ಕಳೆದ ಜುಲೈ 1 ರಿಂದ ಈ ವರೆಗೆ ಜಿಲ್ಲೆಯಾದ್ಯಂತ ವಾಡಿಕೆಗಿಂತ ಕೊಂಚ ಜಾಸ್ತಿ ಮಳೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಸಹಜವಾಗಿ 16.2 ಮೀ ಮೀಟರ್ ಮಳೆಯಾಗಬೇಕಾಗಿತ್ತು. ಆದರೆ 42.8 ಮೀ.ಮೀಟರ್ ಮಳೆಯಾಗಿದೆ. ಒಟ್ಟು 20 ಮನೆಗಳು ಭಾಗಶ: ಹಾನಿಗೊಳಗಾಗಿವೆ.
- ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ(ಜು.25): ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರೆದಿದೆ. ಕಳೆದ ವಾರದಿಂದ ಸುರಿಯುತ್ತಿದ್ದ ಜಿಟಿಜಿಟಿ ಮಳೆ ನಿನ್ನೆ ರಾತ್ರಿಯಿಂದ ಕೊಂಚ ವೇಗ ಪಡೆದಿದೆ. ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದೆ. ಇತ್ತ ನಿರಂತರ ಮಳೆ ಅನಾಹುತಗಳಿಗು ದಾರಿ ಮಾಡಿ ಕೊಟ್ಟಿದೆ.
undefined
ಛಾವಣಿ ಕುಸಿದು ವೃದ್ದೆ ಸಾವು..!
ಇನ್ನೂ ಜಿಲ್ಲೆಯ ಕನ್ನೂರ ಗ್ರಾಮದಲ್ಲಿ ಮನೆಯ ಛಾವಣಿ ಕುಸಿದು ವೃದ್ಧೆಯೊಬ್ಬಳು ಮೃತಪಟ್ಟ ಘಟನೆ ನಡೆದಿದೆ. ಮೃತ ಮಹಿಳೆಯನ್ನು ಶಿವಮ್ಮ ಸಾವಳಗಿ (60) ಎಂದು ಗುರುತಿಸಲಾಗಿದೆ. ಕಳೆದ ರಾತ್ರಿ ಜಿಟಿ ಜಿಟಿ ಮಳೆಯಿಂದ ಮನೆಯ ಗೋಡೆ ಕುಸಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ನಿರಂತರವಾಗಿ ಸುರಿದ ಜಿಟಿಜಿಟಿ ಮಳೆಯಿಂದಾಗಿ ಗೋಡೆ ಹಾಗೂ ಮಣ್ಣಿನ ಛಾವಣಿ ನೆನೆದಿದ್ದವು ಎನ್ನಲಾಗಿದೆ. ಇದು ಅವಘಡಕ್ಕೆ ಕಾರಣವಾಗಿದೆ.
ನಿರಂತರ ಜಿಟಿ ಜಿಟಿ ಮಳೆಯ ಮಧ್ಯೆ ವಿಜಯಪುರದಲ್ಲಿ ಭೂಕಂಪನ: ಆತಂಕದಲ್ಲಿ ಜನತೆ..!
ಜಿಲ್ಲೆಯಾದ್ಯಂತ ಎಲ್ಲಿ? ಎಷ್ಟೆಷ್ಟು ಮಳೆ.. ಇಲ್ಲಿದೆ ಮಾಹಿತಿ..!
ಜಿಲ್ಲೆಯಲ್ಲಿ ಕಳೆದ ರಾತ್ರಿಯಿಂದ ಆರಂಭವಾಗಿರುವ ಜಿಟಿ ಜಿಟಿ ಮಳೆಯಿಂದ ಇಲ್ಲಿಯವರೆಗೆ 12.31 ಮೀ.ಮೀಟರ್ ಮಳೆ ದಾಖಲಾಗಿದೆ. ವಿಜಯಪುರ ತಾಲೂಕಿನಲ್ಲಿ 9.26 ಮೀ.ಮೀಟರ್, ಬಬಲೇಶ್ವರ ತಾಲೂಕಿನಲ್ಲಿ 20.1 ಮೀ.ಮೀಟರ್, ತಿಕೋಟಾ ತಾಲೂಕಿನಲ್ಲಿ 5.7 ಮೀ.ಮೀಟರ್, ಬಸವನಬಾಗೇವಾಡಿ ತಾಲೂಕಿನಲ್ಲಿ 8.16 ಮೀ.ಮೀಟರ್, ನಿಡಗುಂದಿ ತಾಲೂಕಿನಲ್ಲಿ 1.45 ಮೀ.ಮೀಟರ್, ಕೊಲ್ಹಾರ ತಾಲೂಕಿನಲ್ಲಿ 13.00 ಮೀ.ಮೀಟರ್, ಮುದ್ದೇಬಿಹಾಳ ತಾಲೂಕಿನಲ್ಲಿ 12.6 ಮೀ.ಮೀಟರ್, ತಾಳಿಕೋಟೆ ತಾಲೂಕಿನಲ್ಲಿ ಮಳೆಯಾಗಿಲ್ಲ, ಇಂಡಿ ತಾಲೂಕಿನಲ್ಲಿ 17.32 ಮೀ.ಮೀಟರ್, ಚಡಚಣ ತಾಲೂಕಿನಲ್ಲಿ 26.0 ಮೀ.ಮೀಟರ್, ಸಿಂದಗಿ ತಾಲೂಕಿನಲ್ಲಿ 10.1 ಮೀ.ಮೀಟರ್ ಹಾಗೂ ದೇವರಹಿಪ್ಪರಗಿ ತಾಲೂಕಿನಲ್ಲಿ 24.06 ಮೀ.ಮೀಟರ್ ಮಳೆಯಾಗಿದೆ.
ವಾಡಿಕೆ ಮಳೆಗಿಂದ ಕೊಂಚ ಜಾಸ್ತಿಯೆ ಸುರಿದ ಮಳೆ..!
ಕಳೆದ ಜುಲೈ 1 ರಿಂದ ಈ ವರೆಗೆ ಜಿಲ್ಲೆಯಾದ್ಯಂತ ವಾಡಿಕೆಗಿಂತ ಕೊಂಚ ಜಾಸ್ತಿ ಮಳೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಸಹಜವಾಗಿ 16.2 ಮೀ ಮೀಟರ್ ಮಳೆಯಾಗಬೇಕಾಗಿತ್ತು. ಆದರೆ 42.8 ಮೀ.ಮೀಟರ್ ಮಳೆಯಾಗಿದೆ. ಒಟ್ಟು 20 ಮನೆಗಳು ಭಾಗಶ: ಹಾನಿಗೊಳಗಾಗಿವೆ. ಇನ್ನೂ ಮೂರು ದಿನ ಭಾರಿ ಮಳೆಯಾಗಲಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲಾನ್ ತಿಳಿಸಿದ್ದಾರೆ. ಸದ್ಯ ಶಾಲೆ, ಕಾಲೇಜ್‌ಗಳಿಗೆ ರಜೆ ಘೋಷಣೆ ಮಾಡುವ ಸಾಧ್ಯತೆಗಳಿಲ್ಲ ಎನ್ನಲಾಗಿದೆ.
ತಡವಾದರು ಮುಂಗಾರು ಚುರುಕು, ಕೃಷಿ ಚಟುವಟಿಕೆ ಜೋರು..!
ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದ. ಜೂನ್ 6ರಿಂದ ಆರಂಭವಾಗಬೇಕಾಗಿದ್ದ ಮಳೆ ತಡವಾಗಿ ಜುಲೈ 17ರಿಂದ ಆರಂಭಗೊಂಡಿದೆ. ಸದ್ಯ ಜುಲೈ 17ರಿಂದ ಜುಲೈ 23ರವರೆಗೆ ವಾಡಿಕೆಯಂತೆ 15.6 ಮೀ.ಮೀಟರ್ ಮಳೆಯಾಗಬೇಕಾಗಿತ್ತು. ಅದರ ಬದಲು 44.4 ಮೀ.ಮೀಟರ್ ಮಳೆಯಾಗಿದ್ದು ಮುಂಗಾರು ತಡವಾದರೂ ಸದ್ಯ ಚುರುಕುಗೊಂಡಿದೆ.
ಜಿಲ್ಲೆಯ ಎಲ್ಲೆಲ್ಲಿ ಎಷ್ಟೆಷ್ಟು ಬಿತ್ತನೆ? ಇಲ್ಲಿದೆ ಮಾಹಿತಿ..!
