ರಾಜಕೀಯ ಮಾಡುವವರು ಮಾಡಿಕೊಳ್ಳಲಿ. ನಗರದಲ್ಲಿ ನೀರಿಗೆ ಅವರು ಹೇಳುತ್ತಿರುವಷ್ಟು ಹಾಹಾಕಾರ ಇಲ್ಲ. ಕಳೆದ ಮೂವತ್ತು ನಲವತ್ತು ವರ್ಷಗಳಿಂದ ಇಂತಹ ಬರ ಇರಲಿಲ್ಲ. ಹಾಗಾಗಿ ನೀರಿನ ಸಮಸ್ಯೆ ನಿಬಾಯಿಸಲು ಮುಂಜಾಗ್ರತೆಯಾಗಿ ಹಲವು ಕ್ರಮ ಕೈಗೊಳ್ಳಲಾಗಿದೆ. ಕಾವೇರಿ ನೀರು ಎಲ್ಲಿಗೆ ಒದಗಿಸಬೇಕೊ ಅಲ್ಲಿಗೆ ಒದಗಿಸುತ್ತಿದ್ದೇವೆ. ಉಳಿದ ಕಡೆ ನೀರಿನ ಟ್ಯಾಂಕರ್‌ಗಳ ಮೂಲಕ ನೀರು ಕೊಡುವ ಕೆಲಸ ಮಾಡುತ್ತಿದ್ದೇವೆ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಬೆಂಗಳೂರು(ಮಾ.12): ರಾಜಧಾನಿ ಬೆಂಗಳೂರಿನಲ್ಲಿ ಬಿಜೆಪಿಯವರು ಹೇಳುತ್ತಿರುವಷ್ಟು ನೀರಿಗೆ ಹಾಹಾಕಾರ ಇಲ್ಲ. ತಮಿಳುನಾಡಿಗೆ ನೀರು ಬಿಡುವ ಪ್ರಶ್ನೆಯೂ ಇಲ್ಲ. ಅವರು ಅನಗತ್ಯವಾಗಿ ರಾಜಕೀಯ ಮಾಡುತ್ತಿದ್ದಾರೆ, ಮಾಡಿಕೊಳ್ಳಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ವಿಧಾನಸೌಧದಲ್ಲಿ ಸೋಮವಾರ ‘ನಂಬಿಕೆ ನಕ್ಷೆ’ ಯೋಜನೆ ಕುರಿತ ಮಾಹಿತಿ ನೀಡಲು ಆಯೋಜಿಸಿದ್ದ ಸುದ್ದಿಗೋಷ್ಠಿ ವೇಳೆ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ರಾಜಕೀಯ ಮಾಡುವವರು ಮಾಡಿಕೊಳ್ಳಲಿ. ನಗರದಲ್ಲಿ ನೀರಿಗೆ ಅವರು ಹೇಳುತ್ತಿರುವಷ್ಟು ಹಾಹಾಕಾರ ಇಲ್ಲ. ಕಳೆದ ಮೂವತ್ತು ನಲವತ್ತು ವರ್ಷಗಳಿಂದ ಇಂತಹ ಬರ ಇರಲಿಲ್ಲ. ಹಾಗಾಗಿ ನೀರಿನ ಸಮಸ್ಯೆ ನಿಬಾಯಿಸಲು ಮುಂಜಾಗ್ರತೆಯಾಗಿ ಹಲವು ಕ್ರಮ ಕೈಗೊಳ್ಳಲಾಗಿದೆ. ಕಾವೇರಿ ನೀರು ಎಲ್ಲಿಗೆ ಒದಗಿಸಬೇಕೊ ಅಲ್ಲಿಗೆ ಒದಗಿಸುತ್ತಿದ್ದೇವೆ. ಉಳಿದ ಕಡೆ ನೀರಿನ ಟ್ಯಾಂಕರ್‌ಗಳ ಮೂಲಕ ನೀರು ಕೊಡುವ ಕೆಲಸ ಮಾಡುತ್ತಿದ್ದೇವೆ. ಈಗಾಗಲೇ 1500 ಟ್ಯಾಂಕರ್‌ಗಳ ನೋಂದಣಿಯಾಗಿದೆ. ಉಳಿದವರಿಗೆ ಸಮಯ ನೀಡಲಾಗಿದೆ. ಖಾಸಗಿ ಟ್ಯಾಂಕರ್‌ಗಳಿಗೆ ನೀರಿನ ದರ ನಿಗದಿಮಾಡಿದ್ದೇವೆ. ಒಟ್ಟಾರೆ ನೀರಿನ ಮಾಫಿಯಾಗೆ ಬ್ರೇಕ್ ಹಾಕಿದ್ದೇವೆ ಎಂದು ತಿಳಿಸಿದರು.
