ಹುಬ್ಬಳ್ಳಿ ಸ್ಫೋಟ ಪ್ರಕರಣ: FSL ವರದಿ ಬರಲು ಇನ್ನೆಷ್ಟು ದಿನ ಬೇಕು?

By Suvarna NewsFirst Published Dec 12, 2019, 8:16 AM IST
Highlights

ನಿಂತಲ್ಲೇ ನಿಂತ ರೈಲ್ವೆ ನಿಲ್ದಾಣದ ಸ್ಫೋಟಕ ಪ್ರಕರಣದ ತನಿಖೆ| ಸಾರ್ವಜನಿಕ ವಲಯದಲ್ಲಿ ಹೆಚ್ಚಿದ ಕುತೂಹಲ|  ಈವರೆಗೂ ಬರೀ ಪ್ರಕರಣ ಮಾತ್ರ ತನಿಖಾ ಹಂತದಲ್ಲೇ ಇದೆ|

ಶಿವಾನಂದ ಗೊಂಬಿ 

ಹುಬ್ಬಳ್ಳಿ(ಡಿ.12): ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ನಿಗೂಢವಾಗಿ ಸ್ಫೋಟಗೊಂಡ ಸ್ಫೋಟಕ ಯಾವುದು? ಎಫ್‌ಎಸ್‌ಎಲ್ ವರದಿ ಬರುವುದು ಯಾವಾಗ? ತನಿಖೆ ಯಾವ ಹಂತದಲ್ಲಿದೆ? ಈ ಪ್ರಶ್ನೆಗಳೀಗ ಸಾರ್ವಜನಿಕ ವಲಯದಲ್ಲಿ ಉದ್ಭವ ವಾಗಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಒಂದೂವರೆ ತಿಂಗಳ ಹಿಂದೆ ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ನಡೆದಿದ್ದ ಸ್ಫೋಟಕ ಕಥೆ ಏನಾಯ್ತು ಎಂಬುದು ಯಾರಿಗೂ ಗೊತ್ತಾಗುತ್ತಿಲ್ಲ. ಈವರೆಗೂ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಕೂಡ ಬಂದಿಲ್ಲ. ಈ ಕಾರಣಗಳಿಂದಾಗಿ ಈ ಎಲ್ಲ ಪ್ರಶ್ನೆಗಳು ಇದೀಗ ಕೇಳಿ ಬರುತ್ತಿವೆ. 

