ಕೊಡಗು:; ಕಾಮಗಾರಿ ಮುಗಿಯುವ ಮೊದಲೇ ಬಿಲ್ಲು ಬಿಡುಗಡೆ? ಕ್ರೀಡಾಪಟುಗಳಿಗೆ ದೊರಕದ ಸಿಂಥೆಟಿಕ್ ಹಾಕಿ ಮೈದಾನ!

Published : Jun 24, 2023, 08:17 PM ISTUpdated : Jun 24, 2023, 08:20 PM IST
ಕೊಡಗು:; ಕಾಮಗಾರಿ ಮುಗಿಯುವ ಮೊದಲೇ ಬಿಲ್ಲು ಬಿಡುಗಡೆ? ಕ್ರೀಡಾಪಟುಗಳಿಗೆ ದೊರಕದ ಸಿಂಥೆಟಿಕ್ ಹಾಕಿ ಮೈದಾನ!

ಸಾರಾಂಶ

ಕೊಡಗು ಎಂದರೆ ದೇಶ ಪ್ರೇಮಿಗಳಷ್ಟೇ ಅಲ್ಲ ಕ್ರೀಡಾ ಪ್ರೇಮಿಗಳ ಸಂಖ್ಯೆಯೂ ಅಷ್ಟೇ ಇದೆ. ಹೀಗಾಗಿಯೇ ಕೊಡಗಿನ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವುದಕ್ಕಾಗಿ ತಾಲ್ಲೂಕು ಕೇಂದ್ರ ಸೋಮವಾರಪೇಟೆಯಲ್ಲಿ ನಾಲ್ಕು ಕೋಟಿ ವೆಚ್ಚದಲ್ಲಿ ಸಿಂಥೆಟಿಕ್ ಹಾಕಿ ಮೈದಾನ ನಿರ್ಮಾಣಕ್ಕೆ 2013 ರಲ್ಲಿಯೇ ಸರ್ಕಾರ ಒಪ್ಪಿಗೆ ನೀಡಿತ್ತು. ಆದರೆ ಅದಕ್ಕೆ ಭೂಮಿ ಪೂಜೆ ನಡೆದಿದ್ದು ಮಾತ್ರ 2018 ರಲ್ಲಿ. 

ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ

ಕೊಡಗು (ಜೂ.24) : ಕೊಡಗು ಎಂದರೆ ದೇಶ ಪ್ರೇಮಿಗಳಷ್ಟೇ ಅಲ್ಲ ಕ್ರೀಡಾ ಪ್ರೇಮಿಗಳ ಸಂಖ್ಯೆಯೂ ಅಷ್ಟೇ ಇದೆ. ಹೀಗಾಗಿಯೇ ಕೊಡಗಿನ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವುದಕ್ಕಾಗಿ ತಾಲ್ಲೂಕು ಕೇಂದ್ರ ಸೋಮವಾರಪೇಟೆಯಲ್ಲಿ ನಾಲ್ಕು ಕೋಟಿ ವೆಚ್ಚದಲ್ಲಿ ಸಿಂಥೆಟಿಕ್ ಹಾಕಿ ಮೈದಾನ ನಿರ್ಮಾಣಕ್ಕೆ 2013 ರಲ್ಲಿಯೇ ಸರ್ಕಾರ ಒಪ್ಪಿಗೆ ನೀಡಿತ್ತು. ಆದರೆ ಅದಕ್ಕೆ ಭೂಮಿ ಪೂಜೆ ನಡೆದಿದ್ದು ಮಾತ್ರ 2018 ರಲ್ಲಿ. 

