BBMPಯಲ್ಲಿ ಖಾಲಿ ಬಿದ್ದಿವೆ ಶೇ.60 ಹುದ್ದೆ!

Kannadaprabha News   | Asianet News
Published : Jan 25, 2020, 08:31 AM IST
BBMPಯಲ್ಲಿ ಖಾಲಿ ಬಿದ್ದಿವೆ ಶೇ.60 ಹುದ್ದೆ!

ಸಾರಾಂಶ

ಬಿಬಿಎಂಪಿಯಲ್ಲಿ 10 ಸಾವಿರಕ್ಕೂ ಅಧಿಕ ಹುದ್ದೆಗಳು ಖಾಲಿ ಉಳಿದಿವೆ. ಇವುಗಳಿಗೆ ಯಾವುದೇ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. 

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು [ಜ.25]:  ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿ- ನೌಕರರ ನೇಮಕಾತಿ ನಿಯಮಗಳ ತಿದ್ದುಪಡಿ ವಿಳಂಬ ಹಾಗೂ ಕೆಲವು ತಾಂತ್ರಿಕ ನ್ಯೂನತೆಯಿಂದಾಗಿ ಬರೋಬ್ಬರಿ 10 ಸಾವಿರಕ್ಕೂ (ಶೇ.60ರಷ್ಟು) ಅಧಿಕ ಹುದ್ದೆಗಳು ಹಲವು ವರ್ಷದಿಂದ ನೇಮಕಾತಿ ನಡೆಯದೆ ಖಾಲಿ ಉಳಿದಿವೆ.

ಪ್ರಸ್ತುತ ಬಿಬಿಎಂಪಿ 800 ಚದರ ಕಿಲೋಮೀಟರ್‌ ವಿಸ್ತೀರ್ಣ ವ್ಯಾಪಿಸಿದೆ. 198 ವಾರ್ಡ್‌ಗಳಲ್ಲಿನ 1.5 ಕೋಟಿ ಜನರಿಗೆ ಮೂಲಸೌಕರ್ಯ ಒದಗಿಸುವುದು, ಪ್ರತಿನಿತ್ಯ ಉತ್ಪತ್ತಿಯಾಗುವ 5,600 ಟನ್‌ ಕಸ ನಿರ್ವಹಣೆ, 13 ಸಾವಿರ ಕಿ.ಮೀ. ರಸ್ತೆಯ ಸುಸ್ಥಿತಿ ಕಾಪಾಡುವುದು, 1,400 ಉದ್ಯಾನವನ ನಿರ್ವಹಣೆ, 32 ಪಾಲಿಕೆ ಆಸ್ಪತ್ರೆ ಹಾಗೂ 150ಕ್ಕೂ ಹೆಚ್ಚಿನ ಪಾಲಿಕೆಯ ಶಾಲಾ-ಕಾಲೇಜುಗಳ ಆಡಳಿತ ಸೇರಿದಂತೆ ಬಿಬಿಎಂಪಿಗೆ ತನ್ನದೇ ಆದ ಜವಾಬ್ದಾರಿಗಳಿವೆ. ಅಕ್ಷರಶಃ ಇದೊಂದು ಮಿನಿ ಸರ್ಕಾರ. ಆದರೆ, ಈ ಸರ್ಕಾರದ ಶೇ.60ರಷ್ಟುಹುದ್ದೆಗಳು ಖಾಲಿ ಇರುವುದು ಪಾಲಿಕೆಯ ಆಡಳಿತ ವ್ಯವಸ್ಥೆಗೆ ಹಿಡಿದಿರುವ ಕೈಗನ್ನಡಿಯಾಗಿದೆ.

10 ರಲ್ಲಿ 7 ಸ್ಥಾನ ಬಿಜೆಪಿ ಪಾಲು : ಜೆಡಿಎಸ್ 1 ಸ್ಥಾನದಲ್ಲಿ ಗೆಲುವು.

ಬಿಬಿಎಂಪಿಗೆ ರಾಜ್ಯ ಸರ್ಕಾರದಿಂದ ಒಟ್ಟು ಅನುಮೋದಿತ ಹುದ್ದೆಗಳು 18,091, ಈ ಪೈಕಿ ಕೇವಲ 7,474 ಹುದ್ದೆಗಳು ಕಾರ್ಯ ನಿರ್ವಹಿಸಲಾಗುತ್ತಿದೆ. ಇನ್ನು 10,632 ಹುದ್ದೆಗಳು ಅನೇಕ ವರ್ಷದಿಂದ ಭರ್ತಿಯಾಗದೇ ಖಾಲಿ ಉಳಿದಿವೆ. ಇದರಲ್ಲಿ ಅಧಿಕ ಸಂಖ್ಯೆಯಲ್ಲಿ ಖಾಲಿ ಉಳಿದಿರುವುದು ಸಿ ಮತ್ತು ಡಿ ದರ್ಜೆಯ ಹುದ್ದೆಗಳಾಗಿವೆ.

