ಹಿಂದಿ ಹೇರಿಕೆ ಬರೀ ಕನವರಿಕೆ: ನುಡಿ ಸಡಗರದಲ್ಲಿ ಸಿದ್ದಲಿಂಗಯ್ಯ ಅಬ್ಬರ!

By Web Desk  |  First Published Sep 20, 2019, 5:14 PM IST

ಕಣ್ಮನ ಸೆಳೆದ ಕೊಣ್ಣೂರು ನುಡಿ ಸಡಗರ| 2 ದಿನಗಳ ಅಕ್ಷರಜಾತ್ರೆ ಉದ್ಘಾಟಿಸಿದ ಕವಿ ಡಾ.ಸಿದ್ದಲಿಂಗಯ್ಯ|  ಸಾವಿರಾರು ವಿದ್ಯಾರ್ಥಿಗಳು ಮತ್ತು ವಿವಿಧ ಕಲಾ ತಂಡಗಳ ಮಧ್ಯೆ ಮೆರವಣಿಗೆ| ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ತಾಲೂಕಿನ ಯಲ್ಲಟ್ಟಿಯಲ್ಲಿ ನಡೆದ ಕೊಣ್ಣೂರು ನುಡಿ ಸಡಗರ| ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಾಲೆ ಆರಂಭಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಕವಿ ಸಿದ್ದಲಿಂಗಯ್ಯ| ನೆರೆ ಸಂತ್ರಸ್ಥರಿಗೆ ಕೊಣ್ಣೂರ ಕಾಲೇಜ್‌ನಿಂದ 3 ಲಕ್ಷ ಪರಿಹಾರ ದೇಣಿಗೆ| 


ಮಲ್ಲಿಕಾರ್ಜುನ ಹೊಸಮನಿ

ಬಾಗಲಕೋಟೆ(ಸೆ.20): ಕನ್ನಡ ನಾಡು ನುಡಿ ಸಾಹಿತ್ಯಾಭಿವೃದ್ದಿ ದೃಷ್ಠಿಯಿಲ್ಲಿಟ್ಟುಕೊಂಡು ಕಳೆದ ಮೂರು ವರ್ಷಗಳಿಂದ ಆರಂಭವಾಗಿರುವ ಕೊಣ್ಣೂರು ನುಡಿ ಸಡಗರ ಅಕ್ಷರಜಾತ್ರೆಗೆ ಇಂದು ಅಧಿಕೃತ ಚಾಲನೆ ದೊರೆಯಿತು. 

Tap to resize

Latest Videos

ಎರಡು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮವನ್ನು ನುಡಿ ಸಡಗರದ ಸರ್ವಾಧ್ಯಕ್ಷ ದಲಿತ, ಬಂಡಾಯ ಸಾಹಿತಿ ಡಾ.ಸಿದ್ದಲಿಂಗಯ್ಯ ಚಾಲನೆ ನೀಡಿದರು. ಮೊದಲ ದಿನ ಭವ್ಯ ಮೆರವಣಿಗೆ ಸೇರಿದಂತೆ ವಿವಿಧ ಗೋಷ್ಠಿಗಳು ಅನಾವರಣಗೊಂಡವು.

"

ಪುಷ್ಪದಿಂದ ಅಲಂಕರಿಸಿದ ವಾಹನದ ಮೇಲೆ ಸರ್ವಾಧ್ಯಕ್ಷ ಡಾ.ಸಿದ್ದಲಿಂಗಯ್ಯನವರ ಮೆರವಣಿಗೆ, ಎಲ್ಲೆಲ್ಲೂ ವಿವಿಧ ಕಲಾತಂಡಗಳ ವಾದ್ಯದ ಮೇಳ, ಸಾಲು ಸಾಲಾಗಿ ಹೊರಟು ಸರ್ವಾಧ್ಯಕ್ಷರರನ್ನು ಕರೆತರುತ್ತಿರುವ ವಿದ್ಯಾರ್ಥಿಗಳು. ಇಂತಹವೊಂದು ದೃಶ್ಯ ಕಂಡು ಬಂದಿದ್ದು ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ತಾಲೂಕಿನ ಯಲ್ಲಟ್ಟಿಯಲ್ಲಿ. 

ಪ್ರೊ.ಬಸವರಾಜ್ ಕೊಣ್ಣೂರ ಅವರ ಸಾರಥ್ಯದಲ್ಲಿ ಕಳೆದ 3 ವರ್ಷಗಳಿಂದ ಕೊಣ್ಣೂರ ನುಡಿ ಸಡಗರ ಎಂಬ ಶೀರ್ಷಿಕೆಯಡಿ ಅಕ್ಷರಜಾತ್ರೆಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮಕ್ಕೆ ಇಂದು ಅಧಿಕೃತ ಚಾಲನೆ ನೀಡಲಾಯಿತು. 

