ತುಮಕೂರು ಜಿಲ್ಲೆಯಲ್ಲಿರುವಷ್ಟು ಕಲಾವಿದರೂ ಬೇರೆ ಎಲ್ಲೂ ಇಲ್ಲ

By Kannadaprabha News  |  First Published Oct 2, 2023, 6:07 AM IST

ಇಡೀ ರಾಜ್ಯಕ್ಕೆ ಹೋಲಿಸಿದರೆ ತುಮಕೂರು ಜಿಲ್ಲೆಯಲ್ಲಿರುವಷ್ಟು ಕಲಾವಿದರು ಬೇರೆ ಜಿಲ್ಲೆಯಲ್ಲಿ ಇಲ್ಲ. ಇದಕ್ಕೆ ಕಾರಣ ನಾಟಕರತ್ನ ಡಾ.ಗುಬ್ಬಿ ವೀರಣ್ಣ ಹಾಗೂ ಅವರೊಂದಿಗೆ ಬಣ್ಣ ಹಚ್ಚಿದ ಎಲ್ಲಾ ಕಲಾವಿದರು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಭಿಪ್ರಾಯಪಟ್ಟರು.


 ತುಮಕೂರು :  ಇಡೀ ರಾಜ್ಯಕ್ಕೆ ಹೋಲಿಸಿದರೆ ತುಮಕೂರು ಜಿಲ್ಲೆಯಲ್ಲಿರುವಷ್ಟು ಕಲಾವಿದರು ಬೇರೆ ಜಿಲ್ಲೆಯಲ್ಲಿ ಇಲ್ಲ. ಇದಕ್ಕೆ ಕಾರಣ ನಾಟಕರತ್ನ ಡಾ.ಗುಬ್ಬಿ ವೀರಣ್ಣ ಹಾಗೂ ಅವರೊಂದಿಗೆ ಬಣ್ಣ ಹಚ್ಚಿದ ಎಲ್ಲಾ ಕಲಾವಿದರು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಭಿಪ್ರಾಯಪಟ್ಟರು.

ನಗರದ ಡಾ. ಕಲಾಕ್ಷೇತ್ರದಲ್ಲಿ ಶ್ರೀನಾಗಾರ್ಜುನ ಕಲಾ ಸಂಘ ಹಮ್ಮಿಕೊಂಡಿದ್ದ ನಾಟಕದ ಪ್ರದರ್ಶನ ಮತ್ತು ಹಿರಿಯ ಕಲಾವಿದರಿಗೆ ರಜತ ಪ್ರಶಸ್ತಿ ನೀಡಿ ಗೌರವಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗುಬ್ಬಿ ಚನ್ನಬಸವೇಶ್ವರ ನಾಟಕ ಕಂಪನಿಯಲ್ಲಿ ಪಾತ್ರಗಳಿಗೆ ಬಣ್ಣ ಹಚ್ಚಿದ ಡಾ.ರಾಜ್ ಕುಮಾರ್ ಚಲನಚಿತ್ರ ಕ್ಷೇತ್ರದಲ್ಲಿ ಉತ್ತುಂಗಕ್ಕೆ ಏರಿದರು. ಹಾಸ್ಯ ಚಕ್ರವತಿ ನರಸಿಂಹರಾಜು, ಬೆಳ್ಳಾವಿ ನರಹರಿಶಾಸ್ತ್ರಿಗಳು ಸೇರಿದಂತೆ ಅನೇಕರು ತುಮಕೂರಿನಿಂದಲೇ ತಮ್ಮ ವೃತ್ತಿ ಜೀವನ ಆರಂಭಿಸಿ, ಧ್ರುವ ನಕ್ಷತ್ರದ ರೀತಿ ಬೆಳೆಗಿದ್ದಾರೆ. ಹಾಗಾಗಿ ತುಮಕೂರು ಕಲಾವಿದರ ತವರೂರು ಎಂಬ ಮಾತು ಇಂದಿಗೂ ನಿಜವಾಗಿದೆ ಎಂದರು.

Latest Videos

undefined

ಕಲೆ ಜಾತಿ, ಧರ್ಮ, ಬಣ್ಣ ಎಲ್ಲವನ್ನು ಮೀರಿ ನಿಂತಿದೆ. ಅಭಿನಯ ಸಾಮರ್ಥ್ಯವೊಂದೇ ಇಲ್ಲಿ ಮಾನದಂಡ. ಯಾವ ಗೋಡೆಗಳು ಇಲ್ಲ. ಎಲ್ಲವನ್ನು ಮೀರಿ ಬೆಳೆದಿದ್ದೇ ಕಲೆ. ಪ್ರತಿಭೆ ಇರುವ ಕಲಾವಿದನಿಗೆ ಪ್ರಪಂಚದ ಯಾವ ಮೂಲೆಗೆ ಹೋದರು ಬೆಲೆ ಇದೆ. ನಾಟಕಗಳು ಸಮಾಜಕ್ಕೆ ಅನೇಕ ಸಂದೇಶಗಳನ್ನು ನೀಡಿದೆ. ಒಂದು ಮಾಧ್ಯಮವಾಗಿಯೂ ನಾಟಕ ಪ್ರಸ್ಥುತ. ಪ್ರಪಂಚದಲ್ಲಿ ನಡೆಯುವ ಎಲ್ಲಾ ಘಟನೆಗಳು ಸಾವಿರಾರು ವರ್ಷಗಳ ಹಿಂದೆ ಬರೆದ ಕುರುಕ್ಷೇತ್ರ, ರಾಮಾಯಣ ನಾಟಕಗಳಲ್ಲಿ ನೋಡಬಹುದಾಗಿದೆ. ಹಾಗಾಗಿ ಈ ಕಲೆ ಉಳಿಯಬೇಕು, ಬೆಳೆಯಬೇಕು. ಇಂದು ನಾಟಕಗಳು ಗ್ರಾಮೀಣ ಪ್ರದೇಶದಲ್ಲಿ ಹಾಸು ಹೊಕ್ಕಾಗಿವೆ. ಇದು ಮತ್ತಷ್ಟು ಬೆಳೆಯಲಿ ಎಂದು ಶುಭ ಹಾರೈಸಿದರು.

ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, ಯಾರು ಶ್ರದ್ದೆಯಿಂದ ಅಭ್ಯಾಸ ಮಾಡುತ್ತಾರೋ ಅವರಿಗೆ ಕಲೆ ಒಲಿಯಲಿದೆ. ಪೌರಾಣಿಕ ನಾಟಕಗಳು ಜನರಿಗೆ ಮನರಂಜನೆಯ ಜೊತೆಗೆ, ಜನತೆ ಒಳ್ಳೆಯ ಸಂದೇಶವನ್ನು ನೀಡುತ್ತೇವೆ. ನಾಟಕ ಕಲಿಕೆ ಆರಂಭವಾದ ನಂತರ ಪಾತ್ರದಾರಿಗಳೆಲ್ಲರೂ ಒಂದೇ ಕುಟಂಬದವರಂತೆ ಕಲೆತು ಪ್ರದರ್ಶನ ನೀಡುವುದನ್ನು ಕಾಣಬಹುದು ಎಂದರು.

ಶ್ರೀನಾಗಾರ್ಜುನ ಕಲಾಸಂಘದ ಉಪಾಧ್ಯಕ್ಷ ಹಾಗೂ ಕೊರಟಗೆರೆ ತಾ.ಪಂ.ಇಓ ಡಿ.ದೊಡ್ಡ ಸಿದ್ದಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿವರ್ಷ ನಮ್ಮ ಕಲಾ ಸಂಘದಿಂದ ಈ ರೀತಿಯ ಪೌರಾಣಿಕ ನಾಟಕಗಳನ್ನು ಅಭಿನಯಿಸುತ್ತಾ ಬಂದಿದ್ದು, ಪುರಾತನ ಸಂಸ್ಕೃತಿಯಾದ ಪೌರಾಣಿಕ ನಾಟಕವನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಶ್ರೀನಾಗಾರ್ಜುನ ಕಲಾಸಂಘ ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದರು.

ಹಿರಿಯ ಕಲಾವಿದರಾದ ಹೊನಸಿಗೆರೆ ನರಸಯ್ಯ, ಡಾ.ಡಿ.ದೊಡ್ಡಸಿದ್ದಯ್ಯ, ಬಸವರಾಜು.ಎಸ್.ಎನ್.ಅವರಿಗೆ ನಾಗಾರ್ಜುನ ಕಲಾಶ್ರೀ ರಜತ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಕಲಾಶ್ರೀ ಡಾ.ಲಕ್ಷ್ಮಣ ದಾಸ್, ಕಲಾವಿದರಾದ ಚಂದ್ರಣ್ಣ, ಎಂ.ವಿ.ನಾಗಣ್ಣ,ನಾಗರಾಜಯ್ಯ, ಕೆ.ಸಿ.ನರಸಿಂಹಮೂರ್ತಿ, ಉದ್ಯಮಿ ಡಿ.ಟಿ.ವೆಂಕಟೇಶ್, ಕೊರಟಗೆರೆ ವಲಯ ಆರಣ್ಯಾಧಿಕಾರಿ ಸುರೇಶ್, ಪಿ.ಆರ್.ಮಂಜುನಾಥ್ ಮತ್ತಿತರರು ಭಾಗವಹಿಸಿದ್ದರು.

ಈ ವೇಳೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರುಳೀಧರ ಹಾಲಪ್ಪ,ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ.ನಾಗಣ್ಣ, ವಿವೇಕಾನಂದ ಶೂಟಿಂಗ್ ಅಕಾಡೆಮಿಯ ತರಬೇತುದಾರರ ಅನಿಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

---

ಕೋಟ್

ಪೌರಾಣಿಕ ನಾಟಕಗಳು ನಶಿಸಿ ಹೋಗುತ್ತಿರುವ ಸಂದರ್ಭದಲ್ಲಿ ಅದನ್ನು ಪುನರ್ ಜೀವನಗೊಳಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಹಳ್ಳಿಗಾಡಿನಲ್ಲಿ ಅವಿದ್ಯಾವಂತರೇ ಹೆಚ್ಚು ನಾಟಕಗಳಲ್ಲಿ ಪಾಲ್ಗೊಳ್ಳುತಿದ್ದರು. ಹೆಣ್ಣು ಪಾತ್ರಗಳನ್ನು ಗಂಡಸರೇ ನಿರ್ವಹಿಸುತ್ತಿದ್ದ ಕಾಲವಿತ್ತು. ಮನರಂಜನೆಯ ಜೊತೆಗೆ, ನೈತಿಕ ಪಾಠ ಕಲಿಸುವ ಈ ಕಲೆ ಮತ್ತಷ್ಟು ಪ್ರಗತಿ ಹೊಂದಲಿ.

- ಕೆ.ಎನ್.ರಾಜಣ್ಣ, ಸಹಕಾರಿ ಸಚಿವ

click me!