'ವಾಯುವ್ಯ ಸಾರಿಗೆ' ಇನ್ಮುಂದೆ 'ರಾಣಿ ಚನ್ನಮ್ಮ ಸಾರಿಗೆ ಸಂಸ್ಥೆ' ಎಂದು ಮರುನಾಮಕರಣ; ಡಿ.ಕೆ. ಶಿವಕುಮಾರ್ ಘೋಷಣೆ

Published : Oct 25, 2026, 10:43 PM IST
DK Shivakumar Kitturu Rani Chennamma

ಸಾರಾಂಶ

ಕಿತ್ತೂರು ಉತ್ಸವದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಅವರು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯನ್ನು 'ರಾಣಿ ಚನ್ನಮ್ಮ ಸಾರಿಗೆ ಸಂಸ್ಥೆ' ಎಂದು ಮರುನಾಮಕರಣ ಮಾಡುವುದಾಗಿ ಘೋಷಿಸಿದ್ದಾರೆ. ಇದರ ಜೊತೆಗೆ ಕಿತ್ತೂರು ಕೋಟೆ ಮರುಸೃಷ್ಟಿಗೆ ₹40 ಕೋಟಿ ಹಾಗೂ ಏತ ನೀರಾವರಿ ಯೋಜನೆಗೆ ₹500 ಕೋಟಿ ಅನುದಾನ ಕೊಡುವ ಭರವಸೆ ನೀಡಿದ್ದಾರೆ.

ಬೆಳಗಾವಿ (ಅ.25): ಉತ್ತರ ಕರ್ನಾಟಕದ ಜೀವನಾಡಿಯಾಗಿರುವ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯನ್ನು (NWKRTC) ಇನ್ಮುಂದೆ ‘ರಾಣಿ ಚನ್ನಮ್ಮ ಸಾರಿಗೆ ಸಂಸ್ಥೆ’ ಎಂದು ಮರುನಾಮಕರಣ ಮಾಡಲಾಗುವುದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಣೆ ಮಾಡಿದ್ದಾರೆ.

ಐತಿಹಾಸಿಕ ವೀರಭೂಮಿ ಕಿತ್ತೂರಿನಲ್ಲಿ ನಡೆಯುತ್ತಿದ್ದ ಕಿತ್ತೂರು ಉತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಉತ್ತರ ಕರ್ನಾಟಕ ಭಾಗದ ಜನತೆಗೆ ಮಹತ್ವದ ಕೊಡುಗೆಗಳನ್ನು ಘೋಷಿಸಿದ್ದಾರೆ. ಚಾಮರಾಜನಗರ ಪ್ರವಾಸ ಮುಗಿಸಿ ನೇರವಾಗಿ ಕಿತ್ತೂರಿಗೆ ಆಗಮಿಸಿದ ಸಿಎಂ ಡಿ.ಕೆ. ಶಿವಕುಮಾರ್, ಕಿತ್ತೂರು ನಾಡಿನ ಸಮಗ್ರ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿ ಅನುದಾನದ ಮಹಾಪೂರವನ್ನೇ ಹರಿಸಿದ್ದಾರೆ.

ವಾಯುವ್ಯ ಸಾರಿಗೆ ಹೆಸರು ಬದಲಾವಣೆ:

ಬ್ರಿಟಿಷರ ವಿರುದ್ಧ ರಣಕಹಳೆ ಊದಿದ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮನ ಶೌರ್ಯವನ್ನು ಸದಾ ಜೀವಂತವಾಗಿರಿಸಲು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯನ್ನು ‘ರಾಣಿ ಚನ್ನಮ್ಮ ಸಾರಿಗೆ ಸಂಸ್ಥೆ’ ಎಂದು ಮರುನಾಮಕರಣ ಮಾಡಲು ಸರ್ಕಾರ ತೀರ್ಮಾನಿಸಿದೆ.

ಕಿತ್ತೂರು ಕೋಟೆ ಮರುಸೃಷ್ಟಿಗೆ ₹40 ಕೋಟಿ:

ಕಿತ್ತೂರು ಸಂಸ್ಥಾನವನ್ನು ಅಂತಾರಾಷ್ಟ್ರೀಯ ಪ್ರವಾಸಿ ತಾಣವನ್ನಾಗಿ ರೂಪಿಸಬೇಕು ಹಾಗೂ ಐತಿಹಾಸಿಕ ಕೋಟೆಯನ್ನು ಮರುಸೃಷ್ಟಿ ಮಾಡಬೇಕು ಎಂಬ ಶಾಸಕರ ಬೇಡಿಕೆಗೆ ತಕ್ಷಣವೇ ಸ್ಪಂದಿಸಿದ ಡಿಸಿಎಂ, ಮುಂದಿನ ಬಜೆಟ್‌ನಲ್ಲಿ ₹40 ಕೋಟಿ ಮೀಸಲಿಡುವುದಾಗಿ ಮತ್ತು ಇದಕ್ಕೆ ಸಂಬಂಧಿಸಿದಂತೆ ಇಂದೇ ಅಧಿಕೃತ ಆದೇಶ ಹೊರಡಿಸುವುದಾಗಿ ಭರವಸೆ ನೀಡಿದರು.

ಏತ ನೀರಾವರಿಗೆ ₹500 ಕೋಟಿ ಅನುದಾನ:

ಈ ಭಾಗದ ರೈತರ ಬಹುದಿನಗಳ ಬೇಡಿಕೆಯಾದ ‘ವೃಷಭೇಂದ್ರ ಏತ ನೀರಾವರಿ ಯೋಜನೆ’ಗೆ ಸರ್ಕಾರದಿಂದ ಬರೋಬ್ಬರಿ ₹500 ಕೋಟಿ ರೂಪಾಯಿ ಮೀಸಲಿಡಲಾಗುವುದು ಎಂದು ಘೋಷಿಸಿದರು.

ರಾಮನ ಪಾತ್ರಕ್ಕಿಂತ ಸೀತೆಯ ತ್ಯಾಗ ದೊಡ್ಡದು: ವೇದಿಕೆಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮನ ಶೌರ್ಯವನ್ನು ಗುಣಗಾನ ಮಾಡಿದ ಡಿ.ಕೆ. ಶಿವಕುಮಾರ್, 'ನಾನು ಮೊದಲ ಬಾರಿಗೆ ಕಿತ್ತೂರಿನ ಈ ಸ್ವಾಭಿಮಾನದ ಪವಿತ್ರ ನೆಲಕ್ಕೆ ಬಂದಿದ್ದೇನೆ. ಕಿತ್ತೂರಿನ ಕಥೆ ಕೇವಲ ಇತಿಹಾಸವಲ್ಲ, ಅದು ಪ್ರತಿಯೊಂದು ಪೀಳಿಗೆಗೂ ಸ್ವಾಭಿಮಾನ ಕಲಿಸುವ ಪಾಠ. ರಾಮಾಯಣದಲ್ಲಿ ಶ್ರೀರಾಮನ ಪಾತ್ರಕ್ಕಿಂತ ಸೀತೆಯ ತ್ಯಾಗ ದೊಡ್ಡದು ಎಂದು ನನಗೆ ಅನ್ನಿಸುತ್ತದೆ. ಅದೇ ರೀತಿ ನಾಡಿನ ಹೆಣ್ಣುಮಗಳು ಚೆನ್ನಮ್ಮಳ ಸಾಹಸ ಮತ್ತು ತ್ಯಾಗ ಅಜರಾಮರ. ಆಕೆಯ ಶೌರ್ಯ ನಮಗೆಲ್ಲರಿಗೂ ದಾರಿದೀಪ' ಎಂದರು.

ಅಧಿಕಾರ ಸಿಕ್ಕಿದ್ದು ಆಳಲು ಅಲ್ಲ, ಸೇವೆ ಮಾಡಲು:

ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದ ಅವರು, 'ಅಧಿಕಾರ ಸಿಕ್ಕಿರುವುದು ಜನರನ್ನು ಆಳಲು ಅಲ್ಲ, ಸೇವೆ ಮಾಡಲು. ದೇವಸ್ಥಾನಗಳಲ್ಲಿ ದೇವರು ವರನೂ ಕೊಡಲ್ಲ, ಶಾಪನೂ ಕೊಡಲ್ಲ. ಕೇವಲ ಅವಕಾಶಗಳನ್ನು ಮಾತ್ರ ಕೊಡುತ್ತಾನೆ. ನಮಗೆ ಸಿಕ್ಕ ಅವಕಾಶವನ್ನು ಜನಸೇವೆಗೆ ಬಳಸುತ್ತಿದ್ದೇವೆ. ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಾದ ಶಕ್ತಿ, ಗೃಹಲಕ್ಷ್ಮಿ, ಅನ್ನಭಾಗ್ಯ ಮತ್ತು ಗೃಹಜ್ಯೋತಿ ಮೂಲಕ ಜನರ ಬದುಕನ್ನು ಬದಲಾಯಿಸುವ ಕೆಲಸ ಮಾಡುತ್ತಿದ್ದೇವೆ. ದ್ವೇಷದ ರಾಜಕಾರಣದಿಂದ ಉತ್ತರ ಸಿಗುವುದಿಲ್ಲ, ಜನರ ಪ್ರೀತಿಯಿಂದ ಮಾತ್ರ ಅಭಿವೃದ್ಧಿ ಸಾಧ್ಯ' ಎಂದು ತಿಳಿಸಿದರು.

PREV
Read more Articles on
click me!

Recommended Stories

'ಅಧಿಕಾರ ಯಾವತ್ತೂ ಶಾಶ್ವತವಲ್ಲ' ಚಾಮರಾಜನಗರದಲ್ಲಿ ಸಿಎಂ ಡಿಕೆ ಶಿವಕುಮಾರ್ ಮಾರ್ಮಿಕವಾಗಿ ಮಾತು
ರಾಜಕೀಯ ನಾಯಕರ ನೆಚ್ಚಿನ ಶಕ್ತಿ ಕೇಂದ್ರ ಕೋಲಾರದ ಕುರುಡುಮಲೆಗೆ ಆಂಧ್ರ ಭಕ್ತರ ಲಗ್ಗೆ: ಜ್ಯೋತಿಷಿಯ ಆ ಮಾತಿಗೆ ಹರಿದುಬಂತು ಭಕ್ತಸಾಗರ