ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಜನ ಕೊರೋನಾದ ಅರಿವೇ ಇಲ್ಲವೇನೋ ಎಂಬಂತೆ ವರ್ತಿಸುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ ಜತಗೆ ರಸ್ತೆಯಲ್ಲಿ ನಿರ್ಭಯವಾಗಿ ಓಡಾಡುತ್ತಿದ್ದಾರೆ. ಕಾಫಿನಾಡಿಗರು ಎಚ್ಚರ ತಪ್ಪುತ್ತಿದ್ದಾರಾ ಎನ್ನುವ ಅನುಮಾನ ದಟ್ಟವಾಗತೊಡಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ಚಿಕ್ಕಮಗಳೂರು(ಮೇ.06): ಕೊರೋನಾ ವೈರಸ್ ನಿಯಂತ್ರಣದ ಸಂಬಂಧ ವಿಧಿಸಿರುವ ಲಾಕ್ ಡೌನ್ ಜಿಲ್ಲೆಯಲ್ಲಿ ಮುಂದುವರಿದಿದ್ದರೂ ಜನರು ನಿರ್ಭಯಾವಾಗಿ ಓಡಾಡುತ್ತಿದ್ದಾರೆ.
ಲಾಕ್ ಡೌನ್ ಬೆಳಗ್ಗೆ 7ರಿಂದ ಸಂಜೆ 7 ಗಂಟೆವರೆಗೆ ಮಾತ್ರ ಸಡಿಲಗೊಳಿಸಲಾಗಿದೆ. ಇದರ ಮೂಲ ಉದ್ದೇಶ ಜನರಿಗೆ ಆಗುತ್ತಿರುವ ಅನಾನುಕೂಲ ತಪ್ಪಿಸುವುದಾಗಿದೆ. ಆದರೆ, ಜನರು ಸ್ವಯಂ ಮುಂಜಾಗ್ರತೆ ವಹಿಸದೇ ಇರುವುದು ಇತರೇ ಜನರು ಆತಂಕಪಡುವಂತಾಗಿದೆ.
undefined
ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಆಗಾಗ ಸ್ಯಾನಿಟೈಜರ್‌ನಿಂದ ಕೈಗಳನ್ನು ತೊಳೆಯಬೇಕೆಂಬ ಸೂಚನೆ ಇದೆ. ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸುತ್ತಿದ್ದಾರೆ. ಆದರೆ, ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ. ವಾಸದ ದೃಢೀಕರಣ, ವಿವಿಧ ಪಿಂಚಣಿಗಳಿಗೆ ಅರ್ಜಿ ಸಲ್ಲಿಸಲು ಹಾಗೂ ಆರ್‌ಟಿಸಿ ಮತ್ತು ಇತರೆ ದಾಖಲೆಗಳನ್ನು ಪಡೆಯಲು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಚಿಕ್ಕಮಗಳೂರಿನ ತಾಲೂಕು ಕಚೇರಿಗೆ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದಾರೆ. ಮಂಗಳವಾರ ಈ ಸಂಖ್ಯೆ ನಿರೀಕ್ಷೆಗಿಂತ ಹೆಚ್ಚಾಗಿತ್ತು. ಕ್ಯೂನಲ್ಲಿ ನಿಂತಿದ್ದ ಜನರ ನಡುವೆ ಸಾಮಾಜಿಕ ಅಂತರ ಇರಲಿಲ್ಲ.
ರೆಡ್‌ಝೋನ್ ದಕ್ಷಿಣ ಕನ್ನಡ ಪ್ರಯಾಣಿಕರು ಚಿಕ್ಕಮಗಳೂರಿಗೆ ಎಂಟ್ರಿ: ಶುರುವಾಯ್ತು ಆತಂಕ
ಹೊರ ರಾಜ್ಯ ಮತ್ತು ಜಿಲ್ಲೆಗಳಿಗೆ ತೆರಳಲು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ತಾಲೂಕು ಕಚೇರಿಯಲ್ಲಿ ಕೌಂಟರ್ ತೆರೆಯಲಾಗಿದೆ. ಇಲ್ಲೂ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ನೂರಾರು ಮಂದಿ ಕ್ಯೂನಲ್ಲಿ ನಿಂತಿದ್ದರು. ಸಾಮಾಜಿಕ ಅಂತರ ಇರಲಿಲ್ಲ. ತಾಲೂಕು ಕಚೇರಿಯಲ್ಲಿ ಜನರ ಓಡಾಟ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ನಿಂತಿರುವ ಜನರು ನೋಡಿದರೆ ಇತರರು ಆತಂಕಪಡುವಂತಿತ್ತು.
ಕೈ ಕೊಟ್ಟಸೇವಾ ಸಿಂಧು:
ಹೊರ ರಾಜ್ಯ ಹಾಗೂ ಜಿಲ್ಲೆಗಳಿಗೆ ತೆರಳುವವರಿಗೆ ಅನುಕೂಲವಾಗುವ ಉದ್ದೇಶದಿಂದ ಜಿಲ್ಲೆಯ ತಾಲೂಕು ಕಚೇರಿಗಳಲ್ಲಿ ಕೌಂಟರ್ ತೆರೆಯಲಾಗಿದೆ. ಸೇವಾ ಸಿಂಧು ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಬೆಳ್ಳಂಬೆಳಗ್ಗೆ ಜನರು ಬಂದು ಕ್ಯೂನಲ್ಲಿ ನಿಂತಿದ್ದರು. ವೆಬ್‌ಸೈಟ್ ತೆರೆದ ಮೊದಲ ದಿನವೇ ಕೈ ಕೊಟ್ಟಿತ್ತು. ಚಿಕ್ಕಮಗಳೂರಿನಿಂದ ಬೇರೆ ಜಿಲ್ಲೆಗಳಿಗೆ ತೆರಳುವವರು ಅರ್ಜಿ ಸಲ್ಲಿಸಲು ಮಾತ್ರ ಸಾಧ್ಯವಾಯಿತು. ಬೇರೆ ರಾಜ್ಯಗಳಿಗೆ ಹೋಗಬೇಕಾಗಿರುವವರು ಅರ್ಜಿ ಸಲ್ಲಿಸಲು ಆಗುತ್ತಿರಲಿಲ್ಲ. ತಾಂತ್ರಿಕ ದೋಷ ಸಂಜೆಯವರೆಗೂ ಸರಿ ಹೋಗಿರಲಿಲ್ಲ.