
ಬೈಲಹೊಂಗಲ(ನ.07): ತಾಲೂಕಿನ ದೊಡವಾಡ ಗ್ರಾಮದ ಬಸ್ ಚಾಲಕ ಸವದತ್ತಿಯಿಂದ ಪುಣೆಗೆ ತೆರಳುತ್ತಿದ್ದ ಸಮಯದಲ್ಲಿ ಕರ್ತವ್ಯದಲ್ಲಿದ್ದಾಗ ತೀವ್ರ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.
ದೊಡವಾಡ ಗ್ರಾಮದ ಮೂಗಪ್ಪ ಶಿವಪುತ್ರಪ್ಪ ಸಂಗೊಳ್ಳಿ (41) ಮೃತ ಚಾಲಕ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸವದತ್ತಿ ಘಟಕಕ್ಕೆ ಸೇರಿದ ಬಸ್ ಪುಣೆಯಿಂದ ಸವದತ್ತಿಗೆ ಬರುವ ವೇಳೆ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದ ಮಹಾರಾಷ್ಟ್ರದ ಖೇಡಶಿವಾಪುರ ಗ್ರಾಮದ ಬಳಿ ಶನಿವಾರ ರಾತ್ರಿ ತೀವ್ರ ಹೃದಯಾಘಾತವಾಗಿದ್ದು, ತೀವ್ರ ಎದೆ ನೋವು ಕಾಣಿಸಿಕೊಳ್ಳುತ್ತಿದ್ದಂತೆ ರಸ್ತೆ ಬದಿ ಬಸ್ ನಿಲ್ಲಿಸಿ ಪ್ರಯಾಣಿಕರ ಪ್ರಾಣ ಉಳಿಸಿದ್ದಾನೆ. ಎದೆ ನೋವಿನಿಂದ ನರಳುತ್ತಿದ್ದ ಮೂಗಪ್ಪರನ್ನು ಬಸ್‌ನಲ್ಲಿದ್ದ ಪ್ರಯಾಣಿಕರು ರಸ್ತೆ ಪಕ್ಕದ ಹೊಟೇಲ್ ಗೆ ಎತ್ತಿಕೊಂಡು ಹೋಗಿ ಉಪಚಾರ ಮಾಡಲು ಆರಂಭಿಸಿದ್ದು, ಸ್ಥಳಕ್ಕೆ ಬಂದ ಆಂಬುಲೆನ್ಸ್ ಮೂಲಕ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಆಸ್ಪತ್ರೆ ತಲುಪುವಷ್ಟರಲ್ಲಿ ಕೊನೆಯುಸಿರು ಎಳೆದಿದ್ದಾರೆ ಎಂದು ನಿರ್ವಾಹಕ ಎಂ.ಎಚ್.ನದಾಫ್ ತಿಳಿಸಿದ್ದಾರೆ.
ಬಿಎಂಟಿಸಿ ಚಾಲಕರ ಹೃದಯಕ್ಕೆ ಕಾದಿದೆ ಆಪತ್ತು: ಜಯದೇವ ವೈದ್ಯರ ಶಾಕಿಂಗ್ ವರದಿ ಬಯಲು
ಪುಣೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ದೊಡವಾಡ ಗ್ರಾಮಕ್ಕೆ ತಂದು ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ವೇಳೆ ಇಲಾಖೆ ಅಧಿಕಾರಿಗಳು ಸಿಬ್ಬಂದಿ ಅಂತಿಮ ನಮನ ಸಲ್ಲಿಸಿದರು. ಸಾವಿರಾರು ಜನ ಸೇರಿದ್ದರು.
40 ಪ್ರಯಾಣಿಕರ ಜೀವ ಕಾಪಾಡಿ ತಾನು ದೇವರ ಬಳಿ ತೆರಳಿದ ಮೂಗಪ್ಪನವರ ಅವರ ತ್ಯಾಗ ದೊಡ್ಡದು. ಇಲಾಖೆಯಿಂದ ಅವರಿಗೆ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ಸವದತ್ತಿ ಸಾರಿಗೆ ಘಟಕ ವ್ಯವಸ್ಥಾಪಕ ಕಿರಣ್ ಮಧಿ ತಿಳಿಸಿದ್ದಾರೆ.