ಕೊರೋನಾ ಭೀತಿ: ಪ್ರವಾಸಿಗರ ಸಂಖ್ಯೆಯಲ್ಲೂ ಇಳಿಮುಖ!

By Kannadaprabha NewsFirst Published Mar 5, 2020, 7:34 AM IST
Highlights

ಕೊರೋನಾ ಎಫೆಕ್ಟ್: ಪ್ರವಾಸಿಗರ ಸಂಖ್ಯೆ ಇಳಿಮುಖ|ಹಂಪಿ, ಬಾದಾಮಿ, ಪಟ್ಟದಕಲ್ಲುಗಳಲ್ಲಿ ವಿದೇಶಿಗರ ಪ್ರಮಾಣ ಇಳಿಕೆ| ಉತ್ತರ ಕನ್ನಡ ಜಿಲ್ಲೆಯ ಮುರ್ಡೇಶ್ವರದಲ್ಲಿ ಕೊಂಚ ಮಟ್ಟಿಗೆ ಪ್ರವಾಸಿಗರ ಸಂಖ್ಯೆ ಇಳಿಮುಖ| ಗೋಕರ್ಣದಲ್ಲಿ ಪ್ರವಾಸಿಗರ ಸಂಖ್ಯೆ ಯಥಾಸ್ಥಿತಿ| 

ಹುಬ್ಬಳ್ಳಿ/ಬೆಳಗಾವಿ(ಮಾ.05): ಕೊರೋನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಹಂಪಿ, ಬಾದಾಮಿ, ಪಟ್ಟದಕಲ್ಲು ಸೇರಿದಂತೆ ರಾಜ್ಯದ ವಿವಿಧ ಪ್ರವಾಸಿ ತಾಣಗಳಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಅದರಲ್ಲೂ ವಿದೇಶಿ ಪ್ರವಾಸಿಗರು ಕಡಿಮೆಯಾಗಿದ್ದಾರೆ.

ವಿಶ್ವವಿಖ್ಯಾತ ತಾಣ ಹಂಪಿಗೆ ಪ್ರತಿವರ್ಷ ಮಾರ್ಚ್‌ ತಿಂಗಳಲ್ಲಿ ದೇಶ-ವಿದೇಶಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದರು. ವೈರಸ್‌ ಭೀತಿಯಿಂದ ಪ್ರವಾಸಿಗರು ಕಡಿಮೆ ಆಗಮಿಸುತ್ತಿದ್ದಾರೆ. ದೇಶದ ಹೊರ ರಾಜ್ಯಗಳಿಂದ ಬರುವ ಪ್ರವಾಸಿಗರು ಸಹ ಕಡಿಮೆಯಾಗಿದ್ದಾರೆ. ವಿದೇಶದಿಂದ ಬಂದಿರುವ ಪ್ರವಾಸಿಗರು ವಾಪಾಸ್‌ ಹೋಗುತ್ತಿದ್ದಾರೆ ಎಂದು ಕೇಂದ್ರ ಪುರಾತತ್ವ ಇಲಾಖೆಯ ಅಧೀಕ್ಷಕ ಕಾಳಿಮುತ್ತು ತಿಳಿಸಿದ್ದಾರೆ.
ಇದೇ ವೇಳೆ ಬಾದಾಮಿಗೆ 2019ರ ಜನವರಿಯಲ್ಲಿ 1406, ಫೆಬ್ರವರಿ ತಿಂಗಳಲ್ಲಿ 1502 ವಿದೇಶಿಗರು ಭೇಟಿ ನೀಡಿದ್ದರು. ಆದರೆ ಈ ಬಾರಿ ಜನವರಿಯಲ್ಲಿ 857, ಫೆಬ್ರವರಿಯಲ್ಲಿ 966 ವಿದೇಶಿ ಪ್ರವಾಸಿಗರ ಭೇಟಿ ನೀಡಿದ್ದಾರೆ. ಪಟ್ಟದಕಲ್ಲಿಗೆ 2019ರ ಜನವರಿಯಲ್ಲಿ 951, ಫೆಬ್ರವರಿ ತಿಂಗಳಲ್ಲಿ 994 ವಿದೇಶಿಗರು ಭೇಟಿ ನೀಡಿದ್ದರು. ಈ ಬಾರಿ ಜನವರಿಯಲ್ಲಿ ಪಟ್ಟದಕಲ್ಲು ಗೆ 467, ಫೆಬ್ರವರಿಯಲ್ಲಿ 543 ವಿದೇಶಿಗರು ಭೇಟಿ ನೀಡಿದ್ದಾರೆ.

ಆದರೆ ಐಹೊಳೆಗೆ ಭೇಟಿ ನೀಡುತ್ತಿರುವ ಪ್ರವಾಸಿಗರಲ್ಲಿ ಹೆಚ್ಚಿನ ಇಳಿಕೆ ಕಂಡುಬಂದಿಲ್ಲ. ಇಲ್ಲಿಗೆ 2019ರಲ್ಲಿ 876, ಫೆಬ್ರವರಿಯಲ್ಲಿ 937 ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ರೆ, 2020ರ ಜನವರಿಯಲ್ಲಿ 852, ಫೆಬ್ರವರಿಯಲ್ಲಿ 923 ಪ್ರವಾಸಿಗರು ಭೇಟಿ ನೀಡಿದ್ದಾರೆ.

ಕೊಪ್ಪಳ ಜಿಲ್ಲೆಯ ಸುಪ್ರಸಿದ್ಧ ಅಂಜನಾದ್ರಿ ಬೆಟ್ಟಕ್ಕೆ ಬರುವ ಭಕ್ತರ ಸಂಖ್ಯೆಯಲ್ಲೂ ಶೇ.70ರಷ್ಟುಕುಸಿದಿದೆ. ವಿಶೇಷ ಸಂದರ್ಭಗಳಲ್ಲಿ 7-8 ಸಾವಿರ ಭಕ್ತರು ಆಗಮಿಸುತ್ತಿದ್ದ ಅಂಜನಾದ್ರಿ ಬೆಟ್ಟಕ್ಕೆ ಇತ್ತೀಚೆಗೆ ನಿತ್ಯವೂ 2-3 ಸಾವಿರ ಭಕ್ತರು ಆಗಮಿಸುತ್ತಿದ್ದರು. ಆದರೆ ಕಳೆದೆರಡು ದಿನಗಳಿಂದ 500ರ ಗಡಿ ದಾಟುತ್ತಿಲ್ಲ.

ಉತ್ತರ ಕನ್ನಡ ಜಿಲ್ಲೆಯ ಮುರ್ಡೇಶ್ವರದಲ್ಲಿ ಕೊಂಚ ಮಟ್ಟಿಗೆ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ. ಆದರೆ ಗೋಕರ್ಣದಲ್ಲಿ ಪ್ರವಾಸಿಗರ ಸಂಖ್ಯೆ ಯಥಾಸ್ಥಿತಿಯಲ್ಲೇ ಇದೆ.
 

click me!