ಯಾವ ಸರ್ಕಾರ ಬಂದ್ರೂ ರಾಯಚೂರಿನ ಜ್ವಲಂತ ಸಮಸ್ಯೆಗಳಿಗೆ ಸಿಗದ ಪರಿಹಾರ..!

By Kannadaprabha News  |  First Published Oct 11, 2022, 10:32 AM IST

ಟಿಎಲ್‌ಬಿಸಿ ಕೆಳಭಾಗದ ರೈತರಿಗೆ ದೊರೆಯುತ್ತಿಲ್ಲ ನೀರು, ಹೊಸ ವಿವಿಗೆ ಅನುದಾನ ಕೊರತೆ, ತೀರದ ಕುಡಿವ ನೀರಿನ ಸಮಸ್ಯೆ,151 ದಿನ ಪೂರೈಸಿದ ಏಮ್ಸ್‌ ಹೋರಾಟ, ಇನ್ನು ಸ್ಪಂದನೆ ಶೂನ್ಯ


ರಾಮಕೃಷ್ಣ ದಾಸರಿ

ರಾಯಚೂರು(ಅ.11):  ದಶಕಗಳು ಉರುಳುತ್ತಿವೆ, ಸರ್ಕಾರಗಳು ಬದಲಾಗುತ್ತಿವೆ ಆದರೆ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಜನರು ಅನುಭವಿಸುತ್ತಿರುವ ಜ್ವಲಂತ ಸಮಸ್ಯೆಗಳಿಗೆ ಮಾತ್ರ ಪರಿಹಾರವು ಸಿಗದಂತಾಗಿದೆ.
ತೆಲಂಗಾಣ-ಆಂಧ್ರಪ್ರದೇಶದ ಗಡಿಯನ್ನು ಹಂಚಿಕೊಂಡಿರುವ ಗ್ರಾಮೀಣ ಕ್ಷೇತ್ರವು ಈಗಾಗಲೇ ಸಮಗ್ರ ಅಭಿವೃದ್ಧಿಯನ್ನು ಕಾಣಬೇಕಾಗಿತ್ತು ಆದರೆ ರಾಜಕೀಯ ಇಚ್ಛಾಶಕ್ತಿಯ ಕೊರತೆ, ಉದ್ದಾರಕ್ಕಾಗಿ ಆಡಳಿತ ನಡೆಸುವ ದೊರೆಗಳ ಕಣ್ಣು ಬೀಳದೇ ಇರುವುದು, ಇಲ್ಲಿನ ಜನರಲ್ಲಿ ಕೇಳುವ ಮನೋಭಾವನೆಯ ಕೊರತೆಯಿಂದಾಗಿ ಜ್ವಲಂತ ಸಮಸ್ಯೆಗಳು ಜೀವಂತವಾಗಿಯೇ ಉಳಿದುಬಿಟ್ಟಿವೆ.

