Chikkamagaluru : ಹವಾಮಾನ ವೈಪರೀತ್ಯದಿಂದಾಗಿ ಬೆಳೆಗಾರರು ಬೀದಿ ಪಾಲು
ಕಾಫಿನಾಡಿನಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಬೆಳೆಗಾರರು ನಾಲ್ಕೈದು ವರ್ಷಗಳಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಅ.8): ಕಾಫಿನಾಡಿನಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಬೆಳೆಗಾರರು ನಾಲ್ಕೈದು ವರ್ಷಗಳಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಾಫಿ ಬೆಳೆಗೆ ಹೆಸರಾಗಿರುವ ಜಿಲ್ಲೆಯೂ ಈ ಬೆಳೆಯೊಂದಿಗೆ ಅಡಿಕೆ ಬೆಳೆಯೂ ಜಿಲ್ಲೆಯ ಮುಖ್ಯ ಬೆಳೆಯಾಗಿದೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ಯಥೇಚ್ಛವಾಗಿ ಬೆಳೆಯಲಾಗುತ್ತಿದ್ದ ಕಾಫಿ ಬೆಳೆ ಇತ್ತೀಚಿನ ವರ್ಷಗಳಲ್ಲಿ ಬಯಲು ಭಾಗದಲ್ಲೂ ಬೆಳೆಯಲಾಗುತ್ತಿದೆ. ಅಡಿಕೆ ಬೆಳೆ ನಂಬಿ ಸಾವಿರಾರು ರೈತರು, ಬೆಳೆಗಾರರು ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಇಂದು ಆ ಬದುಕು ಮೂರಾಬಟ್ಟೆಯಾಗಿದೆ. ಕಾಫಿ ಮತ್ತು ಅಡಿಕೆ ಬೆಳೆಗೆ ಕಳೆದ ನಾಲ್ಕು ವರ್ಷಗಳಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ ಅತಿವೃಷ್ಟಿ ಹೆಚ್ಚು ನಷ್ಟವನ್ನುಂಟುಮಾಡಿದ್ದು, ಸದ್ಯ ಕೇಂದ್ರ ಸರ್ಕಾರ ಅಡಿಕೆಯನ್ನು ಭೂತಾನ್ನಿಂದ ಆಮದು ಮಾಡಿಕೊಳ್ಳಲು ಮುಂದಾಗಿರುವುದು ಅಡಿಕೆ ಬೆಳೆಗಾರರ ಗೋಳು ಹೇಳತೀರದಾಗಿದೆ.ಮಲೆನಾಡಿನ ಮೂಡಿಗೆರೆ, ಕೊಪ್ಪ, ಶೃಂಗೇರಿ, ಕಳಸ ಭಾಗದಲ್ಲಿ ಅಡಿಕೆ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಕಾಫಿ, ಕಾಳುಮೆಣಸಿನೊಂದಿಗೆ ಅಡಿಕೆಯನ್ನು ಈ ಭಾಗದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಮಲೆನಾಡಿನ ಸಾಂಪ್ರದಾಯಿಕ ಕೃಷಿಯಾಗಿರುವ ಅಡಿಕೆ ಕೃಷಿ ಮಲೆನಾಡಿನ ರೈತರ ಆದಾಯದ ಮೂಲವಾಗಿದ್ದು, ಪ್ರತಿ ವರ್ಷ ಉತ್ತಮ ಧಾರಣೆಯನ್ನು ಕಾಯ್ದುಕೊಂಡಿರುವ ಅಡಿಕೆ ಬೆಳೆ ನಂಬಿದವರನ್ನು ಇಂದಿಗೂ ಕೈಬಿಟ್ಟಿಲ್ಲ.ಅಡಿಕೆಬೆಳೆದು ಕೈಸುಟ್ಟುಕೊಂಡ ನಿದರ್ಶನಗಳಿಲ್ಲ. ಅಡಿಕೆಗಿರುವ ಉತ್ತಮ ಬೆಲೆಯಿಂದ ಹಿಂದೆ ಮಲೆನಾಡು ಭಾಗದಲ್ಲಿ ಮಾತ್ರ ಕಂಡು ಬರುತ್ತಿದ್ದ ಅಡಿಕೆ ಕೃಷಿ ಬಯಲು ಭಾಗವನ್ನೂ ಆಕ್ರಮಿಸಿಕೊಂಡಿದ್ದು, ಸದ್ಯ ಬಯಲು ಭಾಗದ ಕೃಷಿಕರು ಅಡಿಕೆ ಕೃಷಿಯತ್ತ ಮುಖಮಾಡುವ ಮೂಲಕ ಹೆಚ್ಚೆಚ್ಚು ಬೆಳೆಯಲು ಮುಂದಾಗಿದ್ದಾರೆ.
