ಹಿಂದೆ ನೀವು ಏನೇನು ಮಾಡಿದ್ರಿ, ಹೇಗಿದ್ರಿ ಅನ್ನೋದು ನನಗೆ ಬೇಡ. ಮುಂದೆ ನೀವೆಲ್ಲಾ ಸರಿ ಇರಬೇಕು ಅಷ್ಟೇ. ಸಾರ್ವಜನಿಕರ ಸೇವೆ ಮಾಡುವುದರಲ್ಲಿ ಉದಾಸೀನ ಮಾಡುವುದು, ಭ್ರಷ್ಟಾಚಾರದಲ್ಲಿ ತೊಡಗುವುದು, ಜನರಿಗೆ ತೊಂದರೆ ಕೊಡುವುದು ಮಾಡಿದರೆ ಸರಿ ಇರಲ್ಲ.
ತುರುವೇಕೆರೆ (ಜೂ.02): ಹಿಂದೆ ನೀವು ಏನೇನು ಮಾಡಿದ್ರಿ, ಹೇಗಿದ್ರಿ ಅನ್ನೋದು ನನಗೆ ಬೇಡ. ಮುಂದೆ ನೀವೆಲ್ಲಾ ಸರಿ ಇರಬೇಕು ಅಷ್ಟೇ. ಸಾರ್ವಜನಿಕರ ಸೇವೆ ಮಾಡುವುದರಲ್ಲಿ ಉದಾಸೀನ ಮಾಡುವುದು, ಭ್ರಷ್ಟಾಚಾರದಲ್ಲಿ ತೊಡಗುವುದು, ಜನರಿಗೆ ತೊಂದರೆ ಕೊಡುವುದು ಮಾಡಿದರೆ ಸರಿ ಇರಲ್ಲ. ನಿಮ್ಮ ಕಾರ್ಯವೈಖರಿಯನ್ನು ತಿದ್ದಿಕೊಂಡು ಕರ್ತವ್ಯ ನಿರ್ವಹಿಸಿದರೆ ಒಳ್ಳೆಯದು ಎಂದು ನೂತನ ಶಾಸಕ ಎಂ.ಟಿ.ಕೃಷ್ಣಪ್ಪ ತಾಲೂಕು ಮಟ್ಟದ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು ನನ್ನ ವೇಗಕ್ಕೆ ಮತ್ತು ನನ್ನ ಮನಸ್ಥಿತಿಗೆ ತಕ್ಕಂತೆ ಕೆಲಸ ಮಾಡಬೇಕು. ಇಲ್ಲದಿದ್ದರೆ ಇಲ್ಲಿಂದ ಜಾಗ ಖಾಲಿ ಮಾಡಿ. ನನ್ನ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲು ನಿಮಗೆ ಆಗದಿದ್ದಲ್ಲಿ ನಾನೇ ನಿಮ್ಮನ್ನು ವರ್ಗ ಮಾಡಿಸುವ ಮುನ್ನ ನೀವೇ ನಿಮಗೆ ಎಲ್ಲಿಗೆ ಬೇಕೋ ಅಲ್ಲಿಗೆ ವರ್ಗ ಮಾಡಿಸಿಕೊಂಡು ಹೋಗಿ ಎಂದು ಕೃಷ್ಣಪ್ಪ ಅಧಿಕಾರಿಗಳಿಗೆ ನೇರವಾಗಿ ಹೇಳಿದರು.
ನನಗೆ ಸಿಕ್ಕ ಖಾತೆಯಲ್ಲಿ ಬಡವರ ಸೇವೆಗೆ ಅವಕಾಶವಿದೆ: ಸಚಿವ ಜಮೀರ್ ಅಹಮದ್
ಹಾಸ್ಟೆಲ್‌ಗಳಿಗೆ ಮತ್ತು ಅಂಗನವಾಡಿಗೆ ಸೇರುವವರು ಬಡವರ ಮಕ್ಕಳು. ಅವರ ಬಗ್ಗೆ ನಿಗಾ ಇಡಿ. ಅವರಿಗೆ ಸರ್ಕಾರ ಕೊಡುವ ಎಲ್ಲಾ ಸವಲತ್ತುಗಳು ಕಾಲಕಾಲಕ್ಕೆ ಸೇರಬೇಕು. ಅವರ ಹೊಟ್ಟೆ, ಬಟ್ಟೆಗೆ ಹಾಗೂ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಾರದು. ನಾನು ಯಾವುದೇ ಕ್ಷಣದಲ್ಲಿ ಹಾಸ್ಟೆಲ್‌ಗಳಿಗೆ ಭೇಟಿ ನೀಡಬಹುದು. ಆ ವೇಳೆ ಮಕ್ಕಳಿಂದ ದೂರು ಬಂದಲ್ಲಿ ನೀವೇ ಹೊಣೆಯಾಗುತ್ತೀರಿ ಎಂದು ಹಾಸ್ಟೆಲ್‌ನ ಅಧಿಕಾರಿಗಳಿಗೆ ಮತ್ತು ಸಿಡಿಪಿಓಗೆ ಹೇಳಿದರು.
