ಅಕ್ಕರೆಯ ಅಜ್ಜ ತೀರಿಕೊಂಡರೂ ಮುಖ ನೋಡಲು ಪುರುಸೊತ್ತಿಲ್ಲ| ಕೊರೋನಾ ವಿರುದ್ಧದ ಹೋರಾಟ: ಹಗಲೂ ರಾತ್ರಿ ಡ್ಯೂಟಿ ಅನಿವಾರ್ಯ| ಯಾದಗಿರಿ ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ್ ಕರ್ತವ್ಯ ನಿಷ್ಠೆ|ಕೊನೆಯ ಭೇಟಿ ವೀಡಿಯೋ ನೋಡಿ ನೆನೆದು ಕಣ್ಣೀರಾದ ಎಸಿ ಸೋಮನಾಳ್| ಒಂದೆಡೆ ಅಮ್ಮನಿಲ್ಲದ ಮಗು, ಮತ್ತೊಂದೆಡೆ ಜಿಲ್ಲೆಯ ಆಗುಹೋಗು|
ಆನಂದ್ ಎಂ. ಸೌದಿ
ಯಾದಗಿರಿ(ಏ.16): ಅಪರ ಜಿಲ್ಲಾಧಿಕಾರಿ (ಎಡಿಸಿ) ಪ್ರಕಾಶ ರಜಪೂತ ಅವರದ್ದು ನಿಜಕ್ಕೂ ಕಣ್ತುಂಬಿ ಬರುವ ಸನ್ನಿವೇಶ. ಆರು ತಿಂಗಳ ಹಿಂದಷ್ಟೇ ಹೆರಿಗೆ ಸಂದರ್ಭದಲ್ಲಿ ಪತ್ನಿಯನ್ನು ಕಳೆದುಕೊಂಡ ಪ್ರಕಾಶ ರಜಪೂತ ಅವರಿಗಾದ ಆಘಾತ ಅಳೆಯಲಾಗದು. ಪತ್ನಿಯ ಅಕಾಲಿಕ ಸಾವು ಅವರನ್ನು ಜರ್ಝರಿತಗೊಳಿಸಿದೆ. ಎಳೆಯ ಕೂಸಿನ ಆರೈಕೆ, ಅಮ್ಮನಿಲ್ಲದ ಹಸುಳೆಗೆ ಎಲ್ಲವೂ ಇವರೇ.
ಈ ಮಧ್ಯೆ, ಕೊರೋನಾ ಸೋಂಕು ತಡೆಗಟ್ಟುವ ಟಾಸ್ಕ್‌ಫೋರ್ಸ್ ತಂಡದ ಮೇಲ್ವಿಚಾರಣೆ, ಜೊತೆಗೆ ಪ್ರತಿದಿನ ಎಲ್ಲ ಮಾಹಿತಿಗಳ ಕಲೆ ಹಾಕಿ ಜಿಲ್ಲಾಧಿಕಾರಿಗೆ ಒಪ್ಪಿಸುವುದು, ಪ್ರಕಟಣೆಗಳ ಮೂಲಕ ಸಾರ್ವಜನಿಕರಿಗೆ ಎಚ್ಚರಿಸುವುದು ಮುಂತಾದ ಕಾರ್ಯಗಳಿಗೆ ಲೋಪವಾಗದಂತೆ ನೋಡಿಕೊಳ್ಳುತ್ತಿದ್ದಾರೆ.
ತಾಯಿ ಪ್ರೀತಿಯಿಂದ ವಂಚಿತವಾದ ಎಳೆಯ ಕಂದಮ್ಮನ ಆರೈಕೆಯನ್ನೂ ನಿರ್ಲಕ್ಷಿಸುವಂತಿಲ್ಲ. ಎಲ್ಲ ಕಡೆಗಳಲ್ಲಿ ತಿರಗಾಡಿ ಬಂದ ತಮ್ಮಿಂದ ಮಗುವಿನ ಆರೋಗ್ಯಕ್ಕೂ ಧಕ್ಕೆಯಾಗಬಾರದು ಎಂಬ ಕಾರಣಕ್ಕಾಗಿ ತಮ್ಮ ತಾಯಿಯ ಮಡಿಲಲ್ಲಿ ಜೋಪಾನ ಮಾಡಿಸುತ್ತಿರುವ ಎಡಿಸಿ ಪ್ರಕಾಶ ರಜಪೂತ್, ಪ್ರತಿದಿನ ರಾತ್ರಿ ಡ್ಯೂಟಿಯಿಂದ ಬಂದ ನಂತರ ಮಗುವನ್ನು ಮುದ್ದಿಸಲಿಕ್ಕಾಗದಿದ್ದರೂ ದೂರದಿಂದಲೇ ನೋಡಿ ನೆಮ್ಮದಿ ಕಾಣುತ್ತಾರೆ. ತಾಯಿ ಕಳೆದುಕೊಂಡ ಆರು ತಿಂಗಳ ಮಗು ಸೇರಿದಂತೆ ಮೂವರು ಮಕ್ಕಳ ಆರೈಕೆ ಜೊತೆಗೆ ಜಿಲ್ಲಾಡಳಿತದ ಜವಾಬ್ದಾರಿಗೂ ಕಿಂಚಿತ್ತೂ ಧಕ್ಕೆಯಾಗಿಲ್ಲ. ಎಳೆಯ ಹಸುಳೆಗೆ ತಾಯಿಯೂ ಇವ್ರೆ, ತಂದೆಯೂ ಇವ್ರೆ..!
