NWKRTC ಇನ್ಮುಂದೆ ಕಿತ್ತೂರು ರಾಣಿ ಚೆನ್ನಮ್ಮ ರಸ್ತೆ ಸಾರಿಗೆ ಸಂಸ್ಥೆ, ಅಧಿಕೃತ ಆದೇಶ ಪ್ರಕಟಿಸಿದ ರಾಜ್ಯ ಸರ್ಕಾರ

Published : Nov 06, 2026, 12:03 PM IST
kittur rani chennamma road transport corporation

ಸಾರಾಂಶ

ರಾಜ್ಯ ಸರ್ಕಾರವು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯನ್ನು 'ಕಿತ್ತೂರು ರಾಣಿ ಚೆನ್ನಮ್ಮ ರಸ್ತೆ ಸಾರಿಗೆ ಸಂಸ್ಥೆ' ಎಂದು ಮರುನಾಮಕರಣ ಮಾಡಿ ಅಧಿಕೃತ ಆದೇಶ ಹೊರಡಿಸಿದೆ. ಸಾರ್ವಜನಿಕರ ಮತ್ತು ಜನಪ್ರತಿನಿಧಿಗಳ ಬಹುಕಾಲದ ಬೇಡಿಕೆಯಂತೆ ಈ ಐತಿಹಾಸಿಕ ನಿರ್ಣಯ ಕೈಗೊಳ್ಳಲಾಗಿದೆ.

ಬೆಂಗಳೂರು (ನ.6): ರಾಜ್ಯ ಸರ್ಕಾರವು ಉತ್ತರ ಕರ್ನಾಟಕದ ಪ್ರಮುಖ ರಸ್ತೆ ಸಾರಿಗೆ ಸಂಸ್ಥೆಯಾದ 'ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ'ಯ (NWKRTC) ಹೆಸರನ್ನು 'ಕಿತ್ತೂರು ರಾಣಿ ಚೆನ್ನಮ್ಮ ರಸ್ತೆ ಸಾರಿಗೆ ಸಂಸ್ಥೆ' ಎಂದು ಮರುನಾಮಕರಣ ಮಾಡಿ ಅಧಿಕೃತ ಆದೇಶ ಹೊರಡಿಸಿದೆ. ರಾಜ್ಯ ಸಚಿವ ಸಂಪುಟದ (Cabinet) ಅನುಮೋದನೆಯಂತೆ, ಸಾರಿಗೆ ಇಲಾಖೆಯ ಅಧೀನ ಕಾರ್ಯದರ್ಶಿ ಪುಷ್ಪ ವಿ.ಎಸ್. ಅವರು ನ.5 ರಂದು ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದಾರೆ. ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಸುದೀರ್ಘ ಕಾಲದ ಕೋರಿಕೆಯನ್ನು ಪರಿಶೀಲಿಸಿ ಸರ್ಕಾರ ಈ ಐತಿಹಾಸಿಕ ನಿರ್ಣಯ ಕೈಗೊಂಡಿದೆ.

ಬೆಳಗಾವಿ, ಧಾರವಾಡ, ಉತ್ತರ ಕನ್ನಡ, ಬಾಗಲಕೋಟೆ, ಗದಗ ಹಾಗೂ ಹಾವೇರಿ ಸೇರಿದಂತೆ ಪ್ರಮುಖ ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಈ ಸಾರಿಗೆ ಸಂಸ್ಥೆಗೆ ಕಿತ್ತೂರಿನ ವೀರವನಿತೆ ರಾಣಿ ಚೆನ್ನಮ್ಮನ ಹೆಸರು ಇಟ್ಟಿರುವುದು ಸಾರ್ವಜನಿಕರ ಹರ್ಷಕ್ಕೆ ಕಾರಣವಾಗಿದೆ. 2019 ರ ಸೆಪ್ಟೆಂಬರ್ 17 ರಂದು ಹೈದರಾಬಾದ್ ಕರ್ನಾಟಕವನ್ನು 'ಕಲ್ಯಾಣ ಕರ್ನಾಟಕ' ಎಂದು ಮರುನಾಮಕರಣ ಮಾಡಿ, ಅಲ್ಲಿನ ಸಾರಿಗೆ ಸಂಸ್ಥೆಗೂ ಕಲ್ಯಾಣ ಕರ್ನಾಟಕ ಎಂದು ಹೆಸರಿಡಲಾಗಿತ್ತು. ಇದೇ ಮಾದರಿಯಲ್ಲಿ 'ಮುಂಬೈ ಕರ್ನಾಟಕ'ವನ್ನು 'ಕಿತ್ತೂರು ಕರ್ನಾಟಕ' ಎಂದು ಮರುನಾಮಕರಣ ಮಾಡಬೇಕೆಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯು 2021 ರ ಆಗಸ್ಟ್ 8 ರಂದು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿತ್ತು.

ತದನಂತರ 2021 ರ ಅಕ್ಟೋಬರ್ 23 ರಂದು ನಡೆದ ಕಿತ್ತೂರು ವಿಜಯೋತ್ಸವ ಕಾರ್ಯಕ್ರಮದಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಂಬೈ ಕರ್ನಾಟಕಕ್ಕೆ 'ಕಿತ್ತೂರು ಕರ್ನಾಟಕ' ಎಂದು ಮರುನಾಮಕರಣ ಮಾಡುವುದಾಗಿ ಘೋಷಿಸಿ, ಸಂಪುಟದಲ್ಲೂ ಅನುಮೋದನೆ ಪಡೆದಿದ್ದರು. ಆದರೆ ವಾಯುವ್ಯ ಸಾರಿಗೆ ಸಂಸ್ಥೆಯ ಹೆಸರು ಮಾತ್ರ ಬದಲಾಗದೆ ಉಳಿದುಕೊಂಡಿತ್ತು.

