'ಸ್ವಾಮೀಜಿಗಳು ಕಾವಿ ತೊಟ್ಟು ಮಠದಲ್ಲಿರಬೇಕು. ಇಲ್ಲವೇ ರಾಜಕೀಯಕ್ಕೆ ಬರಬೇಕು'

By Kannadaprabha NewsFirst Published Mar 4, 2020, 3:34 PM IST
Highlights

ರಾಜ್ಯದಲ್ಲಿ ಏನೆಲ್ಲ ರಾಜಕೀಯ ಬೆಳವಣಿಗೆ ಯಾಗಿ ಯಡಿಯೂರಪ್ಪ ನೇತೃತ್ವದ ಜನಪರ ಸರ್ಕಾರ ಬಂದಿದೆ ಎಂಬುದು ಎಲ್ಲರಿಗೂ ಗೊತ್ತಿದೆ| ಹರಿಹರದಲ್ಲಿ ಪಂಚಮಸಾಲಿ ಪೀಠದ ಗುರುಗಳು ಅಂದು ಬ್ಲಾಕ್ ಮೇಲ್ ಮಾತನಾಡಿ ಸುದ್ದಿಯಾ ಗಿದ್ದರು, ಇದೀಗ ಸಾರಂಗಧರ ಶ್ರೀ ಆಗಿದ್ದಾರೆ| 

ಕಲಬುರಗಿ(ಮಾ.04): ಕಲಬುರಗಿ ಸುಲಫಲ ಮಠ, ಶ್ರೀಶೈಲದ ಸಾರಂಗ ಮಠದ ಗುರುಗಳಾದ ಸಾರಂಗಧರ ದೇಶಿ ಕೇಂದ್ರ ಶ್ರೀಗಳು ಈಚೆಗೆ ಶಾಸಕ ದತ್ತಾತ್ರೇಯ ಪಾಟೀಲ್‌ಗೆ ಮಂತ್ರಿಗಿರಿ ನೀಡಬೇಕು ಎಂದು ಆಗ್ರಹಿಸುವ ಭರದಲ್ಲಿ 10 ಶಾಸಕರ ರಾಜೀನಾಮೆ ಕೊಡಿಸುವ ತಾಕತ್ತು ತಮ್ಮಲ್ಲಿದೆ ಎಂದು ನೀಡಿರುವ ರಾಜಕೀಯ ಹಿನ್ನೆಲೆ ಹೇಳಿಕೆಗೆ ಬಿಜೆಪಿ ಮುಖಂಡ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

ಮಠದ ಸ್ವಾಮಿಗಳಾದವರು ರಾಜಕೀಯವಾಗಿ ಹೀಗೆ ಹೇಳಿಕೆ ನೀಡುವುದು ಸರಿಯಲ್ಲ. ಇದು ಬ್ಲಾಕ್ ಮೇಲ್ ತಂತ್ರಗಾರಿಕೆ ಹೇಳಿಕೆಯಾಗುತ್ತದೆ. ಕಾವಿ ತೊಟ್ಟು ಮಠದಲ್ಲಿ ಕೂಡಬೇಕು. ಇಲ್ಲವೇ ನಮ್ಮಂತೆ ರಾಜಕೀಯಕ್ಕೆ ಬರಲಿ ಎಂದು ಗುತ್ತೇದಾರ್ ಬಹಿರಂಗವಾಗಿ ಸಾರಂಗಧರ ಶಿವಾಚಾರ್ಯರಿಗೆ ಸವಾಲು ಹಾಕಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮಾಲೀಕಯ್ಯ ಗುತ್ತೇದಾರ್ ಒಂದು ವೇಳೆ ಸಾರಂಗಧರ ಸ್ವಾಮೀಜಿ ಹತ್ತಲ್ಲ, ಒಬ್ಬ ಶಾಸಕನ ರಾಜೀನಾಮೆ ಕೊಡಿಸುವಲ್ಲಿಯೂ ಯಶ ಕಂಡಲ್ಲಿ ತಾವೇ ರಾಜಕೀಯದಿಂದ ನಿವೃತ್ತಿ ಹೊಂದುವುದಾಗಿಯೂ ಮಾಲೀಕಯ್ಯ ಘೋಷಣೆ ಮಾಡಿದ್ದಾರೆ. ರಾಜ್ಯದಲ್ಲಿ ಏನೆಲ್ಲ ರಾಜಕೀಯ ಬೆಳವಣಿಗೆಯಾಗಿ ಯಡಿಯೂರಪ್ಪ ನೇತೃತ್ವದ ಜನಪರ ಸರ್ಕಾರ ಬಂದಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಹರಿಹರದಲ್ಲಿ ಪಂಚಮಸಾಲಿ ಪೀಠದ ಗುರುಗಳು ಅಂದು ಬ್ಲಾಕ್ ಮೇಲ್ ಮಾತನಾಡಿ ಸುದ್ದಿಯಾದರು. ಇದೀಗ ಆ ಸರದಿಯಲ್ಲಿ ಕಲಬುರಗಿ ಸಾರಂಗಧರ ಸ್ವಾಮೀಜಿ ಸೇರಿದ್ದಾರೆ. 

