ರೈಲು ಸೇವೆಯನ್ನು ಧಾರವಾಡದಿಂದ ಬೆಳಗಾವಿವರೆಗೆ ವಿಸ್ತರಿಸಬೇಕು ಎಂಬ ಬೇಡಿಕೆ ಕೇಳಿಬಂದಿತ್ತು. ಆದರೆ, ನಮ್ಮಲ್ಲಿ ಡಬಲಿಂಗ್ ಕಾಮಗಾರಿ ಪ್ರಗತಿಯಲ್ಲಿದೆ. ಹಾಗಾಗಿ, ವಂದೇ ಭಾರತ ರೈಲು ಸೇವೆಯನ್ನು ಬೆಳಗಾವಿಯವರೆಗೆ ವಿಸ್ತರಣೆಗೆ ಸಾಧ್ಯವಾಗಿಲ್ಲ: ಈರಣ್ಣ ಕಡಾಡಿ
ಬೆಳಗಾವಿ(ಜೂ.24): ವಂದೇ ಭಾರತ ರೈಲು ಸೇವೆಯನ್ನು ಧಾರವಾಡದಿಂದ ಬೆಳಗಾವಿವರೆಗೆ ವಿಸ್ತರಣೆಗೆ ತಾಂತ್ರಿಕ ಸಮಸ್ಯೆ ಎದುರಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು. ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ವಂದೇ ಭಾರತ ರೈಲು ಬೆಂಗಳೂರಿನಿಂದ ಧಾರವಾಡ ಮಾರ್ಗದಲ್ಲಿ 110 ಕಿ.ಮೀ.ವೇಗದಲ್ಲಿ ಸಂಚರಿಸುತ್ತದೆ. ಆರೂವರೆ ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಅದನ್ನು 130 ಕಿ.ಮೀ.ವೇಗ ಮಾಡಿ ನಾಲ್ಕೂವರೆಯಿಂದ ಐದು ಗಂಟೆಯವರೆಗೆ ಪ್ರಯಾಣ ಮುಗಿಸುವ ಯೋಜನೆ ರೂಪಿಸಲಾಗುತ್ತಿದೆ. ಈ ರೈಲು ಸೇವೆಯನ್ನು ಧಾರವಾಡದಿಂದ ಬೆಳಗಾವಿವರೆಗೆ ವಿಸ್ತರಿಸಬೇಕು ಎಂಬ ಬೇಡಿಕೆ ಕೇಳಿಬಂದಿತ್ತು. ಆದರೆ, ನಮ್ಮಲ್ಲಿ ಡಬಲಿಂಗ್ ಕಾಮಗಾರಿ ಪ್ರಗತಿಯಲ್ಲಿದೆ. ಹಾಗಾಗಿ, ವಂದೇ ಭಾರತ ರೈಲು ಸೇವೆಯನ್ನು ಬೆಳಗಾವಿಯವರೆಗೆ ವಿಸ್ತರಣೆಗೆ ಸಾಧ್ಯವಾಗಿಲ್ಲ ಎಂದು ತಿಳಿಸಿದರು.
ಬೆಳಗಾವಿ: ಫ್ರೀ ಸಂಚಾರ, 50 ಗ್ರಾಂ ಚಿನ್ನ ಎಗರಿಸಿದ ಕಳ್ಳರು!
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಚನೆಯಾಗಿ 9 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಸಾಧನೆ ಮೆಲಕು ಹಾಕಲು ಒಂದು ತಿಂಗಳ ಕಾಲ ವಿಶೇಷ ಕಾರ್ಯಕ್ರಮವನ್ನು ಜೂ. 25 ರಂದು ಬೆಳಗಾವಿಯ ಗಾಂಧಿ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಪಾಲ್ಗೊಳ್ಳುವರು.
ಪ್ರಧಾನಿ ಮೋದಿ ನೀಡಿದ ಭರವಸೆಯಂತೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ, ಭದ್ರೀನಾಥ, ಕೇದಾರನಾಥ, ಉಜ್ಜಯಿನಿಯಲ್ಲಿ ಮಾಡಿರುವ ಕಾರಿಡಾರ್, ನೂತನ ಸಂಸತ್ತಿನ ಕಟ್ಟಡ ಲೋಕಾರ್ಪಣೆ, ಆನ್‌ಲೈನ್ ವ್ಯವಹಾರ, ಉಜ್ವಲ ಯೋಜನೆ ಸೇರಿದಂತೆ ಸಾಕಷ್ಟುಕೊಡುಗೆಯನ್ನು ದೇಶದ ಜನತೆಗೆ ನೀಡಿದ್ದಾರೆ. ಜಮ್ಮು- ಕಾಶ್ಮೀರದಲ್ಲಿ ಆರ್ಟಿಕಲ್ 370 ತೆಗೆದು ಹಾಕಿದ್ದು, ತ್ರಿವಳಿ ತಲಾಖ್ ನಿಷೇಧ, ನಾಗರಿಕತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಲಾಗಿದೆ ಎಂದರು.
ಕೋವಿಡ್-19 ವೇಳೆ ಕೇಂದ್ರ ಕೈಗೊಂಡಿರುವ ಕ್ರಮದಿಂದಾಗಿ ಇಡೀ ವಿಶ್ವವೇ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದದೆ. ಅಲ್ಲದೇ, ಯೋಗವನ್ನು ವಿಶ್ವಕ್ಕೆ ಪರಿಚಯಿಸಿದ ಕೀರ್ತಿಯೂ ಮೋದಿಗೆ ಸಲ್ಲುತ್ತದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಸದೆ ಮಂಗಲ ಅಂಗಡಿ, ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಅನಿಲ ಬೆನಕೆ, ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಇದ್ದರು.