ಹೆಲ್ಮೆಟ್ ಧರಿಸದವರಿಗೆ ಪೆಟ್ರೋಲ್ ಹಾಕಬಾರದೆಂದು ಪೊಲೀಸ್ ಕಮಿಷನರ್ ಎಂ. ಎನ್. ನಾಗರಾಜ ಆದೇಶ| ಹೆಲ್ಮೆಟ್ ಧರಿಸುವುದು ಕಡ್ಡಾಯವೆಂದು ಪೊಲೀಸರಿಗೆ ಹೆದರಿ ಧರಿಸಬಾರದು| ಜೀವ ರಕ್ಷಣೆಗಾಗಿ ಹೆಲ್ಮೆಟ್ ಧರಿಸಬೇಕು| ಒಂದು ವಾರದವರೆಗೆ ಸಮಯ ಕೊಡಲಾಗಿದೆ| ಬಳಿಕ ಹೆಲ್ಮೆಟ್ ಧರಿಸದೆ ಇರುವವರಿಗೆ ಪೆಟ್ರೋಲ್ ಹಾಕಿದರೆ ಅವರ ಪರವಾನಗಿ ರದ್ದು|
ಕಲಬುರಗಿ:(ಸೆ.22) ಹೆಲ್ಮೆಟ್ ಧರಿಸದವರಿಗೆ ಪೆಟ್ರೋಲ್ ಹಾಕಬಾರದೆಂದು ನಗರದ ಎಲ್ಲ ಪೆಟ್ರೋಲ್ ಬಂಕ್ ಮಾಲೀಕರಿಗೆ ತಿಳಿಸಲಾಗಿದೆ ಎಂದು ಕಲಬುರಗಿ ಪೊಲೀಸ್ ಕಮಿಷನರ್ ಎಂ. ಎನ್. ನಾಗರಾಜ ಹೇಳಿದರು.
ಶನಿವಾರ ಪೊಲೀಸ್ ಆಯುಕ್ತಾಲಯ ಕಚೇರಿಯಲ್ಲಿ ನಗರ ಪೆಟ್ರೋಲ್ ಮಾಲೀಕರಿಗೆ ಕರೆದ ಸಭೆಯ ನಂತರ ಸುದ್ದಿಗಾರರೊಂದಗೆ ಮಾತನಾಡಿದ ಅವರು, ಹೆಲ್ಮೆಟ್ ಧರಿಸುವುದು ಕಡ್ಡಾಯವೆಂದು ಪೊಲೀಸರಿಗೆ ಹೆದರಿ ಧರಿಸಬಾರದು. ಜೀವ ರಕ್ಷಣೆಗಾಗಿ ಧರಿಸಬೇಕು. ಒಂದು ವಾರದವರೆಗೆ ಸಮಯ ಕೊಡಲಾಗಿದೆ. ಒಂದು ವೇಳೆ ಒಂದು ವಾರದ ನಂತರ ಹೆಲ್ಮೆಟ್ ಧರಿಸದೆ ಇರುವವನ್ನು ಪೆಟ್ರೋಲ್ ಹಾಕುತ್ತಿರುವುದು ಕಂಡುಬಂದರೆ ಅವರ ಪರವಾನಗಿಯನ್ನು ರದ್ದು ಪಡಿಸುತ್ತೇನೆಂದು ಹೇಳಿದಾಗ ಎಲ್ಲರೂ ಸಮ್ಮತಿಸಿದ್ದಾರೆ ಎಂದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಒಂದು ವಾರ ಪೆಟ್ರೋಲ್ ಪಂಪ್‌ಗಳಲ್ಲಿ ವಾಹನ ಸವಾರರಿಗೆ ಜಾಗೃತಿ ಮೂಡಿಸಲಾಗುವುದು. ಪೆಟ್ರೋಲ್ ಬಂಕ್ ನಲ್ಲೆಲ್ಲಾ ಎಚ್ಚರಿಕೆ ಹಾಗೂ ಸೂಚನೆಯ ಸ್ಟಿಕ್ಕರ್ ಹಚ್ಚಲಾಗುವುದು. ಪ್ರೀತಿಯಿಂದ ಮನವರಿಕೆ ಮಾಡಲಾಗುವುದು. ಅದಕ್ಕೂ ಕೇಳದಿದ್ದರೆ ದಂಡ ಹಾಕುವುದು ಖಚಿತ ಎಂದು ತಿಳಿಸಿದರು.
ನಗರದ ಎಲ್ಲಾ ಪೆಟ್ರೋಲ್ ಬಂಕ್‌ಗಳಲ್ಲಿ 360 ಡಿಗ್ರಿ ಕ್ಯಾಮರಾ ಅಳವಡಿಸಬೇಕು. ಪ್ಲಾಸ್ಟಿಕ್ ಬಾಟಲ್ ಹಾಗೂ ವಾಟರ್ ಕ್ಯಾನ್‌ನಲ್ಲಿ ಪೆಟ್ರೋಲ್ ಹಾಕಬಾರದು. ನೋ ಹೆಲ್ಮೆಟ್ ನೋ ಪೆಟ್ರೋಲ್ (ಹೆಲ್ಮೆಟ್ ಇಲ್ಲದೆ ಪೆಟ್ರೋಲ್ ಹಾಕಲ್ಲ) ಎಂಬ ಸೂಚನಾ ಫಲಕವನ್ನು ಹಾಕಬೇಕು. ವಾಹನ ಸವಾರರು ಪೆಟ್ರೋಲ್ ಮಾಲಿಕರೊಂದಿಗೆ ಕಿರಿಕಿರಿ ಮಾಡಿದರೆ ದೂರು ಕೊಟ್ಟರೆ ಖಂಡಿತವಾಗಿ ಅವರ ಮೇಲೆ ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದರು.
ನಗರದಲ್ಲಿ ಪ್ರತಿ ಮನೆ ಮನೆಗೆ ಹೋಗಿ ಬಂಗಾರ, ಬೆಲೆಬಾಳುವ ಒಡವೆಗಳನ್ನು ಮನೆಯಲ್ಲಿಡಬಾರದು. ದೂರದ ಊರಿಗೆ ಹೋದರೆ ಹತ್ತಿರವಿರುವ ಪೊಲೀಸ್ ಠಾಣೆಗೆ ತಿಳಿಸಬೇಕು. ಆದಷ್ಟು ಮಟ್ಟಿಗೆ ಬ್ಯಾಂಕ್ ಲಾಕರ್‌ನಲ್ಲಿ ನಿಮ್ಮ ಬೆಲೆಬಾಳುವ ಆಭರಣ ಇಡಲು ಈಗಾಗಲೇ ಜಾಗೃತಿ ಮೂಡಿಸಲಾಗುತ್ತಿದೆ. ಸುಮಾರು ೨.೫೦ ಕರಪತ್ರಗಳನ್ನು ಸಹ ಹಂಚಲಾಗುತ್ತಿದೆ ಎಂದು ತಿಳಿಸಿದರು.