ಉಪ ಚುನಾವಣೆಯಲ್ಲಿ ಜೆಡಿಎಸ್ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ: ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ| ಉಪಚುನಾವಣೆಯಲ್ಲಿ ಜೆಡಿಎಸ್ ಸ್ವಾತಂತ್ರವಾಗಿಯೇ ಸ್ಪರ್ಧಿಸಲಿದೆ| ಬೆಂಗಳೂರಿನ ರಾಜರಾಜೇಶ್ವರ ನಗರ ಹಾಗೂ ರಾಣೆಬೆನ್ನೂರು ಕ್ಷೇತ್ರಗಳಿಗೆ ಹೊರತುಪಡಿಸಿ, ಉಳಿದ ಕ್ಷೇತ್ರಗಳ ಉಪಚುನಾವಣೆಯ ದಿನಾಂಕ ನಿಗದಿ|
ಮೈಸೂರು (ಸೆ.21) : ಅತ್ತ ಚುನಾವಣಾ ಆಯೋಗ ಕರ್ನಾಟಕದ 15 ವಿಧಾನಸಭಾ ಕ್ಷೇತ್ರಗಳಿಗೆ ದಿನಾಂಕ ಫಿಕ್ಸ್ ಆಗುತ್ತಿದ್ದಂತೆ ಇತ್ತ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿದೆ. ಈ ಉಪ ಚುನಾವಣೆಯಲ್ಲಿ ಜೆಡಿಎಸ್ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲವೆಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ.
ಉಪಚುನಾವಣೆಯಲ್ಲಿ ಜೆಡಿಎಸ್ ಸ್ವಾತಂತ್ರವಾಗಿಯೇ ಸ್ಪರ್ಧಿಸಲಿದೆ, ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
2018 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಅಗತ್ಯವಿದ್ದ 213 ಕ್ಷೇತ್ರಗಳಲ್ಲಿ ಗೆಲ್ಲದೇ, ಬಹುಮತ ದೊರೆಯದ ಕಾರಣ, ಎರಡು ಹಾಗೂ ಮೂರನೇ ಸ್ಥಾನ ಪಡೆದಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿ ಸರಕಾರ ರಚಿಸುವಲ್ಲಿ ಸಫಲವಾಗಿತ್ತು. ಕೇವಲ 38 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದ ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದರು.
ಕರ್ನಾಟಕ 15 ಕ್ಷೇತ್ರದ ಉಪಚುನಾವಣೆಗೆ ದಿನಾಂಕ ಫಿಕ್ಸ್!: ಅನರ್ಹರಿಗೆ ಟೆನ್ಶನ್
ಆದರೆ, ಮೈತ್ರಿ ಸರಕಾರದ ವಿರುದ್ಧ ಬಂಡಾಯವೆದ್ದ ಕಾಂಗ್ರೆಸ್ ಹಾಗೂ ಜೆಡಿಎಸ್‌ನ 17 ಶಾಸಕರು ರಾಜೀನಾಮೆ ನೀಡಿದ ಫಲವಾಗಿ, ರಾಜ್ಯದಲ್ಲಿ ಸರಕಾರ ರಚಿಸಲು ಮ್ಯಾಜಿಕ್ ನಂಬರ್ ಇಳಿದ ಪರಿಣಾಮ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದಿದೆ. ಅಲ್ಲದೇ 2019ರಲ್ಲಿ ನಡೆದ ಲೋಕಸಭಾ ಚುನಾವಣೆಯನ್ನೂ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯಲ್ಲಿದೇ ಸ್ಪರ್ಧಿಸಿದ್ದು, ತಲಾ ಒಂದೊಂದು ಸ್ಥಾನವನ್ನು ಗೆಲ್ಲುವಲ್ಲಿ ಮಾತ್ರ ಸಫಲವಾಗಿದೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇದೀಗ ಜೆಡಿಎಸ್ ಸ್ವತಂತ್ರವಾಗಿ ಉಪ ಚುನಾವಣೆ ಎದುರಿಸಲು ಸನ್ನದ್ಧವಾಗಿದೆ.
ಬೆಂಗಳೂರಿನ ರಾಜರಾಜೇಶ್ವರ ನಗರ ಹಾಗೂ ರಾಣೆಬೆನ್ನೂರು ಕ್ಷೇತ್ರಗಳಿಗೆ ಹೊರತುಪಡಿಸಿ, ಉಳಿದ ಕ್ಷೇತ್ರಗಳ ಉಪಚುನಾವಣೆಯ ದಿನಾಂಕ ಘೋಷಣೆಯಾಗಿದೆ. ಶಾಸಕರ ಅನರ್ಹತೆ ಬಗ್ಗೆ ಸುಪ್ರೀಂ ಕೋರ್ಟಿನಲ್ಲಿ ತೀರ್ಪು ಹೊರ ಬೀಳುವುದು ಇನ್ನೂ ಬಾಕಿ ಇದ್ದು, ಅನರ್ಹರ ಭವಿಷ್ಯದ ಬಗ್ಗೆ ಮತ್ತಷ್ಟು ಗೊಂದಲ ಹೆಚ್ಚಾಗಿದೆ.