ರಂಜಾನ್‌ ಮಾರುಕಟ್ಟೆಗೆ ಕೊರೋನಾ ಗುನ್ನ: ಬಿಕೋ ಎನ್ನುತ್ತಿದೆ ಮಾರ್ಕೆಟ್‌..!

By Kannadaprabha NewsFirst Published May 3, 2020, 7:26 AM IST
Highlights

ನಾಲ್ಕೈದು ಜಿಲ್ಲೆಯ 400ಕ್ಕೂ ಹೆಚ್ಚು ವ್ಯಾಪಾರಿಗಳಿಂದ ಡ್ರೈಫ್ರೂಟ್‌, ಬಟ್ಟೆ, ಮಾರಾಟ ನಡೆಯುತ್ತಿತ್ತು|ಅಹೋರಾತ್ರಿ ನಡೆಯುತ್ತಿದ್ದ ವ್ಯಾಪಾರ| 1997ರಿಂದ ಶಾ ಬಝಾರ್‌ ರಂಜಾನ್‌ ಮಾರುಕಟ್ಟೆ ನಡೆಯುತ್ತಿದೆ| ಕೊರೋನಾಕ್ಕಾಗಿ ಇದೇ ಮೊದಲ ಬಾರಿಗೆ ಸ್ಥಗಿತಗೊಂಡು ವ್ಯಾಪಾರಿಗಳಿಗೆ, ಬಡವರಿಗೆ ಸಮಸ್ಯೆ ಆಗಿದೆ|

ಮಯೂರ ಹೆಗಡೆ

ಹುಬ್ಬಳ್ಳಿ(ಮೇ.03): ಕಳೆದ 20-22 ವರ್ಷದಿಂದ ಇಲ್ಲಿನ ಶಾ ಬಝಾರನಲ್ಲಿ ಸಾಂಗವಾಗಿ ನಡೆದುಕೊಂಡು ಬಂದಿದ್ದ ರಂಜಾನ್‌ ತಿಂಗಳ ಮಾರುಕಟ್ಟೆಗೆ ಈ ಬಾರಿ ಕೊರೋನಾ ತಡೆಯೊಡ್ಡಿದೆ. ಹಗಲು, ರಾತ್ರಿ ಜಾತ್ರೆಯಂತೆ ಜರುಗುತ್ತಿದ್ದ ಬೀದಿ ಈಗ ಬಿಕೋ ಎನ್ನುತ್ತಿದೆ.

ರಂಜಾನ್‌ ಮಾಸ ಆರಂಭವಾದ ಒಂದು ವಾರದಲ್ಲಿಯೇ ದುರ್ಗದಬೈಲ್‌, ಶಾ ಬಝಾರ್‌ ಮಾರುಕಟ್ಟೆ ರಸ್ತೆಯಲ್ಲಿ 400ಕ್ಕೂ ಹೆಚ್ಚು ಅಂಗಡಿಗಳು ತಲೆ ಎತ್ತುತ್ತಿದ್ದವು. ಹುಬ್ಬಳ್ಳಿ, ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ, ಬಳ್ಳಾರಿ, ಕೊಪ್ಪಳ ಸೇರಿದಂತೆ ಹಲವೆಡೆಯಿಂದ ವ್ಯಾಪಾರಿಗಳು ಬಂದು ಇಲ್ಲಿ ಒಣಹಣ್ಣು, ಬಟ್ಟೆ, ಪಾತ್ರೆ, ಪಾದರಕ್ಷೆ, ಸುಗಂಧ ದ್ರವ್ಯ, ಅಲಂಕಾರಿಕ ವಸ್ತುಗಳ ವಹಿವಾಟು ನಡೆಸುತ್ತಿದ್ದರು.

ಕೊರೋನಾ ಸೋಂಕಿತನ ಟ್ರಾವೆಲ್‌ ಹಿಸ್ಟರಿ ನೋಡಿ ಬೆಚ್ಚಿ ಬಿದ್ದ ಹುಬ್ಬಳ್ಳಿ..!

ತಿಂಗಳ ಅವಧಿಯಲ್ಲಿ ಕೋಟ್ಯಂತರ ರು. ವ್ಯಾಪಾರ ನಡೆಯುತ್ತಿತ್ತು. ರಂಜಾನ್‌ ಹಿಂದಿನ ದಿನ ಚಾಂದ್‌ ರಾತ್‌ ಸೇರಿ ಎರಡು- ಮೂರು ದಿನ 24 ಗಂಟೆಗಳ ಕಾಲ ನಿರಂತರವಾಗಿ ವ್ಯಾಪಾರ ಇರುತ್ತಿತ್ತು. ಮುಸ್ಲಿಂ ಸಮುದಾಯ ಮಾತ್ರವಲ್ಲದೆ ಹಿಂದೂ, ಕ್ರಿಶ್ಚಿಯನ್ನರು ಕೂಡ ಇಲ್ಲಿಗೆ ಬಂದು ಖರೀದಿಯಲ್ಲಿ ತೊಡಗುತ್ತಿದ್ದರು. ಕಾಲಿಡಲೂ ಆಗದಷ್ಟುಕಿಕ್ಕಿರಿದ ಜನಸಂದಣಿ ಇಲ್ಲಿ ಸಾಮಾನ್ಯವಾಗಿತ್ತು. ಆದರೆ ಕೊರೋನಾ ಇವೆಲ್ಲದಕ್ಕೂ ಬ್ರೇಕ್‌ ಹಾಕಿದೆ.