ಬೆಸ್ಕಾಂನ ಅಧಿಕಾರಿಗಳು ಟಿಸಿ ಸುಟ್ಟು ಹೋದಲ್ಲಿ ಬದಲಾಯಿಸಿ ಕೊಡಲು ಪ್ರತಿ ಟಿಸಿ ಗೆ 15 ಸಾವಿರ ರುಪಾಯಿ ಲಂಚ ಕೇಳ್ತಾರಂತೆ ಅನ್ನೋ ಮಾಹಿತಿ ಇದೆ. ಈ ಪ್ರವೃತ್ತಿ ನನ್ನ ಕಾಲದಲ್ಲಿ ಮುಂದುವರೆದಲ್ಲಿ ಸರಿಯಿರುವುದಿಲ್ಲ ಎಂದು ಬೆಸ್ಕಾಂ ಅಧಿಕಾರಿಗಳಿಗೆ ಶಾಸಕರು ಎಚ್ಚರಿಕೆ ನೀಡಿದರು. ಕಾಲುವೆಯ ದುರಸ್ತಿಯ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರವಾಗಿದೆ ಎಂದು ನಾನು ಈಗಾಗಲೇ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದೇನೆ. ಎಲ್ಲೆಲ್ಲಿ ಕಾಲುವೆಯ ಅಗಲೀಕರಣ ಆಗಿದೆ. ಎಲ್ಲೆಲ್ಲಿ ದುರಸ್ತಿ ಕಾರ್ಯ ಆಗಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಹೇಮಾವತಿ ನಾಲಾ ಅಧಿಕಾರಿಗಳಿಗೆ ಶಾಸಕ ಕೃಷ್ಣಪ್ಪ ಸೂಚನೆ ನೀಡಿದರು.
ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಲು ಲಂಚ ತೆಗೆದುಕೊಳ್ಳಲಾಗುತ್ತಿದೆ ಎಂದು ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದಿವೆ. ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಆಗದೆ ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚಾಗಿ ಹೆರಿಗೆ ಆಗುತ್ತಿವೆ ಎಂಬ ಮಾಹಿತಿ ಇದೆ. ತುರುವೇಕೆರೆಯ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸುವ ಮೂಲಭೂತ ಸೌಕರ್ಯಗಳ ಕೊರತೆ ಇದೆಯೇ ಎಂದು ತಾಲೂಕು ವೈದ್ಯಾಧಿಕಾರಿಗಳನ್ನು ಕೃಷ್ಣಪ್ಪ ಪ್ರಶ್ನಿಸಿದರು. ಸರ್ಕಾರಿ ಆಸ್ಪತ್ರೆಗೆ ಬಡವರೇ ಬರುವುದು ಹೆಚ್ಚು. ಇನ್ನು ಕೆಲವೇ ದಿನಗಳಲ್ಲಿ ಆಸ್ಪತ್ರೆಯಲ್ಲೇ ಸಭೆ ನಡೆಸಿ ಸೂಕ್ತ ನಿರ್ದೇಶನ ನೀಡುವುದಾಗಿ ಹೇಳಿದರು.
ಅರಣ್ಯ ಒತ್ತುವರಿ ತೆರವಿಗೆ ಚಿಂತನೆ: ಸಿದ್ಧಗಂಗಾ ಮಠಕ್ಕೆ ಸಚಿವ ಈಶ್ವರ ಖಂಡ್ರೆ
ತಾಲೂಕಿನಲ್ಲಿ ಅಲ್ಪಸ್ವಲ್ಪ ಅರಣ್ಯ ಇದೆ. ಇದು ಉಳ್ಳವರ ಪಾಲಾಗುತ್ತಿದೆ. ಕೆಲವೇ ಮಂದಿಯ ಸ್ವತ್ತಾಗುತ್ತಿದೆ. ಕೂಡಲೇ ಅರಣ್ಯಾಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕೆಂದು ಸೂಚಿಸಿದರು. ಈ ಸಂದರ್ಭದಲ್ಲಿ ತಾಲೂಕು ಮಟ್ಟದ ಹಲವಾರು ಅಧಿಕಾರಿಗಳು ಉಪಸ್ಥಿತರಿದ್ದರು. ತಹಸೀಲ್ದಾರ್ ವೈ.ಎಂ.ರೇಣುಕುಮಾರ್ ಮತ್ತು ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಸತೀಶ್ ಕುಮಾರ್ ಶಾಸಕರನ್ನು ಅಭಿನಂದಿಸಿದರು.