ಬೆಳವಿನಾಳ ಗ್ರಾಮದ ಗಂಗಮ್ಮ (83), ನಡೆಯುವುದು ಕಷ್ಟ. ಕೈಯಲ್ಲಿ ಕೋಲು ಇಲ್ಲದಿದ್ದರೆ ಮುಂದೆ ಹೋಗಲು ಆಗುವುದಿಲ್ಲ. ಅವರಿವರ ಆಸರೆ ಇಲ್ಲದೆ ಬಸ್ ಸೇರಿದಂತೆ ವಾಹನ ಏರಲು ಆಗುವುದಿಲ್ಲ. ಆದರೂ ಸರ್ಕಾರ ಕೊಡ ಮಾಡುವ ವೃದ್ಧಾಪ್ಯ ವೇತನಕ್ಕಾಗಿ ಅಂಗೈಯಲ್ಲಿ ಜೀವ ಹಿಡಿದುಕೊಂಡು ತೇವಳುತ್ತಾ ಕೊಪ್ಪಳ ಅಂಚೆ ಕಚೇರಿಗೆ ಬರಬೇಕು.
ಸೋಮರಡ್ಡಿ ಅಳವಂಡಿ
ಕೊಪ್ಪಳ (ಜೂ.11) ಬೆಳವಿನಾಳ ಗ್ರಾಮದ ಗಂಗಮ್ಮ (83), ನಡೆಯುವುದು ಕಷ್ಟ. ಕೈಯಲ್ಲಿ ಕೋಲು ಇಲ್ಲದಿದ್ದರೆ ಮುಂದೆ ಹೋಗಲು ಆಗುವುದಿಲ್ಲ. ಅವರಿವರ ಆಸರೆ ಇಲ್ಲದೆ ಬಸ್ ಸೇರಿದಂತೆ ವಾಹನ ಏರಲು ಆಗುವುದಿಲ್ಲ. ಆದರೂ ಸರ್ಕಾರ ಕೊಡ ಮಾಡುವ ವೃದ್ಧಾಪ್ಯ ವೇತನಕ್ಕಾಗಿ ಅಂಗೈಯಲ್ಲಿ ಜೀವ ಹಿಡಿದುಕೊಂಡು ತೇವಳುತ್ತಾ ಕೊಪ್ಪಳ ಅಂಚೆ ಕಚೇರಿಗೆ ಬರಬೇಕು.
undefined
ಗೋಳು 2
ನಿಂಬವ್ವ ಕೊಪ್ಪಳ ನಗರದ ತಗ್ಗಿನಕೇರಿ ಓಣಿಯ ನಿವಾಸಿ. ನಡೆಯಲು ಬರುವುದೇ ಇಲ್ಲ. ಆಟೋ ಹತ್ತಬೇಕು ಎಂದರೆ ನಾಲ್ಕು ಜನರ ಸಹಾಯ ಬೇಕು. ಆದರೂ ಸರ್ಕಾರ ಕೊಡ ಮಾಡುವ ವೃದ್ಧಾಪ್ಯ ವೇತನಕ್ಕಾಗಿ ಕೊಪ್ಪಳ ಅಂಚೆ ಕಚೇರಿಗೆ ಆಗಮಿಸುತ್ತಾರೆ.
ಹಿರಿಯ ನಾಗರಿಕರಿಗೆ ಈ ಯೋಜನೆ ಅಡಿ ಸರ್ಕಾರ ನೀಡುತ್ತೆ ಪಿಂಚಣಿ
ಹೀಗೆ ತೆವಳುತ್ತಾ, ಕುಂಟುತ್ತಾ ಬಂದು ಕೊಪ್ಪಳ ಅಂಚೆ ಕಚೇರಿಯಲ್ಲಿ ವೃದ್ಧಾಪ್ಯ ವೇತನಕ್ಕಾಗಿ ಕಾಯುತ್ತಾ ಕುಳಿತವರು ನಿತ್ಯ ನೂರಾರು ಜನ. ಒಮ್ಮೆ ಬಂದರೆ ಕೆಲಸ ಆಗುವುದೇ ಇಲ್ಲ. ಹೀಗಾಗಿ, ನಾಲ್ಕಾರು ಬಾರಿ ಬರಬೇಕು. ಇದು, ಕೇವಲ ಕೊಪ್ಪಳ ವೃದ್ಧರ ಕತೆಯಲ್ಲ. ರಾಜ್ಯಾದ್ಯಂತ ವೃದ್ಧಾಪ್ಯ ವೇತನ ಪಡೆಯುತ್ತಿರುವ ಹಿರಿಯ ಜೀವಿಗಳ ಗೋಳು.
