* ಸವಳ್ಯಾರು ಕ್ಯಾಂಪಿನತ್ತ ಸುಳಿಯದ ಕೊರೋನಾ
* ಬೆಟ್ಟದ ಮ್ಯಾಲಿನ ಕ್ಯಾಂಪಿನಲ್ಲಿಲ್ಲ ಕೋವಿಡ್ ಭಯ
* 12-13 ಮನೆಗಳು ಇರುವ ಪುಟ್ಟ ಕ್ಯಾಂಪ್
ಸೋಮರಡ್ಡಿ ಅಳವಂಡಿ
ಕೊಪ್ಪಳ(ಮೇ.27): ಗಂಗಾವತಿ ತಾಲೂಕಿನ ಬೆಟ್ಟದ ಮೇಲೆ ‘ಸವಳ್ಯಾರು ಕ್ಯಾಂಪ್’ ಇದೆ. ಸುಮಾರು 100 ಜನಸಂಖ್ಯೆ, 12-13 ಮನೆ ಇರುವ ಇಲ್ಲಿಗೆ ಕೊರೋನಾ ಮಹಾಮಾರಿ ಬರುವ ಧೈರ್ಯ ಮಾಡಿಲ್ಲ. ಕೋವಿಡ್‌ನ ಚಿಂತೆ ಇಲ್ಲದೇ ಇಲ್ಲಿನ ಜನರು ಜೀವನ ನಡೆಸುತ್ತಿದ್ದಾರೆ.
ಗುಡ್ಡದ ಮೇಲೆ ಗ್ರಾಮವಿರುವುದರಿಂದ ಇಲ್ಲಿಗೆ ಯಾರೂ ಬರುವುದೇ ಇಲ್ಲ. ಇನ್ನು ಮೇಲಿದ್ದವರೂ ಸಹ ಅಗತ್ಯ ಕೆಲಸವಿದ್ದರೆ ಮಾತ್ರ ಗುಡ್ಡ ಇಳಿದು ಕೆಳಕ್ಕೆ ಬರುತ್ತಾರೆ. ಇಲ್ಲವಾದರೆ ತಿಂಗಳಿಗೊಮ್ಮೆ ಬಂದು ಅಗತ್ಯ ಧವಸ, ಧಾನ್ಯ, ಸಂತೆ ಮಾಡಿಕೊಂಡು ಹೋಗುತ್ತಾರೆ. ಒಂದರ್ಥದಲ್ಲಿ ಇವರು ವರ್ಷ ಪೂರ್ತಿ ಕ್ವಾರಂಟೈನ್‌ನಲ್ಲಿ ಇದ್ದಂತೆ ಇರುತ್ತಾರೆ.
ಹಂಪಸದುರ್ಗ ಗ್ರಾಮದಿಂದ ಮೂರ್ನಾಲ್ಕು ಕಿಲೋಮೀಟರ್ ದೂರ ಬೆಟ್ಟದ ಮೇಲೆ ನಡೆದುಕೊಂಡು ಹೋದರೆ ಈ ಊರು ಸಿಗುತ್ತದೆ. ಅಲ್ಲಿಯೂ ಇವರಿಗೆ ನಾಗರೀಕತೆಯ ಸೌಲಭ್ಯ ಸಿಕ್ಕಿಲ್ಲ, ವಿದ್ಯುತ್ ಸಂಪರ್ಕ ಇಲ್ಲ, ಶುದ್ಧ ಕುಡಿಯುವ ನೀರು ಇಲ್ಲ. ಬೆಟ್ಟದ ಮೇಲಿರುವ ಬಾವಿಯೇ ಇವರಿಗೆ ನೀರಿಗೆ ಆಸರೆ. ಗೊಂದಲ, ಗೋಜಲು ಇದ್ದೇ ಇದೆ. ಬೆಟ್ಟದ ಮೇಲೆಯೇ ಇರುವ ಸಮತಟ್ಟಾದ ಭೂಮಿಯಲ್ಲಿ ಕೃಷಿ ಮಾಡುತ್ತಾರೆ. ಜತೆಗೆ ಕಟ್ಟಿಗೆ ಮಾರುವುದು, ಕೋಳಿ, ಕುರಿ ಸಾಕಾಣಿಕೆಯನ್ನು ಅಲ್ಲಿಯೇ ಮಾಡುತ್ತಾರೆ. ಅದರಿಂದಲೇ ಅವರ ಜೀವನ. ಅವರ ಮಕ್ಕಳು ಶಾಲೆಗಾಗಿ ಬೆಟ್ಟದ ಕೆಳಗೆ ಇರುವ ಹಂಪಸದುರ್ಗಕ್ಕೆ ಬರಬೇಕು. ಗ್ರಾಮದಲ್ಲಿರುವ ಅರ್ದದಷ್ಟುಜನರು ಹೊರ ಜಿಲ್ಲೆ, ನಗರಗಳಿಗೆ ಗುಳೆ ಹೋಗಿದ್ದಾರೆ.
