ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂದುವರೆದ ಭಾರೀ ಮಳೆ: ಇನ್ನೂ ನಾಲ್ಕು ದಿನ ಆರೆಂಜ್ ಅಲರ್ಟ್

By Girish Goudar  |  First Published Jul 6, 2022, 10:49 PM IST

*   ಮಲೆನಾಡಿನಲ್ಲಿ ಮಳೆ ಅಬ್ಬರ 
*   ಬಾಲಕಿ ಸುಳಿವು ಇಲ್ಲ, ಶೋಧ ಕಾರ್ಯದಲ್ಲಿ ಎಸ್‌ಡಿಆರ್‌ಎಫ್ ಸಿಬ್ಬಂದಿ
*   ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಬೃಹತ್ ಮರ


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು(ಜು.06): ಚಿಕ್ಕಮಗಳೂರು ಜಿಲ್ಲಾದ್ಯಂತ ಮಳೆ ಆರ್ಭಟ ಮುಂದುವರೆದಿದ್ದು  ಭಾರತೀಯ ಹವಾಮಾನ ಇಲಾಖೆಯ ಸೂಚನೆಯ ಮೇರೆಗೆ ಜಿಲ್ಲಾಡಳಿತ ಜುಲೈ 7ರಿಂದ 10ರವರೆಗೆ ಮುಂಜಾಗೃತಾ ಕ್ರಮವಾಗಿ ಜಿಲ್ಲಾದ್ಯಂತ ಯಲ್ಲೋ ಅಲರ್ಟ್  ಘೋಷಿಸಿದೆ. ಜಿಲ್ಲಾದ್ಯಂತ ಮಳೆಯ ಅಬ್ಬರ ಮುಂದುವರೆದಿದ್ದು ಜಿಲ್ಲೆ ನದಿಗಳು ಮೈದುಂಬಿ ಹರಿಯುತ್ತಿವೆ. 

Tap to resize

Latest Videos

ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಬೃಹತ್ ಮರ

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನ ಭಾಗದಲ್ಲಿ ಮಳೆ ಅಬ್ಬರ ಮುಂದುವರಿದೆ. ಜಿಲ್ಲೆಯ ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್ ಆರ್ ಪುರದಲ್ಲಿ ಭಾರೀ ಮಳೆ ಆಗುತ್ತಿದೆ. ಉತ್ತಮ ಮಳೆಯಿಂದ ಭದ್ರಾ, ತುಂಗಾ, ಭದ್ರಾ ನದಿಗಳು ಮೈದುಂಬಿ  ಹರಿಯುತ್ತಿದ್ದು ಮಳೆ ಮುಂದುವರಿದ್ರೆ ನದಿ ಪಾತ್ರದ ಸ್ಥಳಗಳು ಜಲಾವೃತ್ತವಾಗಲಿದೆ. ಇನ್ನು ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಮರದ ಕೊಂಬೆಗಳು ಬಿದ್ದು ಪವಾಡಸದೃಶ ಎನ್ನುವಂತೆ ಕಾರಿನಲ್ಲಿದ್ದವರೆಲ್ಲರೂ ಪಾರಾಗಿರುವ ಘಟನೆ  ಮೂಡಿಗೆರೆ ತಾಲೂಕಿನ ಹಳೆಮೂಡಿಗೆರೆಯಲ್ಲಿ ನಡೆದಿದೆ. ಈ  ದ್ರಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಕಾರ್ ಮೂಡಿಗೆರೆಗೆ ಕಡೆಗೆ ಬರುವ ವೇಳೆಯಲ್ಲಿ ಈ ಅವಘಡ ನಡೆದಿದೆ. ಕಾರ್  ಮಾಜಿ ಸಚಿವೆ ಮೋಟಮ್ಮ ಸಹೋದರ ಅನಂತು ಅವರಾಗಿದ್ದು  ಎಂ.ಎಸ್ ಅನಂತು ಪತ್ನಿ ಸೇರಿದಂತೆ ಕಾರಿನಲ್ಲಿದ್ದ ಐವರು ಬಚಾವ್ ಆಗಿದ್ದಾರೆ. ಕಾರಿನ ಮೇಲೆ ಮರದ ಕೊಂಬೆಗಳು ಬೀಳುವ ಸಿಸಿಟಿವಿ ದೃಶ್ಯ ಮೈ ಜುಮ್ ಎನ್ನಸುತ್ತೇದೆ. 

