ಮಹದಾಯಿ ಯೋಜನೆಗಾಗಿ ನರಗುಂದ ಪಟ್ಟಣದಲ್ಲಿ 79 ದಿನ ಹೋರಾಟ ನಡೆಸಿದ್ದ ಬಿಜೆಪಿ| ಅಂದು ಅಧಿಕಾರದಲ್ಲಿದ್ದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ರಕ್ತದಲ್ಲಿ ಪತ್ರ ಬರೆದಿದ್ದ ಬಿಜೆಪಿಗರು| ನಾವು ಅಧಿಕಾರಕ್ಕೆ ಬಂದರೆ ಆರು ತಿಂಗಳಲ್ಲಿ ಯೋಜನೆ ಜಾರಿ ಮಾಡುವುದಾಗಿ ಹೇಳಿದ್ದ ಬಿಜೆಪಿ ನಾಯಕರು| ಕಾನೂನು ತೊಡಕುಗಳಿವೆ ಎಂದು ಈಗ ಹೇಳುತ್ತಿರುವುದು ಸ್ಥಳೀಯರ ಬೇಸರಕ್ಕೆ ಕಾರಣ|
ಎಸ್.ಜಿ. ತೆಗ್ಗಿನಮನಿ
ನರಗುಂದ(ಮಾ.08): ಉತ್ತರ ಕರ್ನಾಟಕ ಭಾಗದ 4 ಜಿಲ್ಲೆಯ 11 ತಾಲೂಕಿನ ರೈತರು ಕಳೆದ 20 ವರ್ಷದಿಂದ ಮಹದಾಯಿ ಹಾಗೂ ಕಳಸಾ ಬಂಡೂರಿ ಯೋಜನೆ ಜಾರಿಗಾಗಿ ಹೋರಾಡುತ್ತಿದ್ದರೂ ಈ ವರೆಗೆ ಯೋಜನೆ ಜಾರಿಯಾಗಲೇ ಇಲ್ಲ. ಇದೇ ತಾಲೂಕಿನ ಜನರ ಪ್ರಮುಖ ಬೇಡಿಕೆ. ಈ ಬಜೆಟ್‌ನಲ್ಲಾದರೂ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಅನುದಾನ ಬಿಡುಗಡೆ ಮಾಡುವುದೇ ಎಂದು ಜನರು ಕಾಯುತ್ತಿದ್ದಾರೆ.
ಈ ಯೋಜನೆಗಾಗಿ ನರಗುಂದ ಪಟ್ಟಣದಲ್ಲಿ ಬಿಜೆಪಿಯವರು 79 ದಿನ ಹೋರಾಟ ನಡೆಸಿದ್ದರು. ಅಂದು ಅಧಿಕಾರದಲ್ಲಿದ್ದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ರಕ್ತದಲ್ಲಿ ಪತ್ರ ಬರೆದಿದ್ದರು. ನಾವು ಅಧಿಕಾರಕ್ಕೆ ಬಂದರೆ ಆರು ತಿಂಗಳಲ್ಲಿ ಯೋಜನೆ ಜಾರಿ ಮಾಡುವುದಾಗಿ ಹೇಳಿದ್ದರು. ಆದರೆ ಕಾನೂನು ತೊಡಕುಗಳಿವೆ ಎಂದು ಈಗ ಹೇಳುತ್ತಿರುವುದು ಸ್ಥಳೀಯರ ಬೇಸರಕ್ಕೆ ಕಾರಣವಾಗಿದೆ.
2015 ಜುಲೈ 16ರಿಂದ ರೈತ ಸೇನಾ ಸಂಘಟನೆ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಮಲಪ್ರಭ ಅಚ್ಚುಕಟ್ಟು ಪ್ರದೇಶದ ರೈತರ ಜತೆಗೂಡಿ ನಿರಂತರ ಹೋರಾಟ ಮಾಡಿದರು. ಅದಾದ ಬಳಿಕ ನ್ಯಾಯಾಧಿಕರಣ ತೀರ್ಪು ಬಂತು. 13.42 ಟಿಎಂಸಿ ನೀರು ಬಳಸಿಕೊಳ್ಳಲು ರಾಜ್ಯಕ್ಕೆ ಅವಕಾಶ ಸಿಕ್ಕಿತು. ಕೇಂದ್ರ ಸರ್ಕಾರ ಕೂಡ ನೀರು ಬಳಕೆ ಮಾಡಿಕೊಳ್ಳಲು ಗೆಜೆಟ್ ನೋಟಿಫಿಕೇಶನ್ ಹೊರಡಿಸಿದ ಆನಂತರ ರಾಜ್ಯ ಸರ್ಕಾರ ಈ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಹಳ್ಳದಲ್ಲಿ ಹರಿಯುವ ನೀರು ಬಳಕೆ ಮಾಡಿಕೊಳ್ಳುವ ಕಾಮಗಾರಿಗೆ . 500 ಕೋಟಿ ಮೀಸಲಿಟ್ಟಿತು. ಆದರೆ ಇದುವರೆಗೂ ಕಾಮಗಾರಿ ಪ್ರಾರಂಭ ಮಾಡಿ ನೀರು ಪಡೆದುಕೊಳ್ಳಲು ಮುಂದಾಗಿಲ್ಲ. ಈಗ ಮತ್ತೆ ಮುಖ್ಯಮಂತ್ರಿ ಬಿ.ಎಸ್. ಯಡಯೂರಪ್ಪ ಅವರೇ ಬಜೆಟ್ ಮಂಡಿಸುತ್ತಿದ್ದು, ಇದಕ್ಕೆ ಇನ್ನು ಹೆಚ್ಚಿನ ಆದ್ಯತೆ ಸಿಗಬೇಕು ಎನ್ನುವುದು ತಾಲೂಕಿನ ಜನರ ಬೇಡಿಕೆಯಾಗಿದೆ.