ಕೋವಿಡ್ ಲಕ್ಷಣ ಇದ್ದರೆ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿ: ಸಚಿವ ಬಿ.ಸಿ.ಪಾಟೀಲ್
ಕೊರೋನಾ ಸುಳಿವಿಲ್ಲ:
ಇಲ್ಲಿ ಕೊರೋನಾ ಸುಳಿವಿಲ್ಲ. ಅದರ ಬಗ್ಗೆ ಇವರು ತಲೆಯೂ ಕೆಡಿಸಿಕೊಂಡಿಲ್ಲ. ಈ ಕೊರೋನಾ ಕಾಲಘಟ್ಟದಲ್ಲಿ ಜ್ವರ, ಕೆಮ್ಮು ಮೊದಲಾದ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಇಲ್ಲಿಂದ ಗುಳೆ ಹೋಗಿರುವವರು ಮರಳಿ ಬರಲು ಸಾಧ್ಯವಾಗಿಲ್ಲ. ಲಾಕ್‌ಡೌನ್ ಘೋಷಣೆಯಾಗುವ ಮುನ್ನವೂ ಯಾರೊಬ್ಬರೂ ಮರಳಿ ಬಂದಿಲ್ಲ. ಹೀಗಾಗಿ ಇಲ್ಲಿ ಕೊರೋನಾ ಬಂದಿಲ್ಲ.
ಊರಿಗೂ ಇತಿಹಾಸವಿದೆ:
ಅವರು ಮೂಲತಃ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನವರು. ಅಲ್ಲಿ ಕುಟುಂಬದ ಕಲಹ ನಡೆದಾಗ ಗ್ರಾಮ ತ್ಯಜಿಸಿ ರಕ್ಷಣೆಗಾಗಿ ಇಲ್ಲಿಗೆ ಬಂದು ನೆಲೆಸುತ್ತಾರೆ. ಅದಾದ ಆನಂತರ ಇಲ್ಲಿಯೇ ಬದುಕು ಕಟ್ಟಿಕೊಳ್ಳುತ್ತಾರೆ. ನಿಧಾನಕ್ಕೆ ಇಲ್ಲಿಯೇ ಕೃಷಿಯನ್ನೂ ಆರಂಭಿಸುತ್ತಾರೆ. ಸ್ವಾತಂತ್ರ್ಯ ಪೂರ್ವದಲ್ಲಿಯೇ ಬಂದಿರುವ ಇವರು, ಇಲ್ಲಿಯೇ ನೆಲೆ ಕಂಡುಕೊಂಡಿದ್ದಾರೆ. ಈಗೀಗ ಆಧಾರ ಕಾರ್ಡ್, ಮೊದಲಾದ ಸೌಲಭ್ಯ ಹೊಂದಿದ್ದಾರೆ. ಈಗಲೂ ಈ ಗ್ರಾಮದಲ್ಲಿ ವಿದ್ಯುತ್ ಇಲ್ಲ. ಸೋಲಾರ್‌ನ ಒಂದೆರಡು ದೀಪಗಳನ್ನು ಅಳವಡಿಸಿದ್ದಾರೆ.
ನಮ್ಮೂರಲ್ಲಿ ಕೊರೋನಾ ಗೊತ್ತೇ ಇಲ್ಲ. ಕರೆಂಟೂ ಸಹ ನಮ್ಮೂರಲ್ಲಿ ಇಲ್ಲ. ಇರುವ ಬಾವಿಯಲ್ಲಿಯೇ ನಮ್ಮ ಕುಡಿಯುವ ನೀರು. ನಲ್ಲಿಯ ನೀರು, ಶುದ್ಧ ನೀರು ನಮಗೆ ಗೊತ್ತೇ ಇಲ್ಲ ಎಂದು ಗ್ರಾಮಸ್ಥ ಅಮರೇಶ ತಿಳಿಸಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona