ಕೇವಲ 30 ಗುಂಟೆಯಲ್ಲಿ ಮೆಣಸಿಕಾಯಿ ಬೆಳೆದು ಲಕ್ಷ ಲಕ್ಷ ಲಾಭ: ಬೆಳಗಾವಿ ಕುವರಿಯ ಕೃಷಿ ಕ್ರಾಂತಿ..!

By Girish GoudarFirst Published May 25, 2023, 9:20 PM IST
Highlights

ಬುದ್ಧಿವಂತೆ ಆಗಿರುವ ನಿಕಿತಾ ಬಿಕಾಂ ಪದವಿ ಬಳಿಕ ಸಿಎ ವ್ಯಾಸಂಗ ಮಾಡುತ್ತಿದ್ದರು. ಆದರೆ ಕಳೆದ ವರ್ಷ ತಂದೆಯ ಅಕಾಲಿಕ ನಿಧನದಿಂದ ಓದು ನಿಲ್ಲಿಸಿ ಕೃಷಿಯಲ್ಲಿ ತೊಡಗಿದ್ದಾಳೆ. ಚಿಕ್ಕವಳಿದ್ದಾಗಿನಿಂದಲೂ ಪೋಷಕರ ಜೊತೆಗೆ ಕೃಷಿ ಕೆಲಸಕ್ಕೆ ಕೈಜೋಡಿಸುತ್ತಿದ್ದ ನಿಕಿತಾ ಇದೀಗ ಕೃಷಿಯಲ್ಲೇ ಸಾಧನೆಗೈಯಲು ಹಂಬಲಿಸುತ್ತಿದ್ದಾರೆ. ನಿಕಿತಾಗೆ ಸಹೋದರ ಅಕ್ಷಯ್, ಚಿಕ್ಕಪ್ಪ ತಾನಾಜಿ ಪಾಟೀಲ ಬೆನ್ನೆಲುಬಾಗಿ ನಿಂತಿದ್ದಾರೆ.

ಅನಿಲ್ ಕಾಜಗಾರ, ಏಷ್ಯಾನೆಟ್ ಸುವರ್ಣನ್ಯೂಸ್

ಬೆಳಗಾವಿ(ಮೇ.25): ಅದು ಕೇವಲ 30 ಗುಂಟೆಯಷ್ಟಿರುವ ಜಮೀನು. ಇಷ್ಟೇ ಜಾಗದಲ್ಲಿ ಮೆಣಸಿನಕಾಯಿ ಬೆಳೆ ಬೆಳೆದು ಕುಂದಾನಗರಿ ಕುವರಿ ಲಕ್ಷ ಲಕ್ಷ ಲಾಭ ತಮ್ಮದಾಗಿಸಿಕೊಂಡಿದ್ದಾರೆ. ಐದು ತಿಂಗಳ ಅವಧಿಯಲ್ಲಿ 8 ಲಕ್ಷ ಲಾಭ ಗಳಿಸಿರುವ ಈ ಯುವತಿ ಇತರೆ ಯುವ ಸಮೂಹಕ್ಕೆ ಮಾದರಿಯಾಗಿದ್ದಾಳೆ. ಕೃಷಿಯಲ್ಲಿ ಸಾಧನೆಗೈಯುತ್ತಿರುವ ಈ ಯುವತಿ ಕೃಷಿ ಪದವೀಧರೆ ಏನಲ್ಲ. ಬಿಕಾಂ ಪೂರೈಸಿರುವ ಈಕೆ ಕೃಷಿ ಮೇಲಿನ ಆಸಕ್ತಿಯಿಂದ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾಳೆ. ಬೆಳಗಾವಿ ತಾಲೂಕಿನ ಜಾಫರವಾಡಿಯ 24 ವರ್ಷ ವಯಸ್ಸಿನ ನಿಕಿತಾ ಪಾಟೀಲ ಕೃಷಿಯಲ್ಲಿ ಕ್ರಾಂತಿ ಮಾಡುತ್ತಿರುವ ಸಾಧಕಿ.