ಬಿಎಸ್‌ವೈ 8ನೇ ಬಜೆಟ್: ಕೊರೋನಾ ಸಂಕಷ್ಟ ಮಧ್ಯೆ ಆಯವ್ಯಯ!
ಪ್ರವಾಸ ತಾಣಕ್ಕೆ ಮನವಿ:
ನರಗುಂದ ಸಂಸ್ಥಾನವನ್ನು ವೀರ ಬಾಬಸಾಹೇಬ ಆಳ್ವಕೆ ಮಾಡಿದ್ದರಿಂದ ಪಟ್ಟಣದಲ್ಲಿ ರಾಜರ ಅರಮನೆ, ಕೋಟೆ, ದೇವಸ್ಥಾನಗಳು ಪಾಳುಬಿದ್ದಿವೆ. ಈ ಬಗ್ಗೆ ಈ ತಾಲೂಕಿನ ಜನತೆ ಹಲವಾರು ಬಾರಿ ಸರ್ಕಾರಕ್ಕೆ ಮನವಿ ನೀಡಿ ಈ ನರಗುಂದ ಪಟ್ಟಣವನ್ನು ಪ್ರವಾಸಿ ತಾಣವನ್ನಾಗಿ ಮಾಡಬೇಕೆಂದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಬಜೆಟ್‌ನಲ್ಲಿ ನರಗುಂದವನ್ನು ಪ್ರವಾಸಿ ತಾಣವನ್ನಾಗಿ ಮಾಡಲು ಸರ್ಕಾರ ಮುಂದಾಗಬೇಕು. ಅದಕ್ಕೆ ವಿಶೇಷ ಅನುದಾನ ನೀಡಬೇಕಿದೆ.
ಕೊನೆಯ ಹೊಲಗಳಿಗೆ ನೀರು ಸಿಗುತ್ತಿಲ್ಲ:
ಮಲಪ್ರಭಾ ನದಿ ಕಾಲುವೆಯಿಂದ ನೀರಾವರಿ ಸೌಲಭ್ಯ ಹೊಂದಿರುವ ನರಗುಂದ ತಾಲೂಕಿನ ಹುಣಿಸಿಕಟ್ಟಿ, ಕಲಕೇರಿ, ಬನಹಟ್ಟಿ, ಕುಲಗೇರಿ, ಸುರಕೋಡ, ಹದಲಿ, ಮುದ್ಗಣಕಿ, ಖಾನಾಪುರ, ಗಂಗಾಪುರ, ಭೈರನಹಟ್ಟಿ, ರಡ್ಡೇರ ನಾಗನೂರು, ಕಪ್ಪಲಿ, ಕಲ್ಲಾಪುರ, ಶಿರೋಳ ಮುಂತಾದ ಈ ಕೆಳಭಾಗದ ರೈತರ ಜಮೀನುಗಳಿಗೆ ಕಾಲುವೆ ನೀರು ಇದುವರೆಗೂ ಸರಿಯಾಗಿ ಸಿಗುತ್ತಿಲ್ಲ. ಪ್ರತಿ ವರ್ಷ ತೊಂದರೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆ ನೀಗಿಸಲು ಸರ್ಕಾರ ಬಜೆಟ್‌ನಲ್ಲಿ ಕಾಲುವೆ ನವೀಕರಣಕ್ಕೆ ಹೆಚ್ಚಿನ ಅನುದಾನ ನೀಡಿ ಕೆಳ ಭಾಗದ ರೈತರು ಜಮೀನುಗಳಿಗೆ ನೀರು ತಲುಪಿಸಲು ಮುಂದಾಗಬೇಕಿದೆ.
