ಇನ್ನೂ ತಪ್ಪಿಲ್ಲ ಟಾಪ್ ಸರ್ವಿಸ್| ಚಾಲಕ, ನಿರ್ವಾಹಕರ ಕೊರತೆ ನೆಪ| ಸರಿಯಾಗಿ ಬಸ್ ಬಿಡದ ಅಧಿಕಾರಿಗಳು|ಪ್ರಯಾಣಿಕರು ಖಾಸಗಿ ವಾಹನ ಆಶ್ರಯಿಸಬೇಕಾದ ಪರಿಸ್ಥಿತಿ|
ಖಾಜು ಸಿಂಗೆಗೋಳ
ಇಂಡಿ(ಫೆ.09): ಗ್ರಾಮೀಣ ಪ್ರದೇಶಕ್ಕೆ ಸಮರ್ಪಕವಾಗಿ ಬಸ್ ಸೌಲಭ್ಯ ಇಲ್ಲದ್ದರಿಂದ ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ವ್ಯಾಪಾರಸ್ಥರಿಗೆ ತೀವ್ರ ತೊಂದರೆಯಾಗುತ್ತಿದೆ. ಪ್ರತಿ ಗ್ರಾಮೀಣ ಪ್ರದೇಶಕ್ಕೆ ಸರಿಯಾದ ಸಮಯಕ್ಕೆ ಬಸ್ ಓಡಿಸದ ಕಾರಣ ಪ್ರಯಾಣಿಕರು ಖಾಸಗಿ ವಾಹನ ಆಶ್ರಯಿಸಬೇಕಾದ ಪರಿಸ್ಥಿತಿ ಬಂದಿದೆ. ಚಾಲಕ, ನಿರ್ವಾಹಕರ ಕೊರತೆ ಇದೆ ಎಂದು ಅಧಿಕಾರಿಗಳು ಸಬೂಬು ಹೇಳುತ್ತಾರೆ. ಆದರೆ ವಿಜಯಪುರ, ಚಡಚಣ, ದೇವರಹಿಪ್ಪರಗಿ, ಸಿಂದಗಿ ಪಟ್ಟಣ ಪ್ರದೇಶಗಳಿಗೆ ಓಡುವ ಬಸ್ಸುಗಳಿಗೆ ಚಾಲಕರು, ನಿರ್ವಾಹಕರ ಕೊರತೆ ಕಾಡುವುದಿಲ್ಲವೆ ಎಂದು ಪ್ರಯಾಣಿಕರು ಪ್ರಶ್ನಿಸುತ್ತಿದ್ದಾರೆ.
undefined
ಸಾರಿಗೆ ಘಟಕದ ಸಿಬ್ಬಂದಿ ಹೇಳುವ ಪ್ರಕಾರ ಪ್ರತಿ ನಿತ್ಯ 4ರಿಂದ 5 ಶೆಡ್ಯೂಲ್ಡ್‌ಗಳು ಸ್ಥಗಿತಗೊಂಡು, ಗ್ರಾಮೀಣ ಪ್ರದೇಶಕ್ಕೆ ಓಡುವ 15ರಿಂದ 20 ರೂಟ್‌ಗಳು ಸ್ಥಗಿತಗೊಳ್ಳುತ್ತಿವೆ. ತಾಲೂಕಿನ ಯಾವುದೇ ಗ್ರಾಮಕ್ಕೂ ನಿಗದಿತ ಸಮಯಕ್ಕೆ ಬಸ್ ಓಡದೆ ಇರುವುದರಿಂದ ಶಾಲೆ, ಕಾಲೇಜು, ಕಚೇರಿ ಕಾರ್ಯಗಳಿಗೆ ಹೋಗುವ ಗ್ರಾಮೀಣ ಪ್ರದೇಶದ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗಿದೆ. ಕಾಲೇಜು ಅವಧಿ ಮುಗಿದ ಮೇಲೆ ಬಸ್ ಬರುವುದರಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಸರ್ಕಾರ ಗ್ರಾಮೀಣ ಪ್ರದೇಶದ ಜನತೆಗೆ ಸಮರ್ಪಕ ಸಾರಿಗೆ ಸೌಲಭ್ಯ ಒದಗಿಸಲು ಪ್ರತಿವರ್ಷ ಸಾವಿರಾರು ಬಸ್ ಖರೀದಿಸಿ ನಾಲ್ಕು ಸಾರಿಗೆ ವಿಭಾಗಗಳಿಗೆ ನೀಡುತ್ತಿದೆ. ಅಧಿಕಾರಿಗಳ ಬೇಜವಾಬ್ದಾರಿಯಿಂದ ಚಾಲಕ ಹಾಗೂ ನಿರ್ವಾಹಕರ ಕೊರತೆ ಸಮಸ್ಯೆ ಮುಂದಿಟ್ಟುಕೊಂಡು ಸರಿಯಾದ ಸಮಯಕ್ಕೆ ಗ್ರಾಮೀಣ ಪ್ರದೇಶಕ್ಕೆ ಬಸ್ ಸೌಲಭ್ಯ ನೀಡುತ್ತಿಲ್ಲ. ಇಂಡಿ ಘಟಕಕ್ಕೆ ರೂಟ್ ಇದ್ದಷ್ಟುಗ್ರಾಮೀಣ ಪ್ರದೇಶಕ್ಕೆ ಬಸ್ ಓಡಿಸಬೇಕಾದರೆ ಇಂಡಿ ಘಟಕದಲ್ಲಿ ಇರುವ ಶೆಡ್ಯೂಲ್ಡ್‌ಗಳಿಗೆ ಬೇಕಾಗುವಷ್ಟು ನಿರ್ವಾಹಕ, ಚಾಲಕರನ್ನು ಒದಗಿಸದ್ದರಿಂದ ಪ್ರತಿನಿತ್ಯ ತಾಲೂಕಿನ 20ರಿಂದ 25 ಗ್ರಾಮಗಳಿಗೆ ನಿಗದಿತ ಸಮಯಕ್ಕೆ ಬಸ್‌ಗಳು ಓಡುತ್ತಿಲ್ಲ. ಹೀಗಾಗಿ ಗ್ರಾಮೀಣ ಪ್ರದೇಶದ ಪ್ರಯಾಣಿಕರು ಬಸ್ಸಿಗಾಗಿ ಕಾದು ಸುಸ್ತಾಗಿ ಖಾಸಗಿ ವಾಹನಗಳನ್ನು ಹತ್ತಿ ಹೋಗಬೇಕು.
ಆದರೆ ಬಸ್‌ಪಾಸ್ ಪಡೆದ ಶಾಲೆ, ಕಾಲೇಜು ವಿದ್ಯಾರ್ಥಿಗಳು ಖಾಸಗಿ ವಾಹನಗಳಿಗೆ ಹಣ ನೀಡಲು ಆಗದ ಕಾರಣ ಬಸ್ ಬರುವವರೆಗೆ ಉಪವಾಸ ಇದ್ದು, ಬಸ್ ಬಂದಾಗ ಮಾತ್ರ ತಮ್ಮ ಗ್ರಾಮಕ್ಕೆ ಹೋಗಬೇಕಾಗಿದೆ. ಹೀಗಾಗಿ ತಾಲೂಕಿನ ಪ್ರತಿ ಹಳ್ಳಿಗೆ ಶೆಡ್ಯೂಲ್ ಪ್ರಕಾರ ಬಸ್‌ಗಳು ಸಂಚರಿಸುತ್ತಿಲ್ಲ.
ಇಂಡಿ, ಚಡಚಣ ತಾಲೂಕು ಸೇರಿ ಒಟ್ಟು 124 ಗ್ರಾಮಗಳನ್ನು ಹೊಂದಿರುವ ತಾಲೂಕಿನ ಗ್ರಾಮಗಳಿಗೆ ನಿಗದಿತ ಸಮಯಕ್ಕೆ ಬಸ್ಸಿನ ಸೌಕರ್ಯ ಒದಗಿಸದಕ್ಕಾಗಿ ಇಲ್ಲಿನ ಡಿಪೋ ಅಧಿಕಾರಿಗಳಿಗೆ ಪ್ರಯಾಣಿಕರು ಹಿಡಿಶಾಪ ಹಾಕುತ್ತಿದ್ದಾರೆ.
ಅಧಿಕಾರಿಗಳು ಹೇಳುವ ಪ್ರಕಾರ ಇಂಡಿ ಬಸ್ ಘಟಕದಲ್ಲಿ 106 ಶೆಡ್ಯೂಲ್ಡ್‌ಗಳು ಇವೆ. ಪ್ರತಿನಿತ್ಯ ಎಲ್ಲ ಶೆಡ್ಯೂಲ್ಡ್‌ಗಳು ಓಡಿಸಬೇಕು ಎಂಬ ಸಂಸ್ಥೆಯ ನಿಯಮ ಇದೆ. ಚಾಲಕ ಹಾಗೂ ನಿರ್ವಾಹಕರ ಕೊರತೆ ನೆಪದಿಂದ ಗ್ರಾಮೀಣ ಪ್ರದೇಶಕ್ಕೆ ಬಸ್‌ಗಳು ನಿಗದಿತ ಸಮಯಕ್ಕೆ ಓಡುತ್ತಿಲ್ಲ. ಒಂದೊಂದು ದಿನ ಸಂಜೆಯಾದರು ಬಸ್ ಓಡುವುದಿಲ್ಲ. ಅಲ್ಲಿಯವರೆಗೆ ಪ್ರಯಾಣಿಕರು, ಶಾಲೆ, ಕಾಲೇಜು ವಿದ್ಯಾರ್ಥಿಗಳು ಬಸ್ ನಿಲ್ದಾಣದಲ್ಲಿ ಉಪವಾಸ ಕೂರುವ ಶಿಕ್ಷೆಗೊಳಪಡುತ್ತಿದ್ದಾರೆ.
ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಗ್ರಾಮೀಣ ಪ್ರದೇಶಕ್ಕೆ ಸಮರ್ಪಕ ಬಸ್ಸಿನ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ. ವಿದ್ಯಾರ್ಥಿಗಳು, ವ್ಯಾಪಾರಸ್ಥರು, ನೌಕರರಿಗೆ ಅನುಕೂಲ ಮಾಡಿಕೊಡಬೇಕು ಎಂದು ಕೇಳಿದ್ದಾರೆ.
ಶಾಲೆ, ಕಾಲೇಜುಗಳ ಸಮಯಕ್ಕೆ ತಕ್ಕಂತೆ ಗ್ರಾಮಗಳಿಗೆ ಬಸ್ ಸೌಲಭ್ಯ ಇರುವುದಿಲ್ಲ. ನಿಗದಿತ ಸಮಯಕ್ಕೆ ಬಸ್ ಬಂದರೆ ಶಾಲೆ, ಕಾಲೇಜುಗಳಿಗೆ ಹೋಗಲು ಅನುಕೂಲವಾಗುತ್ತದೆ. ಸರಿಯಾದ ಸಮಯಕ್ಕೆ ಹಾಗೂ ಶಾಲೆ, ಕಾಲೇಜುಗಳ ಸಮಯಕ್ಕೆ ಬಸ್ ಬಾರದೆ ಇರುವುದರಿಂದ ವಿದ್ಯಾರ್ಥಿಗಳು ಕಾಲೇಜುಗಳಿಗೆ ಹೋಗದಂತಾಗಿದೆ. ನಿಗದಿತ ಸಮಯಕ್ಕೆ ಸಾರಿಗೆ ಬಸ್ಸಿನ ಅನುಕೂಲ ಕಲ್ಪಸಿಕೊಡಬೇಕು ಎಂದು ಸಾಕಷ್ಟುಬಾರಿ ಘಟಕ ವ್ಯವಸ್ಥಾಪಕರಿಗೆ ಮನವಿ ಮಾಡಿಕೊಳ್ಳಲಾಗಿದೆ. ಅಲ್ಲದೆ ಪ್ರತಿಭಟನೆಯನ್ನೂ ಮಾಡಲಾಗಿದೆ. ಆದರೆ ನಿಗದಿತ ಸಮಯಕ್ಕೆ ಕಾಲೇಜುಗಳಿಗೆ ಹೋಗಲು ಬಸ್ ಬರುತ್ತಿಲ್ಲ. ಬಸ್ ಇಲ್ಲದಕ್ಕಾಗಿ ಸಂಜೆಯ ವರೆಗೆ ಬಸ್ ನಿಲ್ದಾಣದಲ್ಲಿ ಬಸ್ ಕಾಯುತ್ತ ಉಪವಾಸ ಕುಳಿತುಕೊಳ್ಳಬೇಕಾಗಿದೆ ಎಂದು
ಮಲ್ಲು ಚಾಕುಂಡಿ, ಸಿದ್ದರಾಮ ತೊನಶ್ಯಾಳ ಮಿರಗಿ ಅವರು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಇಂಡಿ ಘಟಕ ವ್ಯವಸ್ಥಾಪಕ ಎಂ.ಆರ್.ಲಮಾಣಿ ಅವರು, ಇಂಡಿ ತಾಲೂಕಿನ ಎಲ್ಲ ಗ್ರಾಮಗಳಿಗೆ ಸರಿಯಾದ ಸಮಯಕ್ಕೆ ಬಸ್ ಓಡುತ್ತವೆ. ಕೆಲವೊಂದು ಮಾರ್ಗಗಳು ಸ್ಥಗಿತವಾಗುತ್ತಿರಬಹುದು. ಆದರೆ ಪ್ರಯಾಣಿಕರಿಗೆ ತೊಂದರೆಯಾಗದಂತೆ ಬಸ್ಸಿನ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.