ಜಿಲ್ಲಾಡಳಿತದ ದಿವ್ಯ ನಿರ್ಲಕ್ಷ್ಯದಿಂದ ಹೋಮ ಮಂಟಪದಲ್ಲಿ ಮಾಂಸಾಹಾರ, ನಾವೇ ಕ್ರಮಕೈಗೊಳ್ತೀವಿ ಅಂತ ಎಚ್ವರಿಕೆ ನೀಡಿದ ಹಿಂದೂ ಬ್ರಿಗೇಡ್
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಅ.08): ಕಳೆದ ಮೂರು ತಿಂಗಳ ಹಿಂದಷ್ಟೆ ಹಿಂದೂ-ಮುಸ್ಲಿಮರ ಧಾರ್ಮಿಕ ಭಾವೈಕ್ಯತಾ ಕೇಂದ್ರಬಿಂದುವಾಗಿರೋ ಕಾಫಿನಾಡ ಇನಾಂ ದತ್ತಾತ್ರೇಯ ಬಾಬಾಬುಡನ್ ಗಿರಿ ದರ್ಗಾದಲ್ಲಿ ಮಾಂಸ ಬೇಸಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಆಗ, ಜಿಲ್ಲಾಡಳಿತ ಇಲ್ಲ ಇನ್ಮುಂದೆ ಹಾಗಾಗಲ್ಲ ಎಂದೇಳಿ ಹಿಂದೂ ಸಂಘಟಕರನ್ನ ತಣ್ಣಗಾಗಿಸಿತ್ತು. ಆದ್ರೀಗ, ಮತ್ತೆ ಅದೇ ಜಾಗದಲ್ಲಿ ಮಾಂಸ ಬೇಸಿರೋದು ಹಿಂದೂ ಸಂಘಟನೆಗಳು ಇದು ಜಿಲ್ಲಾಡಳಿತ ದಿವ್ಯ ನಿರ್ಲಕ್ಷ್ಯದ ಪರಮಾವಧಿ ಎಂದು ಕಿಡಿಕಾರಿದ್ದಾರೆ.
ಪೀಠದ ಆವರಣದ ಪಕ್ಕದಲ್ಲೇ ಮಾಂಸ ಸ್ವಚ್ಛತೆ
ಹಿಂದೂ-ಮುಸ್ಲಿಮರ ಪವಿತ್ರ ಧಾರ್ಮಿಕ ಕ್ಷೇತ್ರವೆಂದೇ ಗುರುತಿಸಿಕೊಂಡಿರುವ ಚಿಕ್ಕಮಗಳೂರಿನ ಇನಾಂ ದತ್ತಾತ್ರೇಯ ಪೀಠದ ಪಾವಿತ್ರತೆ ಹಾಳಾಗುತ್ತಿದೆ ಎಂದು ಹಿಂದೂ ಸಂಘಟನೆಗಳು ಆಕ್ರೋಶಗೊಂಡಿವೆ. ಕಳೆದ ಮೂರು ತಿಂಗಳ ಹಿಂದಷ್ಟೆ ದತ್ತಪೀಠದಲ್ಲಿ ದತ್ತಜಯಂತಿ ವೇಳೆ ಹೋಮ-ಹವನ ನಡೆಯುವ ಶೆಡ್‍ನಲ್ಲಿ ಪ್ರವಾಸಿಗರು ಮಾಂಸ ಬೇಸಿದ್ದರು. ವಿಡಿಯೋ ವೈರಲ್ ಆಗುತ್ತಿದ್ದಂತೆ ಹಿಂದೂ ಸಂಘಟನೆಗಳ ಕಣ್ಣು ಕೆಂಪಾಗಿತ್ತು. ಆಗ ಜಿಲ್ಲಾಡಳಿತ ಕೂಡ ಇನ್ಮುಂದೆ ಆ ರೀತಿಯಾಗದಂತೆ ಸೂಕ್ತ ಕ್ರಮಕೈಗೊಳ್ಳುತ್ತೇವೆಂದು ಭರವಸೆ ನೀಡಿತ್ತು. ಆದ್ರೀಗ, ದತ್ತಪೀಠದಲ್ಲಿ ಮತ್ತೆ ಮಾಂಸ ಬೇಸಿರುವ ವಿಡಿಯೋ ವೈರಲ್ ಆಗಿದ್ದು ಹಿಂದೂ ಬ್ರಿಗೇಡ್ ಕಾರ್ಯಕರ್ತರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಸರ್ಕಾರ ಅಂದು ಕೊಟ್ಟ ಮಾತನ್ನ ಉಳಿಸಿಕೊಂಡಿಲ್ಲ. ಸರ್ಕಾರದ ನಿರ್ಲಕ್ಷ್ಯದಿಂದಲೇ ಪ್ರವಾಸಿಗರು ಪುಣ್ಯಕ್ಷೇತ್ರದಲ್ಲಿ ಎಲ್ಲೆಂದರಲ್ಲಿ ಮಾಂಸವನ್ನ ಕಡಿದು, ಬೇಯಿಸುತ್ತಿದ್ದಾರೆ. ಕೂಡಲೇ ದತ್ತಪೀಠದಲ್ಲಿ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಹಿಂದು ಬ್ರಿಗೇಡ್ ನ ಸಂಚಾಲಕ ಪ್ರವೀಣ್ ಖಾಂಡ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
CHIKKAMAGALURU : ಹವಾಮಾನ ವೈಪರೀತ್ಯದಿಂದಾಗಿ ಬೆಳೆಗಾರರು ಬೀದಿ ಪಾಲು
ಇನ್ಮುಂದೆ ಹೀಗಾದರೆ ಉತ್ತರ ಕೊಡೋದಕ್ಕೆ ನಾವು ಸಿದ್ಧ
ದತ್ತಪೀಠ ಟೂರಿಸ್ಟ್ ಸ್ಪಾಟ್ ಅಲ್ಲ. ಟೂರಿಸ್ಟ್ ಸ್ಪಾಟ್ ಬೇಕು ಅಂದ್ರೆ ಗಿರಿಶ್ರೇಣಿಯಲ್ಲಿ ಬೇರೆ ಸ್ಥಳಗಳು ಇವೆ. ಎರಡು ಕೋಮುಗಳು ಕೂಡ ದತ್ತಪೀಠವನ್ನ ಧಾರ್ಮಿಕ ಕ್ಷೇತ್ರ ಎಂದು ನಂಬಿವೆ. ಹೋಮ-ಹವನಕ್ಕೆ ಸರ್ಕಾರವೇ ತಾತ್ಕಾಲಿಕ ಶೆಡ್ ನಿರ್ಮಿಸಿಕೊಟ್ಟಿದೆ. ಅಲ್ಲಿ ಈ ರೀತಿ ಮಾಂಸ ಬೇಯಿಸಿದರೆ ಅದು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರಲಿದೆ. ಎಲ್ಲಿಂದಲೋ ಬರುವ ಪ್ರವಾಸಿಗರು ಯಾವುದ್ಯಾವುದೋ ಮಾಂಸವನ್ನ ತಂದು ಅಡಿಗೆ ಮಾಡಿ ಬಿಸಾಡಿ ಹೋಗುತ್ತಾರೆ. ಆದರೆ, ಅಲ್ಲೇ ಇರುವ ಪೊಲೀಸರು ಏನ್ ಮಾಡುತ್ತಾರೋ ಗೊತ್ತಿಲ್ಲ ಎಂದು ಪೊಲಿಸರ ವಿರುದ್ಧವೂ ಅಸಾಮಾಧಾನ ಹೊರಹಾಕಿದ್ದಾರೆ. ಮುಸ್ಲಿಮರು ನಮಾಜ್ ಮಾಡುವ 200 ಮೀಟರ್ ದೂರದಲ್ಲಿ ಬಹುಸಂಖ್ಯಾತ ಹಿಂದೂಗಳು ತಿನ್ನುವ ಪದಾರ್ಥವನ್ನ ತಿನ್ನೋದಕೆ ಬಿಡುತ್ತಾರಾ ಅವರು ಎಂದು ಹಿಂದೂ ಬ್ರಿಗೇಡ್ ಪ್ರಶ್ನಿಸಿದೆ. ಈಗ ಜಿಲ್ಲಾಡಳಿತ ಅಲ್ಲಿ ಬ್ಯಾರಿಕೇಡ್ ಹಾಕಿ, ಶೆಡ್‍ಗೆ ಕಂಬಗಳನ್ನ ಕಟ್ಟಿ ಬಂದೋಬಸ್ತ್ ಮಾಡಿದೆ. ಆದರೆ, ಇದು ಕಣ್ಣೋರೆಸುವ ತಂತ್ರ. ಇನ್ಮುಂದೆ ಹೀಗಾದರೆ ಉತ್ತರ ಕೊಡೋದಕ್ಕೆ ನಾವು ಸಿದ್ಧ ಎಂದು ಎಚ್ಚರಿಸಿದ್ದಾರೆ. ಒಟ್ಟಿನಲ್ಲಿ ಸರ್ಕಾರ ಕೂಡಲೇ ಯಾರ ಭಾವನೆಗಳಿಗೂ ಧಕ್ಕೆಯಾಗದಂತೆ ಸೂಕ್ತ ಕ್ರಮಕೈಗೊಳ್ಳೋದು ಒಳ್ಳೆಯದು ಅನ್ಸತ್ತೆ. ಆ ನಿಟ್ಟಿನಲ್ಲಿ ಜಿಲ್ಲಾಡಳಿತ ಕೂಡ ಯೋಚಿಸಬೇಕಾಗಿದೆ.