ಇನ್ನು ಜಿಲ್ಲೆಯಲ್ಲಿ ಉನ್ನತ ಹುದ್ದೆಯಲ್ಲಿರುವ ಕೆ.ಎ.ಎಸ್. ಅಧಿಕಾರಿ. ಕೊರೋನಾ ತಡೆಗಟ್ಟುವ ಕರ್ತವ್ಯದ ಕರೆಗೆ ಹಗಲೂ ರಾತ್ರಿ ಓಡಾಟ. ಊಟ, ನಿದ್ರೆಗಿಲ್ಲ ಹೊತ್ತು-ಗೊತ್ತು. ಅಕ್ಕರೆಯ ಅಜ್ಜ ತೀರಿಕೊಂಡಾಗ ಸ್ವಗ್ರಾಮಕ್ಕೆ ಹೋಗಿ ಮುಖ ನೋಡಲೂ ಪುರುಸೊತ್ತಿಲ್ಲ. ಮನಸ್ಸು ಮಾಡಿದರೆ ಅಧಿಕಾರದ ಪ್ರಭಾವ ಬಳಸಿ ಹೋಗಬಹುದಾಗಿತ್ತು. ಆದರೆ, ಸಾವಿರಾರು ಜೀವಗಳ ಪಡೆದ ಮಾರಕ ರೋಗ ಕೊರೋನಾ ಇಲ್ಲಿ ಕಾಲಿಡಬಾರದು, ರಜೆ ಹಾಕಿ ಹೋದರೆ ಜಿಲ್ಲಾಡಳಿತ ಕಾರ್ಯಕ್ಕೆ ತಮ್ಮಿಂದ ತೊಂದರೆಯಾಗಬಾರದೆಂಬ ಕಾರಣಕ್ಕೆ ಅಜ್ಜನ ಕೊನೆಯ ಭೇಟಿಯ ವೀಡಿಯೋವನ್ನೇ ನೋಡಿ ಕಣ್ಣೀರಾದರು..
ಯಾದಗಿರಿ ಸಹಾಯಕ ಆಯಕ್ತ ಶಂಕರಗೌಡ ಸೋಮನಾಳ್ ಅವರ ಕರ್ತವ್ಯ ನಿಷ್ಠೆ ಅವರ ಕಾರ್ಯವೈಖರಿಯನ್ನು ಸಾರಿದಂತಿದೆ. ಹಗಲೂ ರಾತ್ರಿ ಎಡೆಬಿಡದೆ ಹಳ್ಳಿ ಹಳ್ಳಿಗಳಿಗೆ ಎಡತಾಕುತ್ತಿರುವ ಸೋಮನಾಳ್, ಕೊರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಜನರ ಪಾತ್ರ, ಜಿಲ್ಲಾಡಳಿದ ಕಾರ್ಯದ ಬಗ್ಗೆ ತಿಳಿಹೇಳುತ್ತಿದ್ದಾರೆ.
ಮುದ್ದೇಬಿಹಾಳ್ ತಾಲೂಕಿನ ಜಂಬಲದಿನ್ನಿಯಲ್ಲಿ ತೀರಿಕೊಂಡ ಅಜ್ಜ ವಿರೂಪಾಕ್ಷಗೌಡರ ಅಂತ್ಯಸಂಸ್ಕಾರಕ್ಕೆ ಹೋಗಲಾಗದಿದ್ದರೂ, ಅವರನ್ನು ತಾವು ಕೊನೆಯ ಬಾರಿ ಭೇಟಿಯಾಗಿ ಬಂದ ವೀಡಿಯೋವನ್ನೇ ನೋಡಿ ನೆನೆದ ಅವರು, ಜನರ ಹಿತಕ್ಕಾಗಿ ಕೆಲವೊಮ್ಮೆ ವೈಯುಕ್ತಿಕ ತ್ಯಾಗ ಅನಿವಾರ್‍ಯ ಅಂತಾರೆ. ಕೊರೋನಾ ಸೋಂಕು ಕಿಂಚಿತ್ತೂ ಬಾರದಂತೆ ತಡೆಗಟ್ಟುವಲ್ಲಿ ಜಿಲ್ಲಾಽಕಾರಿ ಕೂರ್ಮಾರಾವ್ ಹಾಗೂ ತಂಡದ ಕಾರ್ಯ ಶ್ಲಾಘನೀಯ. ಯಾದಗಿರಿ ಜಿಲ್ಲೆಯ ಜನ ‘ಸೇಫ್’ ಆಗಿರೋದಕ್ಕೆ ಅಽಕಾರಿಗಳ ಮುಂಜಾಗ್ರತೆ, ಸಮಯಪ್ರಜ್ಞೆ ಕಾರಣವೂ ಹೌದು.