ನಾಯಕರ ಯತ್ನ ಹಾಗೂ ಬೋರ್ಡ್ ನಿರ್ಣಯ

2024 ರ ಆರಂಭದಲ್ಲಿ ಕಾಗವಾಡ ಶಾಸಕ ರಾಜು ಕಾಗೆ ಅವರು ಸಂಸ್ಥೆಯ ಅಧ್ಯಕ್ಷರಾದಾಗ ಕ್ರಿಯಾ ಸಮಿತಿಯು ಅವರಿಗೆ ಮನವಿ ಸಲ್ಲಿಸಿತ್ತು. ಬಳಿಕ 2024 ರ ಫೆಬ್ರವರಿಯಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಸಂಸ್ಥೆಯ ಆಡಳಿತ ಮಂಡಳಿ ಸಭೆಯಲ್ಲಿ 'ಕಿತ್ತೂರು ರಾಣಿ ಚೆನ್ನಮ್ಮ ಸಾರಿಗೆ ಸಂಸ್ಥೆ' ಎಂದು ಹೆಸರಿಡಲು ನಿರ್ಧರಿಸಿ ಸರ್ಕಾರಕ್ಕೆ ಅಧಿಕೃತ ಪ್ರಸ್ತಾವನೆ ಸಲ್ಲಿಸಲಾಯಿತು. ನಂತರ ಸಂಸ್ಥೆಯ ಉಪಾಧ್ಯಕ್ಷರಾಗಿ ಸುನಿಲ್ ಹನುಮನ್ನವರ ಅಧಿಕಾರ ವಹಿಸಿಕೊಂಡ ಬಳಿಕವೂ ಮರುನಾಮಕರಣದ ಪ್ರಯತ್ನ ತೀವ್ರಗೊಂಡಿತು. ಸುನಿಲ್ ಹನುಮನ್ನವರ ಹಾಗೂ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಅವರು ಮುಖ್ಯಮಂತ್ರಿಗಳ ಮೇಲೆ ತೀವ್ರ ಒತ್ತಡ ತಂದು ಈ ಬೇಡಿಕೆಗೆ ಮರುಜೀವ ನೀಡಿದರು. ಇದರ ಫಲವಾಗಿ ಇತ್ತೀಚೆಗೆ ನಡೆದ ಅಕ್ಟೋಬರ್ 23 ರ ಕಿತ್ತೂರು ಉತ್ಸವದಲ್ಲಿ ಮುಖ್ಯಮಂತ್ರಿಯವರು ಈ ನಿರ್ಧಾರವನ್ನು ಪ್ರಕಟಿಸಿದ್ದರು.

₹10 ಕೋಟಿಗೂ ಅಧಿಕ ವೆಚ್ಚ ಹಾಗೂ ಬೆಳಗಾವಿಯಲ್ಲಿ ಸಮಾರಂಭ

ಸಂಸ್ಥೆಯ ವ್ಯಾಪ್ತಿಗೆ ಬರುವ ಏಳು ಜಿಲ್ಲೆಗಳ ಸುಮಾರು 5,500 ಬಸ್‌ಗಳು, ಬಸ್ ನಿಲ್ದಾಣಗಳು ಹಾಗೂ ಅಧಿಕೃತ ದಾಖಲೆಗಳು, ಲಾಂಛನಗಳಲ್ಲಿ ಹೆಸರು ಬದಲಾಯಿಸಲು ಬರೋಬ್ಬರಿ ₹10 ಕೋಟಿಗೂ ಅಧಿಕ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಆದೇಶ ಜಾರಿಯಾಗಿರುವ ಹಿನ್ನೆಲೆಯಲ್ಲಿ ನವೆಂಬರ್ ಅಂತ್ಯದೊಳಗೆ ಬೆಳಗಾವಿಯಲ್ಲಿಯೇ ವೈಭವದ ಮರುನಾಮಕರಣ ಸಮಾರಂಭವನ್ನು ಆಯೋಜಿಸುವಂತೆ ಸುನಿಲ್ ಹನುಮನ್ನವರ ಅವರಿಗೆ ಕನ್ನಡ ಹೋರಾಟಗಾರರು ಮನವಿ ಮಾಡಿದ್ದಾರೆ. ಕನ್ನಡ ಸಂಘಟನೆಗಳ ನಿರಂತರ ಶ್ರಮಕ್ಕೆ ಇದೀಗ ಸಂಪೂರ್ಣ ಯಶಸ್ಸು ಸಿಕ್ಕಂತಾಗಿದೆ.

PREV
Read more Articles on
click me!

Recommended Stories

ರಾಜಧಾನಿಯಲ್ಲಿ ಎದೆನಡೆಗಿಸುವ ಕೃತ್ಯ; 7 ಜನರನ್ನು ಮುಗಿಸಿ, ಕಸದಂತೆ ಪುಣ್ಯಕ್ಷೇತ್ರದಲ್ಲಿ ಎಸೆದ ಪಾಪಿ ಇಂದುಶೇಖರ!
ಶಿವಮೊಗ್ಗಕ್ಕೆ ವಿಮಾನ ಸಂಪರ್ಕವೇ ಕಟ್: ನ.21 ರಿಂದ ಸಂಪೂರ್ಣ ಕಾರ್ಯಾಚರಣೆ ಸ್ಥಗಿತಗೊಳಿಸಲಿದೆ ಸ್ಟಾರ್ ಏರ್!