2018 ರಲ್ಲಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ್ದರೂ ಇಂದಿಗೂ ಕಾಮಗಾರಿ ಪೂರ್ಣಗೊಂಡಿಲ್ಲ. ಮೈದಾನಕ್ಕೆ ಸಿಂಥೆಟಿಕ್ ಅಳವಡಿಸಿದ್ದರೂ ಅದಕ್ಕೆ ಬೇಕಾದ ನೀರಿನ ವ್ಯವಸ್ಥೆ ಇಲ್ಲ. ಹೀಗಾಗಿ ಸಿಂಥೆಟಿಕ್ ಕಳೆದ ನಾಲ್ಕು ವರ್ಷಗಳ ಬೇಸಿಗೆಯಲ್ಲಿ ಒಣಗಿ ಬಹುತೇಕ ಹಾಳಾಗುವ ಸ್ಥಿತಿ ತಲುಪಿದೆ. ಇನ್ನು ಮೈದಾನದ ಸುತ್ತ ಅಳವಡಿಸಬೇಕಾಗಿರುವ ಫೆನ್ಸ್ ಕೂಡ ಅಳವಡಿಸಿಲ್ಲ. ಮೈದಾನದ ಪಕ್ಕದಲ್ಲಿ ಸಂಪ್ ಮಾಡಬೇಕಾಗಿದ್ದು ಆ ಕೆಲಸವೂ ಬಾಕಿ ಇದೆ. ಮುಖ್ಯವಾಗಿ ಮೈದಾನಕ್ಕೆ ವಿದ್ಯುತ್ ಸಂಪರ್ಕದ ಅಗತ್ಯವಿದ್ದು, ಅದರ ಸಂಪರ್ಕವನ್ನು ಇಂದಿಗೂ ನೀಡಿಲ್ಲ. 

ಕಾರ್ಯಕರ್ತರು ಎದ್ದರೆ ಕಾಂಗ್ರೆಸ್ ಧೂಳಿಪಟವಾಗುತ್ತೆ; ಆರ್.ಅಶೋಕ್

ಮೈದಾನದ ಸಂಪೂರ್ಣ ಕಾಮಗಾರಿಯ ಹೊಣೆಯನ್ನು ಹೈದರಾಬಾದಿನ ದಿ ಗ್ರೇಟ್ ಸ್ಪೋರ್ಟ್ಸ್(The great sports) ಎಂಬ ಕಂಪನಿಗೆ ಟೆಂಡರ್ ಮೂಲಕ ಪಡೆದಿತ್ತು. ಆದರೂ ಮೈದಾನಕ್ಕೆ ಅಗತ್ಯವಿರುವ ವಿದ್ಯುತ್ ಸಂಪರ್ಕದ ಕೆಲಸವನ್ನು ಸ್ಥಳೀಯ ವ್ಯಕ್ತಿಯೊಬ್ಬರಿಗೆ ಒಳಗುತ್ತಿಗೆ ನೀಡಲಾಗಿತ್ತು ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಮೈದಾನಕ್ಕೆ ಮೀಸಲಾಗಿದ್ದ ಅನುದಾನದಲ್ಲಿ ಎಲ್ಲಾ ಹಣವನ್ನು ಬಿಡುಗಡೆ ಮಾಡಲಾಗಿದೆ ಎನ್ನಲಾಗಿದೆ. ಆದರೆ ಒಳಗುತ್ತಿಗೆ ಪಡೆದ ವ್ಯಕ್ತಿಗೆ ತನ್ನ ಕೆಲಸದ ಹಣ ಸಿಗದೇ ಇರುವುದರಿಂದ ವಿದ್ಯುತ್ ಸಂಪರ್ಕ ನೀಡಿಲ್ಲ ಎಂಬುವುದು ಕೂಡ ಬಹಿರಂಗವಾಗಿದೆ. 

ಕಾಮಗಾರಿ ಮುಗಿಯದೇ ಕ್ರೀಡಾಪಟುಗಳಿಗೆ ತೊಂದರೆ ಆಗುತ್ತಿದೆ ಎನ್ನುವ ತೀವ್ರ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ  ಮಡಿಕೇರಿ ನೂತನ ಶಾಸಕ ಡಾ. ಮಂತರ್ ಗೌಡ ಅವರು ಕ್ರೀಡಾಂಗಣಕ್ಕೆ ಭೇಟಿ ನೀಡಿದ್ದರು. ಈ ವೇಳೆ ವಿದ್ಯುತ್ ಸಂಪರ್ಕದ ಕೆಲಸದ ಗುತ್ತಿಗೆ ಪಡೆದಿದ್ದ ವ್ಯಕ್ತಿಯೇ ಸ್ವತಃ ಶಾಸಕರ ಎದುರು ನನ್ನ ಕಾಮಗಾರಿ ಭಾಗದ ಹಣ ಬಿಡುಗಡೆಯಾಗಿಲ್ಲ. ಹೀಗಾಗಿ ವಿದ್ಯುತ್ ಸಂಪರ್ಕ ಕೊಡಲ್ಲ ಎಂದು ಗದ್ದಲ ಮಾಡಿದ್ದರು ಎನ್ನಲಾಗಿದೆ. ಇದರಿಂದ ಸಿಟ್ಟಿಗೆದ್ದಿದ್ದ ಶಾಸಕ ಮಂತರ್ ಗೌಡ(Mantar gowda MLA) ವಿದ್ಯುತ್ ಸಂಪರ್ಕ ಕೊಡಲ್ಲ ಎನ್ನುವುದಕ್ಕೆ ನೀನ್ಯಾರು ಎಂದು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. 