ಸ್ವಾಮೀಜಿಗಳಿಗೆ ರಾಜಕೀಯದ ಬ್ಲಾಕ್ ಮೇಲ್ ಹೇಳಿಕೆಗಳು ಶೋಭೆ ತರೋದಿಲ್ಲ ಎಂದರು. ಯಾರೊ ಒಬ್ಬ ರಾಜಕಾರಣಿ ಪರ ನಿಂತು ಹೀಗೆ ಹೇಳಿಕೆ ನೀಡುವುದು ಸ್ವಾಮೀಜಿಗಳಿಗೆ ಶೋಭೆ ತೋರದಿಲ್ಲ ಎಂಬುದು ಅವರು ಮೊದಲು ಅರಿಯಬೇಕು. ಸಚಿವ ಸ್ಥಾನ ಕೊಡದಿದ್ರೆ ಸರ್ಕಾರ ಬೀಳಿಸುವ ಅರ್ಥದಲ್ಲೇ ಹೇಳಿಕೆ ನೀಡದ್ದಾರೆ ಗುರುಗಳು. ಇನ್ನಾದರೂ ಇಂತಹ ರಾಜಕೀಯ ಪ್ರೇರಿತ ಹೇಳಿಕೆ ನೀಡುತ್ತ, ಅವರಿವರ ಪರ ವಕಾಲತ್ತು ವಹಿಸೋದನ್ನ ಸ್ವಾಮೀಜಿಗಳು ಬಿಟ್ಟುಬಿಡಲಿ. ಮಠದಲ್ಲಿದ್ದು ಧಾರ್ಮಿಕ ವಾತಾವರಣ ರೂಪಿಸುವ, ಸಮಾಜ ತಿದ್ದುವ ಕೆಲಸ ಮಾಡಲಿ ಎಂದು ಸಲಹೆ ನೀಡಿದರು. ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಅಭಿಮಾನಿಗಳು ಫೆ.೨೮ರಂದು ಆಯೋಜಿಸಿದ್ದ ಹುಟ್ಟುಹಬ್ಬ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಾರಂಗಧರ ಸ್ವಾಮೀಜಿ ಬಹಿರಂಗವಾಗಿಯೇ ದತ್ತಾತ್ರೇಯ ಮಂತ್ರಿಯಾಗಲು ಅರ್ಹ, ಅವರ ತಂದೆಯೂ ಮಂತ್ರಿಗಿರಿ ಕನಸಲ್ಲೆ ಸಾವನ್ನಪ್ಪಿದ್ದರು. ಇದೀಗ ಸರ್ಕಾರ ಬಂದರೂ ಬಿಜೆಪಿಯಲ್ಲಿ ಇವರಿಗೆ ಮಂತ್ರಿಸ್ಥಾನ ದೊರಕಿಲ್ಲವೆಂಬ ಅಸಮಾಧಾನ ಹೊರಹಾಕುತ್ತ ವರ್ಷದೊಳಗೆ ದತ್ತಾತ್ರೇಯ ರೇವೂರ್‌ಗೆ ಮಂತ್ರಿಸ್ಥಾನ ಯಡಿಯೂರಪ್ಪ ನೀಡದೆ ಹೋದ್ರೆ 10 ಶಾಸಕರಿಂದ ರಾಜೀನಾಮೆ ಕೊಡಿಸುವ ತಾಕತ್ತಿದೆ ಎಂದು ಹೇಳಿ ಸುದ್ದಿ ಮಾಡಿದ್ದರು. 

ಸರ್ಕಾರ ನಡೆಸುವವರ ಮೇಲೆ ವಿನಾಕಾಣ ಯಾರೂ ಸಮುದಾಯ, ಜಾತಿ, ಮತಗಳ ಹಿನ್ನೆಲೆ ಹೇಳಿಕೆ ನೀಡುತ್ತ ಒತ್ತಡ ಹಾಕಬಾರದು. ಒತ್ತಡ ಹಾಕುವುದರಿಂದ ರಾಜಕೀಯವಾಗಿ ಹಾಗೂ ಸಮಾಜದಲ್ಲಿ ತಪ್ಪು ಸಂದೇಶ ರವಾನೆಯಾಗುತ್ತದೆ. ಮಂತ್ರಿ ಸ್ಥಾನಕ್ಕೆ ಅರ್ಹರು, ಅನುಭವಿ ಎಂದು ಹೇಳಿದರೆ ತಪ್ಪಿಲ್ಲ, ಇವರಿಗೆ ಸಚಿವ ಸ್ಥಾನ ಸಿಗದೆ ಹೋದ್ರೆ ಸರ್ಕಾರ ಬೀಳಿಸ್ತೀನಿ ಅನ್ನೋ ಅರ್ಥದಲ್ಲಿ ಹೇಳಿದ್ರೆ ಹೇಗೆ ಎಂದು ಮಾಲೀಕಯ್ಯ ಪ್ರಶ್ನಿಸಿದರು. ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ್, ಮಹಿಳಾ ಬಿಜೆಪಿ ಮುಖಂಡರಾದ ದಿವ್ಯಾ ಹಾಗರಗಿ ಸುದ್ದಿಗೋಷ್ಠಿಯಲ್ಲಿದ್ದರು.
 

click me!