ಬೆಳಿಗ್ಗೆ ನರಸಿಂಹೇಶ್ವರ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಕಲಾ ತಂಡಗಳು ಸಹ ಭಾಗವಹಿಸಿದ್ದವು. ಇನ್ನು ಮೆರವಣಿಗೆಯಲ್ಲಿ ಆಸಂಗಿ ಗ್ರಾಮದ 70 ವರ್ಷದ ಬಸಪ್ಪ ಮಹಾತ್ಮ ಗಾಂಧಿಜಿ ವೇಷಧಾರಿಯಾಗಿ ಹೆಜ್ಜೆ ಹಾಕಿದ್ದು ಗಮನ ಸೆಳೆಯಿತು.

"

ಇತ್ತ ಕಾರ್ಯಕ್ರಮದ ಸರ್ವಾಧ್ಯಕ್ಷ ದಲಿತ ಕವಿ ಡಾ.ಸಿದ್ದಲಿಂಗಯ್ಯ ವೇದಿಕೆಯಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಾ.ಸಿದ್ದಲಿಂಗಯ್ಯ, ಗೃಹ ಸಚಿವ ಅಮಿತ್ ಶಾ ಹಿಂದಿ ಹೇರಿಕೆ ವಿಚಾರದಲ್ಲಿ ನೀಡಿರುವ ಹೇಳಿಕೆ ವಿಷಾದಕರ ಸಂಗತಿಯಾಗಿದ್ದು ದೇಶದ ದಕ್ಷಿಣ ಮತ್ತು ಈಶಾನ್ಯ ರಾಜ್ಯಗಳು ಹಿಂದಿಯನ್ನ ಒಪ್ಪಿಕೊಳ್ಳುವುದಿಲ್ಲ ಎಂದು ಗುಡುಗಿದರು. 

ಈ ಭಾಗದಲ್ಲಿ ಉಪನ್ಯಾಸಕರಾಗಿ ಮನೆಮಾತಾಗಿರುವ ಪ್ರೊ.ಬಸವರಾಜ್ ಕೊಣ್ಣೂರ, ಕಾಲೇಜ್ ಆರಂಭಿಸಿ ತಮ್ಮ ಹುಟ್ಟಿದ ಹಬ್ಬದ ದಿನವನ್ನೇ ಕಳೆದ ಮೂರು ವರ್ಷಗಳಿಂದ ಕೊಣ್ಣೂರು ನುಡಿ ಸಡಗರ ಮಾಡಿಕೊಂಡು ಬರುತ್ತಿದ್ದಾರೆ.

ಈ ವರ್ಷವೂ ಅನೇಕ ಹಿರಿಯ ಸಾಹಿತಿಗಳಿಂದ ವಿಚಾರಗೋಷ್ಠಿ, ಮಾಧ್ಯಮಗೋಷ್ಠಿ, ನಗಬುಗ್ಗೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಸಹ ಹಮ್ಮಿಕೊಂಡಿದ್ದು, ಹೀಗಾಗಿ ಯಲ್ಲಟ್ಟಿಯಲ್ಲಿ ಎರಡು ದಿನಗಳ ಕಾಲ ಸಾಂಸ್ಕೃತಿಕ ಲೋಕವೇ ಅನಾವರಣಗೊಳ್ಳುತ್ತಿದೆ.

ವಿಶೇಷ ಎಂದರೆ ಈ ಬಾರಿಯ ನುಡಿ ಸಡಗರ ಕಾರ್ಯಕ್ರಮದಲ್ಲಿ ಕೊಣ್ಣೂರು ಕಾಲೇಜ್‌ನಿಂದ ನೆರೆ ಪೀಡಿತ ಸಂತ್ರಸ್ಥರಿಗಾಗಿ 3 ಲಕ್ಷ ರೂ. ಪರಿಹಾರ ದೇಣಿಗೆ ನೀಡಿದ್ದು ವಿಶೇಷವಾಗಿತ್ತು.

ಒಟ್ಟಿನಲ್ಲಿ ಎರಡು ದಿನಗಳ ಕಾಲ ನಡೆಯುತ್ತಿರುವ ಕೊಣ್ಣೂರ ನುಡಿಸಡಗರ ಅಕ್ಷರಜಾತ್ರೆಗೆ ಚಾಲನೆ ಸಿಕ್ಕಿದ್ದು, ನಾಳೆ ರಾತ್ರಿಯವರೆಗೂ ವಿವಿಧ ಕಾರ್ಯಕ್ರಮ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮನ ಸೆಳೆಯಲಿವೆ.

click me!