ಈ ಕುರಿತು ಕೊಡಗು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ವಿಸ್ಮಯೀ ಚಕ್ರವರ್ತಿ ಅವರನ್ನು ಕೇಳಿದರೆ, ಈ ಕುರಿತು ಇಲಾಖೆಯ ಮೇಲಧಿಕಾರಿಗಳಿಗೆ ತಿಳಿಸಿಲಾಗಿದೆ. ಇನ್ನೊಂದು ತಿಂಗಳಲ್ಲಿ ಎಲ್ಲಾ ಕಾಮಗಾರಿ ಮುಗಿಸಿ ಉದ್ಘಾಟನೆಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದಾರೆ. 

ವಿದ್ಯುತ್ ಸಂಪರ್ಕ ಕೊಡಲು ಒಳಗುತ್ತಿಗೆ ಪಡೆದಿದ್ದವರು ವಿದ್ಯುತ್ ಸಂಪರ್ಕ ಕೊಡದಿರುವ ವಿಷಯವನ್ನು ಅಧಿಕಾರಿಗಳಿಗೆ ತಿಳಿಸಿದ್ದೇವೆ. ಅದೆಲ್ಲವನ್ನು ಇನ್ನೊಂದು ತಿಂಗಳಲ್ಲಿ ಸರಿಪಡಿಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ ಎಂದು ವಿಸ್ಮಯಿ ಅವರು ತಿಳಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸದ ಶಾಸಕ ಡಾ. ಮಂತರ್ ಗೌಡ ಇದನ್ನು ವಿಧಾನಸಭೆ ಅಧಿವೇಶನದಲ್ಲಿಯೇ ಚರ್ಚಿಸುವುದಾಗಿ ಹೇಳಿದ್ದಾರೆ. 

ಕೊಡಗು: ಕೊಳವೆ ಬಾವಿಗೆ ಲಕ್ಷ ಲಕ್ಷ ಹಣ ಸುರಿದ ನಗರಸಭೆ, ಸಾರ್ವಜನಿಕರ ಆಕ್ರೋಶ

ಏನೇ ಆಗಲಿ 10 ವರ್ಷಗಳ ಹಿಂದೆ ಒಪ್ಪಿಗೆ ಪಡೆದ ಸಿಂಥೆಟಿಕ್ ಮೈದಾನದ ಕಾಮಗಾರಿ ನಾಲ್ಕು ವರ್ಷಗಳ ಹಿಂದೆ ಆರಂಭವಾಗಿ ಇಂದಿಗೂ ಪೂರ್ಣಗೊಳ್ಳದೆ ಇರುವುದು ಕ್ರೀಡಾಪಟುಗಳಿಗೆ ನಿರಾಸೆಯಾಗಿದೆ. ಇನ್ನಾದರೂ ಶಾಸಕರು, ಸರ್ಕಾರ ಇತ್ತ ಗಮನಹರಿಸಿ ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸಿ ಕ್ರೀಡಾಪಟುಗಳ ಬಳಕೆಗೆ ಮುಕ್ತಗೊಳಿಸುತ್ತಾ ಕಾದು ನೋಡಬೇಕಾಗಿದೆ.

PREV
Read more Articles on
click me!

Recommended Stories

ಕಾಂಗ್ರೆಸ್ ಮುಖಂಡ ಗಣೇಶ್ ಗೌಡ ಕೊಲೆ ರಹಸ್ಯ ರಿವೀಲ್: ಪೊಲೀಸರ ಬಲೆಗೆ ಬಿದ್ದ ಮೂವರು!
ರಾಮನಗರದ ರೇವಣಸಿದ್ದೇಶ್ವರ ಬೆಟ್ಟದಲ್ಲಿ ದುರಂತ: ದೇವರ ದರ್ಶನಕ್ಕೂ ಮುನ್ನವೇ ಕಂದಕ ಸೇರಿದ ಭಕ್ತ!