ತಪ್ಪಾದ ಐಡಿ ಸಂಖ್ಯೆ: ಸೋಂಕಿಲ್ಲದಿದ್ದದೂ ಹೆದರಿದ ಕುಟುಂಬ, ಮನೆಯೇ ಸೀಲ್ಡೌನ್

By Kannadaprabha NewsFirst Published Jul 21, 2020, 11:03 AM IST
Highlights

ಗುರುತಿನ ಸಂಖ್ಯೆ (ಐಡಿ) ತಪ್ಪಾಗಿ ನಮೂದಿಸಿದ ಪರಿಣಾಮ ಕೊರೋನಾ ಸೋಂಕಿತರಲ್ಲದಿದ್ದರೂ ಸೋಂಕಿತೆ ಎಂದು ಬಿಂಬಿಸಿ ಇಡೀ ಕುಟುಂಬ ಮಾನಸಿಕವಾಗಿ ಕುಗ್ಗಿ ಹೋಗಿರುವ ಘಟನೆ ನಡೆದಿದೆ.

ಮೈಸೂರು(ಜು.21): ಗುರುತಿನ ಸಂಖ್ಯೆ (ಐಡಿ) ತಪ್ಪಾಗಿ ನಮೂದಿಸಿದ ಪರಿಣಾಮ ಕೊರೋನಾ ಸೋಂಕಿತರಲ್ಲದಿದ್ದರೂ ಸೋಂಕಿತೆ ಎಂದು ಬಿಂಬಿಸಿ ಇಡೀ ಕುಟುಂಬ ಮಾನಸಿಕವಾಗಿ ಕುಗ್ಗಿ ಹೋಗಿರುವ ಘಟನೆ ನಡೆದಿದೆ.

ಕೊರೋನಾ ಸೋಂಕು ಸಾವಿನ ಬಗೆಗೆ ಹುಟ್ಟು ಹಾಕಿರುವ ಭಯದ ಜೊತೆಗೆ ರೋಗಕ್ಕೆ ತುತ್ತಾದವರನ್ನು ಸಾರ್ವಜನಿಕರು ನೋಡುವ ರೀತಿಯು ಸೋಂಕಿತರನ್ನು ಮಾನಸಿಕವಾಗಿ ಕುಗ್ಗಿಸಿದೆ. ಇದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿ ಮೈಸೂರು ತಾಲೂಕು ಜಯಪುರ ಹೋಬಳಿಯ ಉದ್ಭೂರಿನ ಘಟನೆ. ಇಲ್ಲಿನ ಮಹಿಳೆ ಗರ್ಭವತಿಯಾಗಿದ್ದರು. ನಿಯಮಾನುಸಾರ ಅವರಿಗೆ ಜು. 13 ರಂದು ಕೋವಿಡ್‌ ಪರೀಕ್ಷೆ ಮಾಡಿಸಲಾಯಿತು. 15 ರಂದು ‘ ನಿಮಗೆ ಕೋವಿಡ್‌ ಇದೆ, ತಾವು ಮನೆಯಿಂದ ಹೊರ ಬರಬಾರದು, ಸದ್ಯದಲ್ಲಿಯೇ ವೈದ್ಯಕೀಯ ಸಿಬ್ಬಂದಿ ತಮ್ಮನ್ನು ಆಸ್ಪತ್ರೆಗೆ ಸ್ಥಳಾಂತರಿಸುತ್ತಾರೆ’ ಎಂಬ ಮಾಹಿತಿ ನೀಡಿದರು.

ಶಾಲೆ ಪುನಾರಂಭ ಯಾವಾಗ? ಕೇಂದ್ರಕ್ಕೆ ತನ್ನ ನಿರ್ಧಾರ ತಿಳಿಸಿದ ರಾಜ್ಯ!