ಮಲೆನಾಡಲ್ಲಿ ಮುಂದುವರೆದ ಮಳೆ ಅಬ್ಬರ: 5 ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ

ಆರೆಂಜ್ ಅಲರ್ಟ್ ಘೋಷಣೆ

ಭಾರತೀಯ ಹವಾಮಾನ ಇಲಾಖೆ, ನವದೆಹಲಿ ಮತ್ತು ರಾಜ್ಯ ಹವಾಮಾನ ಇಲಾಖೆ, ಬೆಂಗಳೂರು ನೀಡಿರುವ ಮುನ್ಸೂಚನೆಯಂತೆ ಚಿಕ್ಕಮಗಳೂರು ಜಿಲ್ಲೆಗೆ ಇಂದು ಆರೆಂಜ್ ಅಲರ್ಟ್ ಘೋಷಿಸಿದ್ದು, ಜುಲೈ 7ರಿಂದ 10ರವರೆಗೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಮುಂದಿನ 3_4 ದಿನ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಮೋಡ ಕವಿದ ವಾತಾವರಣ ಹಾಗೂ ಸಾಧಾರಣ ಮಳೆಯಾಗುವ ಸಂಭವವಿದೆ ಎಂದು ಜಿಲ್ಲಾ ಕೃಷಿ ಹವಾಮಾನ ಘಟಕದ ಸಂಪರ್ಕ ಅಧಿಕಾರಿ ಕೃಷ್ಣಮೂರ್ತಿ ಎನ್.ಟಿ ತಿಳಿಸಿದ್ದಾರೆ. 

ಮಳೆಯಿಂದ ಹಲವು ಮನೆಗಳಿಗೆ ಹಾನಿ

ಮುಂಗಾರು ಮಳೆಯಿಂದ ಕಳೆದೊಂದು ವಾರದಲ್ಲಿ ಜಿಲ್ಲೆಯಲ್ಲಿ 15ಕ್ಕೂ ಹೆಚ್ಚು  ಮನೆಗಳಿಗೆ ಹಾನಿ ಸಂಭವಿಸಿದೆ. ಮೂರು ಮನೆಗಳು ಸಂಪೂರ್ಣ ಹಾನಿಗೀಡಾಗಿದ್ದು, 12 ಮನೆಗಳು ಭಾಗಷಃ ಹಾನಿಗೀಡಾಗಿದೆ. ಚಿಕ್ಕಮಗಳೂರು ತಾಲ್ಲೂಕಿನಲ್ಲಿ 1 ಹಾಗೂ ಮೂಡಿಗೆರೆ ತಾಲ್ಲೂಕಿನಲ್ಲಿ 1ಮನೆಗೆ ಸಂಪೂರ್ಣ ಹಾನಿ ಉಂಟಾಗಿದೆ.

ಶೃಂಗೇರಿ ಹೆಚ್ಚು ಮಳೆ

ಕಳೆದ 24 ಗಂಟೆ ಅವಧಿಯಲ್ಲಿ ಶೃಂಗೇರಿ ತಾಲ್ಲೂಕಿನಲ್ಲಿ ಸರಾಸರಿ 81.5ಮಿ.ಮೀ.ಮಳೆಯಾಗಿದೆ, ಕೊಪ್ಪದಲ್ಲಿ 71.1. ಮಿ.ಮೀ., ಮೂಡಿಗೆರೆ ತಾಲ್ಲೂಕಿನಲ್ಲಿ 47.7 ಮಿ.ಮೀ., ನ.ರಾ.ಪುರದಲ್ಲಿ 37.6 ಮಿ.ಮೀ., ಚಿಕ್ಕಮಗಳೂರು ತಾಲ್ಲೂಕಿನಲ್ಲಿ 20ಮಿ.ಮೀ., ತರೀಕೆರೆ ತಾಲ್ಲೂಕು 19.9, ಅಜ್ಜಂಪುರ ತಾಲ್ಲೂಕಿನಲ್ಲಿ 3 ಮಿ.ಮೀ. ಹಾಗೂ ಕಡೂರು ತಾಲ್ಲೂಕಿನಲ್ಲಿ 5.2 ಮಿ.ಮೀ. ಮಳೆಯಾಗಿದೆ.

ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ, ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ

ಬಾಲಕಿ ಸುಳಿವು ಇಲ್ಲ, ಶೋಧ ಕಾರ್ಯದಲ್ಲಿ ಎಸ್‌ಡಿಆರ್‌ಎಫ್ ಸಿಬ್ಬಂದಿ 

ಚಿಕ್ಕಮಗಳೂರು ತಾಲೂಕಿನ ಹೊಸಪೇಟೆ ಗ್ರಾಮದ ಹಳ್ಳದಲ್ಲಿ ಕೊಚ್ಚಿ ಹೋದ ಬಾಲಕಿ ಸುಪ್ರಿತಾ ಮೂರು ದಿನವಾದರೂ ಪತ್ತೆಯಾಗಲಿಲ್ಲ.ಬೆಂಗಳೂರಿನಿಂದ ಆಗಮಿಸಿದ 25 ಜನರ ಎಸ್ಡಿಆರ್ಎಫ್ ತಂಡ ಇಂದು ಕೂಡ ತೀವ್ರ ಶೋಧ ಕಾರ್ಯಾಚರಣೆ ನಡೆಸಿರಾದರೂ ಪ್ರಯೋಜನವಾಗಲಿಲ್ಲ. ಸೋಮವಾರ ಸಂಜೆ ಶಾಲೆ ಬಿಟ್ಟ ಬಳಿಕ ಮನೆಗೆ ವಾಪಾಸಾಗುವಾಗ ಒಂದನೇ ತರಗತಿ ವಿದ್ಯಾರ್ಥಿನಿ ಹಳ್ಳದ ಕೊಚ್ಚಿ ಹೋಗಿದ್ದಳು. ನಿರಂತರ 40 ಗಂಟೆಗೂ ಹೆಚ್ಚು ಹೊತ್ತು ಕಾರ್ಯಾಚರಣೆ ನಡೆಸಿದರೂ ಆಕೆ ಪತ್ತೆಯಾಗಿಲ್ಲ.ಕಳೆದ ಎರಡು ದಿನಗಳಿಂದ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಹಾಗೂ ಸ್ಥಳೀಯ ಈಜು ಪಟುಗಳು 15 ಕಿ.ಮೀ. ಉದ್ದದ ಹಳ್ಳದಲ್ಲಿ ಬಾಲಕಿಗಾಗಿ ಹುಡುಕಾಡಿದರೂ ಪ್ರಯೋಜನವಗದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಎಸ್ಡಿಆರ್ಎಫ್ ತಂಡ ಆಗಮಿಸಿದೆ.  ಅವರೊಂದಿಗೆ ಉಡುಪಿ ಜಿಲ್ಲೆಯ ಮಲ್ಪೆಯಿಂದ ಮುಳುಗು ತಜ್ಞ ಈಶ್ವರ್ ನೇತೃತ್ವದ ತಂಡ ಕೂಡ ಆಗಮಿಸಿದೆ.ಎಸ್ಡಿಆರ್ಎಫ್ ಹಾಗೂ ಮುಳುಗುತಜ್ಞರ ಜೊತೆ 35ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯ 20ಕ್ಕೂ ಹೆಚ್ಚು ಈಜು ಪಟುಗಳು ಸಾಥ್ ನೀಡಿದ್ದಾರೆ. ಇಂದು ಬಾಲಕಿಯ ಪತ್ತೆಗೆ ಸುಮಾರು 60 ರಿಂದ 70 ಜನ ಕಾರ್ಯಾಚರಣೆಗೆ ಇಳಿದಿದ್ದಾರೆ. 

ಹೆಚ್ಚುತ್ತಿರುವ ದುಗುಡ

ಸುತ್ತಮುತ್ತಲ ನೂರಾರು ಗ್ರಾಮಸ್ಥರು ಹಾಗೂ ಬಾಲಕಿ ಕುಟುಂಬದ ಸದಸ್ಯರು ಹಳ್ಳದ ಬಳಿ ದಿನವಿಡೀ ಜಮಾಯಿಸಿ ಬಾಲಕಿ ಬದುಕಿ ಬಂದಾಳು ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಕ್ಷಣ ಕ್ಷಣಕ್ಕೂ ಸಂಬಂಧಿಕರಲ್ಲಿ ದುಗುಡ ಹೆಚ್ಚುತ್ತಿದೆ.ಬದುಕಿರುವ ಸಾಧ್ಯಾತೆ ತೀರ ಕಡಿಮೆ ಇದ್ದು ಮಲೆನಾಡಿನಲ್ಲಿ ಸುರಿಯುತ್ತಿರುವ ಮಹಾ ಮಳೆಗೆ ಪುಟ್ಟ ಕಂದಮ್ಮ ಮೊದಲ ಬಲಿ ಆಗಿರುವ ಶಂಕೆ ವ್ಯಕ್ತವಾಗಿದೆ.
 

click me!