ಬ್ಲ್ಯಾಕ್‌ ಫಂಗಸ್‌: ಬೇರೆ ಜಿಲ್ಲೆಯವರಿಗೆ ಹುಬ್ಬಳ್ಳಿ ಕಿಮ್ಸ್‌ನಲ್ಲಿ ಚಿಕಿತ್ಸೆ ಇಲ್ಲ..!

By Kannadaprabha News  |  First Published May 24, 2021, 7:25 AM IST

* ನಿಮ್ಮ ಜಿಲ್ಲೆಗಳಲ್ಲೇ ಚುಚ್ಚುಮದ್ದು ಲಭ್ಯ; ಅಲ್ಲೇ ಚಿಕಿತ್ಸೆ ಪಡೆಯಿರಿ
* ಬೇರೆ ಜಿಲ್ಲೆಗಳ ಬ್ಲ್ಯಾಕ್ಸ್‌ ಫಂಗಸ್‌ ರೋಗಿಗಳಿಗೆ ಹೇಳುತ್ತಿರುವ ಕಿಮ್ಸ್‌
* ಕಠಿಣ ನಿಲುವು ತಾಳಿದ ಕಿಮ್ಸ್‌
 


ಹುಬ್ಬಳ್ಳಿ(ಮೇ.24): ನಿಮಗೆ ಬ್ಲ್ಯಾಕ್‌ ಫಂಗಸ್‌ ಆಗಿದೆಯೇ? ಧಾರವಾಡ ಜಿಲ್ಲೆಯವರು ಅಲ್ಲವೇ? ಹಾಗಾದರೆ ನಿಮ್ಮ ಜಿಲ್ಲೆಯಲ್ಲೇ ಚಿಕಿತ್ಸೆ ಪಡೆದುಕೊಳ್ಳಿ. ಕಿಮ್ಸ್‌ನಲ್ಲಿ ಜಾಗವಿಲ್ಲ! ಇದು ಉತ್ತರ ಕರ್ನಾಟಕದ ಸಂಜೀವಿನಿ ಕಿಮ್ಸ್‌ ಆಡಳಿತ ಮಂಡಳಿ ಇದೀಗ ಬೇರೆ ಬೇರೆ ಜಿಲ್ಲೆಗಳ ಬ್ಲ್ಯಾಕ್‌ ಫಂಗಸ್‌ ರೋಗಿಗಳಿಗೆ ಹೇಳಿ ಕಳುಹಿಸುತ್ತಿರುವ ಪರಿ.

ಇದಕ್ಕೆ ಕಾರಣವೂ ಉಂಟು. ಬರೋಬ್ಬರಿ 94 ಜನ ಬ್ಲ್ಯಾಕ್‌ ಫಂಗಸ್‌ ರೋಗಿಗಳು ಸದ್ಯ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ ಬರೋಬ್ಬರಿ ಮುಕ್ಕಾಲು ಭಾಗದಷ್ಟುಅನ್ಯ ಜಿಲ್ಲೆಗಳ ರೋಗಿಗಳೇ ಇದ್ದಾರೆ. ಈಗ ಇರುವ ರೋಗಿಗಳನ್ನೇ ನಿರ್ವಹಣೆ ಮಾಡುವುದು ಕಷ್ಟವಾಗುತ್ತಿದೆ. ಮತ್ತೆ ಬೇರೆ ಬೇರೆ ಜಿಲ್ಲೆಗಳ ರೋಗಿಗಳು ಬರಲು ಪ್ರಾರಂಭಿಸಿದರೆ ನಿಭಾಯಿಸುವುದು ಹೇಗೆ? ಎಂಬ ಪ್ರಶ್ನೆ ಇದೀಗ ಕಿಮ್ಸ್‌ನ್ನು ಕಾಡುತ್ತಿದೆ.

Latest Videos

undefined

ಆಯಾ ಜಿಲ್ಲೆಗಳಿಗೆ ಬ್ಲ್ಯಾಕ್‌ ಫಂಗಸ್‌ ಚುಚ್ಚುಮದ್ದನ್ನು ರಾಜ್ಯ ಸರ್ಕಾರ ಹಂಚಿಕೆ ಮಾಡಿದೆ. ಕಿಮ್ಸ್‌ನಲ್ಲಿ ಬೇರೆ ಬೇರೆ ಜಿಲ್ಲೆಗಳ ರೋಗಿಗಳಿದ್ದಾರೆ ಎಂಬ ಕಾರಣಕ್ಕೆ ಹೆಚ್ಚಿನ ಚುಚ್ಚುಮದ್ದುಗಳನ್ನೇನೂ ಇಲ್ಲಿಗೆ ಹಂಚಿಕೆ ಮಾಡಿಲ್ಲ. ಧಾರವಾಡ ಜಿಲ್ಲೆಗೆ ಎಷ್ಟುಬೇಕೋ ಅಷ್ಟುಚುಚ್ಚುಮದ್ದುಗಳು ಮಾತ್ರ ಲಭ್ಯವಿವೆ. ಚುಚ್ಚುಮದ್ದುಗಳನ್ನು ಆಯಾ ಜಿಲ್ಲಾಸ್ಪತ್ರೆಗಳಿಗೆ ಸರ್ಕಾರವೇ ಹಂಚಿಕೆ ಮಾಡಿದೆ. ಹೀಗಾಗಿ ಆಯಾ ಜಿಲ್ಲಾಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲಿ ಎಂಬ ವಾದ ಕಿಮ್ಸ್‌ನದ್ದು.