ಆದರೆ ಕೊರೋನಾ ಪಾಸಿಟಿವ್‌ ಬಂದಿರುವ ಬಗ್ಗೆ ಯಾವುದೇ ಅಧಿಕೃತ ದಾಖಲಾತಿ ಇರಲಿಲ್ಲ. ಅಲ್ಲದೆ ಪೊಲೀಸರು ತಂದ ಪಾಸಿಟಿವ್‌ ಇರುವ ವ್ಯಕ್ತಿಗಳ ಪಟ್ಟಿಯಲ್ಲಿನ ಐಡಿಗೂ ಮತ್ತು ಉದ್ಭೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿದ್ದ ಐಡಿಗೂ ವ್ಯತ್ಯಾಸವಿತ್ತು. ಇದನ್ನು ಆಸ್ಪತ್ರೆಯಲ್ಲಿ ಪರಿಶೀಲಿಸಿದಾಗ ಪಾಸಿಟಿವ್‌ ವರದಿಯು ಮತ್ತೊಬ್ಬ ಮಹಿಳೆಯದಾಗಿತ್ತು. ಈ ವಿಷಯವನ್ನು ಡಿಎಚ್‌ಒ ಗಮನಕ್ಕೆ ತರಲಾಯಿತು. ಆಗ ಮತ್ತೆ ಜು. 17 ರಂದು ಕೊರೋನಾ ಪರೀಕ್ಷೆಗೆ ಮಾದರಿ ನೀಡುವಂತೆ ಆ ಮಹಿಳೆಗೆ ಸೂಚಿಸಿದರು. ಆಗ ಅವರು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಮಾದರಿ ನೀಡಿದ್ದಾರೆ.

ಅದೇ ದಿನ ಹೀಗೆ ಐಡಿ ಬದಲಾಗಿದೆ ಎಂಬುದು ಗೊತ್ತಿದ್ದರೂ ಗ್ರಾಪಂ ಪಿಡಿಒ, ಉಪ ತಹಸೀಲ್ದಾರರು ಬಂದು ತಮ್ಮ ಮನೆಯ ಸುತ್ತಮುತ್ತಲಿನ ಪ್ರದೇಶವನ್ನು ಸೀಲ್‌ಡೌನ್‌ ಮಾಡಿದ್ದಾರೆ. ಅಲ್ಲದೆ ನಮಗೆ ಊರಿಗೆ ಬರದೆ ಕೂಡಲೇ ಕೋವಿಡ್‌ ಆಸ್ಪತ್ರೆಗೆ ಹೋಗಿ ದಾಖಲಾಗುವಂತೆ ಹೇಳಿದರು. ಕೋವಿಡ್‌ ಆಸ್ಪತ್ರೆಗೆ ಹೋದರೆ ನಿಮಗೆ ನೀಡಿರುವ ಐಡಿ ಇಲ್ಲ ಎಂದು ಹಿಂದಕ್ಕೆ ಕಳುಹಿಸಿದರು ಎಂದು ನೊಂದ ಮಹಿಳೆಯ ಸಹೋದರ ಸೋಮಣ್ಣ ದೂರಿದ್ದಾರೆ.

ಶಾಲೆ, ಕಾಲೇಜು ಆರಂಭಿಸಿ: ಏಮ್ಸ್‌ ತಜ್ಞರಿಂದ ಶಿಫಾರಸು!

ನಂತರದ ಪರೀಕ್ಷೆಯ ವರದಿಯಲ್ಲಿ ಕೊರೋನಾ ಇಲ್ಲದಿರುವುದು ದೃಢಪಟ್ಟಿದೆ. ಜು. 20 ರಂದು ಗ್ರಾಪಂ ಮತ್ತು ತಾಲೂಕು ಆಡಳಿತದ ಸಿಬ್ಬಂದಿ ಸೋಂಕಿತರ ಮನೆಯ ಸುತ್ತ ಅಳವಡಿಸಿದ್ದ ಬ್ಯಾರಿಕೇಡ್‌ ತೆಗೆದು, ಕಂಟೈನ್ಮೆಂಟ್‌ ಮುಕ್ತಗೊಳಿಸಿದೆ. ಆದರೆ ಯಾರೋ ಮಾಡಿದ ತಪ್ಪಿಗೆ ಈಗ ಇಡೀ ಕುಟುಂಬ ಮಾನಸಿಕವಾಗಿ ಜರ್ಝರಿತವಾಗಿದೆ.

