ನೇತ್ರಾವತಿ ನದಿಗೆ ಬಿದ್ದು 10 ಕಿಮೀ ಬಳಿಕ ಸಿಕ್ಕ ವೃದ್ಧೆ!

By Web Desk  |  First Published Sep 13, 2019, 7:51 AM IST

ನೇತ್ರಾವತಿ ನದಿಗೆ ಬಿದ್ದು 10 ಕಿಮೀ ಬಳಿಕ ಸಿಕ್ಕ ವೃದ್ಧೆ!| ವೃದ್ಧೆಯೊಬ್ಬರು ಪವಾಡ ಸದೃಶ ಪಾರು


ಉಪ್ಪಿನಂಗಡಿ[ಸೆ.13]: ತುಂಬಿ ಹರಿಯುತ್ತಿರುವ ನೇತ್ರಾವತಿ ನದಿಯಲ್ಲಿ ಕಾಲು ಜಾರಿ ಬಿದ್ದು 10 ಕಿ.ಮೀ.ವರೆಗೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ ವೃದ್ಧೆಯೊಬ್ಬರು ಪವಾಡ ಸದೃಶವಾಗಿ ರಕ್ಷಣೆಯಾಗಿರುವ ಘಟನೆ ಗುರುವಾರ ಉಪ್ಪಿನಂಗಡಿಯಲ್ಲಿ ನಡೆದಿದೆ.

ಕಡಬ ತಾಲೂಕಿನ ರಾಮಕುಂಜ ಗ್ರಾಮದ ಗಾಂಧಾರಿ ಮಜಲು ಮನೆ ನಿವಾಸಿ ಮಂಜಪ್ಪ ಎಂಬವರ ಪತ್ನಿ ಮಂಜಕ್ಕ (68) ಎಂಬವರೇ ಪ್ರಾಣಾಪಾಯದಿಂದ ಪಾರಾದ ವೃದ್ಧೆ. ಇವರು ಗುರುವಾರದಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯಕ್ಕೆ ಬಂದವರು ಕಾಲು ತೊಳೆಯಲೆಂದು ನೇತ್ರಾವತಿ ನದಿಯ ಮೆಟ್ಟಲಿನಲ್ಲಿಳಿದಾಗ ಕಾಲುಜಾರಿ ನೀರಿಗೆ ಬಿದ್ದರು. ಈ ಬಗ್ಗೆ ಪೊಲೀಸರಿಂದ ಮಾಹಿತಿ ದೊರೆತ ತಕ್ಷಣ ಜಾಗೃತರಾದ ಕಡೇಶಿವಾಲಯದಲ್ಲಿನ ಅಂಬಿಗ ಅಬ್ಬಾಸ್‌ ನದಿಯಲ್ಲಿ ನಿಗಾವಿರಿಸಿದರು.

Latest Videos

ನದಿ ನೀರಿನಲ್ಲಿ ಕೊಚ್ಚಿಕೊಂಡು ಬರುತ್ತಿದ್ದ ಮಂಜಕ್ಕ ಕಾಣಿಸುತ್ತಿದ್ದಂತೆಯೇ ದೋಣಿಯ ಸಹಾಯದಿಂದ ಅವರನ್ನು ಹಿಡಿದು ಮೇಲೆತ್ತಿ ರಕ್ಷಿಸಿದರು. ಬಳಿಕ ಉಪ್ಪಿನಂಗಡಿ ಪೊಲೀಸರ ವಶಕ್ಕೆ ಒಪ್ಪಿಸಿ ಪ್ರಾಥಮಿಕ ಚಿಕಿತ್ಸೆಯನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಒದಗಿಸಲಾಯಿತು. ವೃದ್ಧೆಯನ್ನು ರಕ್ಷಿಸಿದ ಅಬ್ಬಾಸ್‌ ಅವರ ಕಾರ್ಯಕ್ಕೆ ವ್ಯಾಪಕ ಶ್ಲಾಘನೆಗೆ ವ್ಯಕ್ತವಾಗಿದೆ.

click me!