ಜನತೆ ಕೈಗಾರಿಕೆ ಸ್ಥಾಪನೆ ನಿರೀಕ್ಷೆ
ನರಗುಂದ ಶಾಸಕ ಸಿ.ಸಿ. ಪಾಟೀಲ ಈಗ ಸಣ್ಣ ಕೈಗಾರಿಕೆ ಸಚಿವರಾಗಿದ್ದು, ಬಜೆಟ್‌ನಲ್ಲಿ ಸರ್ಕಾರ ಗದಗ ಜಿಲ್ಲೆಗೆ ಕೈಗಾರಿಕೆ ಸ್ಥಾಪನೆ ಮಾಡಲು ಹೆಚ್ಚಿನ ಅನುದಾನ ನೀಡಿ ಸಣ್ಣ ಕೈಗಾರಿಕೆ ಸ್ಥಾಪನೆ ಮಾಡಿ ಹೆಚ್ಚಿನ ನಿರುದ್ಯೋಗ ಯುವಕರಿಗೆ ಉದ್ಯೋಗ ನೀಡಲು ಸಚಿವರು ಗಮನ ನೀಡಬೇಕಿದೆ. ಅದಕ್ಕಾಗಿ ಮುಖ್ಯಮಂತ್ರಿಗಳ ಗಮನ ಸೆಳೆಯಬೇಕಿದೆ.
ಮಹದಾಯಿ ಮೇಲುಸ್ತುವಾರಿ ಸಮಿತಿಗೆ ಕೃಷ್ಣೋಜಿರಾವ್ ನೇಮಕ
ಉತ್ತರ ಕರ್ನಾಟಕ ಭಾಗದ ರೈತ ಸಮುದಾಯ ಬಹುದಿನದ ಬೇಡಿಕೆಯಾದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಹಳ್ಳಗಲ್ಲಿ ಹರಿಯುವ ನೀರು ಪಡೆದುಕೊಳ್ಳಲು ಸರ್ಕಾರ ಈ ಬಜೆಟ್‌ನಲ್ಲಿ ಕ್ರಮ ತೆಗೆದುಕೊಳ್ಳವುದರ ಬಗ್ಗೆ ಘೋಷಣೆ ಮಾಡದಿದ್ದರೆ ನಾವು ಮುಂದಿನ ದಿನಗಳಲ್ಲಿ ರಾಜಕಾರಣಿಗಳ ಮನೆ ಮುಂದೆ ಅಹೋರಾತ್ರಿ ಧರಣಿ ಪ್ರಾರಂಭ ಮಾಡುತ್ತೇವೆ ಎಂದು ರೈತ ಸಂಘಟನೆಯ ಸಂಸ್ಥಾಪಕ ವೀರೇಶ ಸೊಬರದಮಠ ತಿಳಿಸಿದ್ದಾರೆ.
ಮಲಪ್ರಭಾ ನೀರಾವರಿ ಕಾಲುವೆಗಳಿಗೆ ಹೊಂದಿಕೊಂಡಿರುವ ರೈತರ ಜಮೀನುಗಳ ಕಬ್ಜಾ ಕಾಲಂನಲ್ಲಿ ಸರ್ಕಾರ ಎಂದು ನಮೂದಾಗಿರುವುದನ್ನು ತೆಗೆದು ಹಾಕಿ ರೈತರಿಗೆ ಕೃಷಿ ಸಾಲ ಸಿಗುವ ಹಾಗೆ ಕ್ರಮ ತೆಗೆದುಕೊಳ್ಳಬೇಕು ಎಂದು ರೈತ ಸೇನೆ ಕರ್ನಾಟಕ ರಾಜ್ಯಾಧ್ಯಕ್ಷ ಶಂಕ್ರಣ್ಣ ಅಂಬಲಿ ಹೇಳಿದ್ದಾರೆ.
ನರಗುಂದ ಪಟ್ಟಣವನ್ನು ಪ್ರವಾಸ ತಾಣ ಮಾಡಲು ಸರ್ಕಾರ ಈ ಬಜೆಟ್‌ನಲ್ಲಿ ಅನುದಾನ ನೀಡಿ ಬಾಬಸಾಹೇಬರ ಅರಮನೆ, ಕೋಟೆ, ದೇವಸ್ಥಾನ ಅಭಿವೃದ್ಧಿ ಮಾಡಲು ಬಜೆಟ್‌ನಲ್ಲಿ ಅನುದಾನ ನೀಡುವ ವಿಶ್ವಾಸವಿದೆ. ಸರ್ಕಾರ ನರಗುಂದ ಬಂಡಾಯ ನೆಲವನ್ನು ಪ್ರವಾಸ ತಾಣವನ್ನಾಗಿ ಮಾಡಬೇಕು. 1980ರಲ್ಲಿ ನೀರಿನ ಕರ ವಿರುದ್ಧ ಹೋರಾಟ ಮಾಡಿ ಪೊಲೀಸರ ಗುಂಡಿಗೆ ಬಲಿಯಾದ ಈರಪ್ಪ ಕಡ್ಲಿಕೊಪ್ಪವರ ವೀರಗಲ್ಲು ಖಾಸಗಿವರ ಜಾಗದಲ್ಲಿದೆ. ಈ ವೀರಗಲ್ಲು ಸ್ಥಾಪನೆ ಮಾಡಲು ಸರ್ಕಾರ ಹೆಚ್ಚಿನ ಅನುದಾನ, ಜಾಗ ನೀಡಲು ಮುಂದಾಗಬೇಕು ಎಂದು ಕೇಂದ್ರ ಕಳಸಾ ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ತಿಳಿಸಿದ್ದಾರೆ.