ರಂಜಾನ್‌ ಮಾರುಕಟ್ಟೆಗಾಗಿ ಫೆಬ್ರವರಿ, ಮಾಚ್‌ರ್‍ ಆರಂಭದಲ್ಲೇ ಡ್ರೈಫ್ರೂಟ್ಸ್‌, ಬಟ್ಟೆಮತ್ತಿತರ ಸರಕನ್ನು ಮುಂಬೈ, ಅಹ್ಮದಾಬಾದ್‌, ದೆಹಲಿ, ಗುಜರಾತಿನಿಂದ ವ್ಯಾಪಾರಿಗಳು ತರಿಸಿ ಇಟ್ಟುಕೊಂಡಿದ್ದಾರೆ. ಇಲ್ಲಿನ ಹೋಲ್‌ಸೇಲ್‌ ವ್ಯಾಪಾರಿಗಳಿಂದ ವಸ್ತುಗಳನ್ನು ಖರೀದಿಸಿ ಚಿಲ್ಲರೆ ವ್ಯಾಪಾರದಲ್ಲಿ ತೊಡಗುತ್ತಿದ್ದವರೆಲ್ಲ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕಳೆದ 20 ವರ್ಷದಿಂದ ಶಾ ಬಝಾರ್‌ನಲ್ಲಿ ಡ್ರೈಫ್ರೂಟ್‌ ವ್ಯಾಪಾರ ಮಾಡುತ್ತಿರುವ ಸಯ್ಯದ್‌ ಸುಲೇಮಾನ್‌ ದೊಡ್ಡಮನಿ, ಈಗಾಗಲೇ ಮುಂಬೈನಿಂದ ಸರಕನ್ನು ತಂದಿಟ್ಟುಕೊಂಡಿದ್ದೇವೆ. ಲಾಕ್‌ಡೌನ್‌ ಸಡಿಲವಾದರೂ ಇಲ್ಲಿ ವ್ಯಾಪಾರಕ್ಕೆ ಅನುಮತಿ ನೀಡುವ ಬಗ್ಗೆ ಅನುಮಾನ ಇದೆ. ಹೀಗಾಗಿ ಲಕ್ಷಾಂತರ ರು. ಬಂಡವಾಳ ಹೂಡಿಕೆ ನಷ್ಟವಾಗಲಿದೆ ಎಂದರು.

ಬಟ್ಟೆ ವ್ಯಾಪಾರಸ್ಥ ಇಕ್ಬಾಲ್‌ ಅಹ್ಮದ್‌ ಬ್ಯಾಳಿ, 1997ರಿಂದ ಶಾ ಬಝಾರ್‌ ರಂಜಾನ್‌ ಮಾರುಕಟ್ಟೆ ನಡೆಯುತ್ತಿದೆ. ಕೊರೋನಾಕ್ಕಾಗಿ ಇದೇ ಮೊದಲ ಬಾರಿಗೆ ಸ್ಥಗಿತಗೊಂಡು ವ್ಯಾಪಾರಿಗಳಿಗೆ, ಬಡವರಿಗೆ ಸಮಸ್ಯೆ ಆಗಿದೆ ಎನ್ನುತ್ತಾರೆ.
ಶಾ ಬಝಾರ್‌ ರಂಜಾನ್‌ ಮಾರುಕಟ್ಟೆಗೆ ಬಡ, ಮಧ್ಯಮ ವ್ಯಾಪಾರಿಗಳು ಗ್ರಾಹಕರೇ ಹೆಚ್ಚು. ಈ ಬಾರಿ ಮಾರುಕಟ್ಟೆಬಂದಾಗಿ ಎಲ್ಲರೂ ತೊಂದರೆ ಪಡುವಂತಾಗಿದೆ ಎಂದು ಡ್ರೈಫ್ರೂಟ್‌ ವ್ಯಾಪಾರಿ ಸಯ್ಯದ್‌ ಸುಲೇಮಾನ್‌ ದೊಡ್ಡಮನಿ ಅವರು ಹೇಳಿದ್ದಾರೆ. 
 

click me!