ನಗರದಲ್ಲಿ 14 ಸಾವಿರ ಕೊಳವೆ ಬಾವಿಗಳಲ್ಲಿ 7 ಸಾವಿರ ಬತ್ತಿಹೋಗಿವೆ. ಹೊಸ ಬೋರ್‌ವೆಲ್‌ಗೆ ಅನುಮತಿ ಪಡೆಯಬೇಕಿರುವುದರಿಂದ ಬತ್ತಿ ಹೋಗಿರುವ ಬೋರ್‌ವೆಲ್‌ಗಳ ಮರು ಡ್ರಿಲ್ಲಿಂಗ್‌ಗೆ ವ್ಯವಸ್ಥೆ ಮಾಡುತ್ತಿದ್ದೇವೆ. ಕೊಳಗೇರಿಗಳಿಗೆ ಬಾಡಿಗೆ ದರದಲ್ಲಿ ನೀರನ್ನು ಪೂರೈಸುತ್ತಿದ್ದೇವೆ. ಅಪಾರ್ಟ್‌ಮೆಂಟ್‌ಗಳಲ್ಲಿ ಮಿತ ನೀರು ಬಳಕೆಗೆ ಸಭೆ ಮಾಡಿ ಸೂಚಿಸಿದ್ದೇವೆ. ಇದೆಲ್ಲದರ ಜೊತೆಗೆ ಬೆಂಗಳೂರು, ಮಾಗಡಿ, ದೊಡ್ಡಬಳ್ಳಾಪುರ, ನೆಲಮಂಗಲದಲ್ಲಿ ಇರೋ ನೀರಿನ ಮೂಲಗಳನ್ನು ಹುಡುಕಿದ್ದೇವೆ. ಅಗತ್ಯ ಬಿದ್ದರೆ ಅಲ್ಲಿಂದಲೂ ನೀರು ತರುವ ಕೆಲಸ ಮಾಡುತ್ತೇವೆ ಎಂದರು.
ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವ ಬಗೆಗಿನ ಪ್ರಶ್ನೆಗೆ, ನಮಗೇ ನೀರಿನ ಅಭಾವ ಇರುವಾಗ ತಮಿಳುನಾಡಿಗೆ ನೀರು ಬಿಡುವ ಪ್ರಶ್ನೆಯೇ ಇಲ್ಲ. ತೊರೆಕಾಡನಹಳ್ಳಿಯಲ್ಲಿ ನೀರಿನ ಪ್ರಮಾಣ ಕಡಿಮೆ ಆಗಿತ್ತು. ಆ ನೀರನ್ನು ಅನಿವಾರ್ಯವಾಗಿ ಅಲ್ಲಿಗೆ ತುಂಬಿಸಬೇಕಿತ್ತು. ಅದಕ್ಕೆ ಪ್ರತ್ಯೇಕ ಲೇನ್ ಇದೆ, ಹೋಗಿ ನೋಡಿದರೆ ಎಲ್ಲ ಗೊತ್ತಾಗುತ್ತದೆ. ಪ್ರತಿಯೊಂದಕ್ಕೂ ಲೆಕ್ಕ ಇದೆ. ಬಿಜೆಪಿಯವರು ರಾಜಕೀಯಕ್ಕಾಗಿ ಇಲ್ಲಿ ಪ್ರತಿಭಟನೆ ಮಾಡೋದು ಬಿಟ್ಟು ದೆಹಲಿಗೆ ಹೊಗಿ ಮೇಕೆದಾಟು ಯೋಜನೆ, ಮಹದಾಯಿ ಯೋಜನೆಗೂ ಅನುಮತಿ ನೀಡಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲಿ ಎಂದು ಹೇಳಿದರು.