ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ‘ನಿರ್ಭಯಾ ಆ್ಯಪ್‌’...!

By Kannadaprabha NewsFirst Published Nov 13, 2020, 9:42 AM IST
Highlights

 5 ಸಾವಿರ ಬಸ್ಸಲ್ಲಿ ಸಿಸಿಟೀವಿ ಅಳವಡಿಕೆ| ಕೇಂದ್ರ ಹಾಗೂ ರಾಜ್ಯ ಸರ್ಕಾರದ 56 ಕೋಟಿ ರು. ವೆಚ್ಚದ ಜಂಟಿ ಯೋಜನೆಯಲ್ಲಿ ಮೊದಲ ಹಂತದಲ್ಲಿ 40.8 ಕೋಟಿ ರು.ಗೆ ಅನುಮೋದನೆ| 3 ಸಾವಿರ ಸಿಬ್ಬಂದಿಗೆ ಮಹಿಳೆಯರ ಸುರಕ್ಷತೆ ಕುರಿತು ತರಬೇತಿ| 

ಬೆಂಗಳೂರು(ನ.13): ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ‘ನಿರ್ಭಯ ಯೋಜನೆ’ ಅಡಿ ಬೆಂಗಳೂರು ಮಹಾನಗರದಲ್ಲಿ ಸಾರ್ವಜನಿಕ ಬಸ್ಸುಗಳಲ್ಲಿ ಸಂಚರಿಸುವ ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ‘ನಿರ್ಭಯಾ ಆ್ಯಪ್‌’, ಬಸ್ಸುಗಳಲ್ಲಿ ಸಿ.ಸಿ.ಟಿವಿ ಅಳವಡಿಕೆ ಸೇರಿದಂತೆ ಹಲವು ಸುರಕ್ಷತಾ ಕ್ರಮ ಕೈಗೊಳ್ಳುವ 56 ಕೋಟಿ ರು. ವೆಚ್ಚದ ಯೋಜನೆಗೆ ಸಂಪುಟ ಸಭೆ ಅನುಮೋದನೆ ನೀಡಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರದ 56 ಕೋಟಿ ರು. ವೆಚ್ಚದ ಜಂಟಿ ಯೋಜನೆಯಲ್ಲಿ ಮೊದಲ ಹಂತದಲ್ಲಿ 40.8 ಕೋಟಿ ರು.ಗೆ ಅನುಮೋದನೆ ನೀಡಲಾಗಿದೆ. ಯೋಜನೆಯಡಿ ನಿರ್ಭಯಾ ಆ್ಯಪ್‌ ರೂಪಿಸಲಾಗುವುದು. ಆ್ಯಪ್‌ನಲ್ಲಿ ಬಸ್ಸುಗಳ ವಿವರ, ಬಸ್ಸು ನಿಲ್ದಾಣ, ಬಸ್ಸು ಬರುವ ವೇಳಾಪಟ್ಟಿ ಸೇರಿದಂತೆ ಎಲ್ಲಾ ಮಾಹಿತಿ ದೊರೆಯುತ್ತದೆ. ಜೊತೆಗೆ ಬಸ್ಸಿನಿಂದ ಮನೆಗೆ ಅಥವಾ ಕಾರ್ಯ ಸ್ಥಳಕ್ಕೆ ಹೋಗುವಾಗ ಅಪಾಯ ಎದುರಾದರೆ ರಕ್ಷಣೆಗಾಗಿ ಕೋರಲು ಆ್ಯಪ್‌ನಲ್ಲಿ ಆಯ್ಕೆಯನ್ನೂ ಸಹ ಕಲ್ಪಿಸಲಾಗುವುದು ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.

ರೈಲಿನಲ್ಲಿ ಮಹಿಳಾ ಪ್ರಯಾಣಿಕರ ನೆರವಿಗೆ ಬಂದಿದೆ 'ಮೇರಿ ಸಹೇಲಿ'

ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಅವರು, ಸುಮಾರು 5 ಸಾವಿರ ಬಸ್ಸುಗಳಲ್ಲಿ ಸಿ.ಸಿ. ಟಿವಿ ಅಳವಡಿಕೆ ಮಾಡಲಾಗುವುದು. 3 ಸಾವಿರ ಸಿಬ್ಬಂದಿಗೆ ಮಹಿಳೆಯರ ಸುರಕ್ಷತೆ ಕುರಿತು ತರಬೇತಿ ನೀಡಲಾಗುವುದು. ಬಸ್ಸು ಸಂಚಾರ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ಸುರಕ್ಷಿತವಾಗಿರಲು ಇವು ನೆರವಾಗಲಿವೆ. ಕಾರ್ಯನಿರ್ಮಿತ್ತ ಬೆಂಗಳೂರಿಗೆ ಆಗಮಿಸಿದ ಮಹಿಳೆಯರಿಗೆ ಉಳಿದುಕೊಳ್ಳಲು ಯೋಗ್ಯವಾದ ಸುರಕ್ಷಿತ ಆಯ್ಕೆಗಳನ್ನೂ ಆ್ಯಪ್‌ ಮೂಲಕ ತಿಳಿಸಿಕೊಡಲಾಗುವುದು ಎಂದು ಹೇಳಿದರು.
 

click me!