿಂದ ರೈತರ ಆತ್ಮಹತ್ಯೆ ಪ್ರಕರಣಗಳನ್ನು ತಪ್ಪಿಸಿದಂತಾಗುತ್ತದೆ ಎಂದು ರೈತ ಮುಖಂಡರಾದ ಪರಸು ಬಿಸನಾಳ, ಸಿದ್ದಗೊಂಡ ಹಿರೇಕುರಬರ ಆಗ್ರಹಿಸಿದ್ದಾರೆ.
ಈ ಬಾರಿ ಮಳೆ ಇಲ್ಲದೇ ಈರುಳ್ಳಿ ಬೆಲೆಯಲ್ಲ ಹಾಳಾಗಿದೆ. ಮಳೆಯನ್ನೇ ನಂಬಿ ಈರುಳ್ಳಿ ಬೆಳೆ ಬೆಳೆಯಲಾಗಿದೆ. ಆದರೆ, ಈರುಳ್ಳಿ ಕೈಕೊಟ್ಟಿದ್ದರಿಂದ ತುಂಬಾ ತ್ರಾಸ ಆಗಿದೆ. ಸರ್ಕಾರವೇ ನಮಗೆ ದಾರಿ ತೋರಬೇಕು ಎಂದು ಈರುಳ್ಳಿ ಬೆಳೆದ ರೈತ ಬೀರಪ್ಪ ವಗ್ಗಿ ತಿಳಿಸಿದ್ದಾರೆ.