ಬುದ್ಧಿವಂತೆ ಆಗಿರುವ ನಿಕಿತಾ ಬಿಕಾಂ ಪದವಿ ಬಳಿಕ ಸಿಎ ವ್ಯಾಸಂಗ ಮಾಡುತ್ತಿದ್ದರು. ಆದರೆ ಕಳೆದ ವರ್ಷ ತಂದೆಯ ಅಕಾಲಿಕ ನಿಧನದಿಂದ ಓದು ನಿಲ್ಲಿಸಿ ಕೃಷಿಯಲ್ಲಿ ತೊಡಗಿದ್ದಾಳೆ. ಚಿಕ್ಕವಳಿದ್ದಾಗಿನಿಂದಲೂ ಪೋಷಕರ ಜೊತೆಗೆ ಕೃಷಿ ಕೆಲಸಕ್ಕೆ ಕೈಜೋಡಿಸುತ್ತಿದ್ದ ನಿಕಿತಾ ಇದೀಗ ಕೃಷಿಯಲ್ಲೇ ಸಾಧನೆಗೈಯಲು ಹಂಬಲಿಸುತ್ತಿದ್ದಾರೆ. ನಿಕಿತಾಗೆ ಸಹೋದರ ಅಕ್ಷಯ್, ಚಿಕ್ಕಪ್ಪ ತಾನಾಜಿ ಪಾಟೀಲ ಬೆನ್ನೆಲುಬಾಗಿ ನಿಂತಿದ್ದಾರೆ.

ಜಮೀನು ವಿವಾದ: ಬಡಿಗೆಗಳಿಂದ ಪರಸ್ಪರ ಹೊಡೆದಾಡಿಕೊಂಡ ಎರಡು ಕುಟುಂಬ!