ನಮಗೆ ಸೋಂಕು ಇಲ್ಲ ಎಂದು ವರದಿ ಬಂದಿದೆ ಎಂದು ಹೇಳಿದರೂ ನೆರೆಹೊರೆಯವರು ನಂಬುತ್ತಿಲ್ಲ. ಇವರು ನೋಡುವ ರೀತಿ ಬೇರೆಯೇ ಆಗಿದೆ. ಕೆಲಸಕ್ಕೆ ಹೋದರೂ ಸೇರಿಸಿಕೊಳ್ಳದ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮಸ್ಥರು ಮಾತ್ರವಲ್ಲದೆ ನೆಂಟರು, ಬಂಧುಗಳೂ ಕೂಡ ಈಗಲೂ ಕೊರೋನಾ ಪೀಡಿತರು ಎಂದೇ ನೋಡುತ್ತಿದೆ.

SSLC ರಿಸಲ್ಟ್‌ಗಾಗಿ ಕಾಯುತ್ತಿರೋ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್

ಕೊರೋನಾ ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ರೋಗ. ಆರೋಗ್ಯವಂತರು ಬಹುಬೇಗ ಗುಣಮುಖರಾಗಬಹುದಾದರೂ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಬಹುಬೇಗ ಹರಡುತ್ತದೆ ಎಂಬ ಕಾರಣಕ್ಕೆ ಆತಂಕ ಸೃಷ್ಟಿಸಿದೆ. ಇಂತಹ ಸಂದರ್ಭದಲ್ಲಿ ಐಡಿ ನಮೂದಿಸುವಾಗ ಇಲಾಖೆ ಸಿಬ್ಬಂದಿ ಎಚ್ಚರಿಕೆಯಿಂದಿರಬೇಕು. ಬೇಜವಾಬ್ದಾರಿತನದಿಂದ ವರ್ತಿಸಿದರೆ ಇಂತಹ ಪ್ರಮಾದವಾಗುತ್ತದೆ.

ಒಂದು ವೇಳೆ ತಾಂತ್ರಿಕ ಕಾರಣದಿಂದ ಐಡಿ ಸಂಖ್ಯೆ ತಪ್ಪಾಗಿರಬಹುದು. ಇದನ್ನು ಕೋವಿಡ್‌ ಆಸ್ಪತ್ರೆ ಸಿಬ್ಬಂದಿಯೇ ಪರಿಶೀಲಿಸಿ ಹಿಂದಕ್ಕೆ ಕಳುಹಿಸಿರುವಾಗ ತಾಲೂಕು ಆಡಳಿತ ಮತ್ತು ಸ್ಥಳೀಯ ಗ್ರಾಪಂ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕಾಗುತ್ತದೆ. ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಿದ್ದರಿಂದ ಅದರ ಫಲಿತಾಂಶ ಬರುವವರೆಗೆ ಕಾದಿದ್ದರೆ ಆ ಕುಟುಂಬ ಇಂದು ಸಂಕಷ್ಟಕ್ಕೆ ಸಿಲುಕುತ್ತಿರಲಿಲ್ಲ. ಮೊದಲೇ ಗರ್ಭಿಣಿಯಾದ ಆ ಮಹಿಳೆಯು ಕೊರೋನಾ ಭಯದಿಂದ ನಲುಗಿ ಹೋಗುತ್ತಿರಲಿಲ್ಲ.

-ಮಹೇಂದ್ರ ದೇವನೂರು

click me!