1 ರು. ಹೆಚ್ಚು ಹಣ ಹೊಂದಿದ್ದ ಕಂಡಕ್ಟರ್‌ಗೆ ನೋಟಿಸ್‌..!

By Kannadaprabha NewsFirst Published Nov 23, 2020, 8:59 AM IST
Highlights

5 ರು. ಲಗೇಜ್‌ ದರ ವಿಧಿಸದ ಚಾಲಕ ಸಸ್ಪೆಂಡ್‌| ಇದು ಕಿರುಕುಳ: ಕೆಎಸ್ಸಾರ್ಟಿಸಿ ನೌಕರರ ಆಕ್ರೋಶ| ಚಾಲಕನನ್ನೇ ಅಮಾನತುಗೊಳಿಸಿರುವುದು ಖಂಡನೀಯ| ಕ್ಷುಲ್ಲಕ ಕಾರಣಗಳಿಗೆ ಚಾಲನಾ ಸಿಬ್ಬಂದಿ ಅಮಾನತುಗೊಳಿಸುತ್ತಿರುವ ಪ್ರಕರಣಗಳು ಹೆಚ್ಚು| 

ಬೆಂಗಳೂರು(ನ.23): ಮಾರ್ಗ ತಪಾಸಣೆ ವೇಳೆ 1 ರು. ಹೆಚ್ಚುವರಿ ಹಣ ಹೊಂದಿದ್ದ ಕೆಎಸ್‌ಆರ್‌ಟಿಸಿ ನಿರ್ವಾಹಕನಿಗೆ ನೋಟಿಸ್‌ ನೀಡಿರುವುದು ಹಾಗೂ 5 ರು. ಲಗೇಜ್‌ ದರ ವಿಧಿಸದ ಚಾಲಕನನ್ನು ಅಮಾನತು ಮಾಡಿರುವುದು ಸಾರಿಗೆ ನೌಕರರ ಆಕ್ರೋಶಕ್ಕೆ ಕಾರಣವಾಗಿದೆ.

ಇತ್ತೀಚೆಗೆ ಕೆಎಸ್‌ಆರ್‌ಟಿಸಿ ತನಿಖಾಧಿಕಾರಿಗಳು ಮಾರ್ಗ ತಪಾಸಣೆ ವೇಳೆ ಬೇಲೂರು ಡಿಪೋಗೆ ಸೇರಿದ ಬಸ್‌ ತಪಾಸಣೆಗೆ ಒಳಪಡಿಸಿದ್ದಾರೆ. ಬಸ್‌ನ ನಿರ್ವಾಹಕ ವಿತರಿಸಿರುವ ಟಿಕೆಟ್‌ ಸಂಖ್ಯೆ ಹಾಗೂ ಸಂಗ್ರಹಿಸಿರುವ ಹಣವನ್ನು ಲೆಕ್ಕ ಹಾಕಿದ್ದಾರೆ. ಈ ವೇಳೆ ನಿರ್ವಾಹಕನ ಬಳಿ 16,300 ರು. ಬದಲು 16,301 ರು. ಹಣವಿದೆ. ಅಂದರೆ, ಟಿಕೆಟ್‌ ಮಾರಾಟದ ಹಣಕ್ಕಿಂತ 1 ರು. ಹೆಚ್ಚುವರಿ ಇರುವುದು ಪತ್ತೆಯಾಗಿದೆ. ಈ ಕಾರಣ ಮುಂದಿಟ್ಟು ನಿರ್ವಾಹನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನೋಟಿಸ್‌ ನೀಡಲಾಗಿದೆ.

'ಸಿಎಂ ಅಂಕಲ್ ಅಪ್ಪನಿಗೆ ಸಂಬಳ ಕೊಡಿ ಪ್ಲೀಸ್, ಮನೆಯಲ್ಲಿ ಹಬ್ಬವಿಲ್ಲ'

ಮತ್ತೊಂದು ಪ್ರಕರಣದಲ್ಲಿ ಮಾರ್ಗ ತಪಾಸಣೆ ವೇಳೆ ಚಿಕ್ಕಮಗಳೂರು ವಿಭಾಗದ ಕಡೂರು ಘಟಕದ ಬಸ್‌ವೊಂದರಲ್ಲಿ ಚಾಲಕನ ಕ್ಯಾಬಿನ್‌ನಲ್ಲಿ ವಾರಸುದಾರರು ಇಲ್ಲದ ಬಾಕ್ಸ್‌ವೊಂದು ಪತ್ತೆಯಾಗಿದೆ. 5 ರು. ಲಗೇಜ್‌ ದರ ವಿಧಿಸದೆ ಮಾಡದೆ ಬಾಕ್ಸ್‌ ಸಾಗಿಸುತ್ತಿದ್ದ ಆರೋಪದಡಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿ, ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅನುಮಾತುಗೊಳಿಸಲಾಗಿದೆ.

ಕ್ಷುಲ್ಲಕ ಕಾರಣಗಳನ್ನು ಮುಂದಿಟ್ಟು ತನಿಖಾಧಿಕಾರಿಗಳು ಚಾಲಕ ಮತ್ತು ನಿರ್ವಾಹಕರಿಗೆ ಕಿರುಕುಳ ನೀಡುತ್ತಿದ್ದಾರೆ. ಪ್ರತಿ ನಿತ್ಯ ಚಾಲನಾ ಸಿಬ್ಬಂದಿಯ ಶೋಷಣೆ ನಡೆಯುತ್ತಿದೆ. ನಿರ್ವಾಹಕನ ಬಳಿ ಒಂದು ರು. ಹೆಚ್ಚುವರಿ ಹಣ ಪ್ರಯಾಣಿಕರು ಚಿಲ್ಲರೆ ಪಡೆಯದೇ ಹೋಗಿರಲೂಬಹುದು. ಇದ್ಯಾವುದನ್ನೂ ಯೋಚಿಸದೆ ನಿರ್ವಾಹಕನಿಗೆ ನೋಟಿಸ್‌ ನೀಡಲಾಗಿದೆ. ಇನ್ನು ಬಾಕ್ಸ್‌ವೊಂದಕ್ಕೆ 5 ರು. ಲಗೇಜ್‌ ಮಾಡಿಲ್ಲ ಎಂಬ ಕಾರಣಕ್ಕೆ ಚಾಲಕನನ್ನೇ ಅಮಾನತುಗೊಳಿಸಿರುವುದು ಖಂಡನೀಯ. ಇತ್ತೀಚೆಗೆ ಕ್ಷುಲ್ಲಕ ಕಾರಣಗಳಿಗೆ ಚಾಲನಾ ಸಿಬ್ಬಂದಿಗಳನ್ನು ಅಮಾನತುಗೊಳಿಸುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ನೌಕರರನ್ನು ಅಮಾನತುಗೊಳಿಸಿ ವೇತನದ ಹೊರೆ ಇಳಿಸಿಕೊಳ್ಳಲು ಈ ಮಾರ್ಗ ಅನುಸರಿಸುತ್ತಿರುವಂತೆ ಕಾಣುತ್ತಿದೆ. ಇದು ನಿಜಕ್ಕೂ ಖಂಡನೀಯ ಎಂದು ಸಾರಿಗೆ ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 

click me!