ಹುಬ್ಬಳ್ಳಿ ಸ್ಫೋಟ: ಎರಡು ವಾರದಲ್ಲಿ ಎಫ್‌ಎಸ್‌ಎಲ್ ವರದಿ ನಿರೀಕ್ಷೆ

ಹೌದು! 2019ರ ಅಕ್ಟೋಬರ್ 21ರಂದು ವಿಜಯವಾಡದಿಂದ ಹುಬ್ಬಳ್ಳಿಗೆ ಬಂದಿದ್ದ ಅಮರಾವತಿ ಎಕ್ಸ್‌ಪ್ರೆಸ್ ರೈಲಿನ ಜನರಲ್ ಬೋಗಿಯಲ್ಲಿ ಪ್ಲಾಸ್ಟಿಕ್ ಬಕೆಟ್ ಪಾರ್ಸಲ್ ಬಂದಿತ್ತು. ಕೆಂಪು ಬಣ್ಣದ ಕಾಗದ ಸುತ್ತಿದ್ದ ಪ್ಲಾಸ್ಟಿಕ್ ಬಕೆಟ್ ನಲ್ಲಿ 8 ಚಿಕ್ಕ ಚಿಕ್ಕ ಬಾಕ್ಸ್‌ಗಳಿದ್ದವು. ಅದರಲ್ಲಿ ಕಟ್ಟಿಗೆ ತೌಡಿನಲ್ಲಿ ಲಿಂಬೆಹಣ್ಣಿನ ಗಾತ್ರದ 8 ವಸ್ತುಗಳಿದ್ದವು. ಅದರಲ್ಲಿ ಒಂದನ್ನು ಚಹಾ ಮಾರುವ ಹುಸೇನಸಾಬ್ ಎಂಬಾತ ಕೈಯಲ್ಲಿ ಗಟ್ಟಿಯಾಗಿ ಹಿಡಿದಾಗ ಅದು ಸ್ಫೋಟಗೊಂಡಿತ್ತು. ಇದರಿಂದ ಹುಸೇನಸಾಬನ ಅಂಗೈ ಛಿದ್ರವಾಗಿತ್ತು. ಆತನಿಗೆ ಕಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಈಗಲೂ ಚಿಕಿತ್ಸೆ ಮುಂದುವರಿದಿದೆ. ಇನ್ನೂ ಪೂರ್ತಿಯಾಗಿ ಗುಣಮುಖ ನಾಗಿಲ್ಲ. ಬಳಿಕ ಪತ್ತೆಯಾಗಿದ್ದ ಏಳು ಜೀವಂತ ಸ್ಫೋಟಕ ಗಳನ್ನು ಕಳೆದ ತಿಂಗಳು ಬಿಡಿಡಿಎಸ್ ತಂಡ (ಬಾಂಬ್ ಡಿಟೆಕ್ಟ್ ಆ್ಯಂಡ್ ಡಿಸ್ಪೋಸಲ್ ಸ್ಕ್ವಾಡ್) ಬಂದು ನಿಷ್ಕ್ರಿಯಗೊಳಿಸಿತ್ತು. 

ತನಿಖಾ ಹಂತದಲ್ಲೇ: 

ರಾಜ್ಯದಲ್ಲೇ ಅತ್ಯಂತ ಕೋಲಾಹಲ ಸೃಷ್ಟಿಸಿದ ಘಟನೆಯಿದಾಗಿತ್ತು. ಆದಷ್ಟು ಶೀಘ್ರವೇ ಈ ಘಟನೆಯ ತನಿಖೆ ನಡೆಸುವಂತೆ ಕೇಂದ್ರ ಸರ್ಕಾರವೂ ಸೂಚನೆ ನೀಡಿತ್ತು. ಎಟಿಎಸ್, ಬಾಂಬ್ ನಿಷ್ಕ್ರಿಯ ದಳ ತಂಡಗಳು ಬಂದು ಪರಿಶೀಲನೆ ನಡೆಸಿ ಹೋಗಿದ್ದವು. ಕೊನೆಗೆ ರೈಲ್ವೆ ಪೊಲೀಸರಿಗೆ ಇದರ ತನಿಖೆ ಜವಾಬ್ದಾರಿ ವಹಿಸಿದ್ದವು. ರಾಜ್ಯ ಸರ್ಕಾರ ಕೂಡ ಆದಷ್ಟು ಶೀಘ್ರದಲ್ಲೇ ತನಿಖೆ ನಡೆಸುವಂತೆ ಸೂಚನೆ ನೀಡಿತ್ತು. ಆದರೆ ಈವರೆಗೂ ಬರೀ ಪ್ರಕರಣ ಮಾತ್ರ ತನಿಖಾ ಹಂತದಲ್ಲೇ ಇದೆ. 

ಇನ್ನು ಬಂದಿಲ್ಲ ವರದಿ: 