ಉತ್ತಮ ಧಾರಣೆ ನಡುವೆಯೂ ಇಳುವರಿ ಕಡಿಮೆ: ಅಡಿಕೆಗೆ ಪ್ರತಿ ವರ್ಷ ಉತ್ತಮ ಧಾರಣೆ ಇದೆಯಾದರೂ ಅತಿವೃಷ್ಟಿಯಿಂದಾಗಿ ಕೆಲವು ವರ್ಷಗಳಿಂದ ಅಡಿಕೆ ಇಳುವರಿ ಕಡಿಮೆಯಾಗಿದೆ. ಭಾರೀ ಮಳೆಯಿಂದಾಗಿ ಅಡಿಕೆ ಕಾಯಿಗಳು ಕೊಳೆ ರೋಗಕ್ಕೆ ತುತ್ತಾಗಿ ಮಣ್ಣು ಪಾಲಾಗುತ್ತಿದೆಯಾದರೂ ಅಡಿಕೆ ಉತ್ಪಾದನೆಯಲ್ಲಿ ಕೊರತೆ ಉಂಟಾಗಿಲ್ಲ.
ಅಡಿಕೆ ಎಲೆ ಚುಕ್ಕಿರೋಗ, ಹಳದಿ ಎಲೆ ರೋಗದಿಂದ ಬೆಳೆಗಾರರು ತತ್ತರಿಸಿ ಹೋಗುತ್ತಿದ್ದಾರೆ. ವಾಡಿಕೆ ಮಳೆಗಿಂತ ಹೆಚ್ಚು ಮಳೆ ಸುರಿದ ಸಂದರ್ಭಗಳಲ್ಲಿ ಅಡಿಕೆ ಬೆಳೆ ಕೊಳೆ ರೋಗಕ್ಕೆ ತುತ್ತಾಗುವುದು ಸಾಮಾನ್ಯವಾಗಿತ್ತು. ಕೊಳೆ ರೋಗ ನಿಯಂತ್ರಣಕ್ಕೆ ಬೋರ್ಡೊ ದ್ರಾವಣ ಸಿಂಪಡಣೆ ಮಾಡುವುದರಿಂದ ರೋಗ ನಿಯಂತ್ರಣಕ್ಕೆ ಬರುತ್ತದೆ, ಆದರೆ ಸದ್ಯ ಮಲೆನಾಡು ಭಾಗದಲ್ಲಿ ಅಡಿಕೆ ಎಲೆಚುಕ್ಕಿ ರೋಗ, ಹಳದಿ ಎಳೆ ರೋಗ ಅಧಿಕಗೊಂಡು ಅಡಿಕೆ ಮರಗಳ ಎಲೆಗಳು ಒಣಗಿ ಇಡೀ ಮರವೇ ಒಣಗಿ ಸಾಯುತ್ತವೆ. ಈ ರೋಗಗಳು ಎಂತಹ ಕೀಟನಾಶಕಕ್ಕೂ ಬಗ್ಗದ ಪರಿಣಾಮ ಅಡಿಕೆ ತೋಟಗಳೇ ನಾಶವಾಗುವಂತಹ ಸಂದರ್ಭ ಎದುರಾಗಿದೆ.
ಅಡಿಕೆ ಬೆಳೆಗೆ ಸದ್ಯ ಮಾರುಕಟ್ಟೆಯಲ್ಲಿ ಸದ್ಯ ಉತ್ತಮ ಧಾರಣೆ ಇದೆಯಾದರೂ ಅಡಿಕೆ ಬೆಳೆಗಾರರು ಎಲೆ ಚುಕ್ಕಿ ರೋಗ, ಹಳದಿ ಎಲೆ ರೋಗದಿಂದ ಕಂಗಾಲಾಗಿದ್ದಾರೆ. ಈ ರೋಗಗಳಿಂದಾಗಿ ಈ ಅಡಿಕೆ ಇಳುವರಿ ಪ್ರಮಾಣ ಕಡಿಮೆಯಾಗುವ ಆತಂಕ ಬೆಳೆಗಾರರದ್ದಾಗಿದ್ದು, ರೋಗಗಳ ನಿಯಂತ್ರಣಕ್ಕೆ ಸರಕಾರಕ್ಕೆ ಕೃಷಿ, ತೋಟಗಾರಿಕೆ ಇಲಾಖೆಗಳ ಮೂಲಕ ಅಗತ್ಯ ಕ್ರಮವಹಿಸುತ್ತಿಲ್ಲ ಎಂಬ ಕೂಗಿನ ಮಧ್ಯೆ ಇತ್ತೀಚೆಗೆ ಕೇಂದ್ರ ಸರಕಾರ ಭೂತಾನ್ ದೇಶದಿಂದ 17 ಸಾವಿರ ಟನ್ ಅಡಿಕೆ ಆಮದಿಗೆ ಮುಂದಾಗಿರುವುದು ಮಲೆನಾಡಿ ಅಡಿಕೆ ಬೆಳೆಗಾರರ ಗಾಯದ ಮೇಲೆ ಬರೆ ಎಳದಂತಾಗಿದೆ.
ಕೇಂದ್ರದ ಅಡಿಕೆ ಆಮದು ನೀತಿಯಿಂದಾಗಿ ದೇಶದ ಅಡಿಕೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಉಂಟಾಗಿ ಭಾರಿ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ ಅಡಿಕೆ ಆಮದು ಆದೇಶ ಹೊರಡಿಸಿದಾಗಿನಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಅಡಿಕೆ ಬೆಳೆ ಧಾರಣೆ ದಿನದಿಂದ ದಿನಕ್ಕೆ ಕುಸಿಯಲಾರಂಭಿಸಿದೆ. ಈಗಿನ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಪ್ರತೀ ಕ್ವಿಂಟಾಲ್ಗೆ 40_50 ಸಾವಿರ ರೂ.ಗಳಾಗಿದೆ.ಧಾರಣೆ ಇನ್ನೂ ಹೆಚ್ಚಾಗುವ ನಿರೀಕ್ಷೆಯಿಂದಾಗಿ ಸಣ್ಣ, ಅತೀ ಸಣ್ಣ ರೈತರು ಕಳೆದ ವರ್ಷ ಕಟಾವು ಮಾಡಿದ್ದ ಅಡಿಕೆಯನ್ನು ಇನ್ನೂ ಮಾರಾಟ ಮಾಡಿಲ್ಲ. ಧಾರಣೆ ಹೆಚ್ಚಾಗಿ ಒಂದಿಷ್ಟು ಲಾಭದ ನಿರೀಕ್ಷೆಯಲ್ಲಿದ್ದ ಇಂತಹ ರೈತರಿಗೆ ಈಗ ಅಡಿಕೆ ಮಾರುಕಟ್ಟೆಯಲ್ಲಿ ಧಾರಣೆ ಕುಸಿಯುತ್ತಿರುವುದು ಆತಂಕ ಮೂಡಿಸಿದೆ.
ಮಲೆನಾಡಿನಲ್ಲಿ ಐದು ಕಾಡಾನೆಗಳಿಂದ ಭೀತಿ, ಆನೆ ಹಾವಳಿಗೆ ಹೈರಾಣದ ಜನ!
ಕೇಂದ್ರ ಸರ್ಕಾರ ಅಡಿಕೆ ಆಮದಿಗೆ ಮುಂದಾಗಿರುವುದರಿಂದ ಮಾರುಕಟ್ಟೆಯಲ್ಲಿ ಇದುವರೆಗೂ ಸ್ಥಿರತೆ ಕಾಯ್ದುಕೊಂಡಿದ್ದ ಅಡಿಕೆ ಧಾರಣೆ ಇಳಿಮುಖ ಕಾಣುತ್ತಿದೆ. ವಿದೇಶಗಳಿಂದ ಅಡಿಕೆ ದೇಶದ ಮಾರುಕಟ್ಟೆ ಪ್ರವೇಶಕ್ಕೂ ಮುನ್ನ ಅಡಿಕೆ ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗಿದ್ದು, ವಿದೇಶಿ ಅಡಿಕೆ ದೇಶದ ಮಾರುಕಟ್ಟೆ ಪ್ರವೇಶಿಸಿದಲ್ಲಿ ಅಡಿಕೆ ಧಾರಣೆ ಪಾತಾಳಕ್ಕಿಳಿಯಲಿದೆ ಎಂಬ ಭೀತಿ ಎದುರಾಗಿದೆ.
CHIKKAMAGALURU; ಅಡಕೆಎಲೆ ಚುಕ್ಕಿ ರೋಗಕ್ಕೆ ರೈತನ ಮೊದಲ ಬಲಿ!
ಈ ಹಿಂದೆ ರಾಜ್ಯದಲ್ಲಿ ಬೆಳೆಯುತ್ತಿದ್ದ ಕಾಳುಮೆಣಸಿಗೆ 500ರಿಂದ700 ರೂ. ಬೆಲೆ ಇತ್ತು. ಅಡಿಕೆ, ಕಾಫಿಯೊಂದಿಗೆ ಕಾಳುಮೆಣಸು ಬೆಳೆಯುವ ಸಣ್ಣ, ಅತಿಸಣ್ಣ ಬೆಳೆಗಾರರ ಪಾಲಿಗೆ ಅಂದಿನ ಕಾಳುಮೆಣಸು ಧಾರಣೆ ಬದುಕಿಗೆ ಆಧಾರವಾಗಿತ್ತು. ಆದರೆ ಕೇಂದ್ರ ಸರ್ಕಾರ 5 ವರ್ಷಗಳ ಹಿಂದೆ ವಿದೇಶಗಳಿಂದ ಕಾಳುಮೆಣಸು ಆಮದು ಮಾಡಿಕೊಂಡ ಪರಿಣಾಮ ಮಾರುಕಟ್ಟೆಯಲ್ಲಿ ಕಾಳುಮೆಣಸು ಬೆಲೆ 200ರಿಂದ 250 ರೂ.ಗೆ ಕುಸಿದಿದೆ. ಅಡಿಕೆ ಆಮದು ನೀತಿಯನ್ನು ಕೇಂದ್ರ ಸರಕಾರ ಕೈಬಿಡಬೇಕೆಂದು ಆಗ್ರಹಿಸಿದ್ದಾರೆ.