ಈ ಬೆಳೆಗಿದೆ ಬಹುಬೇಡಿಕೆ: ಜಾಫರವಾಡಿಯ ತಮ್ಮ ತೋಟದ ಮನೆಯ ಹಿಂದೆ ಇರುವ 30 ಗುಂಟೆ ಜಾಗೆಯಲ್ಲಿ ನಿಕಿತಾ ವಿಶೇಷ ತಳಿಯ ಮೆಣಸಿನಕಾಯಿ ಬೆಳೆ ಬೆಳೆದಿದ್ದಾರೆ. ನವಲ್ ಬಟಕಾ ಎಂಬ ಹೆಸರಿನ ತಳಿ ಇದಾಗಿದ್ದು, ಇತರ ಮೆಣಸಿನಕಾಯಿಗಿಂತಲೂ ಇದಕ್ಕೆ ಬೇಡಿಕೆ ಹೆಚ್ಚಿದೆ. ಕಳೆದ ನಾಲ್ಕು ವರ್ಷಗಳಿಂದ ಚಿಕ್ಕಪ್ಪ ತಾನಾಜೀ ಕೂಡ ತಮ್ಮ ಜಮೀನಿನಲ್ಲಿ ಇದೆ ಬೆಳೆ ಬೆಳೆದು ಯಶಸ್ವಿಯೂ ಆಗಿದ್ದಾರೆ. ಈ ಕಾರಣಕ್ಕೆ ಈ ವರ್ಷದಿಂದ ನಿಕಿತಾ ಪಾಟೀಲ ಕೂಡ ನವಲ್ ಬಟಕಾ ತಳಿ ನಾಟಿ ಮಾಡಿ ಐದೇ ತಿಂಗಳಲ್ಲಿ 8 ಲಕ್ಷ ಗಳಿಸಿದ್ದಾರೆ. 2 ಲಕ್ಷ ಬಂಡವಾಳ ಹೂಡಿದ್ದ ನಿಕಿತಾ ಈಗ 6 ಲಕ್ಷ ಲಾಭ ಪಡೆದಿದ್ದಾರೆ. ನವಲ್ ಬಟಕಾ ಮೆಣಸಿನಕಾಯಿನ್ನು ಪಿಜ್ಜಾ, ಬರ್ಗರ್, ಬಜ್ಜಿಗೆ ಹೆಚ್ಚಾಗಿ ಬಳಸುತ್ತಾರೆ. ಬೆಳಗಾವಿ ಅಷ್ಟೇ ಅಲ್ಲ, ಈ ಮೆಣಸಿನಕಾಯಿ ನೆರೆಯ ಗೋವಾ- ಮಹಾರಾಷ್ಟ್ರಕ್ಕೂ ಪೂರೈಕೆ ಆಗುತ್ತದೆ. ಒಂದು ಕೆಜಿಗೆ ಕನಿಷ್ಠ 50 ರೂ ದರ ಇದ್ದು, ಈ ಕಾಯಿಗೆ ಬೇಡಿಕೆಯೂ ಇದೆ. ಅಲ್ಲದೇ ಆರು ತಿಂಗಳ ಈ ಬೆಳೆಯನ್ನು ಎಂಟರಿಂದ ಒಂಬತ್ತು ಸಲ ಕಟಾವು ಮಾಡಬಹುದಾಗಿದೆ. ಪ್ರತಿ 12 ದಿನಕ್ಕೊಮ್ಮೆ ಮೆಣಸಿನಕಾಯಿ ಕಟಾವು ಮಾಡಲಾಗುತ್ತದೆ. ಒಮ್ಮೆ ಕಟಾವು ಮಾಡಿದಾಗ 4 ಟನ್‍ನಷ್ಟು ಮೆಣಸಿನಕಾಯಿ ಬರುತ್ತವೆ. ನಿಕಿತಾ ಈವರೆಗೆ 6 ಸಲ ಕಟಾವು ಮಾಡಿದ್ದು, ಇನ್ನೂ ಎರಡು ಸಲ ಕಟಾವು ಮಾಡಲಿದ್ದಾರೆ. ನಾಲ್ಕು ಅಡಿ ಬೆಳೆದುನಿಂತಿರುವ ಗಿಡಗಳಿಗೆ ಕಾಯಿಗಳು ಮೈತುಂಬಿಕೊಂಡಿವೆ. ಹನಿ ನೀರಾವರಿ ಪದ್ಧತಿಯನ್ನೂ ನಿಕಿತಾ ಅಳವಡಿಸಿಕೊಂಡಿದ್ದಾರೆ. ಇನ್ನು ಕನಿಷ್ಠ ಎರಡು ಕಟಾವು ಬರುವ ನಿರೀಕ್ಷೆಯಲ್ಲಿರುವ ನಿಕಿತಾ ಇದೆ ಜಾಗದಲ್ಲಿ ಮುಂಗಾರಿಗೆ ತರಕಾರಿ ಬೆಳೆಯಲು ನಿಕಿತಾ ಪ್ಲ್ಯಾನ್ ಹಾಕಿಕೊಂಡಿದ್ದಾರೆ. ಕಟಾವು ಆದ ಮೆಣಸಿನಕಾಯಿಯನ್ನು ಸ್ಥಳೀಯ ಕೃಷಿ ಮಾರುಕಟ್ಟೆಗೆ ಪೂರೈಸುತ್ತಿದ್ದಾರೆ.

ಬೆಳಗಾವಿ: ಅಮ್ಮಾಜೇಶ್ವರಿ ಏತ ನೀರಾವರಿಗೂ ಬಿದ್ದಿದೆ ಬ್ರೇಕ್‌!

ಸಿಎ ಓದು ನಿಲ್ಲಿಸಿ ಕೃಷಿಯತ್ತ ಚಿತ್ತ:

ತಂದೆ ಬದುಕಿದ್ದಾಗ ಬಿಕಾಂ ಬಳಿಕ ನಿಕಿತಾ ಸಿಎ (ಚಾರ್ಟೆರ್ಡ್ ಅಕೌಂಟ್) ಕಲಿಯುತ್ತಿದ್ದರು. ತಂದೆಯ ಸಾವಿನಿಂದ ಅರ್ಧಕ್ಕೆ ಓದು ನಿಲ್ಲಿಸಿ ಕೃಷಿಯತ್ತ ಚಿತ್ತ ಹರಿಸಿ ಕುಟುಂಬಕ್ಕೆ ಆಸರೆಯಾಗಿದ್ದಾರೆ. ಕೃಷಿ ಎಂದರೆ ಮೂಗು ಮುರಿಯುವ ಇಂದಿನ ದಿನಮಾನದಲ್ಲಿ ಈ ಯುವತಿ ಕೃಷಿಯಲ್ಲಿ ತೊಡಗಿಸಿಕೊಂಡು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾಳೆ. ಯುವತಿಯ ಈ ಸಾಧನೆಗೆ ಇಡೀ ಗ್ರಾಮವೇ ಹೆಮ್ಮೆ ಪಡುತ್ತಿದೆ. ಶ್ರದ್ಧೆಯಿಂದ ಕೃಷಿ ಮಾಡ್ತಿರುವ ನಿಕಿತಾಗೆ ಭೂತಾಯಿಯೂ ಕೈಹಿಡಿದಿದ್ದಾಳೆ. ಮಾದರಿ ಕೃಷಿ ಪದ್ಧತಿ ಅಳವಡಿಸಿಕೊಂಡು ಬಹುರಾಷ್ಟ್ರಿಯ ಕಂಪನಿಗಳಲ್ಲೂ ಸಿಗಲಾರದಷ್ಟು ಆದಾಯ ಪಡೆಯುತ್ತಿದ್ದಾಳೆ. ಕಳೆದ ವರ್ಷ ನಿಕಿತಾಳ ತಂದೆ ವೈಜು ಪಾಟೀಲ ತಮ್ಮ ಜಮೀನಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಮನೆ ನಡೆಸುತ್ತಿದ್ದ ಯಜಮಾನನೇ ಇಲ್ಲವಾದಾಗ ಇಡೀ ಕುಟುಂಬ ದಿಗ್ಭ್ರಮೆಗೆ ಒಳಗಾಗಿತ್ತು. ಪಾಲಿಗೆ ಬಂದಿರುವ 4 ಎಕರೆ ಜಮೀನಿನಲ್ಲಿ ಚಿಕ್ಕಪ್ಪನ ಸಹಾಯ ಪಡೆದು ನಿಕಿತಾ ಕೃಷಿಯಲ್ಲಿ ತೊಡಗಿದ್ದಾರೆ. ತಾಯಿ, ಸಹೋದರೂ ಸಾಥ್ ನೀಡುತ್ತಿದ್ದಾರೆ.

ನಿಕಿತಾ ಪಾಟೀಲ ಬೆಳಗಾವಿಯ ಭಾವುರಾವ ಕಾಕತಕರ ಕಾಲೇಜಿನಲ್ಲಿ ಬಿ.ಕಾಂ ಮುಗಿಸಿ ಭರತೇಶ ಕಾಲೇಜಿನಲ್ಲಿ ಸಿ.ಎ(ಚಾರ್ಟೆರ್ಡ್ ಅಕೌಂಡ್‌ಗೆ ಪ್ರವೇಶ ಪಡೆದಿದ್ದಳು. ದ್ವಿತೀಯ ವರ್ಷ ಸಿ.ಎ ಓದುತ್ತಿದ್ದಾಗಲೇ ತಂದೆ ವೈಜು ಸಾವಿಗೀಡಾದರು. ಇನ್ನು ಸಿ.ಎ ಮುಗಿಸಿ ಬೆಂಗಳೂರು ಅಥವಾ ಪುಣೆಯಲ್ಲಿ ನೌಕರು ಮಾಡುವ ಮಹದಾಸೆ ಹೊಂದಿದ್ದಳು. ತಂದೆಯ ಸಾವಿನ ಬಳಿಕ ಸಿ.ಎ. ಓದನ್ನು ಅರ್ಧಕ್ಕೆ ನಿಲ್ಲಿಸಿ ಕೃಷಿಯತ್ತ ಚಿತ್ತ  ಹರಿಸಿ ಆರಂಭಿಕ ಯಶ ಕಂಡಿದ್ದಾರೆ. ಅಲ್ಲದೇ ಇತರೆ ಯುವ ಸಮೂಹಕ್ಕೆ ನಿಕಿತಾ ಪ್ರೇರಣೆ ಆಗಿದ್ದಾರೆ.

click me!