Tap to resize

Latest Videos

2009 ರಲ್ಲಿ ಸಂಭವಿಸಿದ ಮಹಾಪ್ರಕೋಪದಿಂದಾಗಿ ರಾಯಚೂರು ಗ್ರಾಮೀಣ ಭಾಗದ 25 ಕ್ಕು ಹೆಚ್ಚು ಹಳ್ಳಿಗಳನ್ನು ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸಲಾಗಿತ್ತು ಆದರೆ ಇಂದಿಗೂ ಸಹ ಅಗತ್ಯ ಸವಲತ್ತುಗಳಿಲ್ಲದ ಕಾರಣಕ್ಕೆ ಪುನರ್ವಸತಿ ಪ್ರದೇಶಗಳು ಪಾಳುಬಿದ್ದಿವೆ. ಕೃಷ್ಣಾ ನದಿಯ ನಡುಗಡ್ಡೆಗಳಾದ ಡೊಂಗರಾಂಪುರ, ಕುರ್ವಕಲ, ಕುರ್ವಕುರ್ದಾ ಸೇರಿ ಇತರೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವುದಕ್ಕಾಗಿ ಕೃಷ್ಣಾ ನದಿಗೆ ನಿರ್ಮಿಸಲಾದ ಮೂರು ಸೇತುವೆಗಳ ಕಾಮಗಾರಿ ದಶಕಗಳಿಂದ ನನೆಗುದಿಗೆಬಿದ್ದಿದೆ. ಇನ್ನು ನಕ್ಸಲ್‌ ಪೀಡಿತ ಪ್ರದೇಶ ಎನ್ನುವ ಹಣೆಪಟ್ಟಿಯನ್ನು ಕಟ್ಟಿಗೊಂಡಿರುವ ಯಾಪಲದಿನ್ನಿ-ದೇವಸುಗೂರು ಹೋಬಳಿಯ ಗ್ರಾಮಗಳು ಇಂದಿಗೂ ಕಿತ್ತು ತಿನ್ನುವ ಬಡತನ, ಅಭಿವೃದ್ಧಿ ಕಾಣದ ಊರುಗಳಾಗಿಯೇ ಉಳಿದುಬಿಟ್ಟಿವೆ.

ರಾಗಾ ಪಾದಯಾತ್ರೆ 15ಕ್ಕೆ ಬಳ್ಳಾರಿ, 21-22ಕ್ಕೆ ರಾಯಚೂರಿಗೆ ಪ್ರವೇಶ: ಸಿದ್ದರಾಮಯ್ಯ

ಹೆಸರಿಗಷ್ಟೇ ನೀರಾವರಿ :

ತುಂಗಭದ್ರಾ ಎಡದಂಡೆ ಕಾಲುವೆ-ಕೃಷ್ಣಾ ಬಲದಂಡೆ ಕಾಲುವೆಗಳ ಕೊನೆ ಭಾಗಕ್ಕೆ ರಾಯಚೂರು ಗ್ರಾಮೀಣ ಕ್ಷೇತ್ರವು ಬರುತ್ತಿದ್ದು ರೈತರ ಪಹಣಿಯಲ್ಲಷ್ಟೇ ನೀರಾವರಿಯನ್ನು ಕಾಣುವ ದಾರುಣ ಸ್ಥಿತಿಯು ಕ್ಷೇತ್ರದಲ್ಲಿದೆ. ಟಿಎಲ್‌ಬಿಸಿ ಕೆಳಭಾಗಕ್ಕೆ ನೀರು ಹರಿಸಲು ರೈತರು ಹೋರಾಟ ಮಾಡುವ ಅನಿವಾರ್ಯತೆಯಿದ್ದು, ಮೇಲ್ಭಾದ ನೀರಿನ ಮಾಫಿಯಾದಿಂದಾಗಿ ಕೆಳಭಾಗದ ರೈತರ ಜಮೀನುಗಳಲ್ಲಿ ನೀರು ಹರಿಯುವುದಕ್ಕಿಂತ ಅವರ ಕಣ್ಣಲ್ಲಿ ನೀರು ಅರಿಯುವುದೇ ಹೆಚ್ಚಾಗಿದೆ. ಇತ್ತೀಚೆಗೆ ಸುರಿದ ಮಳೆಯಿಂದಾಗಿ ಈ ಭಾಗದ ರೈತರು ಹತ್ತಿ, ಮೆಣಸಿನಕಾಯಿ, ಕಾಯಿಪಲ್ಲೆ ಹಾಗೂ ತೋಟಗಾರಿಕೆ ಬೆಳೆಗಳನ್ನು ಬೆಳೆದು ಕೈ ಸುಟ್ಟುಕೊಂಡಿದ್ದು, ಪರಿಹಾರ ಇನ್ನು ಸಿಕ್ಕಿಲ್ಲ.

