'ಯಾರೂ ಕೊರೋನಾದಿಂದ ಸತ್ತಿಲ್ಲ'

By Kannadaprabha NewsFirst Published May 10, 2021, 10:28 AM IST
Highlights

* ವಿಜಯನಗರ ಜಿಲ್ಲೆಯ ಕೂಡ್ಲಿಗಿ ಚಿಕ್ಕಜೋಗಿಹಳ್ಳಿ ತಾಂಡಾದಲ್ಲಿ ವಯೋವೃದ್ಧರ ಸಾವು
* ಒಂದು ವಾರದಲ್ಲಿ 11 ಜನರ ಸಾವು
* ಈ ಗ್ರಾಮದಲ್ಲಿವೆ 68 ಕೊರೋನಾ ಸಕ್ರಿಯ ಪ್ರಕರಣಗಳು
 

ಕೂಡ್ಲಿಗಿ(ಮೇ.10): ತಾಲೂಕಿನ ಚಿಕ್ಕಜೋಗಿಹಳ್ಳಿ ತಾಂಡಾದಲ್ಲಿ ವಯೋವೃದ್ಧರು ಹಾಗೂ ವಿವಿಧ ಕಾಯಿಲೆಯಿಂದ ಬಳಲುತ್ತಿರುವವರು ನಿರಂತರವಾಗಿ ಮರಣ ಹೊಂದುತ್ತಿರುವುದರಿಂದ ಇಲ್ಲಿಯ ಜನತೆ ಭಯಭೀತರಾಗಿದ್ದಾರೆ. ವಾರದಿಂದ ಇಲ್ಲಿಯ ವರೆಗೆ 11 ಜನರು ಮೃತಪಟ್ಟಿರುವುದಾಗಿ ಸ್ಥಳೀಯ ಆಡಳಿತ ಖಚಿತಪಡಿಸಿದೆ.

ನಾಗ್ಯನಾಯ್ಕ, ಸೀತಾಬಾಯಿ, ಲೋಕ್ಯಾನಾಯ್ಕ, ಜೀನ್ಯಾನಾಯ್ಕ, ಲಕ್ಷ್ಮಬಾಯಿ, ಗೌರಿಬಾಯಿ, ಚತ್ರನಾಯ್ಕ, ರಾಜುನಾಯ್ಕ, ಪಾರ್ತಿಬಾಯಿ, ತಾವರಿಬಾಯಿ, ಸುಶೀಲಾಬಾಯಿ ಹೀಗೆ ಒಟ್ಟೂ11 ಜನರು ಮರಣ ಹೊಂದಿದ್ದಾರೆ ಎಂದು ಸ್ಥಳೀಯ ಗ್ರಾಪಂ ಅಧಿಕಾರಿಗಳು ತಿಳಿಸಿದ್ದಾರೆ. ಅವರು ಯಾರೂ ಕೋವಿಡ್‌ನಿಂದ ಅಸು ನೀಗಿಲ್ಲ. ಬದಲಾಗಿ ಹೃದಯಾಘಾತ, ಪಾರ್ಶ್ವವಾಯು, ಡಯಾಲಿಸಿಸ್‌ ಸಮಸ್ಯೆ, ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವವರುವ ಮೃತಪಟ್ಟಿದ್ದಾರೆ. ಇವರೆಲ್ಲರೂ 50ರಿಂದ 80 ವರ್ಷಗಳ ವಯೋಮಾನದವರಾಗಿದ್ದಾರೆ ಎಂದು ಕೂಡ್ಲಿಗಿ ತಾಲೂಕು ವೈದ್ಯಾಧಿಕಾರಿ ಡಾ. ಷಣ್ಮುಖನಾಯ್ಕ ಸ್ಪಷ್ಟಪಡಿಸಿದ್ದಾರೆ. ಮೃತಪಟ್ಟವರ ಹೆಸರು, ಇತರ ಮಾಹಿತಿಗಳು ತಾಲೂಕು ಆರೋಗ್ಯ ಕೇಂದ್ರ ಹಾಗೂ ಗ್ರಾಪಂಗಳಲ್ಲಿ ಬೇರೆ ಬೇರೆಯಾಗಿದ್ದು, ಪರಿಶೀಲನೆ ಮಾಡಿದ ಮೇಲೆ ಇನ್ನಷ್ಟು ಸ್ಪಷ್ಟ ಮಾಹಿತಿ ದೊರೆಯಲಿದೆ.

ಕೂಡ್ಲಿಗಿಯಲ್ಲಿ ಕೊರೋನಾ ನಿಯಮ ಉಲ್ಲಂಘನೆ: ಹೊರ ರಾಜ್ಯದ ಕಾರ್ಮಿಕರಿಂದ ಕೆಲಸ

68 ಕೊರೋನಾ ಸಕ್ರಿಯ ಪ್ರಕರಣಗಳು

ಈಗಾಗಲೇ ಈ ಗ್ರಾಮದಲ್ಲಿ 68ಕ್ಕೂ ಹೆಚ್ಚು ಕೊರೋನಾ ಸಕ್ರಿಯ ಪ್ರಕರಣಗಳಿರುವುದ್ದರಿಂದ ಬ್ಯಾರಿಕೇಡ್‌ ಹಾಕಿ ನಿರ್ಬಂಧಿಸಲಾಗಿದೆ. ಭಾನುವಾರ ತಾಲೂಕು ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಈ ಗ್ರಾಮದಲ್ಲಿ ಮನೆ ಮನೆ ಸರ್ವೇ ಕಾರ್ಯ ಮಾಡಿ ಕೊರೋನಾ ಪರೀಕ್ಷೆ ಮಾಡಲು ಮುಂದಾಗಿದ್ದು, ಇನ್ನೂ ಹೆಚ್ಚಿನ ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆಗಳಿವೆ.

ಈಗಾಗಲೇ ವಾರದಿಂದ 11 ಜನರು ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರು ಮೃತಪಟ್ಟಿದ್ದಾರೆ. ಅವರಲ್ಲಿ ಯಾರೂ ಕೊರೋನಾದಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢೀಕರಿಸಿಲ್ಲ. ಗ್ರಾಮದಲ್ಲಿ 68ಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು ಇದ್ದು ಇನ್ನೂ ಮನೆ ಮನೆ ಸರ್ವೇ ಕಾರ್ಯ ನಡೆಯಲಿದೆ ಎಂದು ಪಿಡಿಒ ಖದೀರ್‌ ಗುಂಡುಮುಣಗು ತಿಳಿಸಿದ್ದಾರೆ. 

ಚಿಕ್ಕಜೋಗಿಹಳ್ಳಿ ಗ್ರಾಮದಲ್ಲಿ 55ಕ್ಕೂ ಹೆಚ್ಚು ಕೊರೋನಾ ಸಕ್ರಿಯ ಪ್ರಕರಣಗಳು ಇವೆ. ಆದರೆ ಶನಿವಾರದಿಂದ ಭಾನುವಾರದ ಎರಡು ದಿನಗಳಲ್ಲಿ ಮೂವರು ಮೃತಪಟ್ಟಿದ್ದು, ಅವರಾರೂ ಕೋವಿಡ್‌ನಿಂದ ಮರಣ ಹೊಂದಿಲ್ಲ. ಬದಲಾಗಿ ವಿವಿಧ ಕಾಯಿಲೆಗಳಿಂದ ಅಸು ನೀಗಿದ್ದಾರೆ ಎಂಬುದು ದೃಢಪಟ್ಟಿದೆ. ಇದಕ್ಕೂ ಮುಂಚೆ ಈ ಗ್ರಾಮದಲ್ಲಿ ಐದಾರು ವೃದ್ಧರು ಸಹ ವಿವಿಧ ಕಾಯಿಲೆಗಳಿಂದ ಮೃತಪಟ್ಟಿರುವುದು ನಮ್ಮ ಇಲಾಖೆ ಗಮನಕ್ಕೆ ಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಿ ಆನಂತರ ಮಾಹಿತಿ ನೀಡಲಾಗುವುದು ಎಂದು ಕೂಡ್ಲಿಗಿ ತಾಲೂಕು ವೈದ್ಯಾಧಿಕಾರಿ ಡಾ. ಷಣ್ಮುಖನಾಯ್ಕ ಹೇಳಿದ್ದಾರೆ.
 

click me!