ಬೆಂಗಳೂರಲ್ಲಿ ಮೂರು ದಿನ ಮದ್ಯ ಬಂದ್ : ನಿಷೇಧಾಜ್ಞೆ

By Kannadaprabha NewsFirst Published Dec 3, 2019, 8:41 AM IST
Highlights

ಬೆಂಗಳೂರಿನಲ್ಲಿ ಮೂರು ದಿನಗಳ ಕಾಲ ಮದ್ಯ ಮಾರಾಟ ನಿಷೇಧಿಸಲಾಗಿದ್ದು, ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಬೆಂಗಳೂರು [ಡಿ.03]:  ನಗರದ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯಲಿರುವ ಉಪ ಚುನಾವಣೆ ಸುಗಮವಾಗಿ ನಡೆಯಲು ಮತದಾನ ನಡೆಯುವ ಡಿ.5ರಂದು ಮೂರು ಸಾವಿರಕ್ಕೂ ಹೆಚ್ಚು ಮಂದಿಯನ್ನು ಭದ್ರತೆಗೆ ನಿಯೋಜಿಸಲಾಗುವುದು ಎಂದು ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಹೇಳಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿನ ಕೆ.ಆರ್‌.ಪುರ, ಯಶವಂತಪುರ, ಮಹಾಲಕ್ಷ್ಮೇ ಲೇಔಟ್‌ ಹಾಗೂ ಶಿವಾಜಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ 28 ಪೊಲೀಸ್‌ ಠಾಣೆಗಳು ಬರಲಿವೆ. ಈ ವ್ಯಾಪ್ತಿಯಲ್ಲಿ ಡಿ.3ರಂದು ಸಂಜೆ 6ರಿಂದ ಡಿ.6ರ ಸಂಜೆ 6 ಗಂಟೆವರೆಗೆ ನಿಷೇಧಾಜ್ಞೆ ಹಾಗೂ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ಹೇಳಿದರು.

ಡಿ.5ರಂದು ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದ್ದು, ಭದ್ರತೆಗೆ 7 ಡಿಸಿಪಿ, 14 ಎಸಿಪಿ, 30 ಇನ್‌ಸ್ಪೆಕ್ಟರ್‌, 68 ಸಬ್‌ಇನ್‌ಸ್ಪೆಕ್ಟರ್‌, 160 ಎಎಸ್‌ಐ, 1,666 ಹೆಡ್‌ಕಾನ್‌ಸ್ಟೇಬಲ್‌ ಮತ್ತು ಕಾನ್‌ಸ್ಟೇಬಲ್‌, 951 ಗೃಹ ರಕ್ಷಕದಳ ಸಿಬ್ಬಂದಿ, 10 ಸಿಆರ್‌ಪಿಎಫ್‌, 38 ಕೆಎಸ್‌ಆರ್‌ಪಿ, 40 ಸಿಎಆರ್‌ ಸೇರಿ ಮೂರು ಸಾವಿರಕ್ಕೂ ಹೆಚ್ಚು ಮಂದಿಯನ್ನು ಭದ್ರತೆಗೆ ನಿಯೋಸಲಾಗುವುದು. ಅಲ್ಲದೆ, 26 ಫ್ಲೈಯಿಂಗ್‌ ಸ್ಕ್ವಾಡ್, 22 ಎಸ್‌ಎಸ್‌ಟಿ  ಇರಲಿವೆ ಎಂದು ತಿಳಿಸಿದರು.

ಬೆಂಗಳೂರು : ಚುನಾವಣೆಯ ಸ್ಥಳ ಬದಲಾವಣೆ...

ನಾಲ್ಕು ಕ್ಷೇತ್ರಗಳಲ್ಲಿ 1064 ಮತ ಕೇಂದ್ರಗಳಿದ್ದು, 826 ಸಾಮಾನ್ಯ ಹಾಗೂ 238 ಸೂಕ್ಷ್ಮ ಕೇಂದ್ರಗಳು ಎಂದು ಗುರುತಿಸಲಾಗಿದೆ. ಕೆ.ಆರ್‌.ಪುರಂನಲ್ಲಿ 28 ಮತ್ತು ಶಿವಾಜಿನಗರದಲ್ಲಿ 8 ಹಾಗೂ ಈಶಾನ್ಯ ವಿಭಾಗದಲ್ಲಿ ಐದು ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳೆದು ಗುರುತಿಸಲಾಗಿದ್ದು, ಇಲ್ಲಿ ಹೆಚ್ಚುವರಿ ಪೊಲೀಸ್‌ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಹಾಗೆಯೇ ಈ ವ್ಯಾಪ್ತಿಯಲ್ಲಿ ಪರವಾನಿಗೆ ಪಡೆದಿರುವ 2331 ಶಸ್ತ್ರಾಸ್ತ್ರಗಳಿದ್ದು, ಈ ಪೈಕಿ 2028 ಜಮೆ ಮಾಡಿಸಿಕೊಳ್ಳಲಾಗಿದೆ. 291ಕ್ಕೆ ವಿನಾಯಿತಿ ನೀಡಲಾಗಿದೆ ಎಂದರು.

ರೌಡಿಗಳಿಗೆ ಎಚ್ಚರಿಕೆ:  ಮುಂಜಾಗ್ರತಾ ಕ್ರಮವಾಗಿ ನಾಲ್ಕು ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ 620 ರೌಡಿಗಳಿಂದ ಮುಚ್ಚಳಿಕೆ ಪತ್ರ ಬರೆಯಿಸಿಕೊಳ್ಳಲಾಗಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆಯಲ್ಲಿ ಇದುವರೆಗೂ 27 ಪ್ರಕರಣಗಳು ದಾಖಲಾಗಿವೆ. .15.92 ಲಕ್ಷ ಜಪ್ತಿ ಮಾಡಲಾಗಿದೆ. ಮತ ಎಣಿಕೆ ನಡೆಯುವ ಕೇಂದ್ರಗಳಾದ ವಸಂತನಗರ ಮೌಂಟ್‌ ಕಾರ್ಮೆಲ್‌ ಪಿಯು ಮಹಿಳಾ ಕಾಲೇಜು, ಅಶೋಕನಗರದ ಸೆಂಟ್‌ ಜೋಸೆಫ್‌ ಇಂಡಿಯನ್‌ ಹೈಸ್ಕೂಲ್‌, ಮೈಸೂರು ರಸ್ತೆಯಲ್ಲಿರುವ ಆರ್‌.ವಿ.ಎಂಜಿನಿಯರಿಂಗ್‌ ಕಾಲೇಜು ಹಾಗೂ ದೇವನಹಳ್ಳಿಯ ಆಕಾಶ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌ ಬಳಿ ಶಸ್ತ್ರ ಸಜ್ಜಿತ ಸ್ಥಳೀಯ ಪೊಲೀಸರ ಜತೆಗೆ ಕೇಂದ್ರ ಸೇನಾ ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗುವುದು ಎಂದು ಆಯುಕ್ತರು ಮಾಹಿತಿ ನೀಡಿದರು.

click me!