ಮೇಲ್ನೋಟಕ್ಕೆ ಸ್ಫೋಟಗೊಂಡ ಸ್ಫೋಟಕ ಫೀಡ್‌ಬಾಂಬ್ ಎಂದು ಶಂಕಿಸಲಾಗಿತ್ತು. ಹಂದಿಗಳನ್ನು ಕೊಲ್ಲಲು ಈ ಬಾಂಬ್‌ಗಳನ್ನು ಆಂಧ್ರ ಪ್ರದೇಶ, ಮಹಾರಾಷ್ಟ್ರಗಳಲ್ಲಿ ಬಳಕೆ ಮಾಡಲಾಗುತ್ತದೆ ಎಂದು ಗುರುತಿಸಲಾಗಿತ್ತು. ಆದರೆ ಸ್ಫೋಟಕದ ನೈಜ ಮಾಹಿತಿ ತಿಳಿಯುವ ಉದ್ದೇಶದಿಂದ ಸ್ಫೋಟಕದ ಮಾದರಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಲಾಗಿದೆ. ಆದರೆ ಅಲ್ಲಿಂದ ಈವರೆಗೂ ವರದಿಯೇ ಬಂದಿಲ್ಲ. 

ರೈಲಿನಲ್ಲಿ ಸ್ಫೋಟಕ ಬಂದಿದ್ದು ಹೇಗೆ? ಎಲ್ಲಿ ಸ್ಫೋಟಕ ಇಡಲಾಯಿತು? ಅಷ್ಟಕ್ಕೂ ಸ್ಫೋಟಕವಾದರೂ ಯಾವುದು? ಪ್ರಕರಣಕ್ಕೆ ಸಂಬಂಧಿಸಿ ಯಾವುದಾದರೂ ಸುಳಿವು ಸಿಕ್ಕಿವೆಯಾ? ಎಷ್ಟು ಜನರನ್ನು ವಿಚಾರಣೆ ನಡೆಸಲಾಯಿತು? ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಲಘು ಸ್ಫೋಟ ಸಂಭವಿಸಿ ಒಂದೂವರೆ ತಿಂಗಳು ಕಳೆದರೂ ಈ ರೀತಿಯ ಸಾಲು ಸಾಲು ಪ್ರಶ್ನೆಗಳಲ್ಲಿ ಒಂದಕ್ಕೂ ಉತ್ತರ ಸಿಗುತ್ತಿಲ್ಲ. ಇತ್ತ ಜನತೆಯಲ್ಲಿ ಮನೆ ಮಾಡಿರುವ ಆತಂಕವೂ ತಣಿಯುತ್ತಿಲ್ಲ. ಈ ಬಗ್ಗೆ ಕೇಳಿದರೆ ಅಧಿಕಾರಿ ವರ್ಗ ಮಾತ್ರ, ಇನ್ನೂ ವರದಿ ಬಂದಿಲ್ಲ. ಇನ್ನು ಎರಡ್ಮೂರು ದಿನಗಳಲ್ಲಿ ಬರುವ ಸಾಧ್ಯತೆ ಇದೆ. ಅದು ಬಂದ ನಂತರ ನೈಜತೆ ಗೊತ್ತಾಗಲಿದೆ ಎಂದು ತಿಳಿಸುತ್ತದೆ. ಆಗಿನಿಂದಲೇ ಇದೇ ಉತ್ತರ ಅಧಿಕಾರಿ ವರ್ಗದ್ದು. 

