
ಬೆಂಗಳೂರು [ಡಿ.03]: ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಎರಡು ವಾಯುಭಾರ ಕುಸಿತ ಹಾಗೂ ಚುರುಕುಗೊಂಡಿರುವ ಹಿಂಗಾರು ಮಾರುತಗಳ ಪ್ರಭಾವದಿಂದ ರಾಜ್ಯದಲ್ಲಿ ಮುಂದಿನ ಒಂದೆರಡು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಕಳೆದ ನಾಲ್ಕೈದು ದಿನಗಳಿಂದ ರಾಜ್ಯದಲ್ಲಿ ಮತ್ತೆ ಹಿಂಗಾರು ಚುರುಕುಗೊಂಡಿದ್ದು, ದಕ್ಷಿಣ ಒಳನಾಡು, ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಇನ್ನೂ ಒಂದೆರಡು ದಿನ ಮಳೆ ಮುಂದುವರೆಯುವ ಸಾಧ್ಯತೆ ಇದೆ. ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಹಾಗೂ ಕರಾವಳಿಯ ಮೂರು ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.
ಅರಬ್ಬಿ ಸಮುದ್ರದಲ್ಲಿ ಒಟ್ಟಿಗೆ ಎರಡು ವಾಯುಭಾರ ಕುಸಿತ ಉಂಟಾಗಿವೆ. ಅದರಲ್ಲಿ ಈಗಾಗಲೇ ಉಂಟಾಗಿರುವ ಒಂದು ವಾಯುಭಾರ ಕುಸಿತ ಅರಬ್ ರಾಷ್ಟ್ರಗಳ ಕಡೆ ಸಾಗುತ್ತಿದ್ದು, ಒಂದೆರಡು ದಿನಗಳಲ್ಲಿ ಅದು ಚಂಡಮಾರುತವಾಗಿ ರೂಪುಗೊಳ್ಳುವ ಸಾಧ್ಯತೆ ಇದೆ. ಇನ್ನೊಂದು ಲಕ್ಷದ್ವೀಪದ ಬಳಿ ಇದ್ದು, ಒಂದೆರಡು ದಿನದಲ್ಲಿ ವಾಯುಭಾರ ಕುಸಿತ ಇನ್ನಷ್ಟುಪ್ರಬಲಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಆದರೆ, ಚಂಡಮಾರುತವಾಗಿ ರೂಪುಗೊಳ್ಳುವ ಬಗ್ಗೆ ಸ್ಪಷ್ಟಪಡಿಸಿಲ್ಲ ಎಂದು ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ ಸುನಿಲ್ ಗವಾಸ್ಕರ್ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಸೋಮವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯ ವಿರಾಜಪೇಟೆ, ಚಿಕ್ಕಮಗಳೂರಿನ ಲಿಂಗದಹಳ್ಳಿ ಹಾಗೂ ಹಾಸನದ ಹಳೇಬೀಡಿನಲ್ಲಿ ಅತಿ ಹೆಚ್ಚು ತಲಾ 6 ಸೆಂ.ಮೀ. ಮಳೆಯಾಗಿದೆ. ಉಳಿದಂತೆ ಕೊಡಗಿನ ನಾಪೋಕ್ಲು 5, ಚಿಕ್ಕಮಗಳೂರಿನ ಮೂಡಿಗೆರೆ, ಚಿಕ್ಕಮಗಳೂರು, ಹಾಸನದ ಬೇಳೂರು, ಹಾಸನ, ಮೈಸೂರಿನ ಪಿರಿಯಾಪಟ್ಟಣ, ಚಿತ್ರದುರ್ಗದ ಹೊಸದುರ್ಗದಲ್ಲಿ ತಲಾ 4, ಕೊಡಗಿನ ಭಾಗಮಂಡಲ, ಮಾದಾಪುರ, ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ, ಲಕ್ಕವಳ್ಳಿ, ಶಿವಾನಿ, ಕಡೂರು ಹಾಗೂ ಚಿತ್ರದುರ್ಗದಲ್ಲಿ ತಲಾ 3 ಸೆಂ.ಮೀ. ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.