
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಸೆ.23): ಹಚ್ಚಹಸಿರಿನಿಂದ ಕಂಗೊಳಿಸೋ ಸಂಪದ್ಭರಿ ಪ್ರದೇಶವನ್ನು ಹೊಂದಿರುವ ಚಿಕ್ಕಮಗಳೂರು ಜಿಲ್ಲೆ ಕುದರುಮುಖ ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿಕೊಂಡಂತಿರೋ ಕಳಸ ತಾಲೂಕಿನ ಕಾಡಂಚಿನ ಕುಗ್ರಾಮ ಬಲಿಗೆ. ನಕ್ಸಲ್ ನಾಯಕ ಸಾಕೇತ್ ರಾಜನ್ ಎನ್ಕೌಂಟರ್ ಆದ ಸ್ಥಳವೂ ಇದೆ.
100ಕ್ಕೂ ಹೆಚ್ಚು ಮನೆಗಳಿವೆ. ಬಹುತೇಕರ ಬಳಿ ಮೊಬೈಲೂ ಇದೆ. ಆದ್ರೆ, ನೆಟ್ವರ್ಕ್ ಬೇಕು ಅಂದ್ರೆ ಕನಿಷ್ಠ ಐದು ಕಿ.ಮೀ. ಬರಬೇಕು. ಅಲ್ಲೊಂದು ಮರದ ಬಳಿ ಒಂದೆರಡು ಪಾಯಿಂಟ್ ನೆಟ್ವರ್ಕ್ ಸಿಗುತ್ತೆ. ನಮಗೊಂದು ಟವರ್ ನಿರ್ಮಿಸಿಕೊಡಿ ಅಂತ ಬೇಡಿ ಸುಸ್ತಾಗಿ ವಿಧಾನಸಭಾ ಚುನಾವಣೆಯನ್ನ ಬಹಿಷ್ಕರಿಸಿ, ಓಟಿಪಿ ಬರ್ಲಿ, ಓಟ್ ಹಾಕ್ತೀವಿ ಅಂತ ಅಭಿಯಾನ ಮಾಡಿದ್ರು. ಆದ್ರೆ, ಅಧಿಕಾರಿಗಳ ಬೆಣ್ಣೆ ಮಾತಿಗೆ ಮರುಳಾಗಿ ಓಟ್ ಹಾಕಿದ್ರು. ಇದೀಗ, ಮತ್ತದೇ ಸಮಸ್ಯೆ. ಅಧಿಕಾರಿಗಳಿಗೆ ಕೇಳಿದ್ರೆ ಕಂದಾಯ ಇಲಾಖೆ ಅಧಿಕಾರಿಗಳು ಅರಣ್ಯ ಅಧಿಕಾರಿಗಳ ಮೇಲೆ ಹಾಕ್ತಾರೆ. ಅರಣ್ಯ ಅಧಿಕಾರಿಗಳು ಕಂದಾಯ ಇಲಾಖೆ ಮೇಲೆ ಹಾಕ್ತಿದ್ದಾರೆ. ಗಂಡ-ಹೆಂಡ್ತಿ ಜಗಳದಲ್ಲಿ ಕೂಸು ಬಡವಾಯ್ತು ಅನ್ನಂಗೆ ಇಬ್ಬರ ಆರೋಪ-ಪ್ರತ್ಯಾರೋಪದಲ್ಲಿ ಕುಗ್ರಾಮದ ಜನ ಕಂಗಾಲಾಗಿದ್ದಾರೆ.
