ಇದೇ ಜೂನ್ 27 ರಂದು ಚುನಾವಣೆ ನಿಗದಿಯಾಗುವ ಸಾಧ್ಯತೆ ಇದ್ದು ಬಿಜೆಪಿಗೆ ಅಧಿಕಾರಕೈಗೆಸಿಗುವ ಸಾಧ್ಯತೆ ಹೆಚ್ಚಿದೆ.
ಬೆಂಗಳೂರು [ಸೆ.13]: ಬಿಬಿಎಂಪಿಯ ಹಾಲಿ ಮೇಯರ್ ಮತ್ತು ಉಪ ಮೇಯರ್ ಅಧಿಕಾರಾವಧಿ ಮುಗಿಯುತ್ತಾ ಬರುತ್ತಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ಮಾಸಾಂತ್ಯದಲ್ಲೇ ನೂತನ ಮೇಯರ್ ಆಯ್ಕೆಗೆ ಚುನಾವಣೆ ನಡೆಯಲಿದ್ದು, ಸೆ.27ಕ್ಕೆ ಚುನಾವಣೆ ನಿಗದಿಯಾಗುವ ಸಾಧ್ಯತೆ ಇದೆ.
ಹಾಲಿ ಮೇಯರ್ ಗಂಗಾಂಬಿಕೆ ಹಾಗೂ ಉಪಮೇಯರ್ ಭದ್ರೇಗೌಡ ಅವರ ಅಧಿಕಾರಾವಧಿ ಸೆಪ್ಟಂಬರ್ 28ಕ್ಕೆ ಮುಗಿಯಲಿದೆ. ಹಾಗಾಗಿ ಬಿಬಿಎಂಪಿ ಅಧಿಕಾರಿಗಳು ನೂತನ ಮೇಯರ್ ಮತ್ತು ಉಪ ಮೇಯರ್ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಈಗಾಗಲೇ ಚುನಾವಣೆಗೆ ಮತದಾರ ಪಟ್ಟಿಯನ್ನೂ ಸಿದ್ಧಗೊಂಡಿದೆ. ಆ ಪ್ರಕಾರ, ಈ ಬಾರಿಯ ಚುನಾವಣೆಗೆ ಒಟ್ಟು 257 ಮತದಾರರಿದ್ದು, ಯಾವುದೇ ಪಕ್ಷ ಗೆಲ್ಲಲು 128 ಮತಗಳ ಮ್ಯಾಜಿಕ್ ನಂಬರ್ ಬೇಕಾಗಿದೆ. ಇದೀಗ, ಚುನಾವಣೆಗೆ ದಿನಾಂಕ ನಿಗದಿ ಅಂತಿಮಗೊಳಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಸೆ.27ರಂದು ಚುನಾವಣೆ ನಿಗದಿಯಾಗುವ ಸಾಧ್ಯತೆ ಇದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.
ಬಿಜೆಪಿಗೆ ಅಧಿಕಾರ:
2015ರ ಬಿಬಿಎಂಪಿ ಸಾರ್ವತ್ರಿಕ ಚುನಾವಣೆಯಲ್ಲಿ 100 ವಾರ್ಡುಗಳಲ್ಲಿ ಗೆಲ್ಲುವ ಮೂಲಕ ಬಿಜೆಪಿ ಅತಿ ಹೆಚ್ಚು ಸಂಖ್ಯಾಬಲ ಹೊಂದಿದ್ದರೂ, ಆಡಳಿತ ನಡೆಸಲು ಅಗತ್ಯದಷ್ಟುಮ್ಯಾಜಿಕ್ ನಂಬರ್ ಸಾಧಿಸಲಾಗದೆ ಅಧಿಕಾರದಿಂದ ವಂಚಿತವಾಗಿತ್ತು. ಆಗ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದ ಹಿನ್ನೆಲೆಯಲ್ಲಿ ಬಿಬಿಎಂಪಿಯಲ್ಲೂ ಕಾಂಗ್ರೆಸ್ ಅಧಿಕಾರ ಹಿಡಿಯಲು ಜೆಡಿಎಸ್ ಮತ್ತು ಪಕ್ಷೇತರರ ಸಹಕಾರದೊದಿಗೆ ನಾಲ್ಕು ವರ್ಷಗಳಿಂದ ಮೈತ್ರಿ ಆಡಳಿತ ನಡೆಸಿಕೊಂಡು ಬರುತ್ತಿದೆ. ಇದೀಗ ಸರ್ಕಾರ ಬದಲಾಗಿ ಬಿಜೆಪಿ ಅಧಿಕಾರಕ್ಕೆ ಬಂದಿರುವುದರಿಂದ ಈ ಬಾರಿ ಬಿಜೆಪಿ ಪಾಲಿಕೆ ಅಧಿಕಾರ ಹಿಡಿಯಲು ಸರ್ವ ಪ್ರಯತ್ನ ನಡೆಸುತ್ತಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಪಕ್ಷೇತರರೇ ನಿರ್ಣಾಯಕ!
ಮತದಾರರ ಪಟ್ಟಿಯ ಅಂಕಿ ಅಂಶಗಳ ಪ್ರಕಾರ, ಮೈತ್ರಿ ಪಕ್ಷಗಳ ಸಂಖ್ಯಾಬಲ ಮತ್ತು ಬಿಜೆಪಿ ಸಂಖ್ಯಾಬಲ ಸಮಬಲದಿಂದ ಅಂದರೆ ತಲಾ 125 ಸಂಖ್ಯಾಬಲ ಹೊಂದಿವೆ. ಯಾವುದೇ ಪಕ್ಷ ಅಧಿಕಾರಕ್ಕೆ ಬರಲು ಇತರೆ ಏಳು ಜನ ಪಕ್ಷೇತರ ಸದಸ್ಯರ ಪೈಕಿ ಕನಿಷ್ಠ ನಾಲ್ವರು ಸದಸ್ಯರ ಬೆಂಬಲ ಅತ್ಯಗತ್ಯ. ಆದರೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವುದರಿಂದ ಕಳೆದ ಚುನಾವಣೆ ವೇಳೆಯಲ್ಲೇ ಬಂಡಾಯ ಸಾರಿ ಬಿಜೆಪಿ ಬೆಂಬಲಿಸಿದ್ದ ಓರ್ವ ಸದಸ್ಯೆ ಹಾಗೂ ಮತ್ತೋರ್ವ ಪಕ್ಷೇತರ ಸದಸ್ಯರ ಜತೆಗೆ ಇತರೆ ಪಕ್ಷೇತರರು ಕೂಡ ಬಿಜೆಪಿ ಬೆಂಬಲಿಸುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದ ಪಾಲಿಕೆಯಲ್ಲೂ ಅತಿ ಹೆಚ್ಚು ಸಂಖ್ಯಾಬಲ ಹೊಂದಿದ್ದರೂ ಕಳೆದ ನಾಲ್ಕು ವರ್ಷದಿಂದ ಅಧಿಕಾರ ವಂಚಿತವಾಗಿದ್ದ ಬಿಜೆಪಿ ಈ ಬಾರಿ ಅಧಿಕಾರ ಹಿಡಿಯುವುದು ಬಹುತೇಕ ಖಚಿತ ಎನ್ನುತ್ತವೆ ಬಿಬಿಎಂಪಿ ಮೂಲಗಳು.