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ 7,36,794 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆಯಾಗಬೇಕಾಗಿತ್ತು. ಆದರೆ ಸದ್ಯ 2.78.293 ಹೆಕ್ಟರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಶೇ. 37.80 ಹೆಕ್ಟರ್ ಪ್ರದೇಶದಲ್ಲಿ ಇನ್ನೂ ಬಿತ್ತನೆ ಕಾರ್ಯ ನಡೆದಿಲ್ಲ. ಗೋವಿನ ಜೋಳ 28087 ಹೆಕ್ಟರ್, ಸಜ್ಜೆ 4346 ಹೆಕ್ಟರ್, ತೊಗರಿ 152272 ಹೆಕ್ಟರ್, ಹೆಸರು 190 ಹೆಕ್ಟರ್, ಉದ್ದು 145 ಹೆಕ್ಟರ್, ಸೂರ್ಯಕಾಂತಿ 205 ಹೆಕ್ಟರ್, ಶೇಂಗಾ 169 ಹೆಕ್ಟರ್, ಹತ್ತಿ 22546 ಹೆಕ್ಟರ್ ಬಿತ್ತನೆಯಾಗಿದೆ.
ವಿಜಯಪುರ: ವಿವಾಹಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧ, ಆಕೆಯ ಹಣದ ದಾಹಕ್ಕೆ ವ್ಯಕ್ತಿ ಆತ್ಮಹತ್ಯೆ
ಬಿತ್ತನೆ ಬೀಜ ದಾಸ್ತಾನು..!
ಮುಂಗಾರು ಹಂಗಾಮಿಗೆ ವಿವಿಧ ಬೆಳೆಗಳ 3162.70 ಕ್ವಿಂಟಲ್ ಬಿತ್ತನೆ ಬೀಜ ಜಿಲ್ಲೆಯ ರೈತ ಸಂಪರ್ಕ ಕೇಂದ್ರದಲ್ಲಿ ದಾಸ್ತಾನು ಮಾಡಲಾಗಿದೆ. ರೈತರಿಗೆ ಕ್ಯೂಆರ್ ಕೋಡ್ ಮೂಲಕ ಬೀಜ ವಿತರಣೆ ಮಾಡಲಾಗುತ್ತಿದೆ. 70301 ಟನ್ ರಸಗೊಬ್ಬರ ದಾಸ್ತಾನು ಮಾಡಲಾಗಿದೆ. ಬೀಜ ಮತ್ತು ರಸಗೊಬ್ಬರದ ಯಾವುದೇ ಕೊರತೆ ಜಿಲ್ಲೆಯಲ್ಲಿ ಇಲ್ಲ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎಲ್ ರೂಪಾ ಮಾಹಿತಿ ನೀಡಿದ್ದಾರೆ.
ಕಳೆದ ವರ್ಷಕ್ಕಿಂತ ಕಡಿಮೆಯಾದ ಬಿತ್ತನೆ ಪ್ರಮಾಣ..!
ಸದ್ಯ ಶೇ. 22ರಷ್ಟು ಬಿತ್ತನೆ ಕಳೆದ ಬಾರಿಗಿಂತ ಕಡಿಮೆಯಾಗಿದೆ. ಮುಂಗಾರು ಹಂಗಾಮು ಒಂದುವರೆ ತಿಂಗಳು ತಡವಾಗಿ ಆರಂಭವಾಗಿರುವ ಕಾರಣ ಸದ್ಯ 7,34.794 ಹೆಕ್ಟರ್ ಬಿತ್ತನೆಯಾಗುವ ಬದಲು ಕೇವಲ 2,78, 293 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಸದ್ಯ ಮಳೆ ಸುರಿಯುತ್ತಿರುವ ಕಾರಣ ರೈತರು ಆತಂಕ ಪಡದೇ ಬಿತ್ತನೆ ಕಾರ್ಯ ನಡೆಸಬಹುದು. ಕೃಷಿ ಇಲಾಖೆಯಿಂದ ರಸಗೊಬ್ಬರ, ಬಿತ್ತನೆ ಬೀಜದ ಕೊರತೆ ಇಲ್ಲ. ನಿಮ್ಮ ತಾಲೂಕಿನ ರೈತ ಸಂಪರ್ಕ ಕೇಂದ್ರದಲ್ಲಿ ಬೀಜ ಮತ್ತು ರಸಗೊಬ್ಬರವನ್ನು ಕ್ಯೂಆರ್ ಕೋಡ್ ಮೂಲಕ ಪಡೆಯಬಹುದಾಗಿದೆ ಎಂದು ಕೃಷಿ ಜಂಟಿ ನಿರ್ದೇಶಕರು ಮಾಹಿತಿ ನೀಡಿದ್ದಾರೆ.