ಪೋಸ್ಟ್ ಮಾಸ್ಟರ್ ಮೂಲಕ ವಿತರಣೆಯಾಗುತ್ತಿದ್ದ ವೃದ್ಧಾಪ್ಯ ವೇತನ ಸರ್ಕಾರ ಬಂದ್ ಮಾಡಿ, ಬ್ಯಾಂಕ್ ಇಲ್ಲವೇ ಅಂಚೆ ಇಲಾಖೆಯಲ್ಲಿರುವ ಖಾತೆಗೆ ನೇರವಾಗಿ ಜಮೆ ಮಾಡಲು ಶುರು ಮಾಡಿತು. ಹೀಗಾಗಿ, ಅವರವರು ತಮ್ಮ ವೃದ್ಧಾಪ್ಯ ವೇತನ ತಮ್ಮ ಬ್ಯಾಂಕ್ ಖಾತೆಗೆ ಇಲ್ಲವೇ ಅಂಚೆ ಖಾತೆಗೆ ಜಮೆಯಾದ ಮೇಲೆ ಬಂದು ತಾವೇ ಬಿಡಿಸಿಕೊಂಡು ಹೋಗಬೇಕು. ಇದಕ್ಕಾಗಿ ಒಮ್ಮೆ ಜಮೆಯಾಗಿದೆಯಾ ಎಂದು ಕೇಳಲು ಬರಬೇಕು, ಜಮಾ ಆಗಿದ್ದರೆ ಮತ್ತೊಮ್ಮೆ ಪಡೆದುಕೊಳ್ಳಲು ಬರಬೇಕು.ಹೀಗಾಗಿ, ಅವರ ಪಾಡು ಹೇಳತೀರದು. ಸರ್ಕಾರ ಕೊಡುವ ಸಾವಿರ ರುಪಾಯಿ ವೇತನಕ್ಕಾಗಿ ಜೀವ ಪಣಕ್ಕಿಟ್ಟು ಬರಬೇಕಾದ ದಯನೀಯ ಸ್ಥಿತಿ ಇದೆ. ಹೀಗೆ ಬರುವಾಗ ಬಿದ್ದು ಕೈಕಾಲು ಮುರಿದುಕೊಂಡರೆ ದೇವರೇ ಕಾಪಾಡಬೇಕು.
ಮತ್ತಷ್ಟುಗೋಳು:
ಕೇಂದ್ರ ಸರ್ಕಾರ ಈಗ ವೃದ್ಧಾಪ್ಯ ವೇತನ ಪಡೆಯಲು ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕು ಎಂದು ಹೇಳಿದೆ. ಹೀಗಾಗಿ, ಈಗ ಅನೇಕ ವೃದ್ಧರು ಪಾನ್ ಕಾರ್ಡ್ ಮಾಡಿಸಲು ಹೆಣಗಾಡುತ್ತಿದ್ದಾರೆ. ಇವರ ಖಾತೆಗೆ ಈ ವೃದ್ಧಾಪ್ಯ ವೇತನ ಹೊರತು ಪಡಿಸಿದರೆ ಮತ್ತೊಂದು ಪೈಸೆಯೂ ಜಮೆಯಾಗುವುದಿಲ್ಲ. ಆದರೂ ಪಾನ್ ಕಾರ್ಡ್ ಮಾಡಿಸಿಕೊಳ್ಳಲೇಬೇಕು. ಪಾನ್ ಕಾರ್ಡ್ ಮತ್ತು ಆಧಾರ ಕಾರ್ಡ್ ಲಿಂಕ್ ಮಾಡಿಸಬೇಕು. ಇದಕ್ಕಾಗಿಯೂ ಪರಿತಪಿಸುತ್ತಿದ್ದಾರೆ ವಯಸ್ಸಾದ ಹಿರಿಯ ಜೀವಗಳು.
ಹಿಂದಿನ ಪದ್ಧತಿಗೆ ಆಗ್ರಹ :
ಈ ಹಿಂದೆ ವೃದ್ಧಾಪ್ಯ ವೇತನವನ್ನು ಪೋಸ್ಟ್‌ಮಾಸ್ಟರ್ ಮನೆ ಮನೆಗೆ ಹೋಗಿ ವಿತರಣೆ ಮಾಡುತ್ತಿದ್ದರು. ಇದರಿಂದ ಹಿರಿಯ ಜೀವಗಳು ಮನೆಯಲ್ಲಿಯೇ ಕುಳಿತುಕೊಂಡು ಸರ್ಕಾರ ಕೊಡುವ ವೃದ್ಧಾಪ್ಯ ವೇತನ ಪಡೆಯುತ್ತಿದ್ದರು. ಇದೇ ವ್ಯವಸ್ಥೆ ಪುನಃ ಪ್ರಾರಂಭಿಸಬೇಕು ಎಂದು ಅವರು ಆಗ್ರಹಿಸುತ್ತಿದ್ದಾರೆ.
ನೇರವಾಗಿ ಅವರ ಖಾತೆಗೆ ಜಮೆಯಾಗಬೇಕು ಎನ್ನುವ ಕಾರಣಕ್ಕಾಗಿ ಈ ಪದ್ಧತಿ ಬದಲಾವಣೆ ಮಾಡಿದ್ದೇ ಸಮಸ್ಯೆಯಾಗಿದ್ದು, ಕೂಡಲೇ ಹಿಂದಿನ ಪದ್ಧತಿಯಂತೆ ಮನೆ ಮನೆಗೆ ವಿತರಣೆ ಪ್ರಾರಂಭಿಸುವಂತೆ ಆಗ್ರಹ ಬಲವಾಗಿ ಕೇಳಿ ಬಂದಿದೆ.
ಪಿಂಚಣಿಗೆ ವೃದ್ಧರ ಪರದಾಟ : ಅಧಿಕಾರಿಗಳ ಅಸಡ್ಡೆ
ನನಗೆ ವಯಸ್ಸಾಗಿದೆ. ಸರಿಯಾಗಿ ಕಣ್ಣು ಕಾಣುವುದಿಲ್ಲ. ನಡೆಯಲು ಆಗುವುದಿಲ್ಲ. ಇದರಿಂದ ಅಂಚೆ ಕಚೇರಿಗೆ ಇಲ್ಲವೇ ಬ್ಯಾಂಕಿಗೆ ಬಂದು ಹಣ ತೆಗೆದುಕೊಂಡು ಹೋಗುವುದು ಕಷ್ಟವಾಗುತ್ತದೆ. ಆದ್ದರಿಂದ ಹಿಂದಿನ ಪದ್ಧತಿಯಂತೆ ಮನೆ ಮನೆಗೆ ವಿತರಣೆ ಮಾಡಿದರೇ ಅನುಕೂಲವಾಗುತ್ತದೆ.
ನಿಂಗವ್ವ ಕಾತರಕಿ
ವೃದ್ಧರು ಬ್ಯಾಂಕಿಗೆ ಇಲ್ಲವೇ ಅಂಚೆ ಕಚೇರಿಗೆ ಹೋಗಿ ವೃದ್ಧಾಪ್ಯವೇತನ ಪಡೆಯುವುದು ಕಷ್ಟವಾಗುತ್ತದೆ.ಹೀಗಾಗಿ, ಮೊದಲಿನಂತೆಯೇ ಮನೆ ಮನೆಗೆ ವಿತರಣೆ ಮಾಡಬೇಕು.
ಮಾನ್ವಿ ಪಾಶಾ, ಮಾಜಿ ಸದಸ್ಯರು ನಗರಸಭೆ ಕೊಪ್ಪಳ