ಅನುದಾನವಿಲ್ಲದ ಹೊಸ ವಿವಿ :ರಾಯಚೂರು ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯ ಯರಗೇರಾ ಸಮೀಪದಲ್ಲಿ 250 ಎಕರೆ ಪ್ರದೇಶದಲ್ಲಿ ರಾಯಚೂರು ಹೊಸ ವಿಶ್ವವಿದ್ಯಾಲಯನ್ನು ಘೋಷಿಸಿರುವ ರಾಜ್ಯ ಸರ್ಕಾರವು ಇಲ್ಲಿತನಕ ಹೇಳಿಕೊಳ್ಳುವಷ್ಟುಅನುದಾನವನ್ನು ಬಿಡುಗಡೆ ಮಾಡಿಲ್ಲ ಇದರಿಂದಾಗಿ ವಿವಿ ಬೋಧಕ-ಬೋಧಕೇತರ ಅಧಿಕಾರಿ, ಸಿಬ್ಬಂದಿ ನೇಮಕ, ಕಟ್ಟಡ, ಪರಿಕರಗಳು ಸೇರಿದಂತೆ ಅಗತ್ಯ ಸವಲತ್ತುಗಳಿಂದ ಸಂಪೂರ್ಣ ವಂಚಿತವಾಗುತ್ತಿದೆ.ರಾಜ್ಯ ಸರ್ಕಾರದ ಅನುದಾನದ ಜೊತೆಗೆ ಕೆಕೆಆರ್‌ಡಿಬಿಯ ಆಸರೆಯಿದ್ದರು ಸಹ ಹಣ ನೀಡದ ಕಾರಣಕ್ಕೆ ಅಪೌಷ್ಟಿಕತೆಯಿಂದ ಬೆಳವಣಿಗೆ ಕುಂಟಿತಗೊಂಡಂತೆ ಹೊಸ ವಿವಿ ದುಸ್ಥಿತಿಯನ್ನು ಅನುಭವಿಸುತ್ತಿದೆ.

ಭಾರತ್‌ ಜೋಡೋ ಯಾತ್ರೆಯಿಂದ ಬಿಜೆಪಿಗರಲ್ಲಿ ನಡುಕ, ದೇಶದಲ್ಲಿ ರಾಹುಲ್‌, ರಾಜ್ಯದಲ್ಲಿ ನನ್ನ ಭಯವಿದೆ: ಸಿದ್ದು

ಏಮ್ಸ್‌ ಸ್ಪಂದನೆ ಶೂನ್ಯ:

ಹಿಂದುಳಿದ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ರಾಷ್ಟ್ರೀಯ ಸಂಸ್ಥೆಯ ಅಗತ್ಯತೆ ಹಿನ್ನೆಲೆಯಲ್ಲಿ ರಾಯಚೂರಿಗೆ ಏಮ್ಸ್‌ ನೀಡಬೇಕು ಎಂದು ಆಗ್ರಹಿಸಿ 151 ದಿನಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದರು ಸಹ ಸರ್ಕಾರದಿಂದ ಶೂನ್ಯ ಸ್ಪಂದನೆ ವ್ಯಕ್ತವಾಗುತ್ತಿದ್ದು ಮುಂದಿನ ದಿನಗಳಲ್ಲಿ ಹೋರಾಟ ಹೋರಾಟದ ಅನಿವಾರ್ಯತೆಯ ವಾತಾವರಣವು ನಿರ್ಮಾಣಗೊಂಡಿದೆ.

ರಾಯಚೂರು ಗ್ರಾಮೀಣ ಪ್ರದೇಶದ ಸಾರ್ವಜನಿಕರು ಅನುಭವಿಸುತ್ತಿರುವ ಹಲವಾರು ಸಮಸ್ಯೆಗಳನ್ನು ಸರ್ಕಾರವು ಪರಿಗಣನೆಗೆ ತೆಗೆದುಕೊಂಡು ಅವುಗಳ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಅಂತ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ ತಿಳಿಸಿದ್ದಾರೆ.  
 

click me!