ಧಾರವಾಡದ ಸಿದ್ದೇಶ್ವರ ನಗರದಲ್ಲಿ 80 ಸೋಂಕಿತರು: ಸೀಲ್‌ಡೌನ್‌

ವಾಪಸ್‌ ತೆರಳುತ್ತಿರುವ ರೋಗಿಗಳು

ಧಾರವಾಡ ಸುತ್ತಮುತ್ತಲಿನ ಜಿಲ್ಲೆಗಳ ಆಡಳಿತಗಳು ರೋಗಿಗಳು ಸ್ವಲ್ವ ಗಂಭೀರವಾದರೆ ಸಾಕು ಅಂಥವರನ್ನು ಹುಬ್ಬಳ್ಳಿ ಕಿಮ್ಸ್‌ಗೆ ಸಾಗಿಸಿ ಕೈ ತೊಳೆದುಕೊಳ್ಳುತ್ತಿವೆ. ಕೊರೋನಾ ವಿಷಯದಲ್ಲೂ ಇದೇ ರೀತಿಯಾಗಿದೆ. ಆಸ್ಪತ್ರೆಗಳಲ್ಲಿರುವ ಸೋಂಕಿತರ ಪೈಕಿ ಶೇ.40ರಷ್ಟುಸೋಂಕಿತರ ಬೇರೆ ಜಿಲ್ಲೆಯವರೇ ಇದ್ದಾರೆ. ಈಗಲೂ ಕೊರೋನಾ ಸೋಂಕಿತರು ಕಿಮ್ಸ್‌ನ್ನೇ ಅವಲಂಬಿಸಿದ್ದಾರೆ. ಆಯಾ ಜಿಲ್ಲೆಗಳಲ್ಲಿ ಸರ್ಕಾರ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಿದರೂ ಅಲ್ಲಿ ಚಿಕಿತ್ಸೆ ಕೊಡಲು ಅಲ್ಲಿನ ವೈದ್ಯರು, ಜಿಲ್ಲಾಸ್ಪತ್ರೆಗಳು ಹಿಂದೇಟು ಹಾಕುತ್ತಿವೆಯೋ? ಅಥವಾ ಅಲ್ಲಿನ ಸೋಂಕಿತರು ಹುಬ್ಬಳ್ಳಿಗೆ ಹೋದರಾಯ್ತು ಎಂದುಕೊಂಡು ಒಟ್ಟಿನಲ್ಲಿ ಇಲ್ಲಿಗೆ ಬರುತ್ತಿದ್ದಾರೊ ಗೊತ್ತಿಲ್ಲ. ಕಿಮ್ಸಗೆ ಬರುವವರ ಸಂಖ್ಯೆ ಹೆಚ್ಚು. ಇದಕ್ಕೆ ರಾಜಕೀಯ ಮುಖಂಡರ ಬೆಂಬಲವೂ ಇದೆ.

ಇದೀಗ ಬ್ಲ್ಯಾಕ್‌ ಫಂಗಸ್‌ ವಿಷಯದಲ್ಲೂ ಅದೇ ರೀತಿ ಆಗುತ್ತಿದೆ. ಈ ಕಾರಣದಿಂದ ಇದೀಗ ಕಿಮ್ಸ್‌ ಕಠಿಣ ನಿಲುವು ತಾಳಿದೆ. ಬೇರೆ ಬೇರೆ ಜಿಲ್ಲೆಗಳ ರೋಗಿಗಳನ್ನು ಅಲ್ಲಿನ ಜಿಲ್ಲಾಸ್ಪತ್ರೆಗಳಲ್ಲಿ ಚಿಕಿತ್ಸೆ ದೊರೆಯುವಂತಾದರೆ ನಮಗಿಲ್ಲಿ ಒತ್ತಡ ಕಡಿಮೆಯೂ ಆಗುತ್ತದೆ. ರೋಗಿಗಳಿಗೆ ಉತ್ತಮ ಚಿಕಿತ್ಸೆಯೂ ಲಭ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಆಯಾ ಜಿಲ್ಲಾಸ್ಪತ್ರೆಗಳಲ್ಲೇ ಚಿಕಿತ್ಸೆ ಪಡೆಯಿರಿ ಎಂದು ಹೇಳಲಾಗುತ್ತಿದೆ ಎಂದು ಕಿಮ್ಸ್‌ ವೈದ್ಯರು ತಿಳಿಸುತ್ತಿದ್ದಾರೆ.
 

click me!