ಕೊಲ್ಲಾಪುರಕ್ಕೆ ತೆರಳಿದ ತಂಡ 

ಈ ಪಾರ್ಸಲ್ ಬಂದಿದ್ದು ವಿಜಯವಾಡದಿಂದ ಹಾಗೂ ಅದರ ಮೇಲೆ ಕೊಲ್ಲಾಪುರದ ವಿಳಾಸವಿತ್ತು. ಜತೆಗೆ ಶಿವಸೇನೆಯ ಶಾಸಕರೊಬ್ಬರ ಹೆಸರಿತ್ತು. ಈ ಹಿನ್ನೆಲೆ ಈ ಎರಡು ಕಡೆಗಳಲ್ಲಿ ರೈಲ್ವೆ ಪೊಲೀಸರು ನಾಲ್ಕೈದು ಸಲ ಹೋಗಿ ಬಂದಿದ್ದುಂಟು. ವಿಜಯ ವಾಡದಲ್ಲಿ ಅಲ್ಲಿನ ಪೊಲೀಸರಿಂದ ಅಲ್ಪಸ್ವಲ್ಪ ನೆರವು ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಆದರೆ ಮಹಾ ರಾಷ್ಟ್ರದಲ್ಲಿ ಮಾತ್ರ ಚುನಾವಣೆ ಇದ್ದ ಕಾರಣಕ್ಕೆ ಪೊಲೀಸರಿಂದ ಅಷ್ಟೊಂದು ಸಹಕಾರ ಸಿಗಲಿಲ್ಲ. ಇದೀಗ ಮತ್ತೊಮ್ಮೆ ಮಹಾರಾಷ್ಟ್ರಕ್ಕೆ ತನಿಖಾ ತಂಡ ತೆರಳಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಎಫ್‌ಎಸ್‌ಎಲ್ ವರದಿ ಬರಲು ಇಷ್ಟು ದಿನ ಬೇಕೆ? ಅಥವಾ ಎಫ್‌ಎಸ್‌ಎಲ್ ವರದಿ ಬಂದಿದೆಯೇ ಅದನ್ನು ಮುಚ್ಚಿ ಹಾಕುವ ಯತ್ನವನ್ನು ರೈಲ್ವೆ ಪೊಲೀಸರು ಮಾಡುತ್ತಿದ್ದಾರೆಯೇ? ಹೀಗೆ ರೈಲ್ವೆ ನಿಲ್ದಾಣದಲ್ಲಿ ನಡೆದ ಸ್ಫೋಟಕ್ಕೆ ಸಂಬಂಧಪಟ್ಟಂತೆ ಸಾರ್ವಜನಿಕ ವಲಯದಲ್ಲಿ ಹತ್ತಾರು ಪ್ರಶ್ನೆಗಳಿವೆ. ಅವುಗಳಿಗೆ ಶೀಘ್ರ ಉತ್ತರ ಕೊಡುವ ಕೆಲಸ ರೈಲ್ವೆ ಪೊಲೀಸರು ಮಾಡಲಿ ಎಂಬ ಆಗ್ರಹ ಸಾರ್ವಜನಿಕರದ್ದು.

ಹುಬ್ಬಳ್ಳಿ ಸ್ಫೋಟ: ಎಫ್‌ಎಸ್‌ಎಲ್‌ ವರದಿ ಬಳಿಕವೇ ಸತ್ಯಾಂಶ ಬೆಳಕಿಗೆ

ಈ ಬಗ್ಗೆ ಮಾತನಾಡಿದ ರೈಲ್ವೆ ಪೊಲೀಸ್ ಎಸ್ಪಿ ಬೋರಲಿಂಗಯ್ಯ ಅವರು, ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಹಾಗಂತ ತನಿಖೆ ನಡೆಯುತ್ತಲೇ ಇಲ್ಲ ಅಂತೇನೂ ಇಲ್ಲ. ಈಗಾಗಲೇ ವಿಜಯವಾಡ ಹಾಗೂ ಕೊಲ್ಲಾಪುರಕ್ಕೆ ನಮ್ಮ ತನಿಖಾ ತಂಡ ನಾಲ್ಕಾರು ಸಲ ಹೋಗಿ ಬಂದಿದೆ. ಎಫ್ ಎಸ್‌ಎಲ್ ವರದಿ ಇನ್ನೆರಡ್ಮೂರು ದಿನಗಳಲ್ಲಿ ಬರಬಹುದು. ಅದು ಬಂದ ನಂತರ ಸ್ಫೋಟಕ ಯಾವುದು ಎಂಬುದು ಗೊತ್ತಾಗಲಿದೆ. ಆದಷ್ಟು ಶೀಘ್ರದಲ್ಲೇ ತನಿಖೆ ಪೂರ್ಣಗೊಳಿಸುತ್ತೇವೆ ಎಂದು ತಿಳಿಸಿದ್ದಾರೆ. 
 

click me!