ವರ್ತಕರು, ವಿವಿಧ ವ್ಯಾಪಾರಿ ಸಂಘ-ಸಂಸ್ಥೆಗಳ ಸಭೆಯಲ್ಲಿ ಆರ್ಥಿಕ ಚಟುವಟಿಕೆಗೆ ವ್ಯಾಪಕ ಮನವಿ ಕೇಳಿ ಬಂದ ಹಿನ್ನೆಲೆಯಲ್ಲಿ ದಾವಣಗೆರೆ ಕೆಂಪು ವಲಯದಲ್ಲಿದ್ದರೂ ಸರ್ಕಾರದ ಷರತ್ತುಗಳಿಗೆ ಒಳಪಟ್ಟು ಕೆಲ ಆರ್ಥಿಕ ಚಟುವಟಿಕೆ ಕೈಗೊಳ್ಳಲು ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಕಾಲಾವಕಾಶ ನೀಡಲಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ದಾವಣಗೆರೆ(ಮೇ.13): ದಾವಣಗೆರೆ ಕೆಂಪು ವಲಯದಲ್ಲಿದ್ದರೂ ಕೋವಿಡ್ ನಿಯಂತ್ರಣಕ್ಕೆ ಸರ್ಕಾರದ ಷರತ್ತುಗಳಿಗೆ ಒಳಪಟ್ಟು ಕೆಲ ಆರ್ಥಿಕ ಚಟುವಟಿಕೆ ಕೈಗೊಳ್ಳಲು ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಜಿ.ಬೀಳಗಿ ತಿಳಿಸಿದರು.
ಡಿಸಿ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವರ್ತಕರು, ವಿವಿಧ ವ್ಯಾಪಾರಿ ಸಂಘ-ಸಂಸ್ಥೆಗಳ ಸಭೆಯಲ್ಲಿ ಆರ್ಥಿಕ ಚಟುವಟಿಕೆಗೆ ವ್ಯಾಪಕ ಮನವಿ ಕೇಳಿ ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಕೆಂಪು ವಲಯವಿದ್ದರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ, ಶುಚಿತ್ರ, ಮಾಸ್ಕ್ ಧರಿಸುವಿಕೆ ಸೇರಿದಂತೆ ಕೋವಿಡ್ ನಿಯಂತ್ರಣದ ಸರ್ಕಾರದ ಷರತ್ತಿಗೊಳಪಟ್ಟು ಆರ್ಥಿಕ ಚಟುವಟಿಕೆಗಳಾದ ಇಂಡಸ್ಟ್ರಿಯಲ್ ಏರಿಯಾ, ಗ್ರಾಮಾಂತರ ಕೈಗಾರಿಕೆಗಳು, ರಫ್ತು, ಅಗತ್ಯ ವಸ್ತುಗಳ ಅಂಗಡಿಗಳು, ಸಣ್ಣಪುಟ್ಟಬಟ್ಟೆಅಂಗಡಿ, ಸ್ಟುಡಿಯೋ, ಮೆಕ್ಯಾನಿಕ್ ಶಾಪ್, ಉತ್ಪಾದನಾ ಘಟಕ, ಇ-ಕಾಮರ್ಸ್, ಸರ್ಕಾರಿ ಕಚೇರಿ, ಶೇ.33 ಸಿಬ್ಬಂದಿಯೊಂದಿಗೆ ಖಾಸಗಿ ಕಚೇರಿಗಳನ್ನು ಆರಂಭಿಸಬಹುದು ಎಂದು ಹೇಳಿದರು.
ದಾವಣಗೆರೆ ನಗರದಲ್ಲಿ 12 ಹೊಸ ಕೇಸ್: ಆತಂಕ
ಆರ್ಥಿಕ ಚಟುವಟಿಕೆದಾರರು ಪಾಲಿಕೆಗೆ ಸ್ವಯಂ ಘೋಷಣಾ ಮುಚ್ಚಳಿಕೆ ಬರೆದು, ಚಟುವಟಿಕೆ ಆರಂಭಿಸಬೇಕು. ಕೋವಿಡ್ ನಿಯಂತ್ರಣ ಕುರಿತಾದ ಸರ್ಕಾರದ ನಿಯಮ ಉಲ್ಲಂಘಿಸಿದಲ್ಲಿ ಮೊದಲ ಎರಡು ಬಾರಿ ಎಚ್ಚರಿಕೆ ನೀಡಿ, ಮೂರನೇ ಬಾರಿಗೆ ಪಾಲಿಕೆಗೆ ಆದೇಶಿಸಿ, ಅಂತಹ ಸಂಸ್ಥೆ, ಅಂಗಡಿ, ಕಚೇರಿಯನ್ನು ಸೀಲ್ ಮಾಡಿಸಲಾಗುವುದು ಎಂದು ಅವರು ಎಚ್ಚರಿಸಿದರು.
ಸರ್ಕಾರದ ಮೇ 1 ಮತ್ತು 2ರ ಮಾರ್ಗಸೂಚಿಯಂತೆ ಯಾವುದೇ ವಲಯವಿದ್ದರೂ ಅಂತರ ಜಿಲ್ಲೆ, ರಾಜ್ಯ ಸಾರಿಗೆ, ವಿಮಾನಯಾನ, ಶಾಲಾ-ಕಾಲೇಜು, ಸಿನಿಮಾ ಮಂದಿರ, ಪಾರ್ಕ್, ಧರ್ಮ ಸಭೆಗಳು, ಇತರೆ ಸಭೆ, ಸಮಾರಂಭಗಳು, ಪ್ರಾರ್ಥನಾ ಮಂದಿರಗಳು, ದೇವಸ್ಥಾನಗಳಲ್ಲಿ ಸೇರುವುದು, ಶಾಪಿಂಗ್ ಮಾಲ್‌ಗಳು, ಮನರಂಜನಾ ಸ್ಥಳಗಳು, ಕ್ಷೌರದ ಅಂಗಡಿಗಳು, ಜಿಮ್, ಬಾರ್ ಸೇರಿದಂತೆ ಜನಸಂದಣಿ ಆಗುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಕಟ್ಟುನಿಟ್ಟಿನ ಕಟ್ಟುಪಾಡುಗಳೊಂದಿಗೆ ಆರ್ಥಿಕ ಚಟುವಟಿಕೆಗೆ ಕೆಂಪು ವಲಯದಲ್ಲಿದ್ದರೂ ಅವಕಾಶ ನೀಡುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಸಾಮಾಜಿಕ ಅಂತರ, ಶುಚಿತ್ವ ಕಾಪಾಡಿಕೊಂಡು ವಹಿವಾಟು ನಡೆಸಬೇಕು. ಯಾವುದೇ ಕಾರಣಕ್ಕೂ ನಿಯಮಗಳ ಉಲ್ಲಂಘನೆ ಸಹಿಸುವುದಿಲ್ಲ. ಬೇಜವಾಬ್ಧಾರಿ, ನಿರ್ಲಕ್ಷ್ಯ, ಅಸಡ್ಡೆ ತೋರಿದರೆ ಅದನ್ನು ಕ್ಷಮಿಸುವುದೂ ಇಲ್ಲ. ಅಂತಹವರ ವಿರುದ್ಧ ಕ್ರಮ ನಿಶ್ಚಿತ. - ಮಹಾಂತೇಶ ಬೀಳಗಿ, ಜಿಲ್ಲಾಧಿಕಾರಿ