ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಮತ್ತು ಉಡುಪಿಯ ಕೊಲ್ಲೂರು ದೇವಸ್ಥಾನದ ವಿರುದ್ಧ ದೂರು
ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು
ಮಂಗಳೂರು(ಸೆ.23): ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೂ ಮುನ್ನ ಪುರುಷರು ಅಂಗಿ-ಬನಿಯನ್ ಕಳಚಿಡುವ ಸಂಪ್ರದಾಯದ ವಿರುದ್ಧ ಆಕ್ಷೇಪ ಕೇಳಿ ಬಂದಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಮತ್ತು ಉಡುಪಿಯ ಕೊಲ್ಲೂರು ದೇವಸ್ಥಾನದ ವಿರುದ್ಧ ದೂರು ಸಲ್ಲಿಕೆಯಾಗಿದೆ.
ಮಂಗಳೂರಿನ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದಿಂದ ಧಾರ್ಮಿಕ ದತ್ತಿ ಇಲಾಖೆಗೆ ಲಿಖಿತ ದೂರು ನೀಡಲಾಗಿದೆ. ಅಂಗಿ-ಬನಿಯನ್ ಕಳಚಿಟ್ಟು ದೇವರ ದರ್ಶನ ಪಡೆಯುವ ಪದ್ಧತಿ ಸರಿಯಲ್ಲ. ಸರ್ಕಾರದ ಆದೇಶ ಮತ್ತು ಹಿಂದೂ ಸಂಪ್ರದಾಯದಲ್ಲಿ ಈ ಪದ್ಧತಿ ಇಲ್ಲ. ಈ ಆಚರಣೆ ಮೂಲಕ ಭಕ್ತರಲ್ಲಿ ಗೊಂದಲ ಸೃಷ್ಟಿಸಲಾಗುತ್ತಿದೆ. ಚರ್ಮ ರೋಗವಿದ್ದವರು ಅಂಗಿ ಕಳಚಿ ಸಾಗುವುದರಿಂದ ಬೇರೆಯವರಿಗೆ ಹರಡೋ ಸಾಧ್ಯತೆ ಇದೆ. ಅಂಗವೈಕಲ್ಯ ಇದ್ದವರಿಗೆ ಬಟ್ಟೆ ಕಳಚಿ ದರ್ಶನ ಪಡೆಯುವುದು ನೋವು ತರಬಹುದು. ಇದು ಭಾರತದ ಸಾಂವಿಧಾನಿಕ ಮೂಲಭೂತ ಹಕ್ಕಿನ ಸ್ಪಷ್ಟ ಉಲ್ಲಂಘನೆ. ತಕ್ಷಣ ದೇವಸ್ಥಾನದಲ್ಲಿ ಅಳವಡಿಸಲಾದ ಬಟ್ಟೆ ಕಳಚುವ ಸೂಚನಾ ಬೋರ್ಡ್ ತೆರವಿಗೆ ಮನವಿ ಮಾಡುವ ಮೂಲಕ ಕುಕ್ಕೆ ಮತ್ತು ಕೊಲ್ಲೂರಿನ ಸಂಪ್ರದಾಯದ ವಿರುದ್ದ ಅಪಸ್ವರ ಎತ್ತಲಾಗಿದೆ. ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ಈ ನಿಯಮ ತಕ್ಷಣ ದಿಂದ ತೆಗೆದು ಹಾಕುವಂತೆ ಒತ್ತಾಯಿಸಿದ್ದು, ಧಾರ್ಮಿಕ ದತ್ತಿ ಇಲಾಖೆ ಗಮನ ಹರಿಸದೇ ಇದ್ದರೆ ಮುಂದಿನ ದಿನಗಳಲ್ಲಿ ನ್ಯಾಯಾಲಯದ ಮೂಲಕ ಕಾನೂನು ಹೋರಾಟ ನಡೆಸಲು ಚಿಂತನೆ ನಡೆಸಿದೆ.
ಕೊರಗಜ್ಜನಿಗೆ ಪ್ರಾರ್ಥಿಸಿ ಇರಿಸಿದ್ದ ವೀಳ್ಯದೆಲೆಯಲ್ಲಿ ಬೇರು!
ದೂರು ಗಮನಕ್ಕೆ ಬಂದಿದೆ, ಚರ್ಚೆ ಆಗಿಲ್ಲ: ಧಾರ್ಮಿಕ ಪರಿಷತ್
ಇನ್ನು ಈ ದೂರಿನ ಬಗ್ಗೆ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಶೇಕೋಡಿ ಸೂರ್ಯನಾರಾಯಣ ಭಟ್ ಪ್ರತಿಕ್ರಿಯೆ ನೀಡಿದ್ದು, ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ನೀಡಿರುವ ದೂರಿನ ಬಗ್ಗೆ ಗಮನಕ್ಕೆ ಬಂದಿದೆ. ಮುಂದಿನ ರಾಜ್ಯ ಧಾರ್ಮಿಕ ಪರಿಷತ್ ಸಭೆಯಲ್ಲಿ ಚರ್ಚೆಗೆ ಬರಬಹುದು. ಇದೆಲ್ಲಾ ಹಲವು ವರ್ಷಗಳ ಸಂಪ್ರದಾಯ. ಎಲ್ಲವನ್ನೂ ಬೇರೆ ಬೇರೆ ಕಾರಣ ನೀಡಿ ಸ್ಥಗಿತಗೊಳಿಸುತ್ತ ಬಂದರೆ ಮುಂದೆ ಧಾರ್ಮಿಕ ಆಚರಣೆಗಳೆಲ್ಲವೂ ನಿಂತು ಹೋಗಬಹುದು. ಕೆಲವು ಸಂಪ್ರದಾಯಗಳ ಬಗ್ಗೆ ಶಾಸ್ತ್ರಗಳಲ್ಲೇ ಉಲ್ಲೇಖವಿದೆ. ತುಂಡು ಬಟ್ಟೆ ತೊಡದಂತೆ ಸಂಪ್ರದಾಯ ಇದೆ. ಹೀಗಾಗಿ ಈ ಪದ್ದತಿ ಜಾರಿಯಲ್ಲಿದೆ. ದೂರಿನ ಬಗ್ಗೆ ಚರ್ಚಿಸಲಾಗುವುದು ಎಂದಿದ್ದಾರೆ.