ಅಂಗನವಾಡಿ ಜಾಗ ಅಕ್ರಮ ಒತ್ತುವರಿ : ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಗ್ರಾಮ ಪಂಚಾಯಿತಿ ಸದಸ್ಯರ ಪ್ರತಿಭಟನೆ
ಟವರ್‌ಗೆ ಬೇಕು ಎರಡು ಗುಂಟೆ ಜಾಗ :
ಬಿಎಸ್ಎನ್ಎಲ್ ಅವ್ರು ಟವರ್ ಹಾಕಿಕೊಡಲು ಸಿದ್ಧರಿದ್ದಾರೆ. ಅದಕ್ಕೆ ಬೇಕಾಗಿರೋದು ಎರಡೇ ಎರಡು ಗುಂಟೆ ಜಾಗವಷ್ಟೆ. ಸಾವಿರಾರು ಎಕರೆ ಅರಣ್ಯ ನೂರಾರು ಎಕರೆ ಕಂದಾಯ ಭೂಮಿಯಲ್ಲಿ ಇವ್ರಿಗೆ ಟವರ್ ನಿರ್ಮಾಣ ಮಾಡಲು ಎರಡು ಕುಂಟೆ ಜಾಗಕ್ಕೆ ಬರವಿದೆ. ಅಧಿಕಾರಿಗಳು 2 ಗುಂಟೆ ಜಾಗ ನೀಡಿದ್ರೆ ಟವರ್ ತಲೆ ಎತ್ತುತ್ತೆ. ಆದ್ರೆ, ಎಲ್ಲರೂ ಒಬ್ಬರ ಮೇಲೊಬ್ಬರು ಆರೋಪ ಮಾಡ್ಕೊಂಡು ಕಾಲ ಕಳೆಯುತ್ತಿದ್ದಾರೆ. ಸ್ಥಳಿಯರು ಅಧಿಕಾರಿಗಳನ್ನ ಭೇಟಿ ಮಾಡಿದ್ರೆ ಇನಾಂ ಭೂಮಿ, ಕಂದಾಯ ಭೂಮಿ, ರಿಸರ್ವ್ ಫಾರೆಸ್ಟ್ ಅಂತ ಕಥೆ ಹೇಳ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಚುನಾವಣೆ ಮುಗ್ದು ನಾಲ್ಕು ತಿಂಗಳಾದ್ರೂ ಟವರ್ ಇಲ್ಲ
ಚುನಾವಣೆ ಬಹಿಷ್ಕಾರ ಹಾಕಿದಾಗ ಬಂದು ಬೆಣ್ಣೆಯಲ್ಲಿ ಕೂದಲು ತೆಗೆದಂತೆ ಮಾತನಾಡಿದ ಅಧಿಕಾರಿಗಳೇ ಇಂದು ನಾವು ಬಂದ ದಾರಿಗೆ ಸುಂಕ ಇಲ್ಲ ಎಂದು ಯೂಟರ್ನ್ ಹೊಡೆದಿದ್ದಾರೆ. ಕೂಡಲೇ ಸರ್ಕಾರ ಜಾಗ ನೀಡಿ ಟವರ್ ನಿರ್ಮಿಸಿ ಕೊಡಬೇಕೆಂದು ಆಗ್ರಹಿಸಿದ್ದಾರೆ. ಹೋರಾಟ ಮಾಡೋದ್ರೆ ಕೇಸ್ ಹಾಕ್ತಾರೆಂದು ಹೋರಾಡೋಕು ಇವ್ರಿಗೆ ಭಯ. ಒಟ್ಟಾರೆ, ಕಾಫಿನಾಡ ಕಳಸ ತಾಲೂಕಿನ ನಕ್ಸಲ್ ಪೀಡಿತ ಪ್ರದೇಶ ಬಲಿಗೆ ಗ್ರಾಮಕ್ಕೆ ಮೊಬೈಲ್ ಮರಿಚೀಕೆಯಾಗಿದೆ. ಇದೊಂದೆ ಅಲ್ಲ. ಇಂತಹಾ ಹತ್ತಾರು ಗ್ರಾಮಗಳಿವೆ. ಸಂಬಂಧಪಟ್ಟೋರು ಸಂಬಂಧವಿಲ್ಲದಂತಿರೋದ್ರಿಂದ ಇಂದಿಗೂ ಇಲ್ಲಿನ ಕುಗ್ರಾಮಗಳ ಜನ ನಿರ್ಗತಿಕರಂತೆ ಬದುಕುತ್ತಿದ್ದಾರೆ. ಇಲ್ಲಿನ ಜನ ಬೇರೆ ಏನನ್ನೂ ಕೇಳ್ತಿಲ್ಲ. ಕೇಳ್ತಿರೋದು ಒಂದೇ ಒಂದು. ಟವರ್. ಅದನ್ನ ಬಿಎಸ್ಎನ್ಎಲ್ ಹಾಕಲು ರೆಡಿ ಇದೆ. ಆದ್ರೆ, ಸರ್ಕಾರ ಕೇವಲ 2 ಗುಂಟೆ ಜಾಗ ನೀಡೋದಕ್ಕೆ ನಾವು-ನೀವು ಅಂತಿರೋದು ನಿಜಕ್ಕೂ ದುರಂತ.