ಬೆಂಗಳೂರಲ್ಲಿ ಮೆಟ್ರೋ ಸಂಚಾರ ಶುರುವಾಗಿ 10 ವರ್ಷ

By Kannadaprabha NewsFirst Published Oct 21, 2020, 9:32 AM IST
Highlights

ದಶಕದ ಸಂಭ್ರಮದಲ್ಲಿ ನಮ್ಮ ಮೆಟ್ರೋ ಸಂಚಾರ| 2011ರ ಅ.20ರಂದು ಎಂ.ಜಿ. ರಸ್ತೆಯಿಂದ ಬೈಯಪ್ಪನಹಳ್ಳಿ ಮಾರ್ಗದಲ್ಲಿ ಆರಂಭವಾದ ಸೇವೆ| ಹತ್ತು ವರ್ಷದ ಅವಧಿಯಲ್ಲಿ ಮೆಟ್ರೋ ಸೇವೆಯಲ್ಲಿ ಸಾಕಷ್ಟು ತಾಂತ್ರಿಕ ದೋಷಗಳನ್ನು ಸಹ ಕಂಡಿದೆ| ಎಲ್ಲಾ ಏಳುಬೀಳುಗಳ ನಡುವೆಯೇ ಹತ್ತು ವರ್ಷ ಪೂರೈಸಿದ ಮೆಟ್ರೋ| 

ಬೆಂಗಳೂರು(ಅ.21): ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಆರಂಭಿಸಿದ ‘ನಮ್ಮ ಮೆಟ್ರೋ’ ರೈಲು ಹತ್ತು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ. 2011ರ ಅ.20ರಂದು ಎಂ.ಜಿ. ರಸ್ತೆಯಿಂದ ಬೈಯಪ್ಪನಹಳ್ಳಿ ಮಾರ್ಗದಲ್ಲಿ ಆರಂಭವಾದ ಸೇವೆ ಮಂಗಳವಾರಕ್ಕೆ ಹತ್ತು ವರ್ಷ ಪೂರ್ಣಗೊಂಡಿದೆ.

ಆರಂಭದಲ್ಲಿ ಸಾವಿರ ಲೆಕ್ಕದಲ್ಲಿ ಆರಂಭವಾದ ಪ್ರಯಾಣಿಕರ ಸಂಖ್ಯೆ ನಂತರ ಪ್ರತಿ ದಿನ 4.5 ಲಕ್ಷ ಜನರು ಮೆಟ್ರೋ ಸೇವೆ ಬಳಸುತ್ತಿದ್ದಾರೆ. ವಾರ್ಷಿಕ ಅಂದಾಜು 13.30 ಕೋಟಿ ಜನ ಪ್ರಯಾಣಿಸುತ್ತಿದ್ದಾರೆ. ಕೊರೋನಾ ಸೋಂಕು ಹರಡಿದ ನಂತರ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಇತ್ತೀಚೆಗೆ ಸೇವೆ ಆರಂಭಿಸಿದ್ದು, ಪ್ರತಿ ದಿನ ಸರಾಸರಿ 55 ಸಾವಿರ ಜನರು ಮೆಟ್ರೋ ಸೇವೆ ಪಡೆಯುತ್ತಿದ್ದಾರೆ.

2006ರಲ್ಲಿ ಕೇಂದ್ರ ಸಚಿವ ಸಂಪುಟವು 33 ಕಿ.ಮೀ. ಉದ್ದದ ರೈಲು ಮಾರ್ಗಕ್ಕೆ ಅನುಮತಿ ನೀಡಿತ್ತು. ಬಳಿಕ ಅದೇ ವರ್ಷ ಅಂದಿನ ಪ್ರಧಾನಿ ಮನಮೋಹನ್‌ ಸಿಂಗ್‌ ಮೆಟ್ರೋ ಕಾಮಗಾರಿಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಸತತ ಐದು ವರ್ಷದ ಕಾಮಗಾರಿ ಬಳಿಕ 2011ರಲ್ಲಿ ಮೊದಲ ಸೇವೆ ಆರಂಭಗೊಂಡಿತು.

2012ರಲ್ಲಿ ಎಂ.ಜಿ. ರಸ್ತೆ- ಬೈಯಪ್ಪನಹಳ್ಳಿ, ನಂತರ 2014ರ ಮಾ.1ರಂದು ಸಂಪಿಗೆ ರಸ್ತೆ-ಪೀಣ್ಯ ಕೈಗಾರಿಕಾ ಪ್ರದೇಶ, 2015ರ ಮೇ 1ರಂದು ಪೀಣ್ಯ ಕೈಗಾರಿಕಾ ಪ್ರದೇಶ-ನಾಗಸಂದ್ರ, 2015ರ ನ.16ರಂದು ನಾಯಂಡಹಳ್ಳಿ-ಮಾಗಡಿ ರಸ್ತೆ, 2016ರ ಏ.29ರಂದು ಕಬ್ಬನ್‌ ಪಾರ್ಕ್- ಕೆಎಸ್‌ಆರ್‌ ರೈಲು ನಿಲ್ದಾಣ, 2017ರ ಜೂ.17ರಂದು ಸಂಪಿಗೆರಸ್ತೆ- ಯಲಚೇನಹಳ್ಳಿ ಮಾರ್ಗವನ್ನು ಆರಂಭಿಸಲಾಗಿದೆ.

ಲಾಕ್‌ಡೌನ್‌ ಸಡಿಲಿಕೆ: 40 ದಿನವಾದರೂ ಮೆಟ್ರೋಗೆ ಪ್ರಯಾಣಿಕರಿಲ್ಲ..!

ಮುಂದಿನ ನವೆಂಬರ್‌ನಲ್ಲಿ ಯಲಚೇನಹಳ್ಳಿ ಹಾಗೂ ಅಂಜನಾಪುರ ಟೌನ್‌ಶಿಪ್‌ ನಡುವೆ ಸೇವೆ ಆರಂಭವಾಗಲಿದೆ. 2024ಕ್ಕೆ 2ನೇ ಹಂತದ 72 ಕಿಮೀ ಯೋಜನೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಇದರ ಜೊತೆಗೆ 52 ಕಿಮೀ ಉದ್ದದ ಹೊರ ವರ್ತುಲ ರಸ್ತೆ ಮತ್ತು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗಗಳಿಗೂ ಚಾಲನೆ ನೀಡಲಾಗಿದೆ.

ಈ ಹತ್ತು ವರ್ಷದ ಅವಧಿಯಲ್ಲಿ ಮೆಟ್ರೋ ಸೇವೆಯಲ್ಲಿ ಸಾಕಷ್ಟು ತಾಂತ್ರಿಕ ದೋಷಗಳನ್ನು ಸಹ ಕಂಡಿದೆ. ಟ್ರಿನಿಟಿ ವೃತ್ತ, ಎಂ.ಜಿ. ರಸ್ತೆ ಸೇರಿ ಇನ್ನಿತರ ಕಡೆ ಮೆಟ್ರೋ ಪಿಲ್ಲರ್‌ಗಳಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಎಲ್ಲಾ ಏಳುಬೀಳುಗಳ ನಡುವೆಯೇ ಹತ್ತು ವರ್ಷ ಪೂರ್ಣಗೊಂಡಿದೆ.
 

click me!