ವೃಂದ ಮತ್ತು ನೇಮಕ ನಿಯಮ ದೋಷ

ಬಿಬಿಎಂಪಿಯಲ್ಲಿ ಇಂದಿಗೂ 1971ರ ವೃಂದ ಮತ್ತು ನೇಮಕಾತಿಯ ನಿಯಮ ಅನುಸರಿಸಲಾಗುತ್ತಿದೆ. ಈ ನಿಯಮದ ಪ್ರಕಾರ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ಪದವಿ ಪೂರ್ವ ಶಿಕ್ಷಣ (ಪಿಯುಸಿ) ಆಗಿದ್ದರೆ ಸಾಕು, ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಎಸ್ಸೆಸ್ಸೆಲ್ಸಿ ಪಡೆದುಕೊಂಡಿದ್ದರೆ ಸಾಕು. ಆದರೆ, ಕೆಪಿಎಸ್‌ಸಿ ಪ್ರಕಾರ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ಪದವಿ ಪಡೆದಿರಬೇಕು, ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಪಿಯುಸಿ ವಿದ್ಯಾರ್ಹತೆ ಹೊಂದಿರಬೇಕು. ಇನ್ನು ತಾಂತ್ರಿಕ ಹುದ್ದೆ ನೇಮಕಾತಿಗೂ ಇದೇ ರೀತಿ ಅನೇಕ ಗೊಂದಲಗಳಿವೆ. ಹೀಗಾಗಿ, ಖಾಲಿ ಇರುವ ಹುದ್ದೆಗಳ ಭರ್ತಿ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಉಚ್ಚಾಟಿತ ಇಬ್ಬರು ಕೈ, ಮೂವರು ಜೆಡಿಎಸ್ ನವರಿಗೆ ಸ್ಥಾನ : ಅವಿರೋಧ ಆಯ್ಕೆ..

ಬಿಬಿಎಂಪಿಯ ವೃಂದ ಮತ್ತು ನೇಮಕಾತಿ ನಿಯಮಕ್ಕೆ ತಿದ್ದುಪಡಿಗೆ ಬಿಬಿಎಂಪಿ ಕಳೆದ ಒಂದು ವರ್ಷದ ಹಿಂದೆಯೇ ಪ್ರಸ್ತಾವನೆ ಸಲ್ಲಿಸಿದೆ. ಆದರೆ, ಸರ್ಕಾರ ಪ್ರಸ್ತಾವನೆಗೆ ಅನುಮೋದನೆ ನೀಡಿಲ್ಲ. ಹೀಗಾಗಿ, ನೇಮಕಾತಿ ನಡೆಸುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.

ಬಿಬಿಎಂಪಿಯಲ್ಲಿ ಅಧಿಕ ಸಂಖ್ಯೆಯ ಡಿ-ಗ್ರೂಪ್‌ನ ಹುದ್ದೆಗಳು ಖಾಲಿ ಇದ್ದರೂ ರಾಜ್ಯ ಸರ್ಕಾರ ಡಿ ಗ್ರೂಪ್‌ ಹುದ್ದೆ ನೇಮಕಾತಿ ಅನುಮತಿ ನೀಡುತ್ತಿಲ್ಲ. ಬಿಬಿಎಂಪಿ ಮಾತ್ರವಲ್ಲ ಯಾವುದೇ ಇಲಾಖೆಯಲ್ಲಿಯೂ ಡಿ- ಗ್ರೂಪ್‌ ಹುದ್ದೆ ಭರ್ತಿ ಮಾಡದಂತೆ ಮೌಖಿಕವಾಗಿ ಸೂಚನೆ ನೀಡಲಾಗಿದೆ. ಹೀಗಾಗಿ, ಡಿ ಗ್ರೂಪ್‌ ಹುದ್ದೆ ನೇಮಕಾತಿ ಆಗುತ್ತಿಲ್ಲ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಈಗಾಗಲೇ ಕೆಲವು ಹುದ್ದೆ ಭರ್ತಿಗೆ ಕೆಪಿಸಿಸಿ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದ್ದು, ಶೀಘ್ರದಲ್ಲಿ ನೇಮಕಾತಿ ನಡೆಯಲಿದೆ. ಇನ್ನು ವೃಂದ ಮತ್ತು ನೇಮಕಾತಿ ನಿಯಮ ತಿದ್ದುಪಡಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

-ಬಿ.ಎಚ್‌.ಅನಿಲ್‌ಕುಮಾರ್‌, ಬಿಬಿಎಂಪಿ ಆಯುಕ್ತ.

ಬಿಬಿಎಂಪಿ ಅಧಿಕಾರಿ ಸಿಬ್ಬಂದಿ ವಿವರ

ದರ್ಜೆ ಸರ್ಕಾರಿ ಅನುಮೋದಿತ ಸಂಖ್ಯೆ ಕಾರ‍್ಯ ನಿರ್ವಹಿಸುತ್ತಿರುವವರ ಸಂಖ್ಯೆ ಖಾಲಿ ಸಂಖ್ಯೆ

ಎ 635 551 84

ಬಿ 934 637 297

ಸಿ 4,650 2,634 2,031

ಡಿ 11,872 3,652 8,220

ಒಟ್ಟು